-->
ಜೀವನ ಸಂಭ್ರಮ : ಸಂಚಿಕೆ - 40

ಜೀವನ ಸಂಭ್ರಮ : ಸಂಚಿಕೆ - 40

ಜೀವನ ಸಂಭ್ರಮ : ಸಂಚಿಕೆ - 40
                       
           ಮಾಲೀಕರೋ..... ಅನುಭವದಾರರೋ....
      -----------------------------------------    
        ಮಕ್ಕಳೇ, ನಾವೆಲ್ಲ ಮಾಲೀಕರಾಗಲು ಹೊರಟಿದ್ದೇವೆ. ಈ ಲೇಖನ ಓದಿದ ಮೇಲೆ ನೀವೇ ತೀರ್ಮಾನಿಸಿ. ಸೌರಮಂಡಲದಲ್ಲಿ 8 ಗ್ರಹಗಳಿದ್ದು, ಅದರಲ್ಲಿ ಭೂಮಿ ಒಂದು ಗ್ರಹ. ಇರುವುದು ಒಂದು ಭೂಮಿ. ಇದರ ಮಾಲೀಕರಾಗಲು ಜನರೆಲ್ಲಾ ಹೋರಾಡುತ್ತಿದ್ದಾರೆ. ಇದರ ಮಾಲೀಕತ್ವ ಪಡೆಯಲು ಹೋರಾಟ, ಹೊಡೆದಾಟ ಮಾಡುವುದನ್ನು ಕಂಡಾಗ , ನಾವು ಅಂದ್ರೆ ಮನುಷ್ಯರು, ಈ ಭೂಮಿಯ ಮಾಲೀಕರೇ....? ಎನ್ನುವ ಪ್ರಶ್ನೆ ಮೂಡುತ್ತದೆ. ನಿಜವಾದ ಈ ಭೂಮಿಯ ಮಾಲೀಕರು ನಿಸರ್ಗ. ನಿಸರ್ಗ ಭೂಮಿಯನ್ನು ಬಳಸಲು ಅಸಂಖ್ಯ ಪ್ರಾಣಿ, ಪಕ್ಷಿ, ಹಾವು, ಮೀನು, ಸೇರಿದಂತೆ ಅನೇಕ ಪ್ರಾಣಿಸಂಕುಲ, ಮನುಷ್ಯ ಮತ್ತು ಅನೇಕ ವಿಧದ ಸಸ್ಯ ಸಂಕುಲ ನಿರ್ಮಿಸಿದೆ. ಇವುಗಳೆಲ್ಲಾ ಭೂಮಿಯನ್ನು ಅನುಭವಿಸುತ್ತಿವೆ. ಹಾಗಾದರೆ ಮನುಷ್ಯನೊಬ್ಬನೇ... ಇದರ ಮಾಲೀಕರು ಹೇಗಾಗುತ್ತಾನೆ....? ಅಂದರೆ ನಾವು ಮಾಲೀಕರಲ್ಲ ಅನುಭವಿಸಲು ಬಂದವರೆಂದು ಅರ್ಥವಾಗುತ್ತದೆ.   
       ನಾವು ಶಾಲೆಗಳಲ್ಲಿ ಇತಿಹಾಸ ಕಲಿಯುತ್ತೇವೆ. ಇದೆಲ್ಲ ರಾಜಮಹಾರಾಜರ ಕಥೆಗಳನ್ನು ಓದುತ್ತೇವೆ. ಪುರಾಣಗಳನ್ನು ಓದುತ್ತೇವೆ. ರಾಮನಿಂದ ಹಿಡಿದು ಕೌರವರು ಪಾಂಡವರು ಹಾಗೂ ರಾಜ-ಮಹಾರಾಜರ ಕಥೆ ಓದಿದಾಗ ಇವರೆಲ್ಲ ರಾಜ್ಯಕ್ಕಾಗಿ, ರಾಜ್ಯ ವಿಸ್ತಾರಕ್ಕಾಗಿ , ಸಂಪತ್ತಿಗಾಗಿ ಯುದ್ಧ ಮಾಡಿ, ಅನೇಕ ಜನರ, ನಿರ್ಮಾಣಗಳ ನಾಶ ಮಾಡಿರುವುದನ್ನು ಓದುತ್ತೇವೆ. ಆದರೆ ಆ ರಾಜರು ಆಳಿದ ಭೂಮಿ ಇಂದು ಇದೆ. ಆದರೆ ಆ ಭೂಮಿ ಅವರ ಹೆಸರಿನಲ್ಲಿ ಇಲ್ಲ. ಸಂಪತ್ತು ಅವರ ಹೆಸರಿನಲ್ಲಿ ಇಲ್ಲ. ಬೇರೆ ಬೇರೆಯವರ ಅಧೀನದಲ್ಲಿದೆ. ಇವರೆಲ್ಲ ಕಾಯಂ ಮಾಲೀಕರಾಗಲು ಪ್ರಯತ್ನಿಸಿದರು. ಆದರೆ ಅದು ಹಾಗೆ ಆಗಲಿಲ್ಲ. ಅದೇ ಸಂಪತ್ತು ಈಗಲೂ ಇದೆ. ನಾವು ಕೂಡ ಇಂದು ಚಿಕ್ಕ ಚಿಕ್ಕ ರಾಜರೆ. ನಮ್ಮ ಅರಮನೆ ಒಂದು ಕೊಠಡಿ ಅಥವಾ ಎರಡು ಕೊಠಡಿರುವ ಮನೆ. ನಾವು ಕೂಡ ಭೂಮಿ ವಿಸ್ತರಿಸಲು , ಸಂಪತ್ತು ಗಳಿಸಲು ಹೋರಾಡುತ್ತಿದ್ದೇವೆ. ಈ ಸಮಯದಲ್ಲಿ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಹೇಳಿದ್ದು ನೆನಪಾಗುತ್ತದೆ "ಇತಿಹಾಸ ಓದದವ ಇತಿಹಾಸ ನಿರ್ಮಿಸಲಾರ." ಅಂದರೆ ಇತಿಹಾಸ ಓದಿದಮೇಲೆ ನಮ್ಮ ವರ್ತನೆ ಬದಲಾಗಬೇಕಿತ್ತು. ರಾಜ - ಮಹಾರಾಜರು ಮಾಡಿದ ತಪ್ಪನ್ನು ನಾವು ಮಾಡುತ್ತಲೇ ಇದ್ದೇವೆ. ಇತಿಹಾಸದಿಂದ ಒಳ್ಳೆಯದನ್ನು ಆಯ್ದುಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಎಷ್ಟು ಚೆನ್ನ.
ನಿಸರ್ಗ ಬಹು ವರ್ಣಮಯ , ರೂಪ ಮಯ, ಇದು ಮನುಷ್ಯನನ್ನು ರೂಪಿಸಿದ್ದು ತನ್ನನ್ನು ಅನುಭವಿಸಿ ಆನಂದಿಸಲಿ ಎಂದು. ನಿಸರ್ಗದಲ್ಲಿ ಏನಿಲ್ಲ.....? ಕಣ್ಣಿನಿಂದ ನೋಡಿ ಅನುಭವಿಸಿ ಆನಂದ ಪಡಲು, ಕಿವಿಯಿಂದ ಕೇಳಿ ಅನುಭವಿಸಿ ಆನಂದ ಪಡಲು, ಸುವಾಸನೆ ಅನುಭವಿಸಿ ಆನಂದ ಪಡಲು , ರುಚಿ ಅನುಭವಿಸಿ ಆನಂದ ಪಡಲು, ಬೆಚ್ಚನೆಯ ತಣ್ಣನೆಯ ಅನುಭವ ಪಡೆಯಲು , ಎಲ್ಲಾ ವ್ಯವಸ್ಥೆ ನಿಸರ್ಗ ಮಾಡಿದೆ. ಗಿಡಗಳ ಗಾತ್ರ , ಸ್ವರೂಪ , ಬಣ್ಣಬಣ್ಣದ ಹೂವುಗಳು, ಅವುಗಳ ವಿಭಿನ್ನ ಸುಗಂಧ ಸುವಾಸನೆ, ಪಕ್ಷಿಗಳ ವೈವಿಧ್ಯತೆ, ಅವುಗಳ ಬಣ್ಣ, ಧ್ವನಿ , ವೈವಿಧ್ಯಮಯ ರೂಪ , ರುಚಿಯ ಹಣ್ಣು-ಹಂಪಲಗಳು, ತರಕಾರಿ , ಕಾಳು ಕಡ್ಡಿಗಳು , ಮಳೆ, ಸೂರ್ಯೋದಯ ,ಚಂದ್ರೋದಯ, ಸೂರ್ಯಾಸ್ತ , ಕಾಮನಬಿಲ್ಲು ಇನ್ನು ಮುಂತಾದ ಸೌಂದರ್ಯ ಸವಿಯಲು ಸೂರ್ಯನ ಬೆಳಕು ನಿಸರ್ಗ ನೀಡಿದೆ. ಇವುಗಳನ್ನು ಅನುಭವಿಸಿ ಆನಂದ ಪಡುವುದು ಬಿಟ್ಟು ಮಾಲೀಕರಾಗಲು ಹೊರಟಿದ್ದೇವೆ.
      ಇನ್ನು ಸಂಪತ್ತು ಕೂಡ ಈ ಭೂಮಿಯಿಂದಲೇ ದೊರಕಿರುವುದು. ಚಿನ್ನ , ಬೆಳ್ಳಿ , ವಜ್ರ , ಮುತ್ತು , ರತ್ನ ಎಲ್ಲಾ ಭೂಮಿಯಿಂದಲೇ ದೊರಕಿರುವುದು. ನಾವು ಏನೇನು ತಯಾರು ಮಾಡಿದ್ದೇವೆ, ನಿರ್ಮಾಣ ಮಾಡಿದ್ದೇವೆ ಇವೆಲ್ಲ ಭೂಮಿಯ ಮೇಲಿರುವ ವಸ್ತುಗಳನ್ನು ಬಳಸಿ ತಯಾರು ಮಾಡಿದ್ದಾರೆ. ನಾವೇ ಸ್ವತಃ ತಯಾರು ಮಾಡಿದ್ದು ಏನೂ ಇಲ್ಲ. ಅಷ್ಟು ಸಂಪತ್ತು ನಿಸರ್ಗ ನೀಡಿದೆ. ಸಂಪತ್ತು ಗಳಿಸಬಾರದೆ......? ಗಳಿಸಬೇಕು. ಅದನ್ನು ಬಳಸಿ ಅನುಭವಿಸುವಷ್ಟು ಮಾತ್ರ. ಸಂಗ್ರಹಣೆಗಾಗಿ ಸಂಪತ್ತಲ್ಲ , ಬಳಕೆಗಾಗಿ ಸಂಪತ್ತು. ಇಂದು ಜೀವನಮಟ್ಟ ಸುಧಾರಿಸಿದೆ. ಇದರಿಂದ ಗಳಿಕೆ ಉತ್ತಮವಾಗಿದೆ. ಗಳಿಕೆಯಿಂದ ಸುಂದರ ಜೀವನ ನಡೆಸಬೇಕು. ಉಳಿದುದರಲ್ಲಿ ಬಳಸಬಹುದಾದ ಸಂಪತ್ತು ಗಳಿಸಬೇಕು. ಬಳಕೆಗಾಗಿ ಸಂಪತ್ತಿನ ವಿನಹ , ಗಳಿಕೆಗಾಗಿ ಸಂಪತ್ತಲ್ಲ. ಗಳಿಸಿದ ಸಂಪತ್ತನ್ನು ಬಳಸಿ ಆನಂದಿಸಬೇಕು. ಅದನ್ನು ಬಿಟ್ಟು ಸಂಗ್ರಹಕ್ಕಾಗಿ ಸಂಪತ್ತನ್ನು ಗಳಿಸಬಾರದು. ಆದರೆ ಇಂದು ಸುಂದರವಾದ ವಸ್ತು ನನ್ನದಾಗಬೇಕು, ಕಾಯಂ ಮಾಲೀಕನಾಗಬೇಕೆಂದು ಬಯಸುತ್ತೇವೆ. ಸುಂದರ ಸಂತೋಷದ ಜೀವನಕ್ಕಾಗಿ ಗಳಿಸದೆ , ಸಂಗ್ರಹಕ್ಕಾಗಿ ಗಳಿಸುತ್ತಿದ್ದೇವೆ. ಇದೇ ಅಸಂತೋಷಕ್ಕೆ ಕಾರಣವಾಗಿದೆ. ಯಾವ ಪಕ್ಷಿ , ಪ್ರಾಣಿಗಳು ಆಹಾರವನ್ನು , ಸಂಪತ್ತನ್ನು ಸಂಗ್ರಹಿಸುವುದಿಲ್ಲ. ಹಾಗಾಗಿ ಪಕ್ಷಿಗಳು ಆಹಾರಕ್ಕಾಗಿ ಹಾರಾಡುತ್ತವೆ. ನಂತರ ಇಂಪಾದ ಕಲರವ ಮಾಡುತ್ತಾ, ಆನಂದವಾಗಿ ಹಾಡುತ್ತಾ ಹಾರುತ್ತಾ ಬದುಕುತ್ತವೆ. ಮಕ್ಕಳೇ, ಈಗ ನೀವೇ ಹೇಳಿ ನಾವು ಮಾಲೀಕರೋ, ಬಳಕೆದಾರರೋ ಎಂದು.
.........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article