-->
ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
                           
                    
         ಬದುಕಿನಲ್ಲಿ ಅಳವಡಿಸಲೇಬೇಕಾದ, ಜೀವನಕ್ಕೆ ನೈಜವಾದ ಅರ್ಥವನ್ನು ನೀಡುವ ಸತ್ಕರ್ಮವೇ “ದಾನ”. ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೆ, ಅತ್ಯಂತ ಸಂತಸ ಮತ್ತು ಪ್ರೀತಿಯಿಂದ ಕಾಯಾ ವಾಚಾ ಮನಸಾ ಇತರರಿಗೆ ನೀಡುವ ಸೇವೆಯೇ ದಾನ. ದಾನದ ಶ್ರೇಷ್ಠತೆಯು ಸೇವೆಯ ಗಾತ್ರ ಅಥವಾ ಪ್ರಮಾಣವನ್ನು ಅನುಸರಿಸಿರುವುದಿಲ್ಲ; ಬದಲಾಗಿ ದಾನಿಯ ಹೃದಯವೈಶಾಲ್ಯತೆ ಮತ್ತು ಮನೋ ಪರಿಶುದ್ಧತೆಯನ್ನನುಸರಿಸಿರುತ್ತದೆ. ಅನ್ನದಾನ, ಅಕ್ಷರ ದಾನ, ಭೂದಾನ, ವಸ್ತ್ರದಾನ, ಧಾನ್ಯ ದಾನ, ಗೋದಾನ, ಧನ ದಾನ. ಕನಕದಾನ, ದೇಹದಾನ, ನೇತ್ರದಾನ, ಜೀವದಾನ ಹೀಗೆ ದಾನ ಮಾಡಬಹುದಾದ ವಸ್ತು ಅಥವಾ ವಿಷಯಗಳ ಸಂಖ್ಯೆ ಅಗಣಿತ, ವಾಕ್ ದಾನ ದಾನಗಳಲ್ಲಿ ಅತ್ಯಂತ ಮಹತ್ವವನ್ನು ಹೊಂದಿದೆ. ಯಾರಿಗೇ ಆಗಲಿ ಮಾತು ಕೊಟ್ಟನಂತರದಲ್ಲಿ ಅದರ ಅನುಪಾಲನೆಯಾದರೆ ಮಾತ್ರವೇ ವಾಗ್ದಾನ ಪರಿಪೂರ್ಣವಾಗುತ್ತದೆ. ಮಾತು ತಪ್ಪಿದರೆ ಅದು ವಾಗ್ದಾನದ ಉಲ್ಲಂಘನೆ ಮತ್ತು ಪಾಪಕೃತ್ಯ ಆಗುವುದು. ವಾಗ್ದಾನವನ್ನು ಪಾಲನೆ ಮಾಡದವನು ಪಾಪಿಯಾಗುವನು. ಗೋವಿನ ಹಾಡನ್ನು ಓದದವರಿಲ್ಲ. ಗೋವು ಕೊಟ್ಟ ಮಾತಿನಂತೆ ನಡೆದು ತನ್ನನ್ನೇ ರಕ್ಷಿಸಿದ ಕಥೆ ವಾಕ್ಪಾಲನೆಯ ಔನ್ನತ್ಯವನ್ನು ಸಾರುತ್ತದೆ. ಸದಾ ಸತ್ಯಸಂಧರಾದವರು ಎಂದೂ ಕೊಟ್ಟ ಮಾತಿಗೆ ತಪ್ಪಿ ನಡೆಯುವುದಿಲ್ಲ.
