
ಸ್ಪೂರ್ತಿಯ ಮಾತುಗಳು : ರಮೇಶ ಎಂ. ಬಾಯಾರು
Monday, June 13, 2022
Edit
ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
ಕರ್ಮ ಎಂಬ ಪದಕ್ಕೆ ಸಂವಾದಿಯಾಗಿ ಕಾಯಕ, ಕ್ರಿಯೆ, ಕಾರ್ಯ, ಶ್ರಮ, ದುಡಿಮೆ, ಪರಿಶ್ರಮ ಎಂಬಿತ್ಯಾದಿ ಪದಗಳೂ ಇವೆ. ಕರ್ಮದಲ್ಲಿ ಮೇಲು, ಕೀಳು ಅಥವಾ ಮಧ್ಯಮ ಎಂಬುದಾಗಿ ವಿಧಗಳಿವೆಯೇ....? ಎಂಬ ಪ್ರಶ್ನೆಗೆ ಸಮರ್ಪಕವಾಗಿ ಮತ್ತು ಪ್ರೀತಿಯಿಂದ ಮಾಡುವ ಕರ್ಮಗಳೆಲ್ಲವೂ ಶ್ರೇಷ್ಠ; ಅದಕ್ಕಿಂತ ಹೊರತಾದ ಎಲ್ಲ ಕರ್ಮಗಳೂ ಕನಿಷ್ಠ ಎಂದು ವ್ಯಾಖ್ಯಾನಿಸಬಹುದೇನೋ..! ಹಾಗಾಗಿ ಕೆಲಸಗಳು ಫಲದಾಯಿಯಾಗಲು ಕರ್ಮ ಪ್ರೀತಿಯೇ ಆಧಾರ. ಒಬ್ಬನಿಗೆ ಶ್ರೇಷ್ಠ ಎನ್ನಿಸಿದ ಕೆಲಸವು ಇನ್ನೊಬ್ಬನಿಗೆ ಕೀಳಾಗಿ ಕಾಣಬಹುದು. ಬ್ಯಾಂಕ್ ನಲ್ಲಿ ಮಾಡುವ ಕೆಲಸ ಒಬ್ಬನಿಗೆ ಮೇಲು ಎಂದೆಣಿಸಿದರೆ, ಇನ್ನೊಬ್ಬನಿಗೆ ಮೇಲು ಎನಿಸದಿರಲೂಬಹುದು. ಆದರೆ ಕೆಲಸದಲ್ಲಿ ಮೇಲು ಕೀಳಿಲ್ಲ. ಕರ್ಮ ಪ್ರೀತಿಯುಳ್ಳವರಿಗೆ ಪ್ರತಿಯೊಂದು ಕೆಲಸವೂ ಶ್ರೇಷ್ಠವೇ ಆಗಿರುತ್ತದೆ.
ಭಗವದ್ಗೀತೆಯಲ್ಲಿ ಭಗವಾನ್ ಶ್ರೀಕೃಷ್ಣನು ಕರ್ಮದ ಬಗ್ಗೆ ಮಾಡಿರುವ, “ಕರ್ಮಣ್ಯೇ ವಾಧಿಕಾರಸ್ತೇ ಮಾಫಲೇಷು ಕದಾಚನ|” ಎಂಬ ಸೊಳ್ನುಡಿಯೂ ಕರ್ಮವನ್ನು ಮಾಡು, ಕರ್ಮದ ಫಲವನ್ನು ಬಯಸಬೇಡ ಎನ್ನುವಲ್ಲಿ ಕರ್ಮ ಮಾಡುವಾಗ ಸ್ವಾರ್ಥವಿರಕೂಡದು, ನಿಸ್ಪ್ರಹತೆಯಿರಬೇಕೆಂಬ ಸಂದೇಶವಿದೆ. ಫಲಾಪೇಕ್ಷೆಯೆಂಬುದು ಲಾಭದ ಲೆಕ್ಕಾಚಾರವಾಗುತ್ತದೆ. ಲಾಭದ ಬಯಕೆಯಿದ್ದಾಗ ಹೆಚ್ಚು ಲಾಭದ ಬಯಕೆಯೇ ಧ್ವನಿಸುತ್ತದೆ. ಆಗ ತನ್ನಿಂದ ತಾನಾಗಿಯೇ ಕರ್ಮಪ್ರೀತಿ ಜಾರುತ್ತದೆ, ಲಾಭಪ್ರೀತಿ ಚಿಗುರುತ್ತದೆ. ಲಾಭರಹಿತ ಮತ್ತು ಪ್ರೀತಿ ಸಹಿತವಿರುವ ಕರ್ಮವೇ ಉತ್ತುಂಗವಾಗಿದೆಯೆಂಬುದಕ್ಕೆ ಬೇರೆ ನಿದರ್ಶನದ ಅಗತ್ಯವಿಲ್ಲ ತಾನೇ....?.
ಮಾನವನಿಗೆ ಜೀವನದಲ್ಲಿ ಪ್ರನಮುಖವಾಗಿ ಮೂರು ಬಯಕೆಗಳಿರುತ್ತವೆ. |ಅನಾಯೇಸನ ಮರಣಂ| ವಿನಾ ದೈನ್ಯೇನ ಜೀವನಂ| ದೇಹಾಂತ್ಯಂತವ ಸಾನಿಧ್ಯಂ ದೇಹಿ ಮೇ ಪರಮೇಶ್ವರಂ|| ಈ ಶ್ಲೋಕದಲ್ಲಿ ಆಯಾಸವಿರದ ಮರಣ ತನಗೆ ಬರಲಿ, ಯಾರ ಹಂಗಿಗೂ ಒಳಗಾಗದ ಬದುಕು ತನಗೊದಗಲಿ, ಸಾವಿನ ವೇಳೆಯಲ್ಲಿ ಭಗವಂತನ ನೆರವು ಅಥವಾ ಸಾಮಿಪ್ಯತೆ ತನಗೆ ಕೂಡಿ ಬರಲಿ ಎಂಬ ಹಂಬಲಗಳಿವೆ. ಸುಖದ ಸಾವು ಆರೋಗ್ಯಶಾಲಿಗೆ ಮಾತ್ರ ಹೆಚ್ಚು ಖಚಿತ. ಆರೋಗ್ಯ ಬೇಕಾದರೆ ದುಡಿಮೆಗಿಂತ ಮಿಗಿಲಾದ ಔಷಧವಿಲ್ಲ. ಜೀವನ ನಿರ್ವಹಣೆಗೆ ದೈನ್ಯತೆಯಿಂದ ಬೇಡುವ ಪರಿಸ್ಥಿತಿ ಬರಬಾರದೆಂದಾದರೆ ಕಾಯಕದ ಮೂಲಕ ಮಾತ್ರವೇ ಸಾಧ್ಯ. ಕಾಯಕವಿದ್ದಲ್ಲಿ ಕೈಲಾಸ ಎಂದರೆ ದುಡಿಮೆಯವನ ಜೊತೆ ಪರಮೇಶ್ವರನಿದ್ದೇ ಇರುತ್ತಾನೆ ಎಂದಾಯಿತು. ಬದುಕಿನ ಮೂರೂ ಬಯಕೆಗಳಾದ ಸುಖ ಮರಣ, ಸುಖ ಜೀವನ ಮತ್ತು ಮರಣದಲ್ಲೂ ಭಗವಂತನ ಸಾನಿಧ್ಯ ಸಾಕಾರಗೊಳ್ಳಲು ಕರ್ಮವೇ ತಳಹದಿಯೆಂದು ತಿಳಿಯುತ್ತದೆ ಅಲ್ಲವೇ?
ಬದುಕೆಂಬುದು ಸಾಧನಾ ಮಾರ್ಗ. ಸಾಧನೆ ಮಾಡಲಾಗದವರ ಬದುಕನ್ನು ಸಾರ್ಥಕ ಬದುಕು ಎನ್ನುವಂತಿಲ್ಲ. ಹಾಗಾದರೆ ಸಾಧನೆಯೆಂದರೇನು? ಪ್ರಸಿದ್ಧಿಯಾಗುವುದೊಂದೇ ಸಾಧನೆಯಲ್ಲ. ಪುರುಷಾರ್ಥಗಳನ್ನು ಈಡೇರಿಸುವುದೇ ಸಾಧನೆ. ಅದರಲ್ಲಿ ಪ್ರಮುಖವಾಗಿ ಧರ್ಮ ಆಧಾರಿತವಾದ ಬದುಕು, ಅಗತ್ಯಕ್ಕೆ ಬೇಕಾದ ಸಂಪಾದನೆ, ಬಯಕೆಗಳ ಕೈಗೂಡಿಸುವಿಕೆ, ನಂತರದಲ್ಲಿ ಭಗವಂತನ ಕೃಪಾಕಟಾಕ್ಷ ಇವೇ ಸಾಧನಾ ಕ್ಷೇತ್ರಗಳು. ಆದರೆ ಇವೆಲ್ಲವೂ ಈಡೇರಲು ಕಾಯಕವೇ ತಳಹದಿ. ಕೆಲವೊಮ್ಮೆ ನಾವು ಕೈಗೊಳ್ಳುವ ಕಾಯಕಗಳು ಸಮಾಜಕ್ಕೆ ಬಲು ದೊಡ್ಡ ಕೊಡುಗೆಯಾಗಲೂಬಹುದು, ಅಥವಾ ವೈಯಕ್ತಿಕ ಪ್ರಯೋಜನಗಳಿಗಷ್ಟೇ ಹೇತುವಾಗಬಹುದು. ಸಮಾಜೋಪಯೋಗಿಯಾದ ಕಾಯಕವು ಜನಪ್ರಿಯತೆ ಮತ್ತು ಪ್ರಸಿದ್ಧಿಗೆ ಕಾರಣವಾಗುತ್ತದೆ. ಪ್ರಸಿದ್ಧಿಯು ಉತ್ತಮ ಕೆಲಸಗಳಿಂದಾಗಿ ಒದಗಬೇಕೇ ಹೊರತು ಕಿತ್ತು ಪಡೆದುದಾಗಿರಬಾರದು. ಅದಕ್ಕಾಗಿಯೇ ಕರ್ಮ ಪ್ರೀತಿಯು ಜನಮುಖಿಯಾಗಿರಬೇಕು, ಜನಮನ್ನಣೆಗೆ ತಕ್ಕುದಾಗಿರಬೇಕು...
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
********************************************