-->
ಜೀವನ ಸಂಭ್ರಮ : ಸಂಚಿಕೆ - 39

ಜೀವನ ಸಂಭ್ರಮ : ಸಂಚಿಕೆ - 39

 ಜೀವನ ಸಂಭ್ರಮ : ಸಂಚಿಕೆ - 39
                       
                  ಸುಂದರ ಮನಸ್ಸು 
                  -----------------------             
      ಮಕ್ಕಳೇ... ಇಂದು ನಾವು ಸುಂದರ ಮನಸ್ಸಿನ ಬಗ್ಗೆ ತಿಳಿದುಕೊಳ್ಳೋಣ. ಈ ಲೇಖನವನ್ನು ಪೂಜ್ಯ ಸಿದ್ದೇಶ್ವರ ಸ್ವಾಮಿಗಳ ಪ್ರವಚನದಲ್ಲಿ ಹೇಳಿದ್ದ ಕೆಲವು ಅಂಶಗಳನ್ನು ಆಯ್ದು ಬರೆಯಲಾಗಿದೆ. ನಾವು ಮನುಷ್ಯರು, ಮನುಷ್ಯ ಎಂದರೆ ಮನಸ್ಸು ಇರುವವನು ಎಂದರ್ಥ. ಮನಸ್ಸು ಇಲ್ಲದ ಮನುಷ್ಯರಿಲ್ಲ. ಮನಸ್ಸಿಗೆ ಆಕಾರವಿಲ್ಲ. ರೂಪವಿಲ್ಲ. ಅದನ್ನು ಚಿತ್ರಿಸಲು ಸಾಧ್ಯವಿಲ್ಲ. ವರ್ಣಿಸಲು ಸಾಧ್ಯವಿಲ್ಲ. ಅದು ಎಲ್ಲಿದೆ ಎಂದು ಗೊತ್ತಿಲ್ಲ. ಆದರೆ ಅದು ಇಡೀ ದೇಹವನ್ನು ಆವರಿಸಿದೆ. ಆದರೆ ಮನಸ್ಸಿನ ಸಾಮರ್ಥ್ಯ ಅಗಾಧ. ಮನಸ್ಸು ಭೂಮಿಯಷ್ಟು ವಿಶಾಲವಾಗಬಲ್ಲದು, ದೊಡ್ಡದಾಗಬಲ್ಲದು. ಅಷ್ಟೇ ಸೂಕ್ಷ್ಮ ಚಿಕ್ಕದಾಗಬಲ್ಲದು. ಒಂದು ಸಣ್ಣ ಚಿತ್ರವನ್ನು ನೋಡಿ ಕಣ್ಣು ಮುಚ್ಚಿಕೊಳ್ಳಿ. ಅಷ್ಟೇ ಗಾತ್ರದ ಚಿತ್ರ ಮನಸ್ಸಿನಲ್ಲಿ ಮೂಡುತ್ತದೆ. ಅಂದರೆ ಕಣ್ಣು ಚಿಕ್ಕದಾಗಿದ್ದರೂ ಮನಸ್ಸು ಗ್ರಹಿಸಿ ವ್ಯಾಪಿಸಬಲ್ಲದು. ಮನೆ ಎನ್ನುವ ಪದ ಕೇಳಿದ ತಕ್ಷಣ ಮನೆಯ ಚಿತ್ರ ಮನಸ್ಸಿನಲ್ಲಿ ಮೂಡುತ್ತದೆ. ಅದೇ ರೀತಿ ಸೊಳ್ಳೆ ಅಂದ ತಕ್ಷಣ ಸೊಳ್ಳೆ ಗಾತ್ರದ ಸೊಳ್ಳೆ ಚಿತ್ರ ಮನಸ್ಸಿನಲ್ಲಿ ಮೂಡುತ್ತದೆ. ಆದ್ದರಿಂದ ಮನಸ್ಸನ್ನು ಸರಿಯಾಗಿ ಬಳಸಿದರೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಮನಸ್ಸಿನಲ್ಲಿ ಸಾಮರ್ಥ್ಯಗಳು ಅಗಾಧವಾದರೂ ಪ್ರಮುಖವಾಗಿ ನಾಲ್ಕು ಸಾಮರ್ಥ್ಯಗಳನ್ನು ಗುರುತಿಸಿದ್ದಾರೆ.
1. ಭಾವ ಸಾಮರ್ಥ್ಯ
2. ಸ್ಮರಣ ಸಾಮರ್ಥ್ಯ
3. ಜ್ಞಾನ ಸಾಮರ್ಥ್ಯ
4. ಕಲ್ಪನಾ ಸಾಮರ್ಥ್ಯ
    ಭಾವ ಸಾಮರ್ಥ್ಯ: (ಭಾವನೆಗಳು) ವಸ್ತುಗಳನ್ನು ನೋಡಿದಾಗ , ವಿಷಯ ಕೇಳಿದಾಗ , ವಸ್ತುಗಳನ್ನು ಸ್ಪರ್ಶಿಸಿದಾಗ , ಆಹಾರದ ರುಚಿ ಸವಿದಾಗ , ಗಂಧದ (ಸುಗಂಧ ಮತ್ತು ದುರ್ಗಂಧದ) ವಾಸನೆ ಸವಿದಾಗ , ಸ್ಪರ್ಶ ಹಿತ ಇದ್ದರೆ ಹಿತಭಾವ ಉಂಟಾಗುತ್ತದೆ, ಸಂತೋಷವಾಗುತ್ತದೆ. ಅಹಿತವಾಗಿದ್ದರೆ ದುಃಖ , ಸಂಕಟ ಮತ್ತು ನೋವಾಗುತ್ತದೆ. ಭಾವಗಳನ್ನು ಧನಾತ್ಮಕ ಭಾವ ಮತ್ತು ಋಣಾತ್ಮಕ ಭಾವ ಎಂದು ವರ್ಗೀಕರಿಸಬಹುದು.
    1. ಧನಾತ್ಮಕ ಭಾವಗಳು : ಪ್ರೀತಿ , ಪ್ರೇಮ , ಮಮತೆ ಮತ್ತು ಕರುಣೆ ಮುಂತಾದವುಗಳು.
    2. ಋಣಾತ್ಮಕ ಭಾವಗಳು: ನಾನು, ನನ್ನದು , ಕಾಮ , ಕ್ರೋಧ ಲೋಭ , ಮದ ಮತ್ತು ಮತ್ಸರ ಮುಂತಾದವುಗಳು. ನಾನು ಎಂದರೆ ಅಹಂ. ನನ್ನದು ಎಂದರೆ ಮಮ ಅಂದರೆ ಭೂಮಿ , ಮನೆ , ಚಿನ್ನ , ಬೆಳ್ಳಿ , ಒಡವೆ , ಮುತ್ತು , ರತ್ನ , ಹೆಂಡತಿ , ಮಕ್ಕಳು , ಕುಟುಂಬ , ಅಧಿಕಾರ ಮತ್ತು ಅಂತಸ್ತು ಹೊಂದಿರುವುದು. ಇದೆಲ್ಲವೂ ನನ್ನದು ಎನ್ನುವುದು. ನನ್ನದು ಎನ್ನುವ ಅಂಶಗಳು ಕಡಿಮೆ ಇದ್ದಾಗ , ನಾನು ಎನ್ನುವ ಅಹಂ ಕಡಿಮೆ ಇರುತ್ತದೆ. ನನ್ನದು ಎನ್ನುವ ಅಂಶ ಜಾಸ್ತಿ ಆದಾಗ, ನಾನು ಎನ್ನುವ ಅಹಂ ಹೆಚ್ಚಾಗುತ್ತದೆ. ಆದರೆ ನನ್ನದು ಎನ್ನುವ ಯಾವ ವಸ್ತುಗಳು ಕಾಯಂ ಆಗಿ ನಮ್ಮ ಬಳಿ ಇರುವುದಿಲ್ಲ ಎನ್ನುವ ಸತ್ಯ ತಿಳಿದಿದ್ದರೆ , ನಾನು ನನ್ನದು ಎನ್ನುವ ಭಾವ ಕಡಿಮೆಯಾಗಿ ಮನಸ್ಸು ಸುಂದರವಾಗುತ್ತದೆ. ಹಾಗೆಯೇ ಕಾಮ , ಕ್ರೋಧ , ಲೋಭ , ಮದ ಮತ್ತು ಮತ್ಸರ ಹೆಚ್ಚಾದಂತೆ , ಸುಂದರ ಮನಸ್ಸು ಹಾಳಾಗುತ್ತದೆ.
ಆದ್ದರಿಂದ ನೋಟ , ಧ್ವನಿ , ರುಚಿ , ಸ್ಪರ್ಶ ಮತ್ತು ವಾಸನೆ ಮನಸ್ಸಿಗೆ ಹಿತಕರವಾಗಿರುವಂತೆ ಆಯ್ದುಕೊಂಡಾಗ , ಮನಸ್ಸು ಪ್ರಫುಲ್ಲವಾಗಿ ಸಂತೋಷದ , ಆನಂದದ ಅನುಭವವಾಗಿ , ಸುಂದರ ಮನಸ್ಸು ರೂಪಗೊಳ್ಳುತ್ತದೆ. ಸುಂದರ ಮನಸ್ಸು ರೂಪುಗೊಳ್ಳಲು ಭಾವನೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಭಾವನೆಗಳು ರೂಪುಗೊಳ್ಳುವುದು ಮನಸ್ಸಿನಲ್ಲಿಯೇ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.
       ನೆನಪಿನ ಸಾಮರ್ಥ್ಯ: ನಿಸರ್ಗ ನಮಗೆ ನೆನಪು ಹಾಗೂ ಮರೆವು ಎನ್ನುವ ಎರಡು ಸಂಪತ್ತುಗಳನ್ನು ನೀಡಿದೆ. ಯಾವುದೇ ಘಟನೆ , ವಿಷಯ ನೆನಪಿನಲ್ಲಿರಲು ಅದು ಹಿತಕರವಾದ ಸಂತೋಷವನ್ನುಂಟು ಮಾಡಬೇಕು ಹಾಗೂ ಅದು ಅನುಭವವಾಗಬೇಕು. ಯಾವುದೇ ವಿಷಯ ಅಥವಾ ಘಟನೆ ನೋಡಿದಾಗ , ಕೇಳಿದಾಗ ಅಥವಾ ವಸ್ತುವನ್ನು ಸ್ಪರ್ಶಿಸಿದಾಗ , ಮುಟ್ಟಿದಾಗ , ಚಟುವಟಿಕೆಯನ್ನು ಮಾಡುವಾಗ , ಮನಸ್ಸಿಟ್ಟು ಮಾಡಬೇಕು. ಆಗ ನಮಗೆ ಸಂತೋಷದ ಭಾವ ಮೂಡುತ್ತದೆ. ಸಂತೋಷದ ಅನುಭವವಾಗುತ್ತದೆ. ಅದು ನೆನಪಿನಲ್ಲಿ ಉಳಿಯುತ್ತದೆ ಮತ್ತು ಹೆಚ್ಚು ಹೆಚ್ಚು ಮನಸ್ಸಿಟ್ಟು ಪುನರಾವರ್ತನೆ ಮಾಡಿದಾಗ ನೆನಪಿನಲ್ಲಿ ಉಳಿಯುತ್ತದೆ. ನಮಗೆ ಮರೆವು ಇಲ್ಲದಿದ್ದರೆ ಜೀವನದಲ್ಲಿ ಕಹಿ ಘಟನೆಗಳು ನಮ್ಮನ್ನು ಸದಾ ಕಾಡಿ ಜೀವನವನ್ನು ನರಕವನ್ನಾಗಿ ಮಾಡುತ್ತಿತ್ತು. ಮನುಷ್ಯ ಆನಂದವಾಗಿರಲಿ ಎಂದು ಕಹಿ ಘಟನೆಯನ್ನು ಮರೆಯಲು ನಿಸರ್ಗ ಮರೆವು ಎನ್ನುವ ವ್ಯವಸ್ಥೆ ಮಾಡಿದೆ. ಹಾಗಾಗಿ ಮರೆವನ್ನು ದೂರಬಾರದು. ಭಾವನೆಗಳು ಮೂಡುವುದು ಮನಸ್ಸಿನಲ್ಲೇ ಆದುದರಿಂದ ಮನಸ್ಸನ್ನು ಚೆನ್ನಾಗಿ ಬಳಸಬೇಕು.
        ಜ್ಞಾನ ಸಾಮರ್ಥ್ಯ : ಕಣ್ಣು , ಕಿವಿ, ಮೂಗು, ನಾಲಿಗೆ ಮತ್ತು ಚರ್ಮವನ್ನು ಪಂಚೇಂದ್ರಿಯಗಳು ಎನ್ನುತ್ತೇವೆ. ಇವೇ ಜ್ಞಾನೇಂದ್ರಿಯಗಳು. ಇವುಗಳ ಮೂಲಕವೇ ಜ್ಞಾನ ಆಗುವುದು. ಸುಂದರವಾದ ರೂಪ , ದೃಶ್ಯ ಮತ್ತು ವರ್ಣಗಳನ್ನು , ಘಟನೆಗಳನ್ನು , ಪ್ರಸಂಗಗಳನ್ನು , ಪ್ರಯೋಗಗಳನ್ನು ಮತ್ತು ಚಟುವಟಿಕೆಗಳನ್ನು ನೋಡಿ ನೋಟಕ್ಕೆ ಸಂಬಂಧಿಸಿದ ಜ್ಞಾನವನ್ನು ಕಣ್ಣಿನಿಂದ ಪಡೆಯುತ್ತೇವೆ. ಶಬ್ದ , ಕಥೆಗಳು , ಪ್ರಸಂಗಗಳು ಮತ್ತು ಘಟನೆಗಳನ್ನು ಕೇಳಿ ಶಬ್ದಕ್ಕೆ ಸಂಬಂಧಿಸಿದ ಜ್ಞಾನವನ್ನು ಕಿವಿಗಳಿಂದ ಪಡೆಯುತ್ತೇವೆ. ಗಂಧದ (ಸುಗಂಧ ಮತ್ತು ದುರ್ಗಂಧ) ವಾಸನೆ ಪಡೆದು ವಾಸನೆಗೆ ಸಂಬಂಧಪಟ್ಟ ಜ್ಞಾನವನ್ನು ಮೂಗಿನಿಂದ ಪಡೆಯುತ್ತೇವೆ. ರುಚಿಯಾದ ಹಣ್ಣು , ಹಂಪಲು , ಆಹಾರದ ರುಚಿಗೆ ಸಂಬಂಧಿಸಿದ ಜ್ಞಾನವನ್ನು ನಾಲಿಗೆಯಿಂದ ಪಡೆಯುತ್ತೇವೆ. ಶೀತ , ಉಷ್ಣ , ಸೆಕೆ, ಮೃದು ಮತ್ತು ಕಠಿಣ ಮುಂತಾದ ಸ್ಪರ್ಶ ಜ್ಞಾನವನ್ನು ಚರ್ಮದಿಂದ ಪಡೆಯುತ್ತೇವೆ. ಯಾವುದೇ ಜ್ಞಾನ ಪಡೆಯಲು ಮನಸ್ಸು ಅದರಲ್ಲಿ ಲೀನವಾಗಬೇಕು , ಮಿಳಿತವಾಗ ಬೇಕು. ಮನಸ್ಸು ಲೀನವಾದಾಗ ಭಾವ ಅದರಲ್ಲಿ ಬರುತ್ತದೆ , ಅಂದರೆ ಸಂತೋಷ , ದುಃಖ ಮುಂತಾದ ಭಾವ ಮೂಡುತ್ತದೆ. ಆಗ ಅದು ನಮಗೆ ಸುಖ ಅಥವಾ ದುಃಖದ ಅನುಭವವಾಗುತ್ತದೆ. ಅನುಭವವಿಲ್ಲದ ಜ್ಞಾನ ಜ್ಞಾನವಲ್ಲ. ಅದಕ್ಕಾಗಿ ಶಿಕ್ಷಕರು ಹೊರಸಂಚಾರ , ಪ್ರಯೋಗ , ಪಾಠೋಪಕರಣ , ನಕ್ಷೆ , ಚಾರ್ಟ್ , ಭೂಪಟ ಮತ್ತು ಆಟಿಕೆಗಳನ್ನು ಪಾಠದಲ್ಲಿ ಬಳಸುತ್ತಿರುತ್ತಾರೆ. ಉನ್ನತ ತರಗತಿಗಳಲ್ಲಿ ಪ್ರಾಯೋಗಿಕ ತರಗತಿ , ಬೋಧನಾ ತರಗತಿ ಇರುವುದು ಅನುಭವ ಪಡೆಯಲೆಂದೇ. ಒಂದು ಮೋಟರ್ ಅಥವಾ ವಾಹನ ಕೆಟ್ಟು ನಿಂತಾಗ , ಮೆಕಾನಿಕ್ ಕರೆಸುತ್ತೇವೆ , ಆತನ ಕೈಯಲ್ಲಿ ರಿಪೇರಿ ಆಗಲಿಲ್ಲ ಎಂದಾಗ ಅನುಭವಿ ಮೆಕಾನಿಕ್ ಕರೆಸಿ ರಿಪೇರಿ ಮಾಡಿಸುತ್ತೇವೆ. ಅನುಭವಕ್ಕೆ ಹೆಚ್ಚು ಬೆಲೆ. ಅಂದರೆ ಅನುಭವವಾದಾಗ ಅದರ ಬಗ್ಗೆ ಸ್ಪಷ್ಟ ಚಿತ್ರಣ ಇರುತ್ತದೆ. ಅದಕ್ಕಾಗಿ ಕಲಿಕೆ ಅನುಭವವಾಗಬೇಕು. ಅನುಭವವಾಗುವುದು ಮನಸ್ಸಿನಲ್ಲೇ. ಆದುದರಿಂದ ಮನಸ್ಸನ್ನು ಚೆನ್ನಾಗಿ ಬಳಸಬೇಕು.
      ಕಲ್ಪನಾ ಸಾಮರ್ಥ್ಯ : ಇಂದು ನಾವು ನೋಡುತ್ತಿರುವ ಸುಂದರ ಜಗತ್ತಿನಲ್ಲಿ ಬೃಹತ್ ಕಟ್ಟಡ, ಬೃಹತ್ ಅಣೆಕಟ್ಟು, ಸುಂದರ ವನ , ವಿಮಾನ , ಕಾರು ಒಂದೇ ಎರಡೇ ಪಟ್ಟಿಮಾಡಲು ಆಗದಷ್ಟು ,ಇವು ಸುಂದರ ಮನಸ್ಸಿನ ಕಲ್ಪನಾ ಸಾಮರ್ಥ್ಯ. ಮಕ್ಕಳೇ ಸುಂದರ ಮನಸ್ಸನ್ನು ಸರಿಯಾಗಿ ಬಳಸಿದರೆ ಎಂತಹ ಅದ್ಭುತ ಸಾಧನೆ ಮಾಡಬಹುದು. ನಮ್ಮ ಜೀವನ ಸುಂದರ , ಸುಮಧುರ , ಮತ್ತು ಸುಮನೋಹರ ಆಗಲು ಮನಸ್ಸನ್ನು ಸರಿಯಾಗಿ ಬಳಸಬೇಕು ಅಲ್ಲವೇ....?
.........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************

Ads on article

Advertise in articles 1

advertising articles 2

Advertise under the article