-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 54

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 54

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
    
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 54
      
            
      ಮೋಹನನಿಗೆ ಸುಂದರವಾದ ಮನೆ ಕಟ್ಟುವ ಆಶೆ. ಹಲವಾರು ಪ್ರಯತ್ನಗಳ ನಂತರ ಮನೆ ಕಟ್ಟುವ ಅಂತಿಮ ಹಂತಕ್ಕೆ ಬಂದಾಗ ಮನೆಗೆ ಸುಣ್ಣ ಬಣ್ಣ ನೀಡುವ ಚಿಂತೆ ಆರಂಭವಾಯಿತು. ಹಲವಾರು ಮಂದಿ ತಮ್ಮ ತಮ್ಮ ಅಭಿರುಚಿಗೆ ತಕ್ಕಂತೆ ಬಣ್ಣದ ಆಯ್ಕೆಯನ್ನು ವಿವರಿಸಿದರು. ಅಲ್ಲಿಂದ ಗೊಂದಲಕ್ಕೊಳಗಾದ ಮೋಹನ ಕೊನೆಗೆ ಅವರಿವರಲ್ಲಿ ಚರ್ಚಿಸಿ ಮನೆಗೆ ಅಂದವಾದ ಬಣ್ಣಗಳನ್ನು ಬಳಿಸಿದ. ಬಂದವರೆಲ್ಲ ಆಹಾ ಅದ್ಭುತ ಎಂದು ಹೊಗಳಿದಾಗ ಮೋಹನನಿಗೆ ಖುಷಿಯೋ.. ಖುಷಿಯೋ 
       ಈಗ ಮನೆಗೆ ಬರುಬರುತ್ತಾ ನಾಲ್ಕೈದು ವರುಷವಾಯಿತು. ಮನೆಯ ಗೋಡೆಯ ಬಣ್ಣ ನಿಧಾನಕ್ಕೆ ಮಾಸತೊಡಗಿತು. ಮನೆಗೆ ಪ್ರಾರಂಭದಲ್ಲಿ ಬಣ್ಣ ಬಳಿಯಲು ಇದ್ದ ಆಸಕ್ತಿ ಈಗ ಇಲ್ಲದಾಗಿದೆ. ಬಣ್ಣದ ಕಡೆಗಿನ ಪ್ರೀತಿ ಹಾಗೂ ಗಮನ ಕಡಿಮೆಯಾಗತೊಡಗಿತು. ಮತ್ತೆ ಬಣ್ಣ ಬಳಿಯಲು ಮರಳಿ ಮನಸ್ಸಾಗಬೇಕಾಗಿದೆ...
       ದಿಗಂತ್ ಸ್ವಂತ ಕಾರೊಂದನ್ನು ತೆಗೆಯಲು ನಿರ್ಧರಿಸಿದ. ಕಾರಿನ ಕಂಪೆನಿ ಹಾಗೂ ವಿಶೇಷತೆ ಬಗ್ಗೆ ಹತ್ತಾರು ಜನರಲ್ಲಿ ವಿಚಾರಿಸಿ ಕೊನೆಗೆ ಕಾರೊಂದನ್ನು ಖರೀದಿಸಿದ. ಕಾರು ಖರೀದಿಸಿದ ಘಳಿಗೆಯಿಂದ ಸುಮಾರು ಹತ್ತಾರು ದಿನಗಳವರೆಗೆ ಕಾರಿನ ಮೇಲೆ ವಿಶೇಷ ಗಮನ ವಹಿಸಿದ. ತನ್ನ ಪ್ರಾಣವೆಂಬಂತೆ ಪ್ರೀತಿಸಿದ. ಆದರೆ ದಿನ ಕಳೆದಂತೆ ಕಾರಿನ ಮೇಲಿನ ಆಸಕ್ತಿ ಕಡಿಮೆಯಾಗತೊಡಗಿತು. ದಿನಕ್ಕೆ ನಾಲ್ಕೈದು ಬಾರಿ ತೊಳೆದು ಸ್ವಚ್ಛಗೊಳಿಸಿ ಚೆನ್ನಾಗಿ ನಿರ್ವಹಣೆ ಮಾಡುವ ಆಸಕ್ತಿ ಇದೀಗ ತಿಂಗಳಿಗೊಮ್ಮೆ ತೊಳೆಯುವ ಹಂತಕ್ಕೆ ಬಂದಿದೆ. ಬರಬರುತ್ತಾ ಅದು ವರ್ಷಕ್ಕೊಮ್ಮೆಗೂ ಹೋಗಬಹುದು. ಅವನಿಗೂ ಕಾರು ಖರೀದಿಯ ಪ್ರಾರಂಭದಲ್ಲಿದ್ದ ಆಸಕ್ತಿ ದಿನಗಳೆದಂತೆ ಕುಂದ ತೊಡಗಿದೆ. ಕಾರು ನಿರ್ವಹಣೆಗೆ ಮರಳಿ ಮನಸ್ಸಾಗಬೇಕಾಗಿದೆ.