        ದಾನವು ಖುಷಿ ಅಥವಾ ಸಂತಸವನ್ನು ಒದಗಿಸುವಂತಿರಬೇಕು ಎನ್ನುವರು. ಹಿರಿಯರೊಬ್ಬರ ಉತ್ತರಕ್ರಿಯೆಯಲ್ಲಿ ಅವರ ಜಿಪುಣ ಮಗ ಗೋದಾನ ನೀಡಲು ಯೋಚಿಸಿ ಗೋವೊಂದನ್ನು ಅರಸತೊಡಗಿದನು. ಕಡಿಮೆಗೆ ಸಿಗುವ ಗೋವೊಂದನ್ನು ಗುರುತಿಸಿಯೂ ಬಿಟ್ಟನು. ಗೋದಾನ ಪಡೆದವನು ತನ್ನ ಹಟ್ಟಿಗೆ ಆ ದನ ಮತ್ತು ಅದರ ಕರುವನ್ನು ತಂದು ಕಟ್ಟಿದನು. ಕಡಿಮೆ ಬೆಲೆಗೆ ಆ ದಾನಿಗೆ ಸಿಕ್ಕಿದ ದನವಲ್ಲವೇ? ಕಡಿಮೆಗೆ ಕೊಡಬೇಕಾದರೆ ದನಕ್ಕೆ ದೋಷವಿರದೇ ಇದ್ದೀತೇ? ದಾನ ಸ್ವೀಕರಿಸಿದ ಆ ಮುದಿ ಬ್ರಾಹ್ಮಣ ಹಾಲು ಕರೆಯಲೆಂದು ಹಟ್ಟಿ ಪ್ರವೇಶಿಸಿದ್ದೇ ತಡ, ದನದ ನಿಜ ಸ್ವಭಾವ ತಿಳಿದು, ಬ್ರಾಹ್ಮಣನಿಗೆ ಬಹಳ ಬೇಸರವಾಯಿತು. ಕಿಂಚಿತ್ತೂ ಸಂತೋಷ ಆಗಲೇ ಇಲ್ಲ. ಪಡೆದ ದಾನದಿಂದ ಬ್ರಾಹ್ಮಣನ ನೆಮ್ಮದಿಯೇ ನಾಶವಾಯಿತು. ದನವನ್ನು ಕರೆಯಲು ಹೋದವರಿಗೆ ಅದು ಬಲವಾಗಿ ಒದೆಯುತ್ತಿತ್ತು, ಕಾಲು ಝಾಡಿಸಿ ಹಾಯಲು ಬರುತ್ತಿತ್ತು. ಒಂದು ತೊಟ್ಟೂ ಹಾಲು ಪಡೆಯುವಂತಿರಲಿಲ್ಲ. ಯಾರಿಗಾದರೂ ಮಾರೋಣ ಎಂದರೆ ದಾನ ಪಡೆದುದನ್ನು ಮಾರಬಾರದಲ್ಲವೇ? ಯಾರಿಗಾದರೂ ಉಚಿತವಾಗಿ ಕೊಡೋಣ ಎಂದರೆ ಆ ದನದ ಅಟ್ಟಹಾಸ ಜಗಜ್ಜಾಹೀರಾಗಿತ್ತು. ಬ್ರಾಹ್ಮಣನಿಂದ ದನವನ್ನು ಉಚಿತವಾಗಿ ಪಡೆಯಲು ಯಾರೂ ಮುಂದೆ ಬರಲಿಲ್ಲ. ದಾನ ನೀಡುವ ಮೊದಲು ತಮ್ಮದಾನದಿಂದ ದಾನ ಪಡೆದವನಿಗೆ ಕಿರಿಕಿರಯಾಗಬಾರದೆಂಬ ಪ್ರಜ್ಞೆ ಅತೀ ಅಗತ್ಯ.
           ನೀಡಿದ ದಾನದ ವಸ್ತುವು ಸ್ವೀಕೃತನಿಗೆ ಅನಗತ್ಯವಾದ ಸರಕೂ ಆಗಬಾರದು. ಒಬ್ಬನಲ್ಲಿ ತನ್ನ ಮನೆಗೆ ಅಗತ್ಯಕ್ಕೆ ಬೇಕಾದಷ್ಟು ಗಡಿಯಾರಗಳಿವೆ ಎಂದಿರಲಿ. ಅವನಿಗೆ ಯಾರಾದರೂ ಗಡಿಯಾರಗಳನ್ನು ದಾನವಾಗಿಯೋ ಉಡುಗೊರೆಯಾಗಿಯೋ ನೀಡಿದರೆ ಅವುಗಳನ್ನು ಆತನು ಬಳಸುವುದಾದರೂ ಹೇಗೆ? ಇರಿಸುವುದಾದರೂ ಎಲ್ಲಿ? ಅದು ಅವನಿಗೆ ಅನಗತ್ಯ ವಸ್ತು