-->
ಸಂಚಾರಿಯ ಡೈರಿ : ಸಂಚಿಕೆ - 1

ಸಂಚಾರಿಯ ಡೈರಿ : ಸಂಚಿಕೆ - 1

ಸಂಚಾರಿಯ ಡೈರಿ : ಸಂಚಿಕೆ - 1
       ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ


                              ರಮಣೀಯ ತಾಣ ಮಾಜುಲಿ
      ಇಡೀ ಪ್ರಪಂಚದಲ್ಲಿ ಸಮುದ್ರದ ಮೇಲೆ ಸಾವಿರಾರು ದ್ವೀಪಗಳನ್ನ ನಾವು ನೋಡಿರುತ್ತೇವೆ. ಅವುಗಳಲ್ಲಿ ದ್ವೀಪರಾಷ್ಟ್ರಗಳಿವೆ , ದೇಶಗಳ ಅಧಿಕಾರವಿರುವ ಆಡಳಿತ ಪ್ರದೇಶಗಳಿವೆ , ಬರೀ ಹಿಮ ತುಂಬಿದ ದ್ವೀಪಗಳಿವೆ, ಜನರಹಿತ ದ್ವೀಪಗಳು ಹೀಗೆ ಪಟ್ಟಿ ಬೆಳೆಯುತ್ತದೆ. ಆದರೆ ನದಿಯ ಮೇಲೆ ಒಂದು ದೊಡ್ಡ ದ್ವೀಪ ಅದು ನಮ್ಮ ಭಾರತ ದೇಶದಲ್ಲೇ ಇದೆ ಎಂದರೆ ನಂಬಲೇಬೇಕು.....! ಅಂದಹಾಗೆ ಈ ದ್ವೀಪ ಇರೋದು ಅಸ್ಸಾಂ ರಾಜ್ಯದಲ್ಲಿ. ಬ್ರಹ್ಮಪುತ್ರ ನದಿ‌ ಮೇಲಣ ಈ ದ್ವೀಪ ಹಚ್ಚಹಸಿರಿನ‌ ತಾಣ. ಅಸ್ಸಾಮಿ ಭಾಷಿಗರಲ್ಲದೆ ರಾಭಾ, ಮಿಶಿಂಗ್, ನೇಪಾಳಿಯಂತಹ ಜನಾಂಗಗಳಿರುವ ಈ ತಾಣ ಶ್ರೀಕೃಷ್ಣ ದೇವರನ್ನ ವಿಶಿಷ್ಟ ರೀತಿಯಲ್ಲಿ‌ ಪೂಜಿಸಲ್ಪಡುವ 'ಖೊತ್ರೊ' ಗಳಿಗೆ ಹೆಸರುವಾಸಿಯಾಗಿದೆ. ಸ್ತಂಭಾಕಾರದ ಈ ಕಟ್ಟಡಗಳಲ್ಲಿ ಕೃಷ್ಣನನ್ನು 'ಮಣಿಕೂಟ' ರೂಪದಲ್ಲಿ ಪೂಜಿಸಲಾಗುತ್ತದೆ.
     ಈ ಮಾಜುಲಿ ದ್ವೀಪಕ್ಕೆ ಅಸ್ಸಾಂನ ಜೋರಾಟ್‌ನ ನಿಮಾಟಿ ಘಾಟ್ ಎಂಬಲ್ಲಿಂದ ನಾವೆ(ferry) ಸೇವೆ ಇದೆ. ಜೋರ್ಹಾಟ್ ಪೇಟೆ ಅತ್ಯಂತ ಹತ್ತಿರದಲ್ಲಿದೆ. ಮಾಜುಲಿಯ ಜನರೂ ಅಷ್ಟೇ ಸ್ನೇಹ ಜೀವಿಗಳಾಗಿದ್ದಾರೆ. ಅತಿಥಿಗಳ ಕುರಿತಾಗಿ ಬಹು ಆದರವನ್ನು ಹೊಂದಿದ ಇವರು ಪ್ರೀತಿಯಿಂದ ಮಾತಾನಾಡುವ ಸದ್ಗುಣ ಹೊಂದಿದ್ದಾರೆ. ಅಂದಹಾಗೆ ಇಲ್ಲಿಯವರ ಮನೆಗಳ ರಚನೆ ಈಶಾನ್ಯ ರಾಜ್ಯಗಳಲ್ಲಿ ಯಥೇಚ್ಛವಾಗಿ ಕಾಣುವ ಬಿದಿರಿನಿಂದ‌ ಮಾಡಲ್ಪಟ್ಟಿರುತ್ತವೆ. ಮಣ್ಣು , ಇಟ್ಟಿಗೆಗಳ ಮಿಶ್ರಣ ಹೊರಗೋಡೆಗಾದರೆ , ಒಳಗೆ ಸೀಳಿದ ಬಿದಿರಿನ ಕಟ್ಟು. ಆಹಾರ‌ ಪದ್ಧತಿಯೂ ಬಹಳ ಸರಳ ಎಂದರೆ ತಪ್ಪಾಗದು. ಅನ್ನದ ಜತೆ ಬೇಳೆಯ ಸಾರು, ಸೊಪ್ಪಿನ‌‌ ಪಲ್ಯ ತಿನ್ನುತ್ತಾರೆ. ವಿಶೇಷ ಎನಿಸಿದಾಗ ಕೆರೆಯಲ್ಲಿ ಸಾಕಿದ ಮೀನನ್ನು ಕರಿದು ತಿನ್ನುತ್ತಾರೆ.
