-->
ಹಕ್ಕಿ ಕಥೆ : ಸಂಚಿಕೆ - 55

ಹಕ್ಕಿ ಕಥೆ : ಸಂಚಿಕೆ - 55

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ

               
     ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ.... ತಲೆಕೂದಲಿಗೆ ಅದೇನೋ ಜೆಲ್ ಎಂಬ ಅಂಟುದ್ರವ ಹಾಕಿ ತಲೆಕೂದಲನ್ನು ಮುಳ್ಳಿನಂತೆ ನಿಲ್ಲಿಸುವ ಜಾಹೀರಾತುಗಳನ್ನು ನೀವೂ ನೋಡಿರುತ್ತೀರಿ. ಮನುಷ್ಯರಾದ ನಾವು ಹೀಗೆ ಮಾಡಲು ಏನೆಲ್ಲಾ ಸರ್ಕಸ್ ಮಾಡುತ್ತೇವೆ. ಆದರೆ ಪಕ್ಷಿ ಲೋಕದಲ್ಲೊಂದು ಹಕ್ಕಿಗೆ ಸಹಜವಾಗಿ ಹೀಗೆ ಸುಂದರವಾದ ಹ್ಯಾರ್ ಸ್ಟೈಲ್ ಮಾಡಲು ಸಾಧ್ಯವಾಗುತ್ತದೆ. ತಲೆಯ ಮೇಲೆ ಅರಳಿದ ಹೂವಿನಂತೆ ಕಾಣುವ ಕಿರೀಟವನ್ನು ಹೊತ್ತು ಅಡ್ಡಾಡುವ ಈ ಹಕ್ಕಿಯ ಹೆಸರು ಚಂದ್ರ ಮುಕುಟ.
       ತಲೆಯ ಮೇಲೆ ಕಿರೀಟ ಇಟ್ಟುಕೊಂಡು ಹಾರಾಡಲು ಕಷ್ಟವಾಗುವುದಿಲ್ಲವೇ ಎಂದು ನೀವು ಕೇಳಬಹುದು. ಬೇಸಗೆಯಲ್ಲಿ ಉರಿಬಿಸಿಲಿಗೆ ಛತ್ರಿ ಬಿಡಿಸಿಕೊಂಡು ಓಡಾಡುವವರು ನೆರಳಿಗೆ ಬಂದಾಗ ಛತ್ರಿಯನ್ನು ಮಡಚಿದಂತೆ ಈ ಹಕ್ಕಿ ಬೇಕಾದಾಗಲೆಲ್ಲ ತನ್ನ ಕಿರೀಟವನ್ನು ಬಾಚಿದ ಕೂದಲಿನಂತೆ ಮಡಚಿ ಇಟ್ಟುಕೊಳ್ಳಬಲ್ಲದು. ಇದೊಂದೇ ಇದರ ವಿಶೇಷ ಅಲ್ಲ. ಈ ಹಕ್ಕಿಯ ಕೊಕ್ಕು ವಿಶಿಷ್ಟವಾದದ್ದು. ಉದ್ದನೆಯ ಪಿಕಾಸಿ ಅಥವಾ ಗುದ್ದಲಿಯಂತಹ ಕೊಕ್ಕು. ಅದನ್ನು ಬಳಸಿ ಮಣ್ಣನ್ನು ಕೆದಕಿ, ಕೆದಕಿ, ಕೀಟಗಳನ್ನು ಹುಳ ಹುಪ್ಪಟೆಗಳನ್ನು ಹುಡುಕಿ ತಿನ್ನುತ್ತದೆ. ಹೀಗೆ ನೆಲವನ್ನು ಕುಟುಕುವುದರಿಂದಲೇ ನೆಲಕುಟುಗ ಎಂಬ ಇನ್ನೊಂದು ಹೆಸರೂ ಈ ಹಕ್ಕಿಗೆ ಇದೆ. ನೆಲವನ್ನು ಕುಟುಕಿ ಹುಳ ಹುಪ್ಪಟೆಗಳನ್ನು ತಿನ್ನುವುದರಿಂದ ಪ್ರಕೃತಿಯಲ್ಲಿ ಕೀಟಗಳ ಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ. ಇದರ ಬಣ್ಣ ಕೆಂಪು ಮಣ್ಣಿನ ಬಣ್ಣ. ರೆಕ್ಕೆಯ ಮೇಲೆ ಝೀಬ್ರಾದಂತೆ ಬಿಳಿ ಮತ್ತು ಕಪ್ಪು ಬಣ್ಣದ ಪಟ್ಟಿಗಳು. ಹಾರಾಡುವಾಗ ರೆಕ್ಕೆಪೂರ್ತಿ ಬಿಳಿ ಕಪ್ಪು ಬಣ್ಣದ ಪಟ್ಟಿಗಳು ಬಹಳ ಸುಂದರವಾಗಿ ಕಾಣುತ್ತವೆ. ಹೆಚ್ಚಾಗಿ ನೆಲದ ಮೇಲೆ ಓಡಾಡುತ್ತಾ ನೆಲವನ್ನು ಕೆದಕುತ್ತಾ ಆಹಾರ ಅರಸುವ ಈ ಹಕ್ಕಿ ಬಯಲುಸೀಮೆಯ ಹಳ್ಳಿಗಳಲ್ಲಿ ಸುಲಭವಾಗಿ ಕಾಣಲು ಸಿಗುತ್ತವೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲೂ ಈ ಹಕ್ಕಿ ಇರುವುದನ್ನು ಪಕ್ಷಿವೀಕ್ಷಕ ಮಿತ್ರರು ದಾಖಲಿಸಿದ್ದಾರೆ. ಹೂ.. ಪೋ.. ಎಂದು ಕೂಗುವುದರಿಂದ ಈ ಹಕ್ಕಿಯ ಇಂಗ್ಲೀಷ್ ಹೆಸರೂ ಹೂ..ಪೋ ಎಂದಾಗಿದೆ.
      ಫೆಬ್ರವರಿಯಿಂದ ಮೇ ತಿಂಗಳ ನಡುವೆ ಮರದ ಪೊಟರೆಗಳಲ್ಲಿ ಅಥವಾ ಕಟ್ಟಡಗಳ ಸಂಧಿಗಳಲ್ಲಿ ಹುಲ್ಲು, ಕಸಕಡ್ಡಿಗಳನ್ನು ಸೇರಿಸಿ ಗೂಡುಮಾಡಿ ಮೊಟ್ಟೆ ಇಟ್ಟು ಮರಿಮಾಡುತ್ತದೆ. ತಂದೆ ತಾಯಿ ಎರಡೂ ಸಮಾನವಾಗಿ ಮರಿಗಳನ್ನು ಬೆಳೆಸುವ ಕೆಲಸದಲ್ಲಿ ಭಾಗವಹಿಸುತ್ತವೆ. ಗಂಡು ಮತ್ತು ಹೆಣ್ಣು ಹಕ್ಕಿಗಳೆರಡೂ ನೋಡಲಿಕ್ಕೂ ಸಮಾನವಾಗಿರುತ್ತವೆ. ಭಾರತ ದೇಶದಾದ್ಯಂತ ನೋಡಲು ಸಿಗುವ ಇಂತಹ ಸುಂದರವಾದ ಹಕ್ಕಿ ನಿಮ್ಮ ಆಸುಪಾಸಿನಲ್ಲೂ ಇರಬಹುದು. ಗಮನಿಸಿ ದಾಖಲಿಸ್ತೀರಲ್ಲ......
ಕನ್ನಡ ಹೆಸರು: ನೆಲಕುಟುಕ ಅಥವಾ ಚಂದ್ರಮುಕುಟ
ಇಂಗ್ಲೀಷ್ ಹೆಸರು: Common Hoopoe
ವೈಜ್ಞಾನಿಕ ಹೆಸರು: Upupa epops 
ಚಿತ್ರಕೃಪೆ: ಅಂತರ್ಜಾಲ
ಮುಂದಿನವಾರ ಇನ್ನೊಂದು ಹೊಸ ಹಕ್ಕಿ ಕಥೆಯೊಂದಿಗೆ ಸಿಗೋಣ.. ಬಾಯ್..
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************

Ads on article

Advertise in articles 1

advertising articles 2

Advertise under the article