-->
ಸ್ಪೂರ್ತಿಯ ಮಾತುಗಳು : ರಮೇಶ ಎಂ. ಬಾಯಾರು

ಸ್ಪೂರ್ತಿಯ ಮಾತುಗಳು : ರಮೇಶ ಎಂ. ಬಾಯಾರು

ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093

                        
       ಒಲವಿನಿಂದಲೇ ಗೆಲುವು ಎಂಬ ಮಾತಿದೆ. ಒಲವು ಎಂದರೆ ಪ್ರೀತಿ. ಆಂಗ್ಲ ಭಾಷೆಯ LOVE ಎಂಬುದು ಪ್ರೀತಿಗೆ ಪರ್ಯಾಯ ಪದವಿರಬಹುದು. ಒಲವಿನಲ್ಲಿ LOVE ಇದೆಯಲ್ಲವೇ.....? ಪ್ರೀತಿಯೆಂಬುದು ಭಾವನಾತ್ಮಕ ಸಂಗತಿ. ನಮಗೆ ಪ್ರೀತಿ ಎಂದೊಡನೆ ಬರುವ ಕಲ್ಪನೆ ಸ್ತ್ರೀ ಮತ್ತು ಪುರುಷರ ನಡುವಿನ ಪ್ರೇಮ. ಆದರೆ ಪ್ರೀತಿಯು ಯಾರಿಗೇ ಆಗಲಿ ಅಥವಾ ಯಾವುದಕ್ಕೇ ಆಗಲಿ ಸೀಮಿತವಲ್ಲ. ನಾವು ನಮ್ಮ ಹೆತ್ತವರನ್ನು, ಸಹೋದರ ಸಹೋದರಿಯರನ್ನು, ಗುರುಹಿರಿಯರನ್ನು ಸ್ನೇಹಿತರನ್ನು ನೆರೆಹೊರೆಯವರನ್ನು ಪ್ರೀತಿಸುತ್ತೇವೆ. ನಮ್ಮ ಪರಿಸರ, ನಮ್ಮ ವಸ್ತುಗಳು, ನಮ್ಮ ಆಹಾರ, ನಮ್ಮ ಕೆಲಸ ಹೀಗೆ ಪ್ರತಿಯೊಂದನ್ನೂ ಪ್ರೀತಿಸ ಬೇಕು, ಪ್ರೀತಿಸುವುದೇ ಜೀವನವಾಗಬೇಕು. 
      ಜಗತ್ತಿನಲ್ಲಿ ಪ್ರೀತಿ ಕಾಲಿರಿಸಲಾಗದ ಸ್ಥಳವೇ ಇಲ್ಲ. ಪ್ರಾಣಿ ಪಕ್ಷಿಗಳು ಪರಸ್ಪರರನ್ನು ಪ್ರೀತಿಸುತ್ತವೆ. ಅಪರಿಚಿತ ನಾಯಿಗಳು ಕಚ್ಚಾಡಿದರೂ ಪರಿಚಯವಾದ ಮೇಲೆ ಅವುಗಳೊಳಗೆ ಅಗಾಧವಾದ ಪ್ರಮಾಣದಲ್ಲಿ ಪ್ರೀತಿ ಬಲಿಯುತ್ತಾ ಹೋಗುತ್ತದೆ. ಪ್ರೀತಿಸದ ಮನಸ್ಸು ಕಟುಕ ಮನಸ್ಸೇ ಸರಿ. ಉಗ್ರರು ಎನಿಸಿಕೊಂಡವರಿಗೂ ಅವರ ಮನೆ ಮಂದಿಯಲ್ಲಾದರೂ ಪ್ರೀತಿಯಿರುತ್ತದೆ. ಜನರು ಸೇನೆಗೆ ಸೇರುವುದು ದೇಶದ ಮೇಲಿನ ಪ್ರೀತಿಯಿಂದ ಎಂಬುದನ್ನು ಮರೆಯಲಾಗದು. ದೇಶದ ಮೇಲಿನ ಪ್ರೀತಿಯಿಂದಾಗಿಯೇ ಪ್ರತಿಕೂಲ ಹವಾಗುಣದಲ್ಲೂ ಸೈನಿಕರು ಎದೆಗುಂದದೆ, ಯಾವುದನ್ನೂ ಲೆಕ್ಕಿಸದೆ ದೇಶ ಕಾಯುತ್ತಾರೆ. ನಾಡು ನುಡಿ ಮತ್ತು ಧರ್ಮದ ಮೇಲಿನ ಪ್ರೀತಿಯು ವ್ಯಕ್ತಿಯನ್ನು ಅಸಾಧಾರಣ ವ್ಯಕ್ತಿಯನ್ನಾಗಿ ಬೆಳೆಸುತ್ತದೆ. ಕಾಯಕದ ಮೇಲಿನ ಪ್ರೀತಿಯು ಸತ್ಫಲವನ್ನೇ ನೀಡುತ್ತದೆ; ಧನಾತ್ಮಕ ಫಲಿತಾಂಶವನ್ನೇ ಒದಗಿಸುತ್ತದೆ. ಅದಕ್ಕಾಗಿಯೇ ಪ್ರೀತಿಯ ಬಂಧ ಅಮರ. ಒಲವೇ ಮರೆಯದ ಮಮಕಾರ, ಒಲವೇ ಜೀವನ ಸಾಕ್ಷಾತ್ಕಾರ ಎಂಬ ಕವಿವಾಣಿ ಪ್ರೀತಿಯ ತಾಕತ್ತನ್ನು ಎತ್ತಿ ಹಿಡಿದಿದೆ. ಜತನ ಅಥವಾ ಜಾಗರೂಕತೆಗೆ ಪ್ರೀತಿಯೇ ಮೂಲಾಧಾರ. ನಾವು ಪುಟ್ಟ ಪಾಪುವನ್ನು ಜತನದಿಂದ ಎತ್ತುತ್ತೇವೆ. ನಮ್ಮ ವಸ್ತ್ರವನ್ನು ಕೊಳೆಯಾಗದಂತೆ, ಹರಿಯದಂತೆ ಜಾಗರೂಕತೆ ವಹಿಸುತ್ತೇವೆ. ನಮ್ಮ ಮನೆಯ ಪಾತ್ರೆ ಪರಡಿಗಳನ್ನು ಅವು ನಿರ್ಜೀವಿಯಾದರೂ ಎತ್ತಿ ಎಸೆಯುವುದಿಲ್ಲ. ಪ್ರಾಣಿಗಳಿಗೆ ಗಿಡಗಳಿಗೆ ಕಲ್ಲೆಸೆಯುವುದಿಲ್ಲ. ಮನೆಯ ಕಿಟಕಿಯ ಗಾಜನ್ನು ಶುಭ್ರವಾಗಿರುವಂತೆ ನೋಡಿಕೊಳ್ಳುತ್ತೇವೆ. ನಮ್ಮ ಕೂದಲನ್ನು ಕತ್ತರಿಸುತ್ತೇವಾದರೂ ಅದರ ಮೇಲೆ ನಮಗೆ ಪ್ರೀತಿಯು ಹೋಗದು. ಕತ್ತರಿಸಿ ಉಳಿದುದನ್ನು ಅಂದವಾಗಿ ಕಾಪಿಡುತ್ತೇವೆ. ಈ ಎಲ್ಲ ಕೆಲಸಗಳ ಹಿಂದೆ ಪ್ರೀತಿಯೆಂಬ ನಮ್ಮ ಭಾವದ ಪವಾಡವಿದ್ದೇ ಇರುತ್ತದೆ.
        ಪ್ರೀತಿಸದವರನ್ನು ಭಾವಶೂನ್ಯ ವ್ಯಕ್ತಿಗಳು ಅಥವಾ ಕ್ರೂರಿಗಳೆಂದು ಉಲ್ಲೇಖಿಸಿದೆ. ದಿನಂಪ್ರತಿ ಪತ್ರಿಕೆಗಳಲ್ಲಿ ನಾವು ಓದುವ ದರೋಡೆ, ಕೊಲೆ, ಹಿಂಸಾಚಾರ, ಅತ್ಯಾಚಾರಗಳಿಗೆ ಕಾರಣ ಮಮಕಾರದ ಕೊರತೆ ಹಾಗೂ ಅಧಿಕಾರದ ಹಂಬಲ. ನಾವು ಎಷ್ಟೇ ದೊಡ್ಡವರಾದರೂ ತಂದೆ ತಾಯಿಗಳಿಗೆ ಪ್ರೀತಿಯ ಮಕ್ಕಳು; ಸಮಾಜದ ಅಕ್ಕರೆಯ ಆಸ್ತಿ. ನಮ್ಮ ಯಶಸ್ಸು ಅಥವಾ ಶ್ರೇಯಸ್ಸಿನ ಹಿಂದೆ ಹೆತ್ತವರ ಮತ್ತು ಸಮಾಜದ ಋಣವಿದೆ, ಪರಿಸರದ ವರವಿದೆ. ಹಾಗಿದ್ದಾಗ್ಯೂ ಕೆಲವರು ಯಾಕಾಗಿ ಮಾನವರ ಸಹಜ ವರ್ತನೆಯನ್ನು ತೋರದೆ ದಾನವತ್ವವನ್ನೇ ಮೆರೆಯುತ್ತಾರೆ....? ಸುಂದರವಾದ ಅರಣ್ಯಗಳನ್ನು ನಾಶಮಾಡುತ್ತಾರೆ....? ಜಲರಾಶಿಯನ್ನು ಹಾಳುಗೆಡಹುತ್ತಾರೆ....? ಪರಿಸರವನ್ನು ತ್ಯಾಜ್ಯವಸ್ತುಗಳ ಸಾಗರವನ್ನಾಗಿ ಕುರೂಪಗೊಳಿಸಿ ಸ್ವಾರ್ಥಿಗಳಾಗುತ್ತಿದ್ದಾರೆ....? ಆಹಾರ ಬೆಳೆಗಳನ್ನು ವಿಷಮಯಗೊಳಿಸುತ್ತಾರೆ ಮತ್ತು ಕಲಬೆರಕೆಗೊಳಿಸುತ್ತಾರೆ....? ಇವೆಲ್ಲದರ ಹಿಂದೆ ತನ್ನ ಮತ್ತು ತನ್ನವರ ಹೊರತಾದ ಎಲ್ಲದರ ಮೇಲಿನ ಪ್ರೀತಿಯ ಕೊರತೆ. ಪ್ರೀತಿಸುವ ಮನಸ್ಸುಗಳು ಹೆಚ್ಚಿದಂತೆ ಎಲ್ಲ ಅಸಂಗತಗಳು ಮಾಯವಾಗುತ್ತವೆ. ಸುಸಂಗತಗಳೇ ರಾರಾಜಿಸುತ್ತವೆ. 
       ಆದುದರಿಂದ ಪ್ರೀತಿಯ ಒರತೆಯನ್ನು ಚಿಮ್ಮಿಸುವ ಕೆಲಸ ಎಂದೆಂದಿನ ಅನಿವಾರ್ಯತೆಯಾಗಿರುತ್ತದೆ ಎಂಬುದನ್ನು ಮರೆಯದಿರಿ ಮಕ್ಕಳೇ. ನಮಸ್ಕಾರ
...........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
********************************************

Ads on article

Advertise in articles 1

advertising articles 2

Advertise under the article