-->
ಸಂಚಾರಿಯ ಡೈರಿ : ಸಂಚಿಕೆ - 2

ಸಂಚಾರಿಯ ಡೈರಿ : ಸಂಚಿಕೆ - 2

ಸಂಚಾರಿಯ ಡೈರಿ : ಸಂಚಿಕೆ - 2
       ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ.
                    
   'ಈ ಬಾರಿ ನಮ್ಮ ಪ್ರವಾಸ ಉತ್ತರಾಖಂಡ್‌ಗೆ' ಎಂದು ಘೋಷಿಸಲ್ಪಟ್ಟಾಗ ಎಲ್ಲರಲ್ಲೂ ಏನೋ ಉತ್ಸಾಹ.... ಹೇಗಿರಬಹುದು ಅನ್ನುವ ಕುತೂಹಲ.... ನಮ್ಮದು ಪ್ರವಾಸೋದ್ಯಮ ವಿಭಾಗವೇ ಆಗಿದ್ದರಿಂದ itinerary ಮೂಲಕ , ಸ್ಪಷ್ಟ ಚಿತ್ರಣ ಮೂಡಿಸುವುದು ಕಷ್ಟವಾಗಿರಲಿಲ್ಲ..
     ಮಂಗಳೂರಿನಿಂದ ಡೆಹ್ರಾಡೂನ್‌ಗೆ ಎರಡು ದಿನಗಳ ಧೀರ್ಘ ರೈಲು ಪ್ರಯಾಣ ಸಾಗಿ , ಡೆಹ್ರಾಡೂನ್‌ನಲ್ಲಿ ಒಂದು ಹೋಟೆಲ್‌ನಲ್ಲಿ ತಂಗಿದ್ದೆವು. 12 ಡಿಗ್ರಿ ಸೆಲ್ಷಿಯಸ್ ತಾಪಮಾನದಲ್ಲಿ , ಶೀತಲ ವಾತಾವರಣದಲ್ಲಿ , ದೇವಭೂಮಿಯ ಸೌಂದರ್ಯೋಪಾಸನೆಯ ಉತ್ಸಾಹ ಉತ್ತುಂಗದಲ್ಲಿತ್ತು..
     ಮನಮೋಹಕ ಮಸ್ಸೂರಿ : ಬೆಳಗ್ಗಿನ ತಿಂಡಿ ಮುಗಿಸಿ, ನಮ್ಮ ಪ್ರಯಾಣ ಹೊರಟಿದ್ದು ಉತ್ತರಾಖಂಡ್‌ನ 'ಬೆಟ್ಟಗಳ ರಾಣಿ' ಎಂದೇ ಕರೆಸಿಕೊಳ್ಳುವ ಮಸ್ಸೂರಿ‌ಗೆ. ಸಮುದ್ರ ಮಟ್ಟದಿಂದ 1800 ಮೀಟರ್‌ಗೂ ಎತ್ತರದ ಈ ತಾಣಕ್ಕೆ ಪ್ರವಾಸಿಗರ ಆಗಮನ ನಿರಂತರ.
ತಿರುವು ಮುರುವಿನ ರಸ್ತೆಯಲ್ಲಿ ನಮ್ಮ ಬಸ್ ಚಲಿಸುವಾಗ ಪ್ರಪಾತದ ಕಡೆ ನೋಟ ಹರಿಸಿದಾಗ , ಮೈ ಝುಮ್ಮೆನ್ನುತ್ತಿತ್ತು. ಸುತ್ತಲೂ ‌ಬೆಟ್ಟ , ಬಂಡೆಗಳ ಮಧ್ಯೆ ಸಾಗುತ್ತಿದ್ದ ರಸ್ತೆಯ ಕೆಲವೆಡೆ 2013 ರ ಮೇಘಸ್ಫೋಟದ ಕುರುಹುಗಳು ಕಾಣಿಸುತ್ತಿದ್ದವು. ಚಳಿಗಾಲದಲ್ಲಿ ಹಿಮಚ್ಛಾದಿತ ದೃಶ್ಯಕ್ಕೆ ಹೆಸರಾದ ಮಸ್ಸೂರಿ ಮನಸೂರೆಗೊಳಿಸಿಬಿಟ್ಟಿತ್ತು.
    ಚಾರ್ಲೆವಿಲ್ಲೆಯ ನೋಟ : ಅಷ್ಟಕ್ಕೂ ಬೆಟ್ಟಗಳ ಶ್ರೇಣಿಯನ್ನ ನೋಡುವುದೇ ಕಣ್ಣಿಗೆ ತಂಪು. ಹಾವಿನ‌ ಚಲನೆಯಂತೆ ಬಳುಕಾಡುತ್ತಿದ್ದ ಬಸ್ಸಿಂದಿಳಿದು , ಚಾರ್ಲೆವಿಲ್ಲೆ ಎಂಬಲ್ಲಿಯ ವ್ಯೂ ಪಾಯಿಂಟ್‌ನ ಆಹ್ಲಾದಕರ ವಾತಾವರಣದಲ್ಲಿ ಸ್ವಂತಿ ಕ್ಲಿಕ್ಕಿಸಿಕೊಳ್ಳುತ್ತಾ , ಕೆಂಪ್ಟಿ ಫಾಲ್ಸ್ ನ ಕಡೆ ತೆರಳಿದೆವು.
    ಕೆಂಪ್ಟಿ ಫಾಲ್ಸ್ : ಬ್ರಿಟೀಷರಿಗೆ ಬಲು ಪ್ರಿಯವಾದ 'ಕ್ಯಾಂಪ್ ಟೀ' ಗೆ ಹೆಸರುವಾಸಿಯಾದ ಈ ಜಲಪಾತ ಮುಂದೆ ಕೆಂಪ್ಟಿ ಫಾಲ್ಸ್ ಅಂತ ಕರೆಸಿಕೊಂಡಿತು. ಇದು ಉತ್ತರಾಖಂಡ್‌ನ ತೆಹ್ರಿ ಗರ್ವಾಲ್ ಜಿಲ್ಲೆಯಲ್ಲಿದೆ. ಮುಟ್ಟಿದರೆ ರಕ್ತ ಹೆಪ್ಪುಗಟ್ಟುವಷ್ಟು ತಂಪಾಗಿದ್ದ ನೀರಿನಲ್ಲಿ ಮೀಯುವ ಹುಮ್ಮಸ್ಸಿದ್ದರೂ , ಚಳಿಯ ಭಯ. ಎತ್ತರದಿಂದ ಬರುತ್ತಿದ್ದ , ಶುದ್ಧ ಸ್ಫಟಿಕ ಜಲರಾಶಿಯ ಸೊಬಗು ವರ್ಣಿಸಲಸದಳ ಎಂದೆನಿಸಿತ್ತು. ಸುತ್ತುವರಿದ ಬೆಟ್ಟಗಳಿಗೆ , ನಕ್ಷತ್ರಗಳಂತೆ ಅಲ್ಲಲ್ಲಿ‌ ಜೋಪಡಿಗಳಂತ ಮನೆಗಳು , ಸೊಂಪಾದ ಪೈನ್ ಹೋಲುವ ಮರಗಳು ಕೆಂಪ್ಟಿ ಜಲಪಾತಕ್ಕೆ ಮೆರಗು ತಂದಿತ್ತು..
   ಮಸ್ಸೂರಿ ಲೇಕ್ : ಕೆಂಪ್ಟಿ ಜಲಪಾತದಲ್ಲಿ ನೀರಾಟವಾಡಿ , ನಮ್ಮ‌ ಪಯಣ ಸಾಗಿದ್ದು ಮಸ್ಸೂರಿ ಸರೋವರವ ಕಾಣಲು. ಅಲ್ಲಂತೂ ಬೋಟಿಂಗ್ ಮಾಡುವ ವ್ಯವಸ್ಥೆ ಕೂಡಾ ಇತ್ತು. ಅದಕ್ಕಿಂತಲೂ ವೈಶಿಷ್ಟ್ಯ ಎನಿಸಿದ್ದು 'ಝಿಪ್‌ಲೈನ್' ಸವಾರಿ. ಸುಮಾರು 250 ಮೀಟರ್ ದೂರಕ್ಕೆ , ಕಬ್ಬಿಣದ ದಪ್ಪ ತಂತಿಗಳ ಮೇಲೆ ನೇತಾಡುತ್ತಾ ರೊಂಯ್ಯನೆ ಚಲಿಸುವ ಅನುಭೂತಿ ಅನೂಹ್ಯವೇ ಸರಿ. ಅಲ್ಲಿಂದ ಬರೋ ಹೊತ್ತಿಗೆ ಭಾನುಕಿರಣಗಳು ಬಾನಿನ ಪಡುವಣ ದಿಕ್ಕಿಗೆ ಸಾಗಿಬಿಟ್ಟಿದ್ದವು. ನಮ್ಮ ಪಯಣ ಡೆಹ್ರಾಡೂನ್ ಕಡೆಗೆ ಸಾಗಿತ್ತು. ಹಿಂದಿರುಗಿ ಐದಾರು ಕಿ.ಮೀ ಸಾಗಿ ಬರುತ್ತಿದ್ದಾಗ ಒಂದು ದೇವಾಲಯ ಕಂಡಿತ್ತು.
     ಪ್ರಕಾಶೇಶ್ವರ ಮಹಾದೇವ ದೇವಾಲಯ : ಅಂದಹಾಗೆ ಈ ಆಲಯ ಶಿವನ ಸಿದ್ಧಪೀಠ ಎಂದು ಕರೆಸಿಕೊಂಡಿದೆ. ಖತ್ರಿ ಪರಿವಾರದವರು ನಡೆಸುವ ಈ ಆಲಯದಲ್ಲಿ ನಿತ್ಯ ಪ್ರಸಾದ ಮತ್ತು ಚಹಾ ವಿತರಿಸುತ್ತಾರೆ. ಇನ್ನೊಂದು ವೈಶಿಷ್ಠ್ಯತೆ ಎಂದರೆ ಈ ಆಲಯದಲ್ಲಿ ದೇವರಿಗೆ ಯಾವುದೇ ಹಣ , ಹರಕೆ ಒಪ್ಪಿಸುವುದು ನಿಷಿದ್ಧ. ಕಾರಣ ಭಗವಂತ ಮಾನವನಿಗೆ ಕೊಡುವ ದುಡ್ಡನ್ನ , ಮತ್ತೆ ಅವನಿಗೆ ಕೊಡುವುದು ತಪ್ಪು ಎಂಬ ಪ್ರತೀತಿ ಇಲ್ಲಿದೆ..
ಮಸ್ಸೂರಿಯ ಇತರ ತಾಣಗಳು :
1.ಗನ್ ಹಿಲ್
2.ಭಟ್ಟಾ ಜಲಪಾತ
3.ಹ್ಯಾಪಿ ವ್ಯಾಲಿ 
4.ಬೆನೋಗ್ ರಕ್ಷಿತಾರಣ್ಯ ಇತ್ಯಾದಿ
    ಮಸ್ಸೂರಿಯಿಂದ ಇವನ್ನೆಲ್ಲಾ ತರೋದನ್ನ 
ಮರಿಬೇಡಿ : 
◾ಮರದಿಂದ ತಯಾರಿಸಿದ ಆಟಿಕೆ,ಪಾತ್ರೆಗಳು
◾ಉತ್ತರಾಖಂಡ್‌ನ ವಿಶಿಷ್ಟ ಟೊಪ್ಪಿ ಎಂದೇ ಕರೆಸಿಕೊಳ್ಳುವ 'ಪಹಾಡೀ ಟೋಪಿ'.
◾ವಿಶಿಷ್ಟ ಟಿಕಳಿಯ ಉತ್ತರಾಂಚಲದ ದಿರಿಸು ಇತ್ಯಾದಿ..
      ಹೋಗೋದ್ ಹೇಗೆ.....? : ಡೆಹ್ರಾಡೂನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹತ್ತಿರದಲ್ಲಿದೆ. ಮಸ್ಸೂರಿ ಡೆಹ್ರಾಡೂನ್ ನಿಂದ ಸುಮಾರು ೪೦ ಕಿ.ಮೀ ದೂರ ಇದ್ದು , ನಿಯಮಿತ ಬಸ್ ಸೌಲಭ್ಯವೂ ಇದೆ.
......................................... ಸುಭಾಸ್ ಮಂಚಿ 
ಕಾಡಂಗಾಡಿ , ಮಂಚಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
Mob : 9663135413
******************************************

Ads on article

Advertise in articles 1

advertising articles 2

Advertise under the article