ತಾನೆ? ಅನಗತ್ಯ ವಸ್ತು ಎಂದರೆ ಸ್ವೀಕರಿಸುವವನಿಗೆ ಕಸವೇ ಹೊರತು ಬೇರೇನೂ ಆಗದು. ಕೆಲವೊಮ್ಮೆ ದಾನವಾಗಿ ಪಡೆದ ವಸ್ತು ಮನೆಯಲ್ಲಿ ಇಲ್ಲದ ವಸ್ತುಗಳಾಗಿರಬಹುದಾದರೂ ಬಳಕೆಗೆ ಯೋಗ್ಯವಾಗದವುಗಳಾಗಿದ್ದರೆ ಅವೂ ಸೂಕ್ತ ದಾನವಾಗದು. ಉದಾಹರಣೆಗೆ ಓರ್ವ ದಾನಿಯು ಜೇನು ತುಪ್ಪ ದಾನಮಾಡಿದನಂತೆ. ಅದನ್ನು ಮನೆಗೆ ಒಯ್ದು ನೋಡಿದರೆ ಜೇನುತುಪ್ಪವು ಇರುವೆಯಿಂದ ತುಂಬಿದ್ದರೆ ಆ ಜೇನನ್ನು ಮಾಡುವುದಾದರೂ ಏನು...? ಇಂತಹ ಕಿರಿಕಿರಿಯನ್ನುಂಟು ಮಾಡುವ ದಾನ ಪುಣ್ಯ ಸಂಪಾದನೆಗಿಂತ ಪಾಪ ಸಂಪಾದನೆಗೆ ಕಾರಣವಾಗುತ್ತದೆ.
         ದಾನವನ್ನು ಸತ್ಪಾತ್ರರಿಗೆಗೆ ಮಾಡಬೇಕು ಎನ್ನುತ್ತಾರೆ. ಸತ್ಪಾತ್ರನಲ್ಲದವನಿಗೆ ಯಾವುದೇ ದಾನವನ್ನು ನೀಡಿದರೂ ಪುಣ್ಯದಾಯಕವಲ್ಲ. ಅಪಾತ್ರನಾದವನಿಗೆ ಕನ್ಯಾದಾನ ಮಾಡಿದರೆ ಆ ಕನ್ಯೆಯ ಬಾಳು ಗೋಳಿನ ಸಂತೆಯಾಗುವುದು. ಕುಡುಕನಿಗೆ ಧನ ದಾನ ಮಾಡಿದರೆ ಆ ಧನ ಎಲ್ಲಿಗೆ ಸೇರಬಹುದೆಂಬ ಕಲ್ಪನೆ ನಮಗಿರಲೇ ಬೇಕು. ಅಂತಹ ಸಂದರ್ಭದಲ್ಲಿ ಅವನಿಗೆ ಧನವನ್ನು ದಾನ ನೀಡದಿರುವುದೇ ಉಚಿತ. ವಿದ್ಯುತ್ ಸಂಪರ್ಕವಿರದ ಮನೆಗೆ ವಾಷಿಂಗ್ ಮೆಷಿನ್ ದಾನಮಾಡುವುದೂ ನಿಷ್ಪ್ರಯೋಜನಕರ. 
ಆದುದರಿಂದ ಯಾವುದೇ ದಾನವನ್ನು ನೀಡುವ ಸಂದರ್ಭಗಳಲ್ಲೂ ಎಲ್ಲಾ ಆಯಾಮಗಳಿಂದ ಪಾತ್ರತ್ವವನ್ನು ಅಳೆಯುವ ಅಥವಾ ತೂಗುವ ಪ್ರಕ್ರಿಯೆ ನಡೆಯಬೇಕು.... ನಮಸ್ಕಾರ
....ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
********************************************

Ads on article

Advertise in articles 1

advertising articles 2

Advertise under the article