ಹಕ್ಕಿ ಕಥೆ : ಸಂಚಿಕೆ - 56
Tuesday, July 19, 2022
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ನಮಸ್ತೇ.... ಈ ವಾರದ ಹಕ್ಕಿ ಕಥೆಗೆ ಸ್ವಾಗತ.. ಒಂದು ದಿನ ಸಂಜೆ ಸುಮಾರು ಆರೂವರೆ ಗಂಟೆಗೆ ಮಂಗಳೂರಿನ ಎಂ.ಜಿ.ರೋಡ್ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಅಲ್ಲೊಂದು ಸುಮಾರು ಇಪ್ಪತ್ತೈದು ಅಡಿ ಅಗಲದ ನೀರು ಹರಿಯುವ ತೋಡು. ಮಳೆಗಾಲ ಬಂದರೆ ತುಂಬಿ ಹರಿಯುವ ಆ ತೋಡು ಮಳೆಗಾಲ ಮುಗಿಯುತ್ತಲೇ ಮಂಗಳೂರಿನ ಮುಖ್ಯ ಕೊಳಕು ನೀರು ಹರಿಯುವ ಮೋರಿ ಎನಿಸಿಕೊಂಡು ಗಬ್ಬು ನಾರುತ್ತದೆ. ಸುತ್ತಮುತ್ತಲಿನ ನೂರಾರು ಅಪಾರ್ಟ್ ಮೆಂಟ್ ಗಳಿಂದ ಹರಿದು ಬರುವ ಕೊಳಕು ನೀರು ಅದರಲ್ಲಿ ಹರಿದು ಸುತ್ತಲಿನ ಪರಿಸರಲ್ಲಿ ದುರ್ಗಂಧವನ್ನು ಹರಡುತ್ತದೆ. ಆಗಷ್ಟೇ ಮಳೆ ಮುಗಿದು ಇನ್ನೂ ಸ್ವಚ್ಛನೀರು ನಿಧಾನವಾಗಿ ಹರಿಯುತ್ತಿತ್ತು. ಅಲ್ಲೇ ಮೊದಲಬಾರಿಗೆ ನಾನು ಈ ಹಕ್ಕಿಯನ್ನು ನೋಡಿದ್ದು. ಆ ನಂತರ ಕಡಲತೀರದ ಹಲವಾರು ಬೀಚ್ ಗಳಲ್ಲಿ, ರಂಗನ ತಿಟ್ಟಿನಂತಹ ಪಕ್ಷಿಧಾಮಗಳಲ್ಲಿ, ಪೇಟೆ ಪಟ್ಟಣದ ಮೀನು ಅಥವಾ ಮಾಂಸದ ಮಾರುಕಟ್ಟೆಯ ಆಸುಪಾಸಿನಲ್ಲಿ ರಾತ್ರೆಯ ಅಥವಾ ಬೆಳಗ್ಗಿನ ಜಾವ ಈ ಹಕ್ಕಿಯನ್ನು ನೋಡಬಹುದು.
ತಲೆಗೊಂದು ಕಪ್ಪು ಟೋಪಿ, ಅದರಿಂದ ಹೊರಬಂದ ಬಿಳೀ ಜುಟ್ಟು, ಬೆನ್ನಿಗೊಂದು ಕರೀ ಕೋಟು ಹಾಕಿಕೊಂಡು, ತಲೆ ತಗ್ಗಿಸಿ, ಕುತ್ತಿಗೆ ಕುಗ್ಗಿಸಿ ಅದರೊಳಗೆ ಬಿಳೀ ಬಣ್ಣದ ಅಂಗಿ ತೊಟ್ಟು ಹೊರಟ ಸೀಕ್ರೆಟ್ ಏಜಂಟ್ ತರಹ ಈ ಹಕ್ಕಿ ಕಾಣಿಸುತ್ತಿತ್ತು. ಕತ್ತಲಿನ ಮರೆಯಲ್ಲಿ, ನೀರಿನ ಬದಿಯಲ್ಲಿ ಕುಳಿತು ಹರಿದು ಬರುವ ಮೀನಿಗಾಗಿ ಕಾಯುತ್ತಾ ಹೊಂಚು ಹಾಕಿ ನಿಂತಿತ್ತು. ಹೆರಾನ್ ಎಂಬ ಗಿಡ್ಡ ಕಾಲಿನ ಕೊಕ್ಕರೆಯ ಜಾತಿಗೆ ಸೇರಿದ ಈ ಹಕ್ಕಿ ನಿಶಾಚರಿ. ರಾತ್ರಿ ಹೊತ್ತು ನೀರಿನ ಮೂಲಗಳಾದ ನದಿ, ಕೆರೆ, ಸರೋವರ, ಕಡಲಕಿನಾರೆಗಳ ಆಸುಪಾಸಿನಲ್ಲಿ ಮೀನು, ಏಡಿ, ಕಪ್ಪೆ ಮೊದಲಾದ ಜೀವಿಗಳನ್ನು ಹಿಡಿದು ಹೊಟ್ಟೆ ತುಂಬಿಸಿಕೊಳ್ಳುತ್ತದೆ. ಹಗಲಿನಲ್ಲಿ ನೀರಿನ ಮೂಲಗಳಿಂದ ದೂರ ದಟ್ಟವಾದ ಎಲೆಗಳಿರುವ ಮರದಲ್ಲಿ ಕುಳಿತು ನಿದ್ದೆಮಾಡುತ್ತದೆ. ಡಿಸೆಂಬರ್ ನಿಂದ ಫೆಬ್ರವರಿ ತಿಂಗಳ ನಡುವೆ ಮರಗಳ ಮೇಲೆ ಒಣಗಿದ ಕಡ್ಡಿಗಳನ್ನು ಜೋಡಿಸಿ ಗೂಡುಮಾಡಿ ಮೊಟ್ಟೆ ಇಟ್ಟು ಮರಿ ಮಾಡುತ್ತದೆ.
ಭಾರತದಾದ್ಯಂತ ಕಾಣಸಿಗುವ ಈ ಹಕ್ಕಿಯನ್ನು ನೀವೂ ನಿಮ್ಮ ಊರಿನಲ್ಲಿ ನೋಡಬಹುದು.
ಕನ್ನಡದ ಹೆಸರು: ಇರುಳು ಬಕ ಅಥವಾ ಕತ್ತಲಗುಪ್ಪಿ
ಇಂಗ್ಲೀಷ್ ಹೆಸರು: Black-crowned Night-Heron
ವೈಜ್ಞಾನಿಕ ಹೆಸರು: Nycticorax nycticorax
ಮುಂದಿನವಾರ ಇನ್ನೊಂದು ಹಕ್ಕಿಯ ಪರಿಚಯದೊಂದಿಗೆ ಮತ್ತೆ ಸಿಗೋಣ..
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************