
ಜೀವನ ಸಂಭ್ರಮ : ಸಂಚಿಕೆ - 42
Sunday, July 3, 2022
Edit
ಜೀವನ ಸಂಭ್ರಮ : ಸಂಚಿಕೆ - 42
ಕಲಿಯಬಹುದಾದ ನೀತಿ......
----------------------------------------------
ಪುರಾಣಗಳಲ್ಲಿ ಅನೇಕ ಜೀವನ ನೀತಿಗಳು ಬರುತ್ತದೆ. ಅದರಲ್ಲಿ ಎರಡು ಪ್ರಮುಖ ನೀತಿಗಳನ್ನು ನೋಡೋಣ.... ದಶರಥನಿಗೆ ಮೂರು ಜನ ಪತ್ನಿಯರು. ಪ್ರತಿಯೊಬ್ಬರಿಗೂ ಒಂದೊಂದು ಗಂಡು ಮಕ್ಕಳಿದ್ದರು. ಹಿರಿಯಮಗ ಶ್ರೀರಾಮ, ಎರಡನೆಯವನು ಲಕ್ಷ್ಮಣ ಹಾಗೂ ಕೊನೆಯವನು ಭರತ. ದಶರಥನ ಕೊನೆಯ ಪತ್ನಿಯಾದ ಕೈಕೇಯಿ ಅತಿ ಸುಂದರಳೂ, ಪ್ರೀತಿ ಪಾತ್ರಳಾಗಿದ್ದಳು. ಸಮಯ ಬಂದಾಗ ಮೂರು ವರ ಕೊಡುವ ಶರತ್ತಿನೊಂದಿಗೆ ದಶರಥನನ್ನು ವಿವಾಹವಾಗುತ್ತಾಳೆ. ಶ್ರೀರಾಮ ವಯಸ್ಸಿಗೆ ಬಂದಾಗ ವಿವಾಹ ಮಾಡಿ ರಾಜ್ಯದ ಪಟ್ಟಾಭಿಷೇಕ ಮಾಡಬೇಕು ಎಂದು ನಿರ್ಧರಿಸುತ್ತಾನೆ. ಶ್ರೀರಾಮ ಮತ್ತು ಸೀತೆಗೂ ವಿವಾಹವಾಗುತ್ತದೆ. ಇನ್ನೇನು ಪಟ್ಟಾಭಿಷೇಕ ಮಾಡಬೇಕು ಆಗ ಕೈಕೇಯಿ ತನ್ನ ಮಗನಾದ ಭರತನಿಗೆ ಪಟ್ಟಾಭಿಷೇಕ ಮಾಡಿಸಬೇಕೆಂಬ ಪುತ್ರ ವ್ಯಾಮೋಹದಿಂದ ,ತನ್ನ ಸೇವಕಿ ಮಂಥರೆಯ ಸಲಹೆಯಂತೆ, ದಶರಥನಲ್ಲಿ ವರಗಳ ಬೇಡಿಕೆ ಇಡುತ್ತಾಳೆ. ಬೇಡಿಕೆಯಂತೆ ಭರತನಿಗೆ ಪಟ್ಟಾಭಿಷೇಕ, ಶ್ರೀರಾಮ 14 ವರ್ಷ ವನವಾಸಕ್ಕೆ ತೆರಳಬೇಕಾಗುತ್ತದೆ. ಇದನ್ನು ತಿಳಿದ ಶ್ರೀರಾಮ ವನವಾಸಕ್ಕೆ ಹೊರಡಲು ಸಿದ್ಧನಾಗಿ ಇರುವಾಗ, ಪತ್ನಿ ಸೀತೆ ತಾನು ಶ್ರೀರಾಮನ ಜೊತೆ ವನವಾಸಕ್ಕೆ ಹೊರಡುತ್ತಾಳೆ. ಜೊತೆಗೆ ಲಕ್ಷ್ಮಣನು ಹೊರಡಲು ಸಿದ್ಧನಾಗುತ್ತಾನೆ. ಶ್ರೀರಾಮ ಅವರು ಬರುವುದು ಬೇಡ, ವರವಿರುವುದು ನನಗೆ, ಇವರಿಗಲ್ಲ ಎಂದು ತಿಳಿಸುತ್ತಾನೆ. ಆಗ ಸೀತೆ ಹೇಳಿದ ಮಾತು "ಎಲ್ಲಿ ಶ್ರೀರಾಮನೋ ಅಲ್ಲಿ ಸೀತೆ ,ರಾಮನು ಇರುವ ಜಾಗವೇ ನನ್ನ ಅರಮನೆ ,ಅದೇ ನನ್ನ ಸಾಮ್ರಾಜ್ಯ" ಎಂದು ಹೇಳಿ ಜೊತೆಯಲ್ಲಿ ಹೊರಡುತ್ತಾಳೆ. ಲಕ್ಷ್ಮಣನು ಜೊತೆಯಲ್ಲಿ ಹೊರಡುತ್ತಾನೆ. ಕಾಡಿನಲ್ಲಿ 13 ವರ್ಷ ಸುಂದರವಾಗಿ ಸಂತೋಷವಾಗಿ ಮೂರು ಜನ ಇದ್ದರು. ಮಾನವನ ಇತಿಹಾಸದಲ್ಲಿ 13 ವರ್ಷಗಳ ಮಧುಚಂದ್ರದ ದಾಖಲೆ ಶ್ರೀರಾಮ ಸೀತೆಯರದ್ದು. ಇವರ ರಕ್ಷಣೆಗಾಗಿ ಲಕ್ಷ್ಮಣ ಇದ್ದ. ನಿಜವಾಗಿ ರಾಮಾಯಣ ಶುರುವಾಗುವುದು ಕೊನೆ ವರ್ಷ. ಶೂರ್ಪಣಕಿಯ ಆಸೆ ಈಡೇರದೆ, ಲಕ್ಷ್ಮಣನಿಂದ ಹಲ್ಲೆಗೊಳಗಾಗಿ , ತನ್ನ ಅಣ್ಣ ರಾವಣನಿಗೆ ಈ ವಿಚಾರ ತಿಳಿಸಿದಳು. ಆಗ ಮಾರೀಚ ಚಿನ್ನದ ಜಿಂಕೆಯಾಗಿ ಬಂದ. ಸೀತೆಯ ಮುಂದೆ ಪ್ರತ್ಯಕ್ಷನಾಗಿ ಓಡಿಹೋಗುತ್ತಾನೆ. ಸೀತೆ ಇದನ್ನು ನೋಡಿ , ಶ್ರೀರಾಮನಿಗೆ ಅದು ಬೇಕೆಂದು ಹಠ ಹಿಡಿಯುತ್ತಾಳೆ. ಶ್ರೀರಾಮ ಆ ಚಿನ್ನದ ಜಿಂಕೆಯನ್ನು ಹಿಂಬಾಲಿಸಿ ಹೋಗುತ್ತಾನೆ. ಲಕ್ಷ್ಮಣನನ್ನು ಸೀತೆಯ ಕಾವಲಿಗೆ ಬಿಟ್ಟಿರುತ್ತಾನೆ. ಆಗ ಸೀತೆಗೆ ಶ್ರೀ ರಾಮನ ಧ್ವನಿಯಲ್ಲಿ ಕಾಪಾಡಿ ಎನ್ನುವ ಧ್ವನಿ ಕೇಳಿಸುತ್ತದೆ. ಆಗ ಸೀತೆ , ಲಕ್ಷ್ಮಣನಿಗೆ ಶ್ರೀರಾಮನನ್ನು ರಕ್ಷಿಸುವಂತೆ ಹೇಳುತ್ತಾಳೆ. ಶ್ರೀರಾಮನ ಆಜ್ಞೆಪಾಲಿಸಬೇಕಾದ್ದ ರಿಂದ ಲಕ್ಷ್ಮಣ ತಿರಸ್ಕರಿಸುತ್ತಾನೆ. ಆಗ ಸೀತೆ , ಲಕ್ಷ್ಮಣನಿಗೆ ಹೇಳಿದ್ದು "ನೀನು ನನ್ನ ಮೇಲಿನ ಪ್ರೇಮದಿಂದ ಹೋಗುತ್ತಿಲ್ಲ," ಎಂದು ಚುಚ್ಚು ಮಾತನಾಡುತ್ತಾಳೆ. ಆಗ ಲಕ್ಷ್ಮಣ ಬೇರೆ ದಾರಿ ಕಾಣದೆ ಮೂರು ರೇಖೆಗಳನ್ನು ಹಾಕಿ , ಇದನ್ನು ದಾಟ ಬೇಡಿ ಎಂದು ಹೇಳಿ ಶ್ರೀರಾಮನ ಕಡೆಗೆ ಹೋಗುತ್ತಾನೆ. ಆಗ ರಾವಣ ಬ್ರಾಹ್ಮಣ ವೇಷದಲ್ಲಿ ಬಂದು, ಸೀತೆಯಿಂದ ಬಿಕ್ಷೆ ಬಿಡುತ್ತಾನೆ. ಸೀತೆಯ ಸೌಂದರ್ಯ ನೋಡಿ ರಾವಣ ಮರುಳಾಗುತ್ತಾನೆ. ಭಿಕ್ಷೆ ನೀಡಲು ಮೂರು ಗೆರೆ ದಾಟುವಂತೆ ಮಾಡಿ , ಗೆರೆಯಿಂದ ಹೊರಬಂದಾಗ ಸೀತೆಯ ಸೌಂದರ್ಯ ಕಂಡು , ಇದು ನನ್ನದಾಗ ಬೇಕೆಂದು ಬಯಸಿ , ಅಪಹರಣ ಮಾಡುತ್ತಾನೆ. ರಾವಣನು ಸೀತೆಯ ಸೌಂದರ್ಯ ನೋಡಿ ಆನಂದ ಪಟ್ಟಿದ್ದರೆ , ಅದೇ ರೀತಿ ಸೀತೆಯು ಚಿನ್ನದ ಜಿಂಕೆಯ ಸೌಂದರ್ಯ ನೋಡಿ ಆನಂದ ಪಟ್ಟಿದ್ದರೆ ಏನೂ ಆಗುತ್ತಿರಲಿಲ್ಲ. ಸುಂದರ ವಸ್ತು ನನ್ನದಾಗಬೇಕು ಎಂದು ಆಸೆಪಟ್ಟಿದ್ದು, ರಾಮಾಯಣಕ್ಕೆ ಕಾರಣ. ಅಂದರೆ ನಮ್ಮ ಜೀವನದಲ್ಲಿ ಕಂಡ ಕಂಡ ವಸ್ತುಗಳ ಹಿಂದೆ, ಸುಂದರವಾದ ವಸ್ತುಗಳು ನನ್ನದಾಗ ಬೇಕೆಂದು ಬಯಸಿದರೆ , ನಮ್ಮ ಜೀವನವು ರಾದ್ಧಾಂತಕ್ಕೆ ಕಾರಣ ಆಗುತ್ತದೆ , ಇದು ಒಂದು ನೀತಿ....
