ಯೋಗದತ್ತ ನಮ್ಮ ಚಿತ್ತ
Monday, June 20, 2022
Edit
ಜೂನ್ - 21
ವಿಶ್ವ ಯೋಗ ದಿನದ
ವಿಶೇಷ ಲೇಖನ
'ಮಕ್ಕಳ ಜಗಲಿ' ಓದುತ್ತಿರುವ ಎಲ್ಲಾ ಮಕ್ಕಳಿಗೂ ಸಹೃದಯರಿಗೂ ನನ್ನ ಪ್ರೀತಿಯ ನಮಸ್ಕಾರ ತಿಳಿಸುವ ಯೋಗಾಯೋಗ ಈ ದಿನ ನನ್ನದು. ವಿಶ್ವದಾದ್ಯಂತ ಯೋಗದ ಮಹತ್ವವನ್ನು ನೆನಪಿಸುವ , ಆ ಮೂಲಕ ಯೋಗದ ಮಹತ್ವವನ್ನು ಅರಿಯುತ್ತಾ ಬದುಕಿನಲ್ಲಿ ಅಳವಡಿಸಿಕೊಳ್ಳುವಲ್ಲಿ ನಿರ್ಧಾರವನ್ನು ಗಟ್ಟಿ ಮಾಡಿಕೊಳ್ಳುವ ದಿನ ಇಂದು.., ಅಲ್ಲವೇ..?
ಈ ಪ್ರಶ್ನೆ ಯಾಕೆಂದರೆ ನಮಗೆಲ್ಲರಿಗೂ ನಮ್ಮ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಯಾವುದು? ಕೆಟ್ಟದ್ದು ಯಾವುದು ಅಂತ ಸಾಧಾರಣ ವಾಗಿ ಎಲ್ಲರಿಗೂ ಗೊತ್ತು. ಯಾವ ರೀತಿಯ ಶಿಸ್ತು ಒಳ್ಳೆಯ ಆರೋಗ್ಯ ಕೊಡಬಲ್ಲದು/ಕಾಪಾಡಬಲ್ಲದು ಎಂಬ ಅರಿವು ಎಲ್ಲರಿಗೂ ಇದೆ. ಹಾಗೆಯೇ ನಮ್ಮ ಯಾವ ಅಭ್ಯಾಸಗಳು ಒಳ್ಳೆಯ ಆರೋಗ್ಯಕ್ಕೆ ಪೂರಕವಲ್ಲ , ಅನ್ನೋದು ಗೊತ್ತು.
ಹೀಗಿದ್ದರೂ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವಲ್ಲಿ ಉದಾಸೀನ ತೋರಿಸುತ್ತೇವೆ. ಒಳ್ಳೆಯದಲ್ಲವೆಂದು ಗೊತ್ತಿರುವ ಕೆಲವು ಅಭ್ಯಾಸಗಳನ್ನು ಬಿಡುವ ಮನಸ್ಸೂ ಮಾಡುವುದಿಲ್ಲ.
ದುರ್ಯೋಧನ ಒಂದು ಮಾತು ಹೇಳುತ್ತಾನೆ. 'ಧರ್ಮ ಅಂದರೇನು ಎಂದು ನನಗೆ ಗೊತ್ತು. ಆದರೆ ನಾನು ಹಾಗೆ ನಡೆಯಲೊಲ್ಲೆ. ಅಧರ್ಮ ಅಂದರೇನು ಎಂದು ನಾನು ಬಲ್ಲೆ. ಆದರೆ ಅದನ್ನು ಬಿಡಲೊಲ್ಲೆ. ಹೀಗಾಗಿದೆ ನಮ್ಮಲ್ಲಿ ಹೆಚ್ಚಿನವರ ಪರಿಸ್ಥಿತಿ.
ಯೋಗ ಎಂದರೆ ಕೇವಲ ಶಾರೀರಿಕ ವ್ಯಾಯಾಮವಲ್ಲ. ಶರೀರ ಮತ್ತು ಮನಸ್ಸನ್ನು ಜೊತೆಗೆ ಸೇರಿಸುವ ಒಂದು ಪ್ರಕ್ರಿಯೆ. ಒಂದು ಒಳ್ಳೆಯ ಬದುಕು ಬಾಳಲು ಸುದೃಢ ಶರೀರ ಸಾಕಾಗುವುದಿಲ್ಲ. ಆರೋಗ್ಯವಂತ ಮನಸ್ಸೂ ಅಷ್ಟೇ ಅಗತ್ಯ. ಈ ಎರಡನ್ನೂ ಆರೋಗ್ಯವಾಗಿಡುವುದು ಮಾತ್ರವಲ್ಲ, ಸಂತೋಷ/ನೆಮ್ಮದಿ ಹಾಗೂ ಶಾಂತಿಯ ಬದುಕು ಬಾಳುವುದು ಸಾಧ್ಯ.
ಅಷ್ಟಾಂಗ ಯೋಗದಲ್ಲಿ ಹೇಳಿರುವ ಎಂಟು ಮೆಟ್ಟಿಲುಗಳಲ್ಲಿ ಮೊದಲು ಎರಡು ಮೆಟ್ಟಿಲುಗಳಾದ ಯಮ ಹಾಗೂ ನಿಯಮ ಎಲ್ಲರೂ ಬದುಕಿನಲ್ಲಿ ಪಾಲಿಸಬೇಕಾದ ಅಂಶಗಳು.
'ಯಮ' ಗುಣಗಳ ಬಗ್ಗೆ ಹೇಳಿದರೆ, 'ನಿಯಮ' ಆಚರಣೆಗಳ ಬಗ್ಗೆ ಹೇಳುತ್ತದೆ
ಯಮ : 1.ಅಹಿಂಸೆ: ಯಾರಿಗೂ ನೋವು ಕೊಡದಿರುವುದು
2. ಸತ್ಯ: ಸದಾ ಸತ್ಯಪರನಾಗಿರುವುದು, ಸುಳ್ಳು ಹೇಳದಿರುವುದು
3. ಅಸ್ತೇಯ: ಕಳ್ಳತನ ಮಾಡದೇ ಇರುವುದು
4. ಬ್ರಹ್ಮಚರ್ಯ: ಪರಿಶುದ್ಧನಾಗಿರುವುದು, ಲೈಂಗಿಕ ಸಂಯಮ ಕಾಪಾಡಿಕೊಳ್ಳುವುದು
5. ಅಪರಿಗ್ರಹ: ಯಾರಿಂದಲೂ ಯಾವ ಕೊಡುಗೆಯನ್ನು ಸ್ವೀಕರಿಸದೇ ಇರುವುದು. ಈ ಕಾಲದಲ್ಲಿ ಪರಿಪಾಲಿಸಲು ಕಷ್ಟವಾದ ಗುಣ. ಈ ಐದು ಗುಣಗಳನ್ನು ಸದಾ ಪಾಲಿಸಬೇಕಾದ ಅಗತ್ಯವಿದೆ ಅಲ್ಲವೇ?
ನಿಯಮ : 1. ಶೌಚ: ಶುದ್ಧವಾಗಿರುವುದು
2. ಸಂತೋಷ: ಸದಾ ಸಂತೋಷವಾಗಿ ತೃಪ್ತಿಯಿಂದ ಇರುವುದು
3. ತಪಸ್ಸು; ಹಿಡಿದ ಕೆಲಸವನ್ನು ಧೃತಿಗೆಡದೆ ನಿರಂತರ ಪರಿಶ್ರಮ ವಹಿಸಿ ಮಾಡುವುದು
4. ಸ್ವಾಧ್ಯಾಯ: ಹೊಸ ವಿಚಾರಗಳನ್ನು ತಿಳಿದುಕೊಳ್ಳುವುದು, ಅಧ್ಯಯನ ಮಾಡುವುದು
5. ಈಶ್ವರಪ್ರಣಿಧಾನ: ಒಂದು ದೊಡ್ಡ ಚೇತನಕ್ಕೆ ತನ್ನನ್ನು ತಾನು ಒಪ್ಪಿಸಿಕೊಳ್ಳುವುದು, ಶರಣಾಗತಿ ಭಾವ
ಯಮ ಹಾಗೂ ನಿಯಮ ಈ ಎರಡು ನಮ್ಮ ವ್ಯಕ್ತಿತ್ವವೆನ್ನುವ ದೀಪವನ್ನು ಬೆಳಗುವಲ್ಲಿ ಎಣ್ಣೆಯಂತೆ ಪೋಷಣೆಯನ್ನು ಒದಗಿಸುತ್ತವೆ. ಮುಂದಿನ ಮೆಟ್ಟಿಲಾದ 'ಆಸನ' ಎಲ್ಲರ ಬಾಯಿಯಲ್ಲೂ ಜನಜನಿತವಾದ 'ಯೋಗ' ವು ದೇಹದ ಸುಸ್ಥಿರತೆ ಹಾಗೂ ಕಾರ್ಯಕ್ಷಮತೆ ಹೆಚ್ಚಿಸುವಲ್ಲಿ ಸಹಕರಿಸುತ್ತದೆ. 'ಪ್ರಾಣಾಯಾಮ' ದಿಂದ ಶ್ವಾಸಕೋಶಗಳು ಚೆನ್ನಾಗಿ ಕೆಲಸ ನಿರ್ವಹಿಸುವುದರ ಜೊತೆಗೆ ಉಸಿರಾಟದ ನಿಯಂತ್ರಣದ ಮೂಲಕ ಮನಸ್ಸನ್ನು ಏಕಾಗ್ರತೆಗೆ ತರಲು ಸಹಕರಿಸುತ್ತದೆ. ಹಾಗಾಗಿ ವಿಶ್ವಯೋಗ ದಿನಾಚರಣೆಯ ಈ ಶುಭದಿನದಂದು ನಮ್ಮ ದೈಹಿಕ ಆರೋಗ್ಯ ಕಾಪಾಡಿ ಕೊಳ್ಳುವುದರೊಂದಿಗೆ, ಮನಸ್ಸಿನ ಭಾಗಗಳಾದ ಚಿತ್ತ ಹಾಗು ಬುದ್ಧಿಯನ್ನು ಸದಾ ಜಾಗೃತವಾಗಿಟ್ಟು ಕೊಳ್ಳಬೇಕಾದುದ್ದು ಅಗತ್ಯ.
ಪ್ರತಿದಿನವೂ ಯೋಗದಿನವನ್ನಾಗಿ ಆಚರಿಸುತ್ತಾ ಯಮ , ನಿಯಮ ದೊಂದಿಗೆ ಆಸನ ಪ್ರಾಣಾಯಾಮಗಳನ್ನು ಅಗತ್ಯವಾಗಿ ಮಾಡುತ್ತಾ ಆರೋಗ್ಯವಂತ ಪ್ರಜೆಗಳಾಗಿ ಭಾರತವನ್ನು ಉಜ್ವಲವಾಗಿ ಬೆಳಗಿಸುತ್ತ "ವಿಶ್ವಗುರು" ವಾಗಿಸುವಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
ಕಶ್ಯಪ ಸಂಕೀರ್ಣ
ಶ್ರೀರಾಮ ಪೇಟೆ , ಸುಳ್ಯ
ದಕ್ಷಿಣ ಕನ್ನಡ ಜಿಲ್ಲೆ
ಮೊ : ನಂಬರ್ : 9448215940
*********************************************