      ಆರಂಭದಿಂದ ಇರುವ ಆಸಕ್ತಿ ದಿನಗಳೆದಂತೆ ಕಡಿಮೆಯಾಗುವ ಅಂದರೆ ಬಣ್ಣ ಮಾಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಇಂಥಹಾ ಹಲವಾರು ಘಟನೆಗಳನ್ನು ನಾವು ನಿತ್ಯವೂ ನಮ್ಮ ಪರಿಸರದಲ್ಲಿ ಕಾಣುತ್ತೇವೆ. ವಸ್ತುಗಳ ಮೇಲಿನ ಇಂಥಹಾ ಘಟನೆಯಿಂದಾಗುವ ನೋವಿನ ಪ್ರಮಾಣ ಕಡಿಮೆ. ಯಾಕೆಂದರೆ ಮನೆ, ವಾಹನ ಇತ್ಯಾದಿಗಳು ನಿರ್ಜೀವ ವಸ್ತುಗಳು. ಅದರೊಳಗಿರುವುದು ಕೇವಲ ಯಾಂತ್ರಿಕ ಸಂಬಂಧ. ಆದರೆ ಮನುಜರ ನಡುವಿನ ಸಂಬಂಧಗಳು ಯಾಂತ್ರಿಕವಲ್ಲ. ಏಕೆಂದರೆ ಜೀವ ಜೀವಗಳ ನಡುವಿನ ಸಜೀವ ಮಾನವೀಯ ಸಂಬಂಧ. ಸಜೀವ ಸಂಬಂಧಗಳಾದ ಗುರು- ಶಿಷ್ಯರ ಸಂಬಂಧ , ಮನೆ - ಕುಟುಂಬದೊಳಗಿನ ಸಂಬಂಧ , ವ್ಯಾಪರಿ - ಗ್ರಾಹಕ ಸಂಬಂಧ , ಕಲೆ- ಕಲಾವಿದ ಸಂಬಂಧ...ಇತ್ಯಾದಿಗಳು ಯಾಂತ್ರಿಕವಾದರೆ ತುಂಬಾ ಕಷ್ಟ. ಈ ರೀತಿ ಸಂಬಂಧಗಳು ಸದಾ ಹಸಿರಾಗಿರಬೇಕು. ಅದು ದಿನಗಳಂತೆ ಬಣ್ಣ ಮಾಸ ತೊಡಗಿದರೆ ಅದರಿಂದಾಗುವ ನೋವುಗಳು ಅಪಾರ. ಸಂಬಂಧಗಳ ಮಧ್ಯೆ ಪ್ರಾರಂಭದಲ್ಲಿದ್ದ ಆಸಕ್ತಿ ಕೊನೆಯವರೆಗೂ ಬಣ್ಣ ಮಾಸದಂತೆ ಕಾಯಬೇಕಾಗಿದೆ. ಆದರೆ ಎಲ್ಲದರಲ್ಲೂ ಬಳಸಿ ಬಿಸಾಡಿ (use and throw) ಪದ್ಧತಿಯ ಮನೋಭಾವ ಹೆಚ್ಚುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಸಂಬಂಧಗಳು ಕೂಡಾ use and throw ಆಗುತ್ತಿದೆ. ಅವರವರ ಅವಶ್ಯಕತೆಗಳಿಗೆ ಮಾತ್ರ ನೆನಪಾಗುವ ಸಂಬಂಧಗಳಲ್ಲಿ ನಾವೆಲ್ಲರೂ ಭಿನ್ನವಾಗಿ ನಿಲ್ಲಬೇಕಾಗಿದೆ. ಕೊಟ್ಟ ಬಣ್ಣ ಮಾಸದಂತೆ ಕಾಪಾಡಬೇಕಾಗಿದೆ. ಆರಂಭದಲ್ಲಿದ್ದ ಆಸಕ್ತಿಯು ಕುಂದದಂತೆ ನೋಡಬೇಕಾಗಿದೆ. ಈ ಬಳಸಿ ಬಿಸಾಡುವ ಮನೋಸ್ಥಿತಿಯಿಂದ ಬಳಸಿ ಬದುಕಿಸುವ ಮನೋಸ್ಥಿತಿಗೆ ನಾವು ಬದಲಾಗಬೇಕಾಗಿದೆ. ಸಂಬಂಧಗಳಿಗೆ ಬೆಲೆ ಕೊಟ್ಟು ನೆಮ್ಮದಿಯಿಂದ ಬದುಕಲು ಕಲಿಯೋಣ. ಆಶೆ ಹಾಗೂ ಅಗತ್ಯಗಳು ಮರಣದವರೆಗೂ ಮುಗಿಯುವುದಿಲ್ಲ. ಆದರೆ ಒಳ್ಳೆಯ ಸಂಬಂಧಗಳು ಅದರಾಚೆಗೂ ಮುಂದುವರೆಯುತ್ತದೆ. ಜೀವಂತವಿದ್ದರೂ ಸತ್ತಂತೆ ಇರುವ ಬದಲು..... ಸತ್ತ ಮೇಲೂ ಜೀವಂತವಾಗಿರುವ ಬದುಕನ್ನು ನಡೆಸೋಣ. ಹಾಗಾಗಿ ಈ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************

Ads on article

Advertise in articles 1

advertising articles 2

Advertise under the article