-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 48

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 48

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
    
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 48


      ಒಂದು ಕೌಟುಂಬಿಕ ಮದುವೆ ಕಾರ್ಯಕ್ರಮದಲ್ಲಿ ಕುಡುಕನೊಬ್ಬನ ಎರಡು ಮಕ್ಕಳು ಒಟ್ಟು ಸೇರಿದ್ದಾರೆ. ದೊಡ್ಡಮಗ ತನ್ನ ಸ್ವಸಾಮರ್ಥ್ಯದಿಂದ ಪ್ರತಿಷ್ಠಿತ ಉದ್ಯಮಿಯಾಗಿ , ದಾನಿಯಾಗಿ ಊರಿನಲ್ಲಿ ಹೆಸರುವಾಸಿ ಯಾಗಿದ್ದನು. ಆದರೆ ಕಿರಿಯ ಮಗ ತಂದೆಯಂತೆ ಕುಡುಕನಾಗಿ , ಅನಾರೋಗ್ಯ ಪೀಡಿತನಾಗಿ ಕೆಟ್ಟ ಹೆಸರನ್ನು ಪಡೆದಿದ್ದನು. 
        ಅವರಿಬ್ಬರಲ್ಲಿ "ನೀವ್ಯಾಕೆ ಹೀಗೆ ? " ಎಂದು ಕೇಳಿದಾಗ ಅವರಿಬ್ಬರು ಕೊಟ್ಟ ಉತ್ತರ ಆಶ್ಚರ್ಯಕರವಾಗಿತ್ತು. ಅವರಿಬ್ಬರು ನೀಡಿದ ಉತ್ತರ ಎಂದರೆ "ನನ್ನಪ್ಪ ಕುಡುಕ. ಹಾಗಾಗಿ ನಾವು ಹೀಗಿದ್ದೇವೆ." ಇಬ್ಬರೂ ನೀಡಿದ ಒಂದೇ ರೀತಿಯ ಉತ್ತರ ಕೇಳಿ "ಅಯ್ಯೋ ! ಯಾಕೆ ಹೀಗಾಯಿತು ?" ಎಂದು ಒಂದು ಸಲ ಕನಿಕರ ಮೂಡಬಹುದು. ಒಂದೇ ಮನೆ , ಒಂದೇ ಕುಟುಂಬ , ಒಂದೇ ಪರಿಸರ , ಒಂದೇ ತಂದೆಯ ಮಕ್ಕಳಾದರೂ ಒಬ್ಬರಿಗೊಬ್ಬರ ಬದುಕು ಮಾತ್ರ ವಿರುದ್ಧವಾಗಿತ್ತು. ದೊಡ್ಡವನು ತಂದೆಯ ಕುಡಿತದ ಚಟಕ್ಕೆ ಬಲಿಯಾಗದೆ ಬಲಿಷ್ಠನಾದರೆ , ಕಿರಿಯವ ಮಾತ್ರ ಕುಡಿತದ ಚಟಕ್ಕೆ ಬಲಿಯಾಗಿ ದುರ್ಬಲನಾದ. ಒಬ್ಬ ಸಮಾಜಕ್ಕೆ ಮಾದರಿಯಾದರೆ ಇನ್ನೊಬ್ಬ ಸಮಾಜಕ್ಕೆ ಮಾರಿಯಾದ. ಇಂಥಹ ಕುಟುಂಬವನ್ನು ಪ್ರತಿಯೊಂದು ಪರಿಸರದಲ್ಲೂ ಕಾಣಬಹುದು. ಆದರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಧೃಢ ನಿರ್ಧಾರ. ದೊಡ್ಡವನು ತಂದೆಯ ಕುಡಿತದಿಂದ ತನ್ನ ಮನೆ , ತನ್ನ ಕುಟುಂಬ ಕೊನೆಗೆ ತನ್ನ ಮೇಲೆ ಉಂಟಾದ ದುಷ್ಪರಿಣಾಮಗಳನ್ನು ಅರ್ಥೈಸಿ , ಅದರಿಂದ ಪಾಠ ಕಲಿತು ತನ್ನೆಲ್ಲ ಋಣಾತ್ಮಕ ಪರಿಸರವನ್ನು ಬದಲಾಯಿಸಿ ಧನಾತ್ಮಕ ಪರಿಸರವನ್ನು ನಿರ್ಮಿಸಿದ. ತನಗೆ ಸಿಕ್ಕ ಅನುಭವದ ಕಲ್ಲುಗಳಿಂದಲೇ ಕೋಟೆಯನ್ನು ಕಟ್ಟಿಕೊಂಡು ಯಶಸ್ವಿ ಉದ್ಯಮಿ ಎನಿಸಿಕೊಂಡ. ಆದರೆ ಕಿರಿಯವನು ತಂದೆಯು ನೀಡಿದ ಋಣಾತ್ಮಕ ಪರಿಸರವನ್ನು ಒಪ್ಪಿಕೊಂಡು ಸ್ವಂತ ಆಲೋಚನೆ ಇಲ್ಲದೆ ಪರಿಸರ ಬದಲಾವಣೆಗೆ ಒಪ್ಪದೆ ಅದೇ ಪರಿಸರದಲ್ಲಿ ನೆಲೆವೂರಿ ನಾಲಾಯಕ್ ವ್ಯಕ್ತಿಯಾದ. