-->
ಹಕ್ಕಿ ಕಥೆ : ಸಂಚಿಕೆ - 52

ಹಕ್ಕಿ ಕಥೆ : ಸಂಚಿಕೆ - 52

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
               
              
      ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ಬಾಗತ... ಈಗಷ್ಟೇ ಮಳೆಗಾಲ ಆರಂಭವಾಗಿದೆ. ಮಳೆಗಾಲ ಅಂದ ಕೂಡಲೇ ನನಗೆ ನೆನಪಾಗೋದು ಕಪ್ಪೆಗಳು. ರಾತ್ರಿಯಾದರೆ ಸಾಕು ತರಹೇವಾರಿ ಶಬ್ದಗಳಿಂದ ಕೂಗುವ ಕಪ್ಪೆಗಳ ಹಾಡುಗಾರಿಕೆ ಶುರುವಾಗಿ ಬಿಡುತ್ತದೆ. ರಸ್ತೆಯಲ್ಲಿ ರಾತ್ರಿ ನಡೆಯಲು ಹೋದರೆ ಅಲ್ಲಲ್ಲಿ ಹಾರುವ ಕಪ್ಪೆಗಳು.. ಆದರೆ ಇಷ್ಟು ದಿನ ಹಕ್ಕಿಗಳ ಸುದ್ದಿ ಹೇಳುವ ಈ ಜನ ಇವತ್ತು ಕಪ್ಪೆ ಕಥೆ ಪ್ರಾರಂಭ ಮಾಡಿದ್ನಲ್ಲ ಅಂತ ಹುಬ್ಬೇರಿಸಬೇಡಿ. ಇವತ್ತು ನಾನು ಪರಿಚಯ ಮಾಡಬೇಕು ಎಂದಿರುವ ಹಕ್ಕಿಯ ಹೆಸರಿನೊಳಗೆ ಕಪ್ಪೆಯೂ ಸೇರಿಕೊಂಡಿದೆ. ಗೂಬೆಗಳಂತೆ ಈ ಹಕ್ಕಿಯೂ ರಾತ್ರಿಹೊತ್ತು ತನ್ನ ಆಹಾರವನ್ನು ಹುಡುಕುತ್ತದೆ. ನಿಶಾಚರಿಯಾದ ಈ ಹಕ್ಕಿ ಹಗಲಿನಲ್ಲಿ ಯಾವುದಾದರೂ ಮರದ ಕೊಂಬೆ ಅಥವಾ ಬಿದಿರಿನ ಕೊಂಬೆಯಲ್ಲಿ ಮಿಸುಕಾಡದೆ ಕುಳಿತಿರುತ್ತದೆ. ಮರದ ಕೊಂಬೆಯ ಮೇಲೆ ಒಣಗಿದ ಕಟ್ಟಿಗೆಯ ತುಂಡಿನಂತೆ ಕುಳಿತ ಇದನ್ನು ಪತ್ತೆ ಮಾಡುವುದು ಅತ್ಯಂತ ಕಷ್ಟ ಸಾಧ್ಯ. ಸಂಜೆ ಸೂರ್ಯಾಸ್ತದ ನಂತರ ಯಾರನ್ನೋ ಜೋರಾಗಿ ಅಣಕಿಸಿದಂತೆ ಕೀರಲು ಧ್ವನಿಯ ಕೂಗು. ಉಳಿದೆಲ್ಲ ಹಕ್ಕಿಗಳಿಗಿಂತ ಭಿನ್ನವಾಗಿ ಅಗಲವಾದ ಕೊಕ್ಕು. ಇದರ ಕೊಕ್ಕು ಕಪ್ಪೆಯ ಬಾಯಿಯನ್ನು ಹೋಲುವುದರಿಂದ ಇದನ್ನು ಕನ್ನಡದಲ್ಲಿ ಕಪ್ಪೆಬಾಯಿ ಎಂದು ಕರೆಯುತ್ತಾರೆ.
       ಜೂನ್ ನಿಂದ ನವೆಂಬರ್ ತಿಂಗಳ ನಡುವೆ ಒಣಗಿದ ಎಲೆಗಳ ಸಹಾಯದಿಂದ ಗೂಡು ಮಾಡಿ ಸಂತಾನಾಭಿವೃದ್ಧಿ ಮಾಡುತ್ತದೆ. ಹಕ್ಕಿಯು ಗೂಡಿನ ಮೇಲೆ ಕುಳಿತರೆ, ಹಕ್ಕಿ ಯಾವುದು, ಗೂಡು ಯಾವುದು, ಮರಿಗಳು ಎಲ್ಲಿವೆ ಒಂದೂ ತಿಳಿಯುವುದಿಲ್ಲ. ಕೀಟಗಳೇ ಇದರ ಮುಖ್ಯ ಆಹಾರ. ಶ್ರೀಲಂಕಾ ಮತ್ತು ಭಾರತದ ಪಶ್ಚಿಮ ಘಟ್ಟಗಳಲ್ಲಿ ಇದರ ವಾಸ. ಕಾರ್ಕಳದ ಪಕ್ಷಿವೀಕ್ಷಕ ಮಿತ್ರರ ಜೊತೆ ನಾನು ಮೊದಲ ಬಾರಿಗೆ ಈ ಹಕ್ಕಿಯನ್ನು ನೋಡಿದ್ದು. ಇನ್ನೊಮ್ಮೆ ಕೈಗಾ ಪಕ್ಷಿ ಹಬ್ಬಕ್ಕೆ ಹೋದಾಗ ಇದನ್ನು ನೋಡುವ ಭಾಗ್ಯ ಸಿಕ್ಕಿತ್ತು. ಗಂಡು ಹಕ್ಕಿ ಸ್ವಲ್ಪ ಬೂದು ಬಣ್ಣದ್ದಾದರೆ ಹೆಣ್ಣು ಸ್ವಲ್ಪ ಕಂದು ಬಣ್ಣ. ಕೊರೋನಾ ಕಾಲದಲ್ಲಿ ಒಂದು ದಿನ ಸಂಜೆ ಏಳುಗಂಟೆಯ ಸುಮಾರಿಗೆ ವಾಕಿಂಗ್ ಮುಗಿಸಿ ಬರುವಾಗ ಕಪ್ಪೆಬಾಯಿ ಕೂಗಿದ್ದು ಕೇಳಿಸಿತು. ಮನೆಗೆ ಬಂದು ಹಕ್ಕಿಗಳ ಧ್ವನಿ ಭಂಡಾರ xenocanto ದಲ್ಲಿ ಹುಡುಕಿದಾಗ ಅದು ಕಪ್ಪೆಬಾಯಿಯದ್ದೇ ಕೂಗು ಎಂದು ಖಚಿತವಾಯಿತು. ಆಗಲೇ ನನಗೆ ತಿಳಿದದ್ದು ಈ ಹಕ್ಕಿ ನಮ್ಮ ಮನೆಯ ಹಿಂದೆಯೇ ಇದೆ ಅಂತ. ಆದರೆ ಎಲ್ಲಿದೆ ಅನ್ನುವುದು ಇನ್ನೂ ಯಕ್ಷಪ್ರಶ್ನೆ. 
ಕನ್ನಡ ಹೆಸರು: ಕಪ್ಪೆ ಬಾಯಿ
ಇಂಗ್ಲೀಷ್ ಹೆಸರು: Sri Lanka / Cylone Frogmouth
ವೈಜ್ಞಾನಿಕ ಹೆಸರು: Btrachostomus moniliger
ಛಾಯಾಚಿತ್ರ : ಅರವಿಂದ ಕುಡ್ಲ
ಮುಂದಿನವಾರ ಇನ್ನೊಂದು ಹೊಸ ಹಕ್ಕಿ ಕಥೆಯೊಂದಿಗೆ ಸಿಗೋಣ.. ಬಾಯ್..
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************

Ads on article

Advertise in articles 1

advertising articles 2

Advertise under the article