
ಚಿತ್ರ ಬರಹ : ಕಾರ್ಟೂನ್
Wednesday, June 1, 2022
Edit
ಪ್ರತೀಕ್ಷಾ ಮರಕಿಣಿ
ದ್ವಿತೀಯ ಪಿಯುಸಿ
ಶೇಷಾದ್ರಿಪುರಂ ಕಾಂಪೋಸಿಟ್
ಪಿ.ಯು ಕಾಲೇಜ್, ಬೆಂಗಳೂರು
ಕಾರ್ಟೂನ್
--------------
"ಕಾರ್ಟೂನ್" ಮಕ್ಕಳ ಪಾಲಿಗೆ ಪ್ರಪಂಚ.
ಕಾರ್ಟೂನ್ ಹೆಸರು ಕೇಳಿದರೆ ಸಾಕು ಮಕ್ಕಳು ಆನಂದದಿಂದ ಕುಣಿದಾಡುತ್ತಾರೆ. ಟಿವಿಯಲ್ಲಿ ಬರುವ ಕಾರ್ಟೂನ್ ಮಕ್ಕಳಿಗಂತು ಅಚ್ಚುಮೆಚ್ಚು. ಕಾರ್ಟೂನ್ ಯಾವ ವಿಷಯದ ಕುರಿತಾದರೂ ಇರಬಹುದು. ಕಾರ್ಟೂನ್ಗಳು ತಕ್ಕಮಟ್ಟಿಗೆ ಒಳ್ಳೆಯ ಕಲಿಕೆ , ಬುದ್ಧಿಮಾತು, ಭಾಷಾ ಜ್ಞಾನ ಇತ್ಯಾದಿಗಳನ್ನು ಮಕ್ಕಳಲ್ಲಿ ತುಂಬುವ ಪ್ರಯತ್ನ ಮಾಡುತ್ತವೆ ಅಂತಿದ್ದರೂ ಅತಿಯಾಗಿ ಕಾರ್ಟೂನ್ ನೋಡುವುದರಿಂದ ಆಗುವ ತೊಂದರೆಗಳೇ ಹೆಚ್ಚು.
ಈಗ ಅದೆಷ್ಟು ಕಾರ್ಟೂನ್ ಗಳು ಇವೆಯೋ ಏನೋ. ನಾನು ಚಿಕ್ಕವಳಿದ್ದಾಗ 'ಡಿಸ್ನಿ ಚಾನೆಲ್' ನಲ್ಲಿ ಬರುತ್ತಿದ್ದ ಮಿಕ್ಕಿ ಮೌಸ್ ಕಾರ್ಟೂನ್ ಅನ್ನು ಬಹಳ ಇಷ್ಟ ಪಡುತ್ತಿದ್ದೆ. ಬೆಳಿಗ್ಗೆ ಮಿಕ್ಕಿ ಮೌಸ್ ನೋಡುತ್ತಲೇ ತಿಂಡಿ ತಿಂದು ಆಮೇಲೆ ಶಾಲೆಗೆ ಹೋಗುತ್ತಿದ್ದೆ. ನನಗೆ ನೆನಪಿರುವಂತೆ ಕೆಲವರು 'ಟಿವಿ ರಿಮೋಟ್ ' ಬ್ಯಾಗಿನಲ್ಲಿ ಇಟ್ಟುಕೊಂಡು ಶಾಲೆಗೆ ಬರುತ್ತಿದ್ದರು. ಇಲ್ಲವಾದರೆ ರಿಮೋಟ್ ಅನ್ನು ಮನೆಯಲ್ಲಿ ಎಲ್ಲಾದರೂ ಅಡಗಿಸಿಟ್ಟು ಬರುತ್ತಿದ್ದರು. ಯಾಕೆಂದರೆ ಮಕ್ಕಳಿಗೆ ಟಿವಿ , ರಿಮೋಟು ಎಲ್ಲವೂ ತನ್ನದೇ ಎಂಬ ಭಾವನೆ. ಇದಕ್ಕೆ ನಾನೂ ಹೊರತಾಗಿರಲಿಲ್ಲ.
ಕಾರ್ಟೂನ್ ನೋಡುವಾಗ ಅಮ್ಮ ಟಿವಿ ನೋಡಿದ್ದು ಸಾಕು ಎಂದರೆ ಸಿಟ್ಟು ಬರುತ್ತಿತ್ತು. ದೊಡ್ಡವಳಾದ ಮೇಲೆ ದೊಡ್ಡ ಟಿವಿ ತಗೊಂಡು ಕಾರ್ಟೂನ್ ನೋಡ್ತೀನಿ ಅಂತ ಆಸೆ ಪಡುತ್ತಿದ್ದೆ. ಕಾರ್ಟೂನ್ಗಳು ಯಾರಿಗೆ ತಾನೇ ಇಷ್ಟ ಇಲ್ಲ. ಈಗೀಗ ಬರುವ ಅನಿಮೇಷನ್ ಮೂವಿಗಳನ್ನು ಎಲ್ಲಾ ವಯೋಮಾನದವರು ಇಷ್ಟಪಡುತ್ತಾರೆ. ಇಷ್ಟವಿಲ್ಲದಿದ್ದರೂ ಮಕ್ಕಳಿಗೋಸ್ಕರ ಅವರೊಂದಿಗೆ ಕುಳಿತು ನೋಡುವ ಅನಿವಾರ್ಯತೆ.
ಕಾರ್ಟೂನ್ಗಳು ಮಕ್ಕಳ ಜೀವನದಲ್ಲಿ ಎಷ್ಟು ಪ್ರಭಾವಶಾಲಿಗೊಂಡಿದೆ ಎಂದರೆ ಮಕ್ಕಳ ಸ್ಕೂಲ್ ಬ್ಯಾಗ್ , ಪೆನ್ಸಿಲ್ , ಪೌಚ್ ಎಲ್ಲದರಲ್ಲಿಯೂ ಕಾರ್ಟೂನ್ ಚಿತ್ರಗಳದ್ದೆ ಹಾವಳಿ. ಕಾರ್ಟೂನ್ ಗೊಂಬೆಗಳು , ಆಟಿಕೆಗಳನ್ನು ಕೊಂಡುಕೊಳ್ಳಲು ಅಂಗಡಿಯಲ್ಲಿ ಮಕ್ಕಳು ತಮ್ಮ ಪೋಷಕರೊಂದಿಗೆ ಅಳುತ್ತಾ ಜಗಳ ಮಾಡುವ ದೃಶ್ಯ ಹೊಸದೇನಲ್ಲ.
ಅಂದು ಅಷ್ಟೊಂದು ಕಾರ್ಟೂನ್ ಗಳನ್ನು ನೋಡುತ್ತಿದ್ದ ನಾನು ಈಗ , ಮಕ್ಕಳು ಕೇವಲ ಕಾರ್ಟೂನ್ ಗಳನ್ನು ನೋಡುವುದಷ್ಟೇ ಅಲ್ಲದೆ ಇತರೆ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಅಷ್ಟೇ ಮುಖ್ಯ ಎಂದು ಭಾವಿಸುತ್ತೇನೆ. ತಮ್ಮಿಷ್ಟದ ಗೊಂಬೆಗಳನ್ನು ನೋಡಿ ಅಂತಹ ಚಿತ್ರ ರಚಿಸುವುದು , ತಮ್ಮಿಷ್ಟದ ಆಟ ಆಡುವುದು ಒಳ್ಳೆಯದೇ. ಮಕ್ಕಳು ಚಿತ್ರ ಮಾಡುವಾಗ ತಮ್ಮದೇ ಲೋಕದಲ್ಲಿ ತಲ್ಲೀನರಾಗಿರುವುದನ್ನು ನೋಡುವುದೇ ಚಂದ. ಕಾರ್ಟೂನ್ ಎಂಬ ಮಾಯಾಜಗತ್ತು ಮಕ್ಕಳನ್ನು ತನ್ನೆಡೆಗೆ ಸೆಳೆದುಕೊಂಡಿರುವುದಂತೂ ಸತ್ಯ. ಮಕ್ಕಳನ್ನು ಅದರಿಂದ ಹೊರತರುವುದು ಪೋಷಕರ ಮುಂದಿರುವ ದೊಡ್ಡ ಸವಾಲು.
ದ್ವಿತೀಯ ಪಿಯುಸಿ
ಶೇಷಾದ್ರಿಪುರಂ ಕಾಂಪೋಸಿಟ್
ಪಿ.ಯು ಕಾಲೇಜ್, ಬೆಂಗಳೂರು
********************************************