-->
ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 29

ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 29

ಜಗಲಿಯ ಮಕ್ಕಳಿಗೆ 
ಅಕ್ಕನ ಪತ್ರ - 29


       ನಮಸ್ತೆ ಮಕ್ಕಳೇ.... ಎಲ್ಲರೂ ಕ್ಷೇಮ ಅಲ್ವಾ? ನಾನೂ ಚೆನ್ನಾಗಿದ್ದೇನೆ.
     ಮೊನ್ನೆಯ ಪತ್ರಕ್ಕೆ‌ ಹಂಚಿಕೊಂಡ ಅಭಿಪ್ರಾಯಗಳು, ನೀವು ಪ್ರೀತಿಯನ್ನೇ ಅಕ್ಷರವನ್ನಾಗಿಸಿ ಕಟ್ಟಿದ ಪದಗಳು ಎಲ್ಲವೂ ಜಗಲಿಯೊಂದಿಗಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸ್ತಿದೆ.
     ಧೀರಜ್, ಪ್ರಿಯ, ಶ್ರಾವ್ಯ, ಸಾನ್ವಿ, ಸ್ರಾನ್ವಿ ಶೆಟ್ಟಿ ,
ಸಾತ್ವಿಕ್ ಗಣೇಶ್, ಪೂರ್ತಿ, ಹಿತಶ್ರೀ, ಶುಭಿಕ್ಷಾ, ನಿಭಾ, ಲಹರಿ... ನೀವೆಲ್ಲರೂ ಬರೆದಿದ್ದೀರಿ. ಪತ್ರ ಬರೆಯದಿದ್ದರೂ ಓದುವ ಇನ್ನೂ ಅನೇಕ ಗೆಳೆಯ ಗೆಳತಿಯರಿದ್ದೀರಿ. ನಿಮ್ಮೆಲ್ಲರ ಓದಿನ ಕುತೂಹಲ ಮತ್ತು ನನ್ನನ್ನು ಬರೆಸುವ ಸ್ಫೂರ್ತಿ ಗೆ ನಮನಗಳು...
    ಅವನು ಕಣ್ಣೆದುರೇ ಬೆಳೆಯುತ್ತಿರುವ ಹದಿನಾಲ್ಕರ ಅಂಚಿನಲ್ಲಿರುವ ಹುಡುಗ. ಮಧ್ಯಮ ವರ್ಗದ ಹಿನ್ನೆಲೆ... ಕಾರು.. ದೊಡ್ಡ ಮನೆ... ದೊಡ್ಡ ಫೋನ್ ಎಂದೆಲ್ಲಾ ಕನಸಿನ ಲೋಕದೊಳಗೆ ಮುಳುಗುತ್ತಾ, ವಯಸ್ಸಿಗಿಂತಲೂ ದೊಡ್ಡವರ ಸಹವಾಸವನ್ನು ಅತಿಯಾಗಿ ನೆಚ್ಚಿಕೊಂಡು, ಭ್ರಮಾಲೋಕದಲ್ಲಿ ಕೊರಗುತ್ತಿದ್ದಾನೆ. ಸಂತೋಷದ ಹುಡುಕಾಟ... ಅವಕಾಶಗಳನ್ನು ಉಪಯೋಗಿಸಿಕೊಳ್ಳದೆ !
        ನಿರೀಕ್ಷೆಗಳ ಪಟ್ಟಿ ಹೀಗೆ ಬೆಳೆಯುತ್ತಾ ಹೋದರೆ... ಬದುಕು ಸಂಭ್ರಮವಾಗುವುದು ಯಾವಾಗ...? ನಾವೆಲ್ಲಾ ಒಂದಲ್ಲಾ ಒಂದು ಹವ್ಯಾಸ ಅಥವಾ ಕಲಿಕೆಯಲ್ಲಿ ತೊಡಗಿಸಿಕೊಂಡಿರುತ್ತೇವೆ ಅಲ್ವಾ...? ಅದಕ್ಕೆ busy ಯಾಗಿರ್ತೇವೆ. ದಿನ ಕಳೆದು ಹೋದದ್ದೇ ಗೊತ್ತಾಗುವುದಿಲ್ಲ. ಹಾಡು, ನೃತ್ಯ , ಚಿತ್ರಕಲೆ, ಆಟ, ಸಂಗೀತ ವಾದ್ಯಗಳನ್ನು ನುಡಿಸುವುದು, ಕ್ರಾಫ್ಟ್, ಟೈಲರಿಂಗ್, ವಿಧ ವಿಧವಾದ ಅಡುಗೆ ತಯಾರಿ, ಬರೆವಣಿಗೆ, ಓದುವುದು.... ಹೀಗೆ ಇನ್ನೂ ಅನೇಕ ಹವ್ಯಾಸಗಳಿವೆ. ನಿಮಗೆ ಆಶ್ಚರ್ಯವಾಗಬಹುದು... ಮೇಲಿನ ಹವ್ಯಾಸಗಳಲ್ಲಿ ಯಾವುದರಲ್ಲೂ ಇಲ್ಲದೆ ಪೋನ್ ಮತ್ತು ಟಿ.ವಿ ಎನ್ನುವ ನಿರ್ಭಾವುಕ ಪ್ರಪಂಚದಲ್ಲಿ ಮುಳುಗಿ ಹೋಗುವವರಿದ್ದಾರೆ. ಕ್ಷಣಿಕ ಸಂತೋಷವನ್ನು ಅರಸುತ್ತಾ, ಕೊನೆಗೆ ಜೀವನವೇ ಬೇಡವೆನ್ನುವ ಕೆಟ್ಟ ನಿರ್ಧಾರಕ್ಕೆ ಬಂದುಬಿಡುತ್ತಾರೆ.
     ಪುಸ್ತಕ ಜ್ಞಾನದ ಜೊತೆಗೆ ಮೇಲೆ ಹೆಸರಿಸಿದ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಂಡ ಕಲಾವಿದರು ಬದುಕನ್ನು ಸಂಭ್ರಮಿಸುತ್ತಾರೆ. ನಮ್ಮ ಅಪ್ಪ ಅಮ್ಮ ನಮ್ಮನ್ನು ಹಾಡು, ನೃತ್ಯ , ಸಂಗೀತ, ಚಿತ್ರಕಲೆ.... ಹೀಗೆ ಬೇರೆ ಬೇರೆ ತರಗತಿಗೆ ಸೇರುವ ಅವಕಾಶವನ್ನು ತೆರೆದಿಡುತ್ತಾರೆ.. ಪ್ರೋತ್ಸಾಹ ನೀಡುತ್ತಾರೆ. ಸೋಮಾರಿತನವನ್ನು ಬದಿಗಿರಿಸಿ, ಕಲಿಕೆಯಲ್ಲಿ ತೊಡಗುತ್ತಾ ಹೋದಂತೆ ನಮ್ಮ ಅಸ್ತಿತ್ವಕ್ಕೆ ಹೊಸ ಮೆರುಗು ಬರುತ್ತದೆ. ಬಹಳಷ್ಟು ಮಕ್ಕಳು ಇಂತಹುದಕ್ಕೆ ಮನಸ್ಸು ಮಾಡುವುದಿಲ್ಲ. ಕಲಿಯಬೇಕಾದ ಸಮಯದಲ್ಲಿ ಭೋಗದ ಬದುಕನ್ನು ಬಯಸ್ತಾರೆ, ಗೆಳೆಯರ ಜೊತೆಗೆ ವಿಪರೀತ ತಿರುಗಾಟ ನಡೆಸುತ್ತಾ ಬಾಲ್ಯ ಮುಗಿದೇ ಹೋಗ್ತದೆ. ಸ್ವತಃ ದುಡಿಯುತ್ತಾ ಬದುಕನ್ನು ಕಟ್ಟಿಕೊಳ್ಳುವ ಹಂತದಲ್ಲಿ ಒತ್ತಡಗಳುಂಟಾದರೆ ಬಹಳ ಬೇಗ ಕೆಟ್ಟ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಆದರೆ... ದೊಡ್ಡವರಾದ ಬಳಿಕ ನಾವು ಬಾಲ್ಯ ದಲ್ಲಿ ರೂಢಿಸಿಕೊಂಡ ಹವ್ಯಾಸಗಳು ಮಾನಸಿಕ ನೆಮ್ಮದಿಯನ್ನು ಕೊಡುತ್ತವೆ. ನಿತ್ಯ ಸ್ಫೂರ್ತಿಯಾಗುತ್ತಾ ಪ್ರತಿ ಕ್ಷಣವನ್ನೂ ಗೆಲುವಾಗಿಡುತ್ತವೆ.... ಓಹ್.. ಮಾತನಾಡುತ್ತಾ ಕುಳಿತೆ.. ನಾನು Dance class ಗೆ ಹೊರಡ್ಬೇಕು.. ಇನ್ನೊಮ್ಮೆ ಮಾತನಾಡೋಣ. ನಿಮ್ಮಲ್ಲಿಯೂ ಒಂದಕ್ಕಿಂತ ಹೆಚ್ಚು ಹವ್ಯಾಸಗಳಿರಬಹುದು. ಅವುಗಳ ಜೊತೆಗಿನ ನಿಮ್ಮ ಅನುಭವಕ್ಕೆ ಅಕ್ಷರ ರೂಪ ನೀಡುತ್ತೀರಲ್ಲಾ....? ಬರೆದು ಕಳಿಸಿ. ಕಾಯುತ್ತಿರುತ್ತೇನೆ...
    ಮುಂದಿನ‌ ಪತ್ರದಲ್ಲಿ ಮತ್ತೆ ಭೇಟಿಯಾಗೋಣ. ಆರೋಗ್ಯ ಜೋಪಾನ. ಅಲ್ಲಿಯವರೆಗೆ ಅಕ್ಕನ ನಮನಗಳು. 
...................................... ತೇಜಸ್ವಿ ಅಂಬೆಕಲ್ಲು
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ.
****************************************
Ads on article

Advertise in articles 1

advertising articles 2

Advertise under the article