ಬದಲಾಗೋಣವೇ ಪ್ಲೀಸ್.....! ಸಂಚಿಕೆ - 55
Wednesday, July 20, 2022
Edit
ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 55
ಅದೊಂದು ದಿನ ಅತ್ಯಂತ ತುರ್ತು ಕೆಲಸಕ್ಕಾಗಿ ಕಂಪ್ಯೂಟರ್ ಕೊಠಡಿಗೆ ಬಂದೆ. ನನಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಮಾಡಿ ನನ್ನ ಬಲಗೈ ಬಂಟನಂತೆ ಸದಾ ಬ್ಯುಸಿ ಇರುತ್ತಿದ್ದ ಕಂಪ್ಯೂಟರ್ ಬಳಿ ನಿಂತೆನು. ಆ ಕಂಪ್ಯೂಟರ್ ಎಂದರೆ ನನಗೆ ತುಂಬಾ ಪ್ರೀತಿ. ಅದರಲ್ಲಿ ನನಗೆ ಸಂಬಂಧಿಸಿದ ನೂರಾರು ಛಾಯಾಚಿತ್ರಗಳು, ಮಹತ್ವದ ದಾಖಲೆಗಳು , ವಿವಿಧ ಚಟುವಟಿಕೆಗಳು, ವೈಯಕ್ತಿಕ ಮಾಹಿತಿಗಳು ಸಂಗ್ರಹವಾಗಿದ್ದವು. ನನ್ನ ಹೆಚ್ಚಿನ ಕೆಲಸವನ್ನು ಅದೇ ಮಾಡುತಿತ್ತು. ನನಗೆ ಅಗತ್ಯವಿದ್ದಾಗಲೆಲ್ಲ ಬೇಕಾಗಿರುವ ಎಲ್ಲಾ ಮಾಹಿತಿಗಳನ್ನು ಕ್ಷಣಮಾತ್ರದಲ್ಲಿಯೇ ಅದುವೇ ನೆನಪು ಮಾಡಿಕೊಂಡು ಕೊಡುತಿತ್ತು. ಒಟ್ಟಾರೆಯಾಗಿ ಅದೊಂದು ಆತ್ಮೀಯ ಗೆಳೆಯನಾಗಿತ್ತು.
ಎಂದಿನಂತೆ ಇಂದೂ ಕೂಡಾ ಖುಷಿಯಿಂದ ಕಂಪ್ಯೂಟರ್ ತೆರೆದಾಗ ಅದು ನಿಷ್ಟ್ರೀಯವಾಗಿತ್ತು. ನನಗೆ ಅಗತ್ಯವಾದ ಹೆಚ್ಚಿನ ಮಾಹಿತಿಗಳು ಕಣ್ಮರೆಯಾಗಿತ್ತು. ಒಂದು ಕೆಲಸ ನೀಡಿದರೆ ಇನ್ನಾವುದೇ ಕೆಲಸ ಮಾಡುತಿತ್ತು. ಒಂದಕ್ಕೊಂದು ಸಂಬಂಧವಿಲ್ಲದ ಕೆಲಸಗಳನ್ನು ಮಾಡುತಿತ್ತು . ಯಾವಾಗಲೂ ಹೆಗಲಿಗೆ ಹೆಗಲು ಕೊಟ್ಟು ನನ್ನ ಕೆಲಸಕ್ಕೆ ಸಹಕರಿಸುತ್ತಿದ್ದ ನನ್ನ ಗೆಳೆಯ ನಾದ ಕಂಪ್ಯೂಟರ್ ಇಂದು ನಿಷ್ಟ್ರೀಯನಾಗಿದ್ದಾನೆ. ಆತನಿಗೆ ಏನಾಗಿದೆ...? ಇದ್ದಕ್ಕಿದಂತೆ ಏಕೆ ನಿಷ್ಕ್ರೀಯನಾಗಿದ್ದಾನೆ...? ಎಂದು ಆಲೋಚಿಸಿದೆನು. ಕೊನೆಗೆ ಅರ್ಥವಾಗದೆ ಕಂಪ್ಯೂಟರ್ ತಂತ್ರಜ್ಞನ ಸಹಾಯ ಕೇಳಿದೆನು.