ಕೊನೆಗೆ ರಾವಣನನ್ನು ಸೋಲಿಸಿ, ಶ್ರೀ ರಾಮ ಮತ್ತು ಸೀತೆ ಅಯೋಧ್ಯೆಗೆ ಬರುತ್ತಾರೆ. ಆದರೆ ಭರತ, ಶ್ರೀರಾಮನ ಪಾದುಕೆ ಇಟ್ಟುಕೊಂಡು ರಾಜ್ಯಭಾರ ಮಾಡುತ್ತಿರುತ್ತಾನೆ. ಶ್ರೀರಾಮ ಸೀತೆ ಅಯೋಧ್ಯೆಗೆ ಬಂದಮೇಲೆ ಪಟ್ಟಾಭಿಷೇಕ ವಾಗುತ್ತದೆ. ಇನ್ನೇನು ರಾಜ ಮಹಾರಾಣಿಯಾಗಿ ಆನಂದವಾಗಿರಬೇಕು ಅನ್ನುವಷ್ಟರಲ್ಲಿ ಒಂದು ಘಟನೆ ಜರುಗುತ್ತದೆ. ಒಬ್ಬ ತನ್ನ ಹೆಂಡತಿಯನ್ನು ಮನೆಯಿಂದ ಹೊರಹಾಕಿದ್ದಾನೆ. ಏಕೆ ಎಂದು ಪ್ರಶ್ನಿಸಿದಾಗ , ಅಗಸ ಹೇಳಿದ ಮಾತು "ಬಿಟ್ಟ ಹೆಂಡತಿ ಪುನಃ ಕರೆದುಕೊಳ್ಳಲು ನಾನೇನು ಶ್ರೀರಾಮನೇ...." ಈ ಮಾತು ಶ್ರೀರಾಮನಿಗೆ ಗೊತ್ತಾಗಿ , ಸೀತೆಯ ಪಾವಿತ್ರ್ಯತೆ ಪರೀಕ್ಷಿಸಲು ಅಗ್ನಿಪ್ರವೇಶ ಮಾಡುವಂತೆ ಹೇಳುತ್ತಾನೆ. ಅದರಲ್ಲಿ ಸೀತೆ ಯಶಸ್ವಿಯಾಗುತ್ತಾಳೆ. ಅನುರೂಪ ದಾಂಪತ್ಯ ಶ್ರೀರಾಮ ಸೀತೆಯರದು ಆಗಿತ್ತು. ಆದರೆ ಕಾಲ ಒಂದಾಗಿ ಇರಲು ಬಿಡುವುದಿಲ್ಲ. ಸೀತೆ ತುಂಬು ಗರ್ಭಿಣಿ ಆದಾಗ ಪುನಃ ಕಾಡಿಗೆ ಹೋಗಬೇಕಾಗುತ್ತದೆ. ಶ್ರೀರಾಮನಿಂದ ದೂರವಾಗುತ್ತಾಳೆ. ಅಂದರೆ ಈ ಜಗತ್ತಿನಲ್ಲಿ ಯಾವುದು ಕಾಯಮ್ಮಾಗಿ , ಇದ್ದಂತೆ ಸ್ಥಿರವಾಗಿ ಇರುವುದಿಲ್ಲ. ಸದಾ ಬದಲಾಗುತ್ತಿರುತ್ತದೆ. ನಾವು ಯಾವುದನ್ನು ಕಾಯಂ ಮಾಡಲು, ಇದ್ದಂತೆ ಇರುವಂತೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಬದಲಾವಣೆಗೆ ಒಪ್ಪಿಕೊಂಡು, ಇರುವುದರಲ್ಲಿ ಆನಂದ ಪಡಬೇಕೆಂಬುದು ನೀತಿ.
