
ಪ್ರೀತಿಯ ಪುಸ್ತಕ : ಸಂಚಿಕೆ - 16
Friday, July 22, 2022
Edit
ಪ್ರೀತಿಯ ಪುಸ್ತಕ
ಸಂಚಿಕೆ - 16
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ.
ಪ್ರೀತಿಯ ಮಕ್ಕಳೇ..... ಪ್ರೀತ್ ಒಬ್ಬ ಪುಟ್ಟ ಹುಡುಗಿ. ಚೂಚೂ ಎನ್ನುವುದು ಪ್ರೀತ್ ಇಟ್ಟಿರುವ ಮುದ್ದಿನ ಹೆಸರು. ಮಾಂತು ಅಂದರೆ ಕೊಂಕಣಿ ಭಾಷೆಯಲ್ಲಿ ದೊಡ್ಡಪ್ಪ ಎಂದು ಅರ್ಥ. ಚೂಚೂ ಮಾಂತು ಅಂದರೆ ಪ್ರೀತ್ ಗೆ ತುಂಬಾ ತುಂಬಾ ಇಷ್ಟ. ಅವರನ್ನು ಕಂಡರೆ ಎಲ್ಲರಿಗೂ ಇಷ್ಟ ಅಂತ ಪ್ರೀತ್ ಗೆ ಅನಿಸುತ್ತದೆ. ಈ ಕಥೆಯಲ್ಲಿ ಚೂಚೂ ಮಾಂತುವಿನ ಮಿಠಾಯಿ ಜಾಡಿಯೇ ಒಂದು ವಿಶೇಷ. ಚೂಚೂ ಮಾಂತು ಆ ಮಿಠಾಯಿಗಳನ್ನು ಯಾರಿಗೋ ಹಂಚುತ್ತಿರುತ್ತಾರೆ ಮತ್ತು ತಾನು ಹಂಚುತ್ತಿರುವುದು ಗೊತ್ತಾಗದ ರೀತಿಯಲ್ಲಿ ಹಂಚುತ್ತಾರೆ. ಪ್ರೀತ್ ಅದನ್ನು ನೋಡುತ್ತಿರುತ್ತಾಳೆ. ಚೂಚೂ ಮಾಂತುವಿನ ಸಾವಿನ ನಂತರ ಪ್ರೀತ್ ಗೆ ಅವರು ಮಕ್ಕಳ ಮೇಲೆ ತೋರಿಸುತ್ತಿದ್ದ ಪ್ರೀತಿ ನೆನಪಾಗುತ್ತಿರುತ್ತದೆ. ನಮಗೆ ತುಂಬಾ ಪ್ರೀತಿಯವರು ಇಲ್ಲದೇ ಹೋದಾಗ ಆಗುವ ದುಃಖದ ಅನುಭವವನ್ನೂ ಕೊಡುತ್ತದೆ ಈ ಪುಸ್ತಕ. ಆಮೇಲೆ ಪ್ರೀತ್ ಏನು ಮಾಡುತ್ತಾಳೆ ಅಂತ ಓದಿ ನೋಡುತ್ತೀರಾ. ನನ್ನ ಪುಟ್ಟ ಗೆಳತಿ ವೃಕ್ಷಾಗೆ ಈ ಪುಸ್ತಕ ಅಂದರೆ ತುಂಬಾ ಇಷ್ಟ. ಒಂದಲ್ಲ ಎರಡಲ್ಲ ಸುಮಾರು ಬಾರಿ ಈ ಪುಸ್ತಕ ನೋಡುತ್ತಾ ಕಥೆ ಹೇಳುತ್ತಾಳೆ. ಇದು ದೊಡ್ಡ ಗಾತ್ರದ ಪುಸ್ತಕ. ಪುಟದ ಹೆಚ್ಚು ಭಾಗವೂ ಚಿತ್ರವೇ ಇದೆ. ಚಿತ್ರದಲ್ಲೂ ಕಥೆಯ ಭಾವನೆಗಳನ್ನು ಕಾಣಬಹುದು.
ಲೇಖಕರು: ಅದಿತಿ ರಾವ್
ಅನುವಾದ: ಮಂದಾರ ಸಾಗರ
ಚಿತ್ರಗಳು: ಕೃಷ್ಣ ಬಾಲ ಶೆಣೈ
ಪ್ರಕಾಶಕರು: ಪ್ರಥಮ್ ಬುಕ್ಸ್ (ಆನ್ ಲೈನ್ ನಲ್ಲಿ ನೋಡಿ)
ಬೆಲೆ: ರೂ.55
ನಾಲ್ಕು- ಐದನೇ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರು ಚಿತ್ರ ತೋರಿಸುತ್ತಾ ಚಿಕ್ಕ ಮಕ್ಕಳಿಗೂ ಓದಿ ಇದನ್ನು ಹೇಳಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************