ಕಂಪ್ಯೂಟರ್ ತಂತ್ರಜ್ಞನು ಸದ್ರಿ ಕಂಪ್ಯೂಟರ್ ಸಮಸ್ಯೆ ಬಗ್ಗೆ ಪರಿಶೀಲಿಸಿ ಸ್ವಲ್ಪ ಸಮಯದ ಬಳಿಕ ಅದನ್ನು ಸರಿಪಡಿಸಿದನು. ನಂತರ ಹೊರಡಲು ಸಿದ್ಧನಾದಾಗ "ಅರೇ ನಿಷ್ಕ್ರೀಯವಾದ ಕಂಪ್ಯೂಟರ್ ನ್ನು ಹೇಗೆ ಸರಿಪಡಿಸಿದಿರಿ....?" ಎಂದು ಕೇಳಿದಾಗ ತಂತ್ರಜ್ಞನು "ಸರ್ , ಕಂಪ್ಯೂಟರ್ ಗೆ ಯಾವುದೇ ಸಂರಕ್ಷಣೆ ವ್ಯವಸ್ಥೆ ಇಲ್ಲದಿರುವಾಗ , ಅನಧಿಕೃತ ಆ್ಯಪ್ ಅಥವಾ ಇತರೇ ಬಳಕೆ ಮಾಡಿದಾಗ ಅಪಾಯಕಾರಿ ವೈರಸ್ ಗಳು ಆಕ್ರಮಿಸಿ ಕಂಪ್ಯೂಟರ್ ವ್ಯವಸ್ಥೆಯನ್ನು ಹಾಳುಗೈಯುತ್ತವೆ. ಇದರಿಂದ ಕಂಪ್ಯೂಟರ್ ನಿಷ್ಕ್ರೀಯವಾಗುತ್ತದೆ. ಅಥವಾ ತಪ್ಪು ಕೆಲಸಗಳನ್ನು ಮಾಡುತ್ತದೆ. ಇದನ್ನು ತಪ್ಪಿಸಲು ಮುನ್ನೆಚ್ಚರಿಕೆಯಾಗಿ ಆ್ಯಂಟಿವೈರಸ್ ಹಾಕಬೇಕು. ಇದರಿಂದ ಯಾವುದೇ ವೈರಸ್ ದಾಳಿಯಿಂದ ರಕ್ಷಣೆ ಪಡೆಯಬಹುದು ಹಾಗೂ ಕಂಪ್ಯೂಟರನ್ನು ಪರಿಪೂರ್ಣವಾಗಿ ಸಮಸ್ಯೆ ರಹಿತವಾಗಿ ಬಳಸಬಹುದು. ಈ ಆ್ಯಂಟಿವೈರಸ್ ಬಗ್ಗೆ ನಿರ್ಲಕ್ಷ್ಯ ತೋರಿದರೆ ಕಂಪ್ಯೂಟರ್ ನಲ್ಲಿರುವ ಅಮೂಲ್ಯ ದಾಖಲೆಗಳು ಮರೆಯಾಗಿ ಮಾಡಿದ ಕೆಲಸವೆಲ್ಲ ವ್ಯರ್ಥವಾಗಬಹುದು. ಒಂದು ಅಮೂಲ್ಯ ಆಸ್ತಿಯು ಹಾಳಾಗಬಹುದು" ಎಂದನು. ಕಂಪ್ಯೂಟರ್ ವೈರಸ್ ಮತ್ತು ಆ್ಯಂಟಿವೈರಸ್ ಬಗ್ಗೆ ಕೇಳಿ ಆಶ್ಚರ್ಯಚಕಿತನಾದೆ.