ಕೌರವರು, ಪಾಂಡವರು ಪ್ರತ್ಯೇಕ ರಾಜ್ಯವಾಳುತ್ತಿದ್ದರು. ಪಾಂಡವರು ಸುಂದರವಾದ ಅರಮನೆ ನಿರ್ಮಾಣ ಮಾಡಿದ್ದರು. ಅದರಲ್ಲಿ ವಿಶೇಷತೆ ಇತ್ತು. ನೀರು ಇರುವಂತೆ ಕಾಣುತ್ತಿತ್ತು, ನೀರಿರಲಿಲ್ಲ. ಖಾಲಿ ಜಾಗದಂತೆ ಕಾಣುತ್ತಿತ್ತು ಅದರಲ್ಲಿ ನೀರಿರುತ್ತಿತ್ತು. ಆಗ ಪಾಂಡವರು , ಕೌರವರನ್ನು ಹಬ್ಬ ಮಾಡಿ ಆಹ್ವಾನಿಸುತ್ತಾರೆ. ಕೌರವರು ಬರುವಾಗ ದ್ರೌಪತಿ ಅರಮನೆ ಮೇಲೆ ನಿಂತು ನೋಡುತ್ತಿರುತ್ತಾಳೆ. ದುರ್ಯೋಧನ ನೀರಿದೆಯೆಂದು ಭಾವಿಸಿ ಬಟ್ಟೆಯನ್ನು ಮೇಲೆತ್ತಿದಾಗ, ದ್ರೌಪದಿ ಹೇಳಿದ ಮಾತು "ಕುರುಡನ ಮಗ ಕುರುಡ" ಈ ಮಾತು ದುರ್ಯೋಧನನಿಗೆ ಕೇಳಿತು. ಅಂದೆ ಮಹಾಭಾರತ ನಿಶ್ಚಯವಾಯಿತು. ಈ ಮಾತು ಹೇಳುವುದರ ಬದಲು , ಅತಿಥಿಗಳನ್ನು ಕರೆದುಕೊಂಡು ಹೋಗಿ , ವೈಶಿಷ್ಟ್ಯ ತೋರಿಸಿ , ಅಭಿನಂದಿಸಿದ್ದರೆ ಎಲ್ಲರೂ ಸಂತೋಷದಲ್ಲಿ ಇರಬಹುದಾಗಿತ್ತು. ಅಂದರೆ ಸರಿಯಾದ , ಸುಂದರವಾದ ಮಾತನಾಡದಿದ್ದರೆ ಮಹಾಭಾರತ ವಾಗುತ್ತದೆ ಎಂಬುದು ನೀತಿ.
ಕೌರವರಿಗೂ ಪಾಂಡವರಿಗೂ ಕುರುಕ್ಷೇತ್ರದಲ್ಲಿ 5 ಗ್ರಾಮಗಳಿಗಾಗಿ ಯುದ್ಧ ನಡೆಯುತ್ತದೆ. ಬಹಳಷ್ಟು ಯುವಕರು ಮರಣ ಹೊಂದುತ್ತಾರೆ. ಅನೇಕ ಹೆಣ್ಣುಮಕ್ಕಳು ವಿದವೆಯರಾಗುತ್ತಾರೆ. ಅನೇಕ ಮಕ್ಕಳು ಅನಾಥರಾಗುತ್ತಾರೆ. ಅಂದರೆ ದ್ವೇಷ, ಮತ್ಸರ , ಜಗಳ ಮತ್ತು ಯುದ್ಧ ಇವುಗಳ ಅಂತ್ಯ ಸುಂದರವಾಗಿರುವುದಿಲ್ಲ. ಘನ ಘೋರವಾಗಿರುತ್ತದೆ. ಅನೇಕ ಜನರ ಹತ್ಯೆ , ಕಟ್ಟಡ , ರಚನೆ ಮತ್ತು ಸಂಪತ್ತು ನಾಶವಾಗುತ್ತದೆ ಎನ್ನುವುದು ನೀತಿ. ಅದೇ ರೀತಿ ಈ ಭೂಮಿಗಾಗಿ ರಕ್ತಪಾತವಾಯಿತು. ಈ ಭೂಮಿಯನ್ನು ಆಳಿದವರು ಇಂದಿಲ್ಲ. ಆದರೆ ಭೂಮಿ ಇದೆ. ಇದೇ ಸತ್ಯ. ಭೂಮಿಗಾಗಿ ಬಡಿದಾಡಿದರೆ ನಾವುಗಳು ನಾಶವೇ ಹೊರತು, ಈ ಭೂಮಿಯಲ್ಲ.....!! ಇದು ಒಂದು ನೀತಿ. ಅದಕ್ಕಾಗಿ ಮನುಷ್ಯ ಇರುವುದನ್ನು ಹಂಚಿಕೊಂಡು ಆನಂದವಾಗಿ ಬದುಕಬೇಕು ಅಲ್ಲವೇ ಮಕ್ಕಳೆ.....
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************