     ಮಾಜುಲಿ ಒಂದು ಅತೀ ವಿಸ್ತಾರವಾದ ನದಿ ಮೇಲಣ ದ್ವೀಪ. ಮಣ್ಣಿನ ಪದರ ಜೌಗು ಪ್ರದೇಶ ಹೋಲುವ ಕಾರಣ ಮಳೆಹನಿ ಬಿದ್ದಾಗ ಕೆಸರಿನಂತಾಗಿ ಬಿಡುತ್ತದೆ , ಹೀಗಾಗಿ ಅತೀ ಹೆಚ್ಚು ಪ್ರವಾಹದ ಸಮಸ್ಯೆಗೆ ಜನ ಒಳಗಾಗುತ್ತಾರೆ. ಕೆಲವೊಂದು ಬಾರಿ ಸಣ್ಣ ಮಟ್ಟಿನ ಭೂಕಂಪನವೂ ಈ ದ್ವೀಪದಲ್ಲಾಗುತ್ತದೆ. ಮಾಜುಲಿ ದ್ವೀಪ ಅಸ್ಸಾಮಿ ಭಾಷಿಗರಿಗೆ ಅತ್ಯಂತ ಪವಿತ್ರವಾದ ಗಮ್ಯವಾಗಿದೆ. ಇಲ್ಲಿರುವ ಹತ್ತಾರು ಖೊತ್ರೊಗಳಲ್ಲಿ ಅಸ್ಸಾಮಿನ ಪ್ರತೀಕವೆನಿಸಿದ ಸತ್ರಿಯಾ ನೃತ್ಯ , ಬೋರ್ ಗೀತೆಗಳು , ಭಾವನಾ , ಊಜಪಾಲಿಯಂತಹ ಕಲಾಪ್ರಕಾರಗಳನ್ನು ಕಲಿಸಿ ಕೊಡಲಾಗುತ್ತದೆ. ಅಸ್ಸಾಂನ ಆಧುನಿಕ ಕಾಲದ ಧಾರ್ಮಿಕ ಪರಿವರ್ತಕನೆನಿಸಿದ ಶ್ರೀಮಂತ ಶಂಕರದೇವರ ಏಕ ಶರಣ ಧರ್ಮ ಪಾಲಿಸುವ ಜನರು ಇರೋದು ಇಲ್ಲೇ.
    ಮಾಜುಲಿ ಇಂದು ಅಸ್ಸಾಂನ ಒಂದು ಜಿಲ್ಲೆಯಾಗಿ ಮಾರ್ಪಾಟಾಗಿದೆ.ಇಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಜೋರ್ಹಾಟ್‌ನಿಂದ ಮಾಜುಲಿ ದ್ವೀಪಕ್ಕೆ ದೊಡ್ಡ ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಸಾವಿರಾರು ಪ್ರವಾಸಿಗರು ವರ್ಷಾನು ವರ್ಷ ಇಲ್ಲಿ ಭೇಟಿ ಕೊಡುತ್ತಲಿರುತ್ತಾರೆ , ಆದರೆ ಇಲ್ಲಿ ಸರಿಯಾದ ಮಾಹಿತಿ( guidance) ನೀಡುವ ಆಕರಗಳಿಲ್ಲ. ಪ್ರವಾಸಿ ಭವನ , ರೂಟ್‌ ಮ್ಯಾಪ್‌ಗಳಿಲ್ಲದೆ ಇರೋದು ಬೇಜಾರಿನ ಸಂಗತಿ. ಬ್ರಹ್ಮಪುತ್ರ ನದಿಯ ಕಬಂದ ಬಾಹುಗಳು ಇನ್ನಷ್ಟು ವಿಸ್ತಾರಗೊಂಡು ದ್ವೀಪವನ್ನು ಕೊರೆಯುತ್ತಿರುವ ವಿಚಾರ ಜನರಲ್ಲಿ ಭವಿಷ್ಯದ ಭೀತಿ ಮೂಡಿಸುತ್ತಿದೆ..
     ಅವೇನೆ ಇದ್ದರೂ ಮಾಜುಲಿ ದ್ವೀಪ ಭಾರತದ ಹೆಮ್ಮೆ! ಇಂತಹ ದ್ವೀಪಗಳ ಸಂರಕ್ಷಣೆ ಅತ್ಯಗತ್ಯವಾಗಿದೆ. ಸರ್ಕಾರ ಇಲ್ಲಿಯ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಂಡು, ಪ್ರವಾಸೋದ್ಯಮ ಮತ್ತು ಸಂರಕ್ಷಣೆಯ ನಡುವೆ ಸಮತೋಲನ ಮಾಡಿಕೊಂಡು ಮುನ್ನಡೆದರೆ ಚೆನ್ನ!
......................................... ಸುಭಾಸ್ ಮಂಚಿ 
ಕಾಡಂಗಾಡಿ , ಮಂಚಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
Mob : 9663135413
******************************************

Ads on article

Advertise in articles 1

advertising articles 2

Advertise under the article