ಹೌದಲ್ವ ಗೆಳೆಯರೇ ನಮ್ಮ ಮೆದುಳು ಎಂಬುದು ಕಂಪ್ಯೂಟರ್ ನ್ನು ಮೀರಿದ ಅಪ್ರತಿಮ ಸಾಧನ. ಅದರ ಕೆಲಸ , ಮೆಮೊರಿ ಸಾಮರ್ಥ್ಯ , ಪ್ರತಿ ಸೂಚನೆಗೂ ಕ್ಷಣಾರ್ಧದಲ್ಲಿ ನೀಡುವ ಪ್ರತಿಕ್ರಿಯೆ ವ್ಯವಸ್ಥೆ, ಅದರ ಕಾರ್ಯವೈಖರಿ.. ಹೀಗೆ ಎಲ್ಲವೂ ಕಂಪ್ಯೂಟರ್ ಗಿಂತ ಮಿಗಿಲಾದದ್ದು. ಇಂಥಹ ಕಂಪ್ಯೂಟರ್ ಗೂ ಮೀರಿದ ನಮ್ಮ ಬದುಕಿನ ವ್ಯವಸ್ಥೆಗೂ ಸೂಕ್ತವಾದ ರಕ್ಷಣಾ ವ್ಯವಸ್ಥೆಗಳಿಲ್ಲದಿರುವಾಗ ಅಥವಾ ನಿರ್ಲಕ್ಷ್ಯತನದ ಭಾವಗಳಿರುವಾಗ ಋಣಾತ್ಮಕ ಮನೋಭಾವಗಳೆಂಬ ವೈರಸ್ ಗಳು ಆಗಾಗ ದಾಳಿ ಮಾಡುತ್ತದೆ. ಆ ದಾಳಿಯಿಂದ ಇಡೀ ಬದುಕಿನ ವ್ಯವಸ್ಥೆಗಳೇ ನಿಷ್ಕ್ರೀಯವಾಗಬಹುದು ಅಥವಾ ಅವ್ಯವಸ್ಥೆಗೊಳಗಾಗಿ ಸ್ತಂಭನಗೊಳ್ಳಬಹುದು. ಬದುಕು ಸಮಸ್ಯೆ ಭರಿತವಾಗಬಹುದು. ಸದಾ ಕ್ರಿಯಾಶೀಲರಾಗಿ , ಚೈತನ್ಯಶೀಲರಾಗಿ ಬದುಕುತ್ತಿದ್ದ ವ್ಯಕ್ತಿಯು ಈ ಋಣಾತ್ಮಕ ಮನೋಭಾವದ ದಾಳಿಯಿಂದ ದಿಕ್ಕಪಾಲಾಗಬಹುದು. ಬದುಕಿನಲ್ಲಿ ಸ್ಫೂರ್ತಿ ಕಳೆದು ನಿಸ್ತೇಜನಾಗಬಹುದು. ಇದಕ್ಕಾಗಿ ಸದಾ ಧನಾತ್ಮಕ ಮನೋಭಾವಗಳೆಂಬ ಆ್ಯಂಟಿವೈರಸ್ ನ್ನು ಅಳವಡಿಸಬೇಕು. ಒಮ್ಮೆ ಆ್ಯಂಟಿವೈರಸ್ ನ್ನು ಅಳವಡಿಸಿದರೆ ಮುಂಬರುವ ಎಲ್ಲಾ ಋಣಾತ್ಮಕ ದಾಳಿಗಳಿಂದ ರಕ್ಷಣೆ ಪಡೆಯಬಹುದು. ನಮ್ಮ ನೆಮ್ಮದಿಯ ಬದುಕಿಗೆ ಹಾಗೂ ಎಲ್ಲಾ ರೀತಿಯ ಸಮಸ್ಯೆಗಳ ಜಂಜಾಟದಿಂದ ಮುಕ್ತವಾಗಿರಲು ಪೂರಕವಾದ ಆ್ಯಂಟಿವೈರಸ್ ಗಳನ್ನು ಗುರುತಿಸಿ ಅಳವಡಿಸೋಣ. ಆ ಮೂಲಕ ಸ್ಫೂರ್ತಿಯುತ ಕ್ರಿಯಾಶೀಲ ಬದುಕನ್ನು ಬದುಕೋಣ. ಈವರೆಗೆ ನಮ್ಮ ಬದುಕಿಗೆ ಆ್ಯಂಟಿವೈರಸ್ ಅಳವಡಿಕೆಯಾಗಿರದಿದ್ದರೆ ಕೂಡಲೇ ಅಳವಡಿಸೋಣ. ಈ ಅಳವಡಿಕೆಯ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?.
ಶಿಕ್ಷಕರು ಮತ್ತು ತರಬೇತುದಾರರು
Mob: +91 99802 23736
********************************************