-->
ಮಳೆಯ ಫಜೀತಿ ಪ್ರಸಂಗ ; ಸಂಚಿಕೆ - 2

ಮಳೆಯ ಫಜೀತಿ ಪ್ರಸಂಗ ; ಸಂಚಿಕೆ - 2

ಮಳೆಯ ಫಜೀತಿ ಪ್ರಸಂಗ ; ಸಂಚಿಕೆ - 2

ಜಗಲಿಯ ಮಕ್ಕಳು ಬರೆದ ಮಳೆಯ ಅನುಭವಗಳು ಇಲ್ಲಿವೆ.....



    ನಾನು ಅಮೂಲ್ಯಾ ಎ ಜೈನ್. ಮಳೆಗಾಲದ ಒಂದು ದಿನ. ಜೋರಾಗಿ ಮಳೆ ಬರುತ್ತಿತ್ತು. ಆ ದಿನ ನನಗೆ ಯಾವುದೋ ಕೆಲಸದ ಕಾರಣದಿಂದ ಪ್ರಯಾಣಿಸಬೇಕಾಗಿ ಬಂತು. ಹಾಗೆಯೇ ಮಧ್ಯಾಹ್ನದ ಹೊತ್ತಿಗೆ ಹೊರಟೆ. ಹಾಕಲು ಯಾವುದೇ ಬಟ್ಟೆ ಸರಿಕಾಣದೆ ಕಡೆಗೆ ಒಂದು ಬಿಳಿ ಬಣ್ಣದ ಬಟ್ಟೆಯನ್ನು ಆರಿಸಿದೆ. ಭಯದಿಂದಲೇ ಮನೆಯಿಂದ ಹೊರಬಿದ್ದೆ. ನನ್ನ ಬಟ್ಟೆಗೆ ಯಾವುದೇ ಕಲೆ ಆಗದಿರಲಿ ಎಂದು ಬೇಡಿಕೊಂಡೇ ನಡೆದೆ. ಆದರೆ ನನ್ನ ಬೇಡಿಕೆಯನ್ನು ಈಡೇರಿಸಲು ದೇವರಿಗೆ ಇಷ್ಟ ಇರಲಿಲ್ಲವೋ ಏನೋ ರಸ್ತೆ ಬದಿಗೆ ಹೋಗಿ ಇನ್ನೇನು ರಸ್ತೆ ದಾಟಬೇಕು ಎನ್ನುವಷ್ಟರಲ್ಲಿ ಬಲಬದಿಯಿಂದ ಗಾಡಿಯೊಂದು ಜೋರಾಗಿ ಬಂದು ರಸ್ತೆಯಲ್ಲಿ ಕೆಸರು ನೀರು ತುಂಬಿಕೊಂಡಿದ್ದ ಹೊಂಡದೊಳಗೆ ಹೋಗಿ ನೀರನ್ನು ಚಿಮ್ಮಿಸಿತು. ನನ್ನ ದುರದೃಷ್ಟವೋ ಏನೋ ನಾನೂ ಅದೇ ಜಾಗದಲ್ಲಿ ನಿಂತಿದ್ದೆ. ಚಿಮ್ಮಿದ ಕೆಸರು ನೀರು ನನ್ನ ಬಿಳಿಯ ಬಟ್ಟೆಯ ಮೇಲೆ ರಂಗೋಲಿ ಬಿಡಿಸಿತು. ಆ ಕ್ಷಣ ನನಗೆ ಬಂದ ಕೋಪ ಅಷ್ಟಿಷ್ಟಲ್ಲ. ಅದೇ ಕೋಪದಿಂದ ಪುನಃ ಮನೆಗೆ ಮರಳಿ ಹೋಗಿ ಕೈಗೆ ಸಿಕ್ಕಿದ ಬಟ್ಟೆ ಧರಿಸಿ ಹೋಗಿ ಕೆಲಸ ಪೂರೈಸಿಕೊಂಡು ಬಂದೆ. ಈ ಕೋಪದಲ್ಲಿ ಆ ಮಳೆಗೆ ಅದೆಷ್ಟು ಶಾಪ ಹಾಕಿದ್ದೇನೋ ನನಗೇ ಗೊತ್ತಿಲ್ಲ. ಇದು ಮಳೆಯಿಂದಾದ ಫಜೀತಿ......
.................................. ಅಮೂಲ್ಯಾ ಎ ಜೈನ್
ಪ್ರಥಮ ಪಿ.ಯು.ಸಿ.
ಎಸ್.ಡಿ.ಎಂ.ಕಾಲೇಜು. ಉಜಿರೆ.
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************




     ಎಲ್ಲರಿಗೂ ನಮಸ್ಕಾರ. ನಾನು ಜಗಲಿಯ ಗೆಳತಿ ಧೃತಿ. ಮಳೆ ಅಂದರೆ ಎಲ್ಲರಿಗೂ ಇಷ್ಟ ಹಾಗೆ ನನಗೂ ಸಹ. ಮಳೆಯಲ್ಲಿ ಆಟವಾಡುವುದೆಂದರೇನು ನಮ್ಮ ನಿಮ್ಮೆಲ್ಲರ ಇಷ್ಟದ ಆಟ ಹೌದಲ್ಲಾ. ಹಾಗೆ ಈ ಸಲದ ಸ್ವಲ್ಪ ರಜೆಯಲ್ಲಿ ನಾನು ನೀರಿನಲ್ಲಿ ಆಟವಾಡಿದೆ. ಮಳೆ ಬಂದ ಕಾರಣ ನಮ್ಮ ತೋಡಿನಲ್ಲಿ ನೀರು ಹರಿಯುತ್ತಿತ್ತು. ನೀರಿನಲ್ಲಿ ಮೀನು ಹಿಡಿದೆವು. ಒಂದು ವಾರ ಸುರಿದ ಮಳೆ ಹೇಗಿತ್ತೆಂದರೆ ಅದು ವರ್ಣಿಸಲಾಗದ ಸ್ಥಿತಿ ಬಂದಿತ್ತು‌. ಮನೆಯಿಂದ ಹೊರಗೆ ಕಾಲಿಡುವುದಕ್ಕೆ ಆಗುತ್ತಿರಲಿಲ್ಲ. ಎಲ್ಲಿ ನೋಡಿದರಲ್ಲಿ ನೀರು ತುಂಬಿ ಹೋಗಿತ್ತು. ಈ ಮಳೆಗೆ ಎಲ್ಲಿಗೆ ಹೋಗುವುದು , ಏನು ಮಾಡೋದು ಎಂಬುದೇ ಚಿಂತೆ ಆಗಿತ್ತು. ಒಂದು ವಾರ ಬಿಡದೆ ಸುರಿದ ಮಳೆಯ ಪರಿಣಾಮವಾಗಿ ಶಾಲೆಗೆ ರಜೆ ಘೋಷಣೆ ಮಾಡಿದರು. ಮನೆಯಲ್ಲೇ ಕೂತು ಕೂತು ತುಂಬಾ ಬೋರ್ ಆಗಿತ್ತು. ರಜೆಯಲ್ಲಿ ಕವನ ಬರೆದಿದ್ದೆ, ಕಥೆಗಳನ್ನು ಓದಿದ್ದೆ, ಚಿತ್ರ ಮಾಡಿದ್ದೆ. ರಜೆ ಸ್ವಲ್ಪ ಖುಷಿಯನ್ನು ತಂದಿತ್ತು. ಆದರೆ ಮಳೆಯಿಂದಾಗಿ ಪೂರ್ತಿ ಖುಷಿಯಾಗಿರಲಿಲ್ಲ. ಶಾಲೆಯು ಬಹಳ ನೆನಪಾಯಿತು. ರಜೆ ಸಿಕ್ಕಿದ್ದರಿಂದ ತಂಗಿಯ ಜೊತೆ ಆಟವಾಡಿದೆ. ಮಳೆಯಿಂದಾಗಿ ನಮ್ಮೂರಿನಲ್ಲಿ ಅನೇಕ ಮರಗಳು ನೀರು ಪಾಲಾಗಿ ನಮ್ಮ ಊರಿನ ಕೃಷಿಕರು ಬಹಳ ನಷ್ಟವನ್ನು ಅನುಭವಿಸುತ್ತಿದರು. ಇನ್ನೊಂದೆಡೆ ಫಸಲನ್ನು ಬೆಳೆಯಲು ಬಹಳ ಖುಷಿಯಿಂದ ಉಳುಮೆ ಮಾಡಿ ಬೀಜವನ್ನು ಬಿತ್ತಿದ್ದಾರೆ. ರಜೆ ಸಿಕ್ಕಿದ್ದರಿಂದ ಇದನ್ನೆಲ್ಲ ನೋಡುವ ಭಾಗ್ಯ ನಮಗೆ ಸಿಕ್ಕಿತು. ಮಳೆ ಜೋರಾದ ಕಾರಣ ನಾವು ನಡೆದು ಹೋಗುವ ತೋಟದ ದಾರಿಯಲ್ಲಿ ನೀರು ತುಂಬಿತ್ತು. ನಮಗೆ ಹೋಗಲು ಆಗದಂತಹ ಪರಿಸ್ಥಿತಿಯನ್ನು ಈ ಮಳೆರಾಯ ತಂದೊಡ್ಡಿದ್ದನು. ನೀರು ಅಣೆಕಟ್ಟಿಗಿಂತ ಮೇಲೆ ಜೋರಾಗಿ ವೇಗವಾಗಿ ಹರಿದು ಬರುತ್ತಿತ್ತು. ಇದನ್ನು ನೋಡಿ ನಮಗೆ ತಲೆಯೇ ಸುತ್ತಿದಂತೆ ಆಗುತ್ತಿತ್ತು. ಇದು ನಮ್ಮೂರಿನ ಫಜೀತಿಯಾಗಿತ್ತು .....
.................................................. ಧೃತಿ 
10 ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
******************************************



       ನಾನು ಸಪ್ತಮಿ ಅಶೋಕ್ ದೇವಾಡಿಗ. ಮಳೆಯ ಫಜೀತಿ ಪ್ರಸಂಗದಲ್ಲಿ ನನಗಾದ ಅನುಭವಗಳೆಂದರೆ, ಒಂದು ವಾರ ಶಾಲೆಗಳು ಸ್ಥಗಿತವಾಗಿರುವುದರಿಂದ ತುಂಬಾನೇ ಬೇಜಾರಾದರೂ ಮನೆಯವರ ಜೊತೆ ಇದು ಕಾಲ -ಕಳೆಯಲು, ಆಟ ಆಡಲು ಅಷ್ಟೇ ಅಲ್ಲದೆ ಅತಿಯಾಗಿ ಮಳೆ ಇರುವುದರಿಂದ ಕುರುಕಲು ತಿಂಡಿ ತಿನ್ನಲು ತುಂಬಾ ಖುಷಿಯಾಗಿದೆ. ಭೂಮಿ ಮೇಲೆ ಇರುವ ಸಕಲ ಜೀವಿಗಳಿಗೂ, ಸಸ್ಯಗಳಿಗೂ, ಪ್ರಾಣಿಗಳಿಗೂ, ಮನುಷ್ಯರಿಗೂ ಹಾಗೆಯೇ ಪ್ರತಿಯೊಬ್ಬರಿಗೂ ಮಳೆ ತುಂಬಾನೇ ಅಗತ್ಯ. ಆದರೆ ಮಳೆ ಅತಿಯಾಗಿ ಬಂದರೆ ಅನಾನುಕೂಲಗಳು ಇರುವ ಸಾಧ್ಯತೆ ತುಂಬಾ ಇದೆ. ನಾನು ಕೂಡ ಒಬ್ಬ ರೈತ ಕುಟುಂಬದವಳಾಗಿ ನನಗೆ ಗೊತ್ತಿರುವ ಕೆಲವು ಮಳೆಯಿಂದ ಕೃಷಿಗೆ ಆಗುವ ಹಾನಿಗಳ ಬಗ್ಗೆ ನಾನು ಹೇಳಬಲ್ಲೆ.. ಮಳೆ ಕೃಷಿಗಳಿಗೆ ಬೇಕು ಆದರೆ ಅತಿಯಾದ ಮಳೆಗಳಿಂದ ಆ ಕೃಷಿಯೂ ಕೂಡ ನಾಶವಾಗಬಹುದು. ಅದೇ ರೀತಿ ಮೊನ್ನೆ ಅಷ್ಟೇ ನಾಟಿ ಮಾಡಿದ ಭತ್ತದ ಗದ್ದೆ ಸಂಪೂರ್ಣ ಹಾಳಾಗಿ ಹೋಗಿದೆ. ಈಗಷ್ಟೇ ಬಿಡುವ ಅಡಿಕೆ ತೋಟದ ಅಡಿಕೆಗಳು ಸಂಪೂರ್ಣವಾಗಿ ಉದುರಿ ಹೋಗಿದೆ. ಅಷ್ಟೇ ಅಲ್ಲದೆ ನಾನು ಶಾಲೆಗೆ ಹೋಗುವ ರಸ್ತೆಗಳು ಅಲ್ಲಲ್ಲಿ ಹಾಳಾಗಿದೆ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಏಕೆಂದರೆ ಇದು ಪ್ರಕೃತಿಯ ವಿಕೋಪ ಆದರೆ ನನ್ನ ಅನಿಸಿಕೆ ಏನೆಂದರೆ ಇದಕ್ಕೆಲ್ಲ ಕಾರಣ ಮಾನವನೇ. ಪರಿಸರದ ರಕ್ಷಣೆ ನಮ್ಮೆಲ್ಲರ ಹೊಣೆ.  
....................... ಸಪ್ತಮಿ ಅಶೋಕ್ ದೇವಾಡಿಗ 
7ನೇ ತರಗತಿ 
ಶುಭದ ಆಂಗ್ಲ ಮಾಧ್ಯಮ ಶಾಲೆ, ಕಿರುಮಂಜೇಶ್ವರ , ಬೈಂದೂರು ತಾಲೂಕು ಉಡುಪಿ ಜಿಲ್ಲೆ.
******************************************



       ನಾನು ಎಸ್ ಎ. ಮಹಮ್ಮದ್ ರಾಫ಼ಿ. ಈ ಸಲದ ಮಳೆಯ ಅವಾಂತರವನ್ನು ಕಂಡು ಧಿಗ್ಭ್ರಾಂತನಾದೆ. ಬಂದು ಬೀಸುವ ತಂಪಾದ ಗಾಳಿ ಇನ್ನೊಂದು ಕಡೆ ಗಾಳಿಯ ರಭಸಕ್ಕೆ ಅಂಗಳಕ್ಕೆ ಬೀಳುವ ಮರದ ಕೊಂಬೆಗಳು.  ಇನ್ನೊಂದು ಕಡೆ ಕತ್ತಲೆ ಆವರಿಸಿದೆ. ಆಕಾಶದಲ್ಲಿಯ ಕಪ್ಪು ಕವಿದ ವಾತಾವರಣವನ್ನು ಕಂಡ ನಾನು ಅಮ್ಮನಲ್ಲಿ ಕೇಳಿದೆ , ಮಳೆಗಾಲವೆಂದರೆ ಹೀಗೆಲ್ಲಾ ಇದೆಯಾ ಅಮ್ಮ. ಅದಕ್ಕೆ ಅವರೆಂದರು ನಾಲ್ಕು ದಿವಸದ ಮಳೆ ಇಷ್ಟೊಂದು ಪ್ರವಾಹ ಸಂಕಷ್ಟ ನಾನು ನೋಡಿಲ್ಲ. ಇದು ಈ ವರ್ಷದ ವಿಶೆಷತೆ ಆದ್ರೂ ನಿನ್ನೆಯಿಂದ ನಿಟ್ಟುಸಿರು ಬಿಟ್ಟು ಶಾಲೆಗೆ ಹೋಗುವಂತಾಯಿತಲ್ಲ ಎಂದು ಸಂತೊಷವಾಯಿತು.
...................... ಎಸ್ ಎ. ಮಹಮ್ಮದ್ ರಾಫ಼ಿ
6ನೇ ತರಗತಿ
ದಕ್ಷಿಣ ಕನ್ನಡ ಜಿ.ಪಂ. ಹಿರಿಯ
ಪ್ರಾಥಮಿಕ ಶಾಲೆ ಮಾಣಿ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
******************************************



     ನನ್ನ ಹೆಸರು ಲಾವಣ್ಯ. ಮಳೆಗಾಲದ ಈ ಘಟನೆಯು ಐದಾರು ವರ್ಷಗಳ ಹಿಂದೆ ನಡೆದಿರುವುದು. ಅದೊಂದು ಮಳೆಗಾಲ. ನನ್ನ ಮಾವನ ಮದುವೆ ಇತ್ತು. ನಾವು ಅಜ್ಜಿಮನೆಗೆ ಹೋಗಿದ್ದೆವು. ಅಕ್ಕನವರು , ಅಣ್ಣನವರು, ಅತ್ತೆ ಮಾವಂದಿರು, ಚಿಕ್ಕಪ್ಪ - ಚಿಕ್ಕಮ್ಮ ಮತ್ತು ಕುಟುಂಬದವರೆಲ್ಲರೂ ಅಲ್ಲಿಗೆ ಬಂದ್ದಿದರು. ನಾವು ಮಕ್ಕಳೆಲ್ಲರೂ ಸೇರಿ ಬೇರೆ-ಬೇರೆ ಆಟ ಆಡುತ್ತಿದ್ದೆವು. ಒಂದು ದಿನ ಜೋರಾಗಿ ಗಾಳಿ - ಮಳೆ , ಮಿಂಚು - ಗುಡುಗು ಬರುತಿತ್ತು. ಆಗ ನಾವು ಒಳಗೇ ಕುಳಿತು ಆಟವಾಡುತ್ತ, ಮಾತನಾಡುತ್ತಾ ಇದ್ದೆವು. ಅದರ ಮಾರನೆಯ ದಿನ ಮಧ್ಯಾಹ್ನ ಮಳೆಯೇನೂ ಇರಲಿಲ್ಲ. ಸ್ವಲ್ಪ ಬಿಸಿಲು ಬಂದ ಹಾಗೆ ಇತ್ತು. ಊಟ ಮಾಡಿದ ನಂತರ ನಮಗೆ ತೋಟಕ್ಕೆ ಹೋಗಿ ಬರಲು ಆಸೆಯಾಯಿತು. ತೋಟಕ್ಕೆ ಹೋದ ನಮಗೆ ಸುತ್ತಾಡುತ್ತಾ ಸಂಜೆಯಾದದ್ದೇ ತಿಳಿಯಲಿಲ್ಲ. ಮೆಲ್ಲನೇ ಮಳೆ ಹನಿಯಲು ಆರಂಭವಾಯಿತು. ಆಗಲೇ ನಮಗೆ ಛತ್ರಿಯನ್ನು ತೆಗೆದುಕೊಂಡು ಹೋಗಿಲ್ಲ ಎಂಬುದು ನೆನಪಾಯಿತು. ಓಡುತ್ತ ವಾಪಸಾದರೂ ಅಷ್ಟರಲ್ಲೇ ಜೋರಾದ ಮಳೆಗೆ ನಾವು ಒದ್ದೆಯಾದೆವು. ಎಲ್ಲರಿಗೂ ಬೈಗುಳ ಸಿಕ್ಕಿತು. ಮಳೆಗಾಲದ ಈ ಮದುವೆ, ನೆಂಟರಿಷ್ಟರ ಮಕ್ಕಳೊಡನೆ ಆಡಿದ ಆಟಗಳು, ಹನಿಮಳೆಯಲ್ಲಿ ತೋಟ ಸುತ್ತಾಟ ಎಲ್ಲವೂ ಯಾವತ್ತೂ ಮರೆಯದ ಚಂದದ ಅನುಭವಗಳು.
.................................................. ಲಾವಣ್ಯ 
8ನೇ ತರಗತಿ. 
ಸ.ಉ.ಪ್ರಾ.ಶಾಲೆ.ಹೊಕ್ಕಾಡಿಗೋಳಿ.
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************




          ನನಗೆ ಮಳೆ ಎಂದರೆ ತುಂಬ ಇಷ್ಟ .ಆದರೆ ಈ ವರ್ಷ ಬಂದ ಹಾಗೆ ತುಂಬಾ ಮಳೆ ಬಂದರೆ ಶಾಲೆಗೆ ಹೋಗಲು ಕಷ್ಟ. ಮಳೆಯ ರಜೆಯಿಂದ ಪಾಠಕ್ಕೆ ನಷ್ಟ. ನಾನು ಈಗ ಹೇಳುವ ಪ್ರಸಂಗ ನಡೆದು ಮೂರರಿಂದ ನಾಲ್ಕು ವರ್ಷಗಳಾಯಿತು. ನನಗೆ ನೆನಪಿದೆ..ಆ ದಿನ ಆದಿತ್ಯವಾರ. ನಾನು ಮನೆಯಲ್ಲಿ ಶಾಲೆಯ ಮನೆಕೆಲಸ ಕೂತು ಬರೆಯುತ್ತಿದ್ದೆ. ಆಗ ತುಂಬಾ ಜೋರಾಗಿ ಮಳೆ ಬರುತ್ತಿತ್ತು .ಆಗ ನನ್ನ ಅಮ್ಮ ಸಣ್ಣ ಸಣ್ಣ ಆಲಿಕಲ್ಲು ಬೀಳುತ್ತಿದೆ ಎಂದರು.ಆಗ ನಾನು ಬರೆಯುವುದನ್ನು ಬಿಟ್ಟು ಆಲಿಕಲ್ಲು ನೋಡಲು ಓಡಿದೆ.. ನಾನು ಅದೇ ಮೊದಲು ಆಲಿಕಲ್ಲು ನೋಡಿದ್ದೆ. ಆಗ ಅಜ್ಜಿ ಅದನ್ನು ಹೆಕ್ಕಿ ತರಲು ಹೇಳಿದರು.ನಾನು ಹೋಗಿ ಬೀಳುತ್ತಿರುವ ಆಲಿಕಲ್ಲನ್ನು ಹೆಕ್ಕಿ ತಂದು ಅಜ್ಜಿಯ ಹತ್ತಿರ ಯಾಕಜ್ಜಿ? ಎಂದು ಕೇಳಿದೆ. ಆಗ ಅಜ್ಜಿ ಅದು ಹೊಟ್ಟೆ ನೋವಿಗೆ ಹಾಗೂ ಸುಟ್ಟ ಗಾಯಕ್ಕೆ ಒಳ್ಳೆಯದು ಎಂದು ಹೇಳಿದ ನೆನಪು. ನನಗೆ ಅದಕ್ಕಿಂತ ಮಳೆಯಲ್ಲಿ ಆಟ ಆಡಲು ಸಿಗುತ್ತಲ್ಲ ಎಂದು ಮರು ಮಾತಾಡದೆ ಆಲಿಕಲ್ಲು ಆಯ್ದುಕೊಳ್ಳಲು ಹೋದೆ. ಹಾಗೆ ಆಲಿಕಲ್ಲು ಹೆಕ್ಕುತ್ತ.. ಮಳೆನೀರಲ್ಲಿ ಆಟ ಆಡ್ತ ಖುಷಿಪಡ್ತಾ ಇದ್ದೆ . ಅಷ್ಟರಲ್ಲೇ ಜಾರಿ ಬಿದ್ದೆ. ಆಗ ಅಮ್ಮ ಚೆನ್ನಾಗಿ ಬೈದು ಒಳಗೆ ಬಾ ಎಂದರು. ನಾನು ಅಮ್ಮನ ಗದರಿಕೆಗೆ ಹೆದರಿ.. ಆಲಿಕಲ್ಲು ಅಲ್ಲೇ ಬಿಟ್ಟು ಮನೆಯೊಳಗೆ ಹೋದೆ. ನಂತರ ಯಾವತ್ತೂ ನನಗೆ ಹೀಗೆ ಆಲಿಕಲ್ಲು ಹೆಕ್ಕುವಂಥಹ ಮಳೆ ಸಿಗಲೇ ಇಲ್ಲ. ಇದು ಮಳೆಯ ಬಗ್ಗೆ ನನ್ನದೊಂದು ಸುಂದರವಾದ ಅನುಭವ.
.................................................. ಧನುಶ್ರೀ. 
8ನೇ ತರಗತಿ
ಸ.ಉ.ಪ್ರಾ.ಶಾಲೆ ಹೊಕ್ಕಾಡಿಗೋಳಿ
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************



     ಮಳೆ ಬರುವಾಗ ಚಳಿ ಚಳಿ ಆಗುತ್ತದೆ. ಆಗ ನಾನು ಬಿಸಿ ಬಿಸಿ ಏಲಕ್ಕಿ ಟೀ ಕುಡಿಯುತ್ತೇನೆ. ಅದರ ಮನೋರಂಜನೆ ಬೇರೆ. ತುಂಬಾ ಮಳೆಯಲ್ಲಿ ಆಟವಾಡಲು ಹೋಗಿ ತುಂಬಾ ಒದ್ದೆಯಾದರೆ ಶೀತ, ಜ್ವರ, ಇತ್ಯಾದಿ ರೋಗಗಳು ಬರುತ್ತದೆ. ನಾವೆಲ್ಲರೂ ಎಚ್ಚರವಾಗಿ ಶಾಲೆಗೆ ಹೋಗೋಣಾ....
............................................ ಸಿಂಚನಾ ಶೆಟ್ಟಿ
5ನೇ ತರಗತಿ
ದ.ಕ.ಜಿ.ಪ. ಪ್ರಾಥಮಿಕ ಶಾಲೆ, ಸೇಡಿಗುಳಿ 
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************

Ads on article

Advertise in articles 1

advertising articles 2

Advertise under the article