-->
ಓ ಮುದ್ದು ಮನಸೇ ...…...! ಸಂಚಿಕೆ - 22

ಓ ಮುದ್ದು ಮನಸೇ ...…...! ಸಂಚಿಕೆ - 22

ಡಾ. ಗುರುರಾಜ್ ಇಟಗಿ
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು, ಮಂಗಳೂರು , 
ದಕ್ಷಿಣ ಕನ್ನಡ ಜಿಲ್ಲೆ
mob : +91 94837 16589

            ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಅದೇ ವೇದಿಕೆಯ ಇನ್ನೊಂದು ಬದಿಯಲ್ಲಿ ಕುಳಿತಿದ್ದ ಸರಳ ಸಜ್ಜನಿಕೆಯ, ವಿರಳ ವ್ಯಕ್ತಿತ್ವದ ಒಬ್ಬ ಸಾಧಕರ ಪರಿಚಯವಾಯಿತು. ತುಸು ಹೊತ್ತು ಮಾತುಕತೆ ಮುಂದುವರಿದಾಗ ಬಿಚ್ಚಿಕೊಂಡ ಅವರ ಬದುಕಿನ ಎಸಳುಗಳು ನನ್ನನ್ನು ಮತ್ತೊಮ್ಮೆ ಪುಟಿದೇಳುವಂತೆ ಮಾಡಿದ್ದವು. ವಯಸ್ಸಿನಲ್ಲಿ ನನಗಿಂತ ಹಿರಿಯರಾದ ಅವರನ್ನು ಕಂಡ ನಾನು "ನಮಸ್ತೆ ಸರ್" ಅಂದೆ ತಮ್ಮ ಎರಡೂ ಕೈಗಳನ್ನು ಜೋಡಿಸಿ ಗೌರವಪೂರಕವಾಗಿ ನನ್ನ ಕಿರಿತನವನ್ನೂ ಮೀರಿದ ನಮಸ್ಕಾರ ಅವರಿಂದ ಬಂದಾಗ ನಾನು ಪುಳಕಿತನಾದೆ. 
      ಬಂಗಾರ ಬಣ್ಣದ ಅಂಚು-ಪಟ್ಟಿ ಹೊಂದಿದ್ದ ಸಾಧಾರಣ ಬಿಳಿ ಪಂಚೆ ಅದಕ್ಕೆ ಹೋಲುವ ಕಡು ನೀಲಿ ಅಂಗಿ, ಹೆಗಲ ಮೇಲೊಂದು ಶಲ್ಯ ಮತ್ತು ಮುಖದ ಮೇಲೆ ಸದಾ ಮಂದಹಾಸ ಅವರ ಬಗೆಗಿನ ನನ್ನ ಆಸಕ್ತಿ ಇಮ್ಮಡಿಸಿತು! "ಸರ್ ಸ್ವಲ್ಪಹೊತ್ತು ನಿಮ್ಮೊಂದಿಗೆ ಮಾತನಾಡಬಹುದೆ?" ಎಂದೆ. "ಸ್ವಲ್ಪ ಹೊತ್ತು ಸಾಕೆ? ನಾನು ನಿಮ್ಮೊಂದಿಗೆ ತುಂಬ ಹೊತ್ತು ಮಾತನಾಡಬೇಕೆಂದು ಕೊಂಡಿದ್ದೆ, ಗೆಳೆಯರಿಂದ ನಿಮ್ಮ ಸಾಧನೆಗಳ ಬಗ್ಗೆ ಕೇಳಿ ಸಂತೋಷವಾಗಿದೆ" ಅಂದರು. "ಇದಕ್ಕಿಂತ ಇನ್ನೇನು ಬೇಕು ನನಗೆ? ನಿಮ್ಮಂತವರ ಆಶೀರ್ವಾದವಿದ್ದರೆ ಸಮಾಜಕ್ಕೆ ನನ್ನಿಂದ ಇನ್ನೊಂದಿಷ್ಟು ಕೊಡುಗೆ ಸಿಗಬಹುದೇನೋ ನೀವೆ ನಮ್ಮಂತ ಯುವಕರ ಸ್ಫೂರ್ತಿ, ನೀವು ನಡೆದು ಬಂದ ಹಾದಿಯೇ ನಮ್ಮ ಸಾಧನೆಗಳ ದಾರಿ" ಎಂದಾಗ ತಮ್ಮ ಬಲಗೈಯಿಂದ ನನ್ನನ್ನು ತಮ್ಮತ್ತ ಎಳೆದುಕೊಂಡು ನನ್ನ ಬೆನ್ನು ತಟ್ಟಿದರು.
ಸುಮಾರು ಮೂವತ್ತರಿಂದ ಮೂವತ್ತೈದು ವರ್ಷಗಳ ಹಿಂದೆ ಅಂದರೆ ನಾನಿನ್ನೂ ಜನ್ಮ ತಾಳಿರದ ಸಮಯವದು ಹೊಟ್ಟೆಪಾಡಿಗಾಗಿ ಹಳ್ಳಿಯೊಂದರ ಮುಖ್ಯ ರಸ್ತೆಯ ಬಸ್ ತಂಗುದಾಣದ ಬಳಿ ಸಣ್ಣದೊಂದು ಗುಡಿಸಲು ನಿರ್ಮಿಸಿ ಚಹಾ ಕಾಫಿ ಜೊತೆ ದೋಸೆ ಮಾರುವ ಕಾಯಕ ಅವರದ್ದು. ಮುಂಜಾನೆ ಏಳು ಘಂಟೆಯಿಂದ ರಾತ್ರಿ ಒಂಬತ್ತು ಮೂವತ್ತರ ವರೆಗೆ ದುಡಿದರೂ ದಿನದ ಸಂಬಳಕ್ಕೂ ಲಗತ್ತಾಗದ ದಿನಗಳವು. ಅವರ ಅಂಗಡಿಗೆ ಬರುವ ಬಹುತೇಕರು ಪರಿಚಯಸ್ತರೇ ಅಗಿರುತ್ತಿದ್ದರಿಂದ ಅವರನ್ನು ಆತ್ಮೀಯತೆಯಿಂದ ಮಾತನಾಡಿಸಿ "ಚಹಾ ಕುಡಿತೀರಾ?" ಎಂದು ಕೇಳಿದಾಗ "ಒಂದರ್ದ ಕೊಡಿ ಸಾಕು ಈಗ ಮಾತ್ರ ಕುಡಿದು ಬಂದೆ" ಎನ್ನುವವರೇ ಜಾಸ್ತಿ. ಹೀಗೆ ಕೇಳಿದವರು ಚಹಾ ಕುಡಿದು ಒಂದಿಷ್ಟು ಹೊತ್ತು ಹರಟಿ ಅಡಿಕೆ ದಬ್ಬೆಯಿಂದ ನಿರ್ಮಿಸಿದ್ದ ಮೇಜಿನ ಮೇಲಿದ್ದ ಗಾಜಿನ ಬಾಟಲಿಗೆ ಕೈಹಾಕಿ ಒಂದು ಹಿಡಿ ಹುರಿದ ಶೇಂಗಾ ಎತ್ತಿಕೊಂಡು ಮೆಲುಕುತ್ತಾ ನಿಧಾನವಾಗಿ ಕಾಲ್ಕೀಳುತ್ತಿದ್ದರು. ತಿಂಗಳ ಬಾಬ್ತಿನಲ್ಲಿ ಲಾಭಕ್ಕಿಂತ ಖರ್ಚು ಜಾಸ್ತಿಯಾಯಿತು. ಜೀವನೋಪಾಯಕ್ಕಾಗಿ ಆರಂಭಿಸಿದ್ದ ಉದ್ಯೋಗ ಹೊಟ್ಟೆ ತುಂಬಿಸಲಿಲ್ಲ. ಇದಕ್ಕೆ ಅವರಲ್ಲಿದ್ದ ಉದಾರ ಮನೋಭಾವವೂ ಕಾರಣವಿದ್ದಿರಬಹುದು. ಅವರ ವ್ಯಕ್ತಿತ್ವವೇ ಅಂತಹದ್ದು ಹಸಿದು ಬಂದವರಿಗೆ ರುಚಿಕಟ್ಟಾದ ದೋಸೆ ಮಾಡಿಕೊಟ್ಟು ಕುಶಲೋಪಚಾರ ಮಾಡಿ ಕಳುಹಿಸಿಕೊಡುತ್ತಿದ್ದ ಅವರಿಗೆ ಹಣಗಳಿಕೆಗಿಂತ ಜನಗಳಿಕೆಯೇ ಜಾಸ್ತಿಯಾಯಿತು.       
        ಮಳೆಗಾಲದಲ್ಲೊಂದೊಮ್ಮೆ ಬಿರುಗಾಳಿಯ ಸುಳಿಗೆ ಸಿಕ್ಕು ಅವರ ಗುಡಿಸಲು ನೆಲಕಚ್ಚಿತ್ತು. ಅದೇ ಸಮಯಕ್ಕೆ ಬಂದ ಬಸ್ಸಿನ ಡ್ರೈವರ್ ಕಂಡಕ್ಟರ್ ಆದಿಯಾಗಿ ಅದರಲ್ಲಿದ್ದ ಅಕ್ಕ ಪಕ್ಕದೂರಿನ ಜನ ಕೆಳಗಿಳಿದು ಒಂದರ್ಧ ಘಂಟೆಯಲ್ಲೇ ಗುಡಿಸಲನ್ನು ಸರಿಪಡಿಸಿಕೊಟ್ಟದ್ದು ಜನರಿಗೆ ಅವರ ಮೇಲಿದ್ದ ಪ್ರೀತಿಗೆ ಒಂದು ಉದಾಹರಣೆಯಷ್ಟೇ. ಆದರೆ ಇದ್ಯಾವುದೂ ಅವರ ಬದುಕಿಗೆ ಆಸರೆಯಾಗಲಿಲ್ಲ. 
ಒಮ್ಮೆ ಅದೇ ಮಾರ್ಗವಾಗಿ ಪ್ರವಾಸ ಹೊರಟಿದ್ದ ಕಾಲೇಜು ಹುಡುಗರ ತಂಡವೊಂದು ಇವರ ಅಂಗಡಿಗೆ ದೋಸೆ ತಿನ್ನೋದಕ್ಕೆ ಬಂತು. ಹುಡುಗರೊಟ್ಟಿಗೆ ಹುಡುಗನಂತೆ ಬೆರೆತು ಕುಷಿ ಕುಷಿಯಾಗಿ ದೋಸೆ ಎರೆದು ಕೊಟ್ಟರು. ದೋಸೆಯ ರುಚಿ ಹುಡುಗರ ನಾಲಿಗೆಯನ್ನು ಸೇರಿದ್ದೇ ತಡ ಅದರಲ್ಲೊಬ್ಬನಂದ "ನಮ್ಮ ಹಾಸ್ಟೆಲ್ ತಿಂಡಿಗಿಂತ ಇದು ತುಂಬಾ ರುಚಿಯಾಗಿದೆ". ಇನ್ನೊಬ್ಬ, "ಇಷ್ಟು ರುಚಿಯಾಗಿರದ ದೋಸೆಗೆ ಬೇರೆ ಹೊಟೇಲ್ ಗಳಲ್ಲಿ ದುಪ್ಪಟ್ಟು ಹಣ ಕೊಡಬೇಕು". ಮತ್ತೊಬ್ಬನಂದ, "ಅಂಕಲ್ ನೀವ್ಯಾಕೆ ನಮ್ಮ ಕಾಲೇಜಿನ ಬಳಿ ಒಂದು ಕ್ಯಾಂಟೀನ್ ತೆಗಿಬಾರ್ದು...? ನಮ್ಮ ಹಾಸ್ಟೆಲ್ ಹುಡುಗರೆಲ್ಲ ನಿಮ್ಮ ಕ್ಯಾಂಟೀನ್ ಗೇ ಬರ್ತಾರೆ". ದೋಸೆ ತುಂಬಾ ರುಚಿಯಾಗಿದೆ ಎನ್ನುತ್ತಾ ಒಂದು-ಮತ್ತೊಂದರಂತೆ ಬೆಳಿಗ್ಗೆ ಮಾಡಿದ್ದ ದೋಸೆ ಹಿಟ್ಟು ಖಾಲಿಯಾಗುವ ವರೆಗೂ ಮೆಲುಕಿದರು. 
ಈ ಹಳ್ಳಿಯಲ್ಲಿ ವ್ಯಾಪಾರ ಮಾಡಿ ಬದುಕು ಕಟ್ಟಿಕೊಳ್ಳೋದು ಕಷ್ಟ ಅಂದುಕೊಂಡಿದ್ದ ಇವರಿಗೆ ಹುಡುಗರ ಸಲಹೆ ಸರಿ ಎನಿಸಿತು. "ಎಲ್ಲಿದೆ ನಿಮ್ಮ ಕಾಲೇಜು?" ಎಂದ ಒಂದೇ ಒಂದು ಪ್ರಶ್ನೆಗೆ "ಅಂಕಲ್ ನೀವೇನು ಚಿಂತೆ ಮಾಡಬೇಡಿ ನಾವೆಲ್ಲಾ ವ್ಯವಸ್ಥೆ ಮಾಡುತ್ತೇವೆ" ಎಂದ ಹುಡುಗರು ಕಾಲೇಜಿಗೆ ಮರಳಿದವರೇ ತಮ್ಮ ಉಳಿತಾಯದ ಒಂದಿಷ್ಟು ಕಾಸು ಸೇರಿಸಿ ಒಂದು ಹಳೇ ಗೂಡಂಗಡಿ ಖರೀದಿಸಿದರು. ಹಾಸ್ಟೆಲ್ ಗೆ ಹೊಂದಿಕೊಂಡಿದ್ದ ಒಂದು ಜಾಗದಲ್ಲಿ ಕ್ಯಾಂಟೀನ್ ತೆರೆಯುವ ಯೋಜನೆ ಸಿದ್ಧವಾಯಿತು. ಹಳೇ ಗೂಡಂಗಡಿ ಸುಣ್ಣ ಬಣ್ಣ ಬಳಿಸಿಕೊಂಡು ಕಾಲೇಜು ಹುಡುಗರ ಆಸಕ್ತಿಗೆ ತಕ್ಕಂತೆ ಶೃಂಗಾರಗೊಂಡಿತು.
            ಒಂದು ಶುಭ ದಿನದಂದು ಕ್ಯಾಂಟೀನ್ ಆರಂಭವಾದ ವಿಷಯ ಇಡೀ ಕಾಲೇಜಿಗೆ ಹರಡಿತು. ಹಾಸ್ಟೆಲ್ ಅಡುಗೆಗೆ ಬೇಸತ್ತಿದ್ದ ಹುಡುಗರು ರುಚಿ-ರುಚಿಯಾದ ದೋಸೆ ಸವಿಯಲು ದುಂಬಾಲು ಬಿದ್ದರು. ವ್ಯಾಪಾರ ಹೆಚ್ಚಾಯಿತು, ಪಕ್ಕದ ಹೋಟೇಲ್ ನ ಏಸಿ ರೂಮಿನಲ್ಲಿ ಕುಳಿತು ತಿಂಡಿ ತಿನ್ನುತ್ತಿದ್ದ ಕಾಲೇಜಿನ ಪ್ರಾಧ್ಯಾಪಕರೂ ಕೂಡ ಈ ಗೂಡಂಗಡಿಯ ದೋಸೆಗೆ ಮಾರು ಹೋದರು. ಕ್ಯಾಂಟೀನ್ ಗೆ ಸಹಕರಿಸಿದ್ದ ಹುಡುಗರ ಗುಂಪು ಸುಮ್ಮನೆ ಕೂರಲಿಲ್ಲ, ಬಗೆ-ಬಗೆಯ ದೋಸೆ ಮಾಡುವ ವಿಧಾನ ಗಳನ್ನು ಓದಿ ತಿಳಿದುಕೊಂಡು ಇವರಿಗೆ ತರಬೇತಿ ಕೊಟ್ಟರು. ಇವರ ಕೈಗುಣವೋ ಏನೋ ಗೊತ್ತಿಲ್ಲ ಮಾಡಿದ ದೋಸೆಗಳೆಲ್ಲ ಹೆಚ್ಚು ಹೆಚ್ಚು ಗಿರಾಕಿಗಳನ್ನು ಸೃಷ್ಟಿಸತೊಡಗಿದವು. ಜಾಗ ಸಾಲದಾಯಿತು ಪಕ್ಕದಲ್ಲಿದ್ದ ಖಾಲಿ ಸೈಟ್ ಒಂದನ್ನು ಖರೀಧಿಸಿ ಅದರಲ್ಲೊಂದು ಹೊಟೆಲ್ ನಿರ್ಮಿಸಲಾಯಿತು, ಕೆಲಸಕ್ಕೆ ಹುಡುಗರೂ ಬಂದರು. ದೋಸೆಗಾಗಿ ಬೇಡಿಕೆ ಹೆಚ್ಚಾದಂತೆ ದೋಸೆ ಕ್ಯಾಂಟೀನ್ ಬೇರೆ ಬೇರೆ ಕಾಲೇಜುಗಳ ಬಳಿಯೂ ಆರಂಭವಾಯಿತು ಇದರಿಂದ ಆದಾಯವೂ ಹೆಚ್ಚಿತು. ವಿಧ್ಯಾರ್ಥಿಗಳ ಸಹಾಯದಿಂದ ಉದ್ಯಮಿಯಾಗಿ ಬೆಳೆದುನಿಂತಿದ್ದ ಇವರು ಬಡ ವಿದ್ಯಾರ್ಥಿಗಳ ಬದುಕಿಗೆ ಬೆಳಕು ನೀಡುವ ಕಾಯಕ ಆರಂಭಿಸಿದರು. ಕಾಲೇಜು ಶುಲ್ಕ, ಉಚಿತ ಊಟ, ದೂರದೂರುಗಳಿಂದ ಶಿಕ್ಷಣಕ್ಕಾಗಿ ಪಟ್ಟಣಕ್ಕೆ ಬರುವ ವಿಧ್ಯಾರ್ಥಿಗಳಿಗೆ ಉಳಿದುಕೊಳ್ಳುವ ವ್ಯವಸ್ಥೆ ಹೀಗೆ ಗಳಿಸಿದ ಲಾಭದ ಬಹುಪಾಲು ಹಣವನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟರು. ಅವರ ಮಾತು, ತೋರಿಸುವ ಕಾಳಜಿ, ಮಾಡುವ ಸಹಾಯದಿಂದ ದೊಡ್ದ ವಿದ್ಯಾರ್ಥಿ ಸಮೂಹವೇ ಅವರ ಜೊತೆನಿಲ್ಲುವಂತೆ ಮಾಡಿದವು.
    ಪ್ರಸ್ತುತ ನೂರಾರು ಯುವಕ-ಯುವತಿಯರು ಇವರಿಂದ ಉದ್ಯೋಗಸ್ಥರಾಗಿದ್ದಾರೆ , ಬಡ ವಿದ್ಯಾರ್ಥಿಗಳು ಇವರ ಆಸರೆಯಲ್ಲಿದ್ದಾರೆ, ಕಷ್ಟದ ದಿನಗಳಲ್ಲಿ ಇವರೊಂದಿಗೆ ಕೈಜೋಡಿಸಿ, ಪ್ರೊತ್ಸಾಹಿಸಿದ್ದ ವಿದ್ಯಾರ್ಥಿಗಳ ಸಹಾಯವನ್ನು ಇವರೆಂದಿಗೂ ಮರೆತಿಲ್ಲ, ಮರೆಯುವುದೂ ಇಲ್ಲ. ನಮ್ಮ ಸುತ್ತಲೂ ಇರುವ , ನಿಸ್ವಾರ್ಥ ಮನೋಭಾವದ , ಸಮಾಜಕ್ಕೊಂದು ಕೊಡುಗೆಯಾಗಿರುವ ಉತ್ತಮೋತ್ತಮರ ಸಾಲಿಗೆ ಇವರೂ ಸೇರುತ್ತಾರೆ. ಆದರೆ ಇಂತಹ ಸಾಧಕರು ಇತರರ ಕಣ್ಣಿಗೆ ಬೀಳುವುದು ವಿರಳ. ಇವರ ಗುಣ-ನಡತೆಗಳನ್ನು ನಾವೇನಾದರೂ ಅಳವಡಿಸಿಕೊಂಡಲ್ಲಿ ನಾವೂ ಕೂಡ ಒಂದೊಳ್ಳೆಯ ಬದುಕನ್ನು ಕಟ್ಟಿಕೊಳ್ಳೋದು ಶತಸಿದ್ಧ. 
     ಬಿದ್ದೆನೆಂದು ಕುಗ್ಗದೆ, ಗೆದ್ದೆನೆಂದು ಹಿಗ್ಗದೆ ಯಾರು ಬರುವ ಅವಕಾಶಗಳನ್ನು ಬಳಸಿಕೊಂಡು ನಿರಂತರ ಪ್ರಯತ್ನಶೀಲರಾಗುತ್ತಾರೋ, ಸದ್ಗುಣ ಸಂಪನ್ನತೆಯಿಂದ ಸಮರ್ಪಕರಾಗುತ್ತಾರೋ ಅಂತವರಿಗೆ ಒಂದಲ್ಲಾ ಒಂದು ಮೂಲದಿಂದ ಪ್ರೋತ್ಸಾಹ ಮತ್ತು ಸಹಕಾರ ಸಿಕ್ಕೇ ಸಿಗುತ್ತದೆ. "ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ" ಅಂದರೆ ಯಾರು ತಮ್ಮ ಕೆಲಸ-ಕರ್ತವ್ಯಗಳನ್ನು ಶಿಸ್ತು, ಸಂಯಮತೆ ಮತ್ತು ನಿಸ್ವಾರ್ಥ ಮನೋಭಾವದಿಂದ, ಫಲಾಪೇಕ್ಷೆ ಇಲ್ಲದೆ ಮಾಡುತ್ತಾರೋ ಅವರಿಗೆ ಮುಂದೊಂದು ದಿನ ಉತ್ತಮವಾದ ಫಲ ಖಂಡಿತವಾಗಿಯೂ ಸಿಗುತ್ತದೆ. ಈ ನಿಟ್ಟಿನಲ್ಲಿ ನಾವೂ ಕಾರ್ಯ ಪ್ರವೃತ್ತರಾಗೋಣ, ಒಬ್ಬರಿಗೊಬ್ಬರು ಸಹಕರಿಸುತ್ತ ಬದುಕು ಕಟ್ಟಿಕೊಳ್ಳೋಣ, ಇತರರಿಗೂ ಆಸರೆಯಾಗೋಣ. 
...............................ಡಾ. ಗುರುರಾಜ್ ಇಟಗಿ
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು, ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
mob : +91 94837 16589
********************************************

Ads on article

Advertise in articles 1

advertising articles 2

Advertise under the article