-->
ಸ್ಫೂರ್ತಿಯ ಮಾತುಗಳು : ರಮೇಶ ಎಂ. ಬಾಯಾರು

ಸ್ಫೂರ್ತಿಯ ಮಾತುಗಳು : ರಮೇಶ ಎಂ. ಬಾಯಾರು

ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093

     
            ಮಾನವನ ವ್ಯಕ್ತಿತ್ವವನ್ನು ನಿರ್ಧರಿಸುವ ಪ್ರಮುಖವಾದ ಅಂಶಗಳಲ್ಲಿ ಧನಾತ್ಮಕತೆಯು ಮೇರುಸ್ಥಾನವನ್ನು ಪಡೆಯುತ್ತದೆ. ಮನೋಭಾವನೆಯ ವ್ಯಾಪ್ತಿಗೆ ಬರುವ ನಕಾರಾತ್ಮಕತೆ ಮತ್ತು ಧನಾತ್ಮಕತೆಗಳು ಬಲವಾದ ಅಂಟಿನಿಂದ ಪ್ರತಿಯೊಬ್ಬನ ಮನಸ್ಸಿನಲ್ಲೂ ಅಂಟಿಸಲ್ಪಟ್ಟಿವೆಯಾದರೂ ವ್ಯಕ್ತಿಯಿಂದ ವ್ಯಕ್ತಿಗೆ ಆತನಲ್ಲಿರುವ ಧನ ಋಣ ಭಾವನೆಗಳ ಪ್ರಮಾಣಗಳಲ್ಲಿ ಅಜಗಜಾಂತರವಿರುತ್ತದೆ. ಯಾರಲ್ಲಿ ಧನಾತ್ಮಕ ಚಿಂತನೆಯಿರುತ್ತದೆಯೋ ಆತ ಹೆಚ್ಚು ಸದೃಢನೂ ಆರೋಗ್ಯಶಾಲಿಯೂ ನೆಮ್ಮದಿಯುಳ್ಳವನೂ ಉನ್ನತ ವ್ಯಕ್ತಿತ್ವದವನೂ ಆಗಿರುತ್ತಾನೆ.
           ಧನಾತ್ಮಕ ಚಿಂತಕನು ಸಮಸ್ಯೆಗಳಿರದ ಗೊಂದಲಗಳಿರದ ಸಮುಚಿತ ಸ್ಥಿತಿಯಲ್ಲಿರುತ್ತಾನೆ. ಅವನಲ್ಲಿ ಆಗದು ಎಂಬ ನೇತ್ಯಾತ್ಮಕ ಭಾವನೆ ಉದ್ಭವಿಸುವುದಿಲ್ಲ. ಎಲ್ಲ ದುಗುಡ ಮತ್ತು ದುಮ್ಮಾನಗಳಿಗೆ ಆತನಲ್ಲಿ ಪರಿಹಾರವಿರುತ್ತದೆ. ಯಾವುದೇ ಕೆಲಸಕ್ಕೂ ಧೀರ ಮತ್ತು ದಿಟ್ಟ ಹೆಜ್ಜೆಯನ್ನಿರಿಸುತ್ತಾನೆ. ಧನಾತ್ಮಕ ಚಿಂತನೆಯುಳ್ಳವರು ಇತರರ ಉತ್ತಮಗುಣಗಳನ್ನು ಮಾತ್ರವೇ ನೋಡುತ್ತಾರೆಯೇ ವಿನಹ ಕೆಟ್ಟವುಗಳಿದ್ದರೂ ಅವುಗಳನ್ನು ಪರಿಗಣಿಸುವುದಿಲ್ಲ. ಧನಾತ್ಮಕ ಚಿಂತನೆಯುಳ್ಳವರು ತಮ್ಮ ಗೆಲುವಿಗೆ ಇತರರು ಕಾರಣರಾದಂತಹ ಅಂಶಗಳನ್ನಷ್ಟೇ ಗುರುತಿಸುತ್ತಾರೆ. ಧನಾತ್ಮಕ ಚಿಂತಕರಿಗೆ ಒಂದಲ್ಲ ನೂರಾರು ಕಾಯಕಗಳನ್ನು ಯಶಸ್ವಿಗೊಳಿಸುವ ತಾಕತ್ತು ಇರುತ್ತದೆ. ಋಣಾತ್ಮಕ ಚಿಂತನೆಯುಳ್ಳವರು ಎಲ್ಲದರಲ್ಲೂ ಸೋಲುವರಲ್ಲದೆ ತಮ್ಮ ಸೋಲಿಗೆ ಇತರರನ್ನು ಹೊಣೆಯಾಗಿಸುತ್ತಾರೆ. ತಮಗೆ ದೊರೆಯುವ ಎಲ್ಲ ಅವಕಾಶಗಳನ್ನು ಕೈಚೆಲ್ಲುತ್ತಾರೆ. ಸಿಕ್ಕಿದ ಅವಕಾಶಗಳನ್ನು ಸದ್ವಿನಿಯೋಗಪಡಿಸದೆ ಅವು ತನ್ನ ಸಾಮರ್ಥ್ಯವನ್ನು ಮೀರಿದ ಕೆಲಸವೆಂದು ಹೇಳುತ್ತಾ ಅವುಗಳಿಂದ ಮಾರು ದೂರ ಸಾಗುತ್ತಾರೆ. 
      ಧನಾತ್ಮಕ ಚಿಂತನೆಯವರು ನನಸಾಗುವ ಕನಸುಗಳನ್ನು ಹೊಂದಿದ್ದರೆ, ನೇತ್ಯಾತ್ಮಕರು ಕಾರ್ಯಕ್ರಮಗಳ ಪಟ್ಟಿಗಳನ್ನಷ್ಟೇ ಕೊಡುವರು. ಧನಾತ್ಮಕತೆಯುಳ್ಳವರು ಸಾಧ್ಯತೆಯನ್ನು ಗಮನಿಸಿದರೆ ಋಣಾತ್ಮಕತೆಯುಳ್ಳವರು ಸಮಸ್ಯೆಗಳನ್ನಷ್ಟೇ ವಿವರಿಸುತ್ತಾರೆ. ಧನಾತ್ಮಕತೆಯುಳ್ಳವರಿಗೆ ತಮ್ಮ ವಾದದಲ್ಲಿ ಆತ್ಮವಿಶ್ವಾಸವಿರುತ್ತದೆ. ಅವರು ತಮ್ಮ ವಾದವನ್ನು ಮಿದುವಾದ ಮತ್ತು ಮಿತವಾದ ಮಾತುಗಳಿಂದ ಮಂಡಿಸಬಲ್ಲರು. ಋಣಾತ್ಮಕ ಚಿಂತಕರ ವಾದದಲ್ಲಿ ಗಟ್ಟಿತನವಿರದು, ಆದರೆ ಕಠಿಣ ಮಾತುಗಳ ಮೂಲಕ ತಮ್ಮ ವಾದವನ್ನು ಸಮರ್ಥಿಸುವರು. ನಾವು ನಮಗಿರುವ ಬಲಗಳನ್ನು ಗಣನೆ ಮಾಡಬೇಕಲ್ಲದೆ ನಮಗಿರುವ ಎಡರುಗಳನ್ನಲ್ಲ. ಈಗ ಮಾಡು ಇದು ಧನಾತ್ಮಕ ಚಿಂತಕರ ನಡೆ. ಆದರೆ ನಾಳೆ ಮಾಡುವೆ ಎನ್ನುವುದು ಋಣಾತ್ಮಕ ಚಿಂತಕರ ನಡೆ. ಇಂದು ಮಾಡಬಹುದಾದುದನ್ನು ಇಂದೇ ಮಾಡುವುದು ಧನಾತ್ಮಕತೆಯಾದರೆ ನಾಳೆಗೆಂದು ಕಾಯ್ದಿರಿಸುವುದು ಋಣಾತ್ಮಕತೆ. ನಮ್ಮ ಯಶಸ್ಸು ಚಾರಿತ್ರ್ಯ, ಕಾರ್ಯ ಬದ್ಧತೆ, ಸೌಜನ್ಯತೆ, ಧೈರ್ಯ ಮತ್ತು ನಾವು ನಮ್ಮನ್ನರಿತುಕೊಳ್ಳುವುದನ್ನು ಆಧರಿಸಿರುತ್ತದೆ. ಕಾರ್ಯಶೀಲತೆಯತ್ತ ಹೆಜ್ಜೆ, ಅವಿರತ ಶ್ರಮ, ಸಾಧಿಸುವ ಬದ್ಧತೆ, ಗುರಿಯತ್ತ ನಿರಂತರ ದೃಷ್ಟಿಯಿದ್ದಾಗ ಜೀವನ ಸಂತಸದ ಆಡುಂಬೊಲವಾಗುತ್ತದೆ.
      ಧನಾತ್ಮಕತೆಯುಳ್ಳವರಿಗೆ ಮಾತ್ರ ಜೀವನವಿರುತ್ತದೆ. ಋಣಾತ್ಮಕ ಭಾವನೆಯವರಿಗೆ ಜೀವ ಮಾತ್ರವೇ ಇರುತ್ತದೆ; ಆದರೆ ಜೀವನ ಶೂನ್ಯವೇ ಆಗಿರುತ್ತದೆ. ನಾವು ಧನಾತ್ಮಕ ಚಿಂತನೆಯುಳ್ಳವರಾಗೋಣ ಆಗದೇ? 
ನಮಸ್ಕಾರ ಮಕ್ಕಳೇ.
...........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
********************************************

Ads on article

Advertise in articles 1

advertising articles 2

Advertise under the article