
ಹಕ್ಕಿ ಕಥೆ : ಸಂಚಿಕೆ - 51
Tuesday, June 14, 2022
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿಕಥೆಗೆ ಸ್ವಾಗತ.. ಈಗಷ್ಟೇ ಮುಂಗಾರು ಮಳೆ ಬೀಳಲು ಪ್ರಾರಂಭವಾಗಿದೆ.. ಮಳೆ ತನ್ನ ಜೊತೆಗೆ ಇಡೀ ಪರಿಸರಕ್ಕೇ ಹೊಸ ಜೀವಂತಿಕೆಯನ್ನು ತರುತ್ತದೆ. ಅಷ್ಟುದಿನ ಒಣಗಿ ಮಂಕಾಗಿ ಸತ್ತೇ ಹೋಗಿತ್ತೇನೋ ಎಂಬಂತೆ ಕಾಣುತ್ತಿದ್ದ ಹುಲ್ಲು ಒಂದೇ ಮಳೆಗೆ ಮತ್ತೆ ಚಿಗುರಿ ಹಚ್ಚಹಸಿರಾಗಿ ಕಂಗೊಳಿಸುತ್ತದೆ. ಕಪ್ಪೆಗಳು ವಟರ್ ವಟರ್ ಎಂದು ಕೂಗಲಾರಂಭಿಸುತ್ತವೆ. ರಾತ್ರಿ ಮನೆಯ ಬೆಳಕಿಗೆ ಹಾತೆಗಳು ಹಾರಿಬಂದು ಮುತ್ತಿಕೊಳ್ಳುತ್ತವೆ. ಅವುಗಳನ್ನು ತಿನ್ನಲು ಹಲ್ಲಿಗಳು ಹೊಂಚುಹಾಕಿ ಕಾಯುತ್ತವೆ. ಅದುವರೆಗೂ ಕಾಣಸಿಗದ ನೂರಾರು ಕಾಲಿನ ಬಣ್ಣ ಬಣ್ಣದ ಜೀವಿಗಳು ಓಡಾಡಲಾರಂಭಿಸುತ್ತವೆ. ಕಾಲೇ ಇಲ್ಲದ ಮುಟ್ಟಿದರೆ ಅಂಟು ಅಂಟಾಗುವ ಹುಳಗಳೂ ಪ್ರತ್ಯಕ್ಷವಾಗಿಬಿಡುತ್ತವೆ. ಹೀಗೆ ಒಮ್ಮೆಗೇ ಜೀವಂತವಾಗಿಬಿಡುವ ಪ್ರಕೃತಿಯಲ್ಲಿ ಸಿಗುವ ಆಹಾರವನ್ನು ಅವಲಂಬಿಸಿ ಹಲವು ಬಗೆಯ ಜೀವಿಗಳು ತಮ್ಮ ಸಂತಾನೋತ್ಪತ್ತಿ ಕಾಲವನ್ನು ಮಳೆಗಾಲಕ್ಕೆ ಸರಿಯಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತವೆ. ನೀರಿನಲ್ಲಿ ಬದುಕುವ ಜೀವಿಗಳನ್ನೇ ಆಹಾರವಾಗಿ ಬಳಸುವ ಕಲವಾರು ಪಕ್ಷಿಗಳು ಇದೇ ಕಾಲಕ್ಕೆ ಸಂತಾನೋತ್ಪತ್ತಿ ಮಾಡುತ್ತವೆ. ಮದುವೆ ಸಮಾರಂಭ ಬಂತು ಎಂದರೆ ಗಂಡು ಹೆಣ್ಣು ಇಬ್ಬರೂ ವಿಶೇಷವಾದ ಉಡುಗೆ ತೊಟ್ಟು ಸಂಭ್ರಮಿಸುವುದನ್ನು ನಾವೆಲ್ಲ ನೋಡಿದ್ದೇವೆ. ಬಹುಷಃ ಈ ಪದ್ಧತಿಯನ್ನು ಮನುಷ್ಯ ಕಲಿತದ್ದು ಹಕ್ಕಿಗಳಿಂದ ಎಂಬುದು ನನ್ನ ಭಾವನೆ.
ಮೈಯೆಲ್ಲ ಬಿಳೀ ಬಣ್ಣದ ಗರಿಗಳು ಇರುವ ಈ ಹಕ್ಕಿಯನ್ನು ಕನ್ನಡದಲ್ಲಿ ಬೆಳ್ಳಕ್ಕಿಗಳು ಎಂದು ಕರೆಯುತ್ತಾರೆ. ಬಿಳೀ ಹಕ್ಕಿಯೇ ಬೆಳ್ಳಕ್ಕಿ ಆಗಿದೆ. ಉದ್ದನೆಯ ಕಪ್ಪು ಕಾಲುಗಳು. ಕೆಲವಕ್ಕೆ ಪಾದ ಮಾತ್ರ ಹಳದಿ. ಕತ್ತಿನ ಗಾತ್ರ ಕೆಲವದರದ್ದು ಉದ್ದ , ಕೆಲವದರದ್ದು ಗಿಡ್ಡ. ಬೆಳ್ಳಕ್ಕಿಗಳಲ್ಲಿ ಗಾತ್ರದ ಆಧಾರದಲ್ಲಿ ಸುಮಾರು ಮೂರರಿಂದ ಐದು ಪ್ರಬೇಧಗಳು ಇವೆ ಎಂದು ಹೇಳುತ್ತಾರೆ. ನಮ್ಮ ಕರಾವಳಿ ಭಾಗದಲ್ಲಿ ಬಹಳ ಸಾಮಾನ್ಯವಾಗಿ ಕಾಣಸಿಗುವುದು ಸಣ್ಣ ಬೆಳ್ಳಕ್ಕಿ. ಬಿಳೀ ಬಣ್ಣದ ದೇಹ, ಕಪ್ಪು ಬಣ್ಣದ ಕೊಕ್ಕು, ಕಪ್ಪು ಬಣ್ಣದ ಕಾಲುಗಳು, ಪಾದಗಳು ಮಾತ್ರ ಹಳದಿ ಬಣ್ಣ. ಸಂತಾನೋತ್ಪತ್ತಿ ಕಾಲದಲ್ಲಿ ಕುತ್ತಿಗೆ, ಬೆನ್ನಿನ ಭಾಗದಲ್ಲಿ ಹೆಚ್ಚುವರಿ ಗರಿಗಳು ಮೂಡುತ್ತವೆ. ತಲೆಯ ಹಿಂದೆ ಬಿಳೀ ಜುಟ್ಟಿನಂತಹ ರಚನೆಗಳಿಂದ ಈ ಹಕ್ಕಿಯನ್ನು ಸುಲಭವಾಗಿ ಗುರುತಿಸಬಹುದು.
ಕೆರೆ, ನೀರಿನ ಆಶ್ರಯಗಳ ಆಸುಪಾಸಿನಲ್ಲಿ ಓಡಾಡುತ್ತಾ ಮೀನು ಹಿಡಿಯುತ್ತಿರುತ್ತವೆ. ಮಳೆಗಾಲದ ಆಸುಪಾಸಿನಲ್ಲೇ ಇವುಗಳಿಗೂ ಸಂತಾನೋತ್ಪತ್ತಿ ಕಾಲ. ಮರಗಳ ಮೇಲೆ ಒಣಗಿದ ಕಟ್ಟಿಗೆಗಳನ್ನು ಪೇರಿಸಿ ಅಟ್ಟಳಿಗೆಯಂತಹ ಗೂಡು ಮಾಡಿ ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಮರಿ ಮಾಡುವ ಕಾಲದಲ್ಲಿ ಒಂದೇ ಮರದ ಮೇಲೆ ಹತ್ತಾರು ಗೂಡುಗಳು ಇರುತ್ತವೆ. ಹೀಗೆ ಒಟ್ಟಾಗಿರುವುದರಿಂದ ಹೆಚ್ಚು ರಕ್ಷಣೆ ಸಿಗುತ್ತದೆ. ನಿಮ್ಮ ಆಸುಪಾಸಿನಲ್ಲೂ ಈ ಹಕ್ಕಿ ಖಂಡಿತಾ ಕಾಣಸಿಗುತ್ತದೆ..
ಕನ್ನಡ ಹೆಸರು : ಸಣ್ಣ ಬೆಳ್ಳಕ್ಕಿ
ಇಂಗ್ಲೀಷ್ ಹೆಸರು: Little Egret
ವೈಜ್ಞಾನಿಕ ಹೆಸರು: Egretta garzetta
ಛಾಯಾಚಿತ್ರ : ಅರವಿಂದ ಕುಡ್ಲ
ಮುಂದಿನವಾರ ಇನ್ನೊಂದು ಹೊಸ ಹಕ್ಕಿ ಕಥೆಯೊಂದಿಗೆ ಸಿಗೋಣ.. ಬಾಯ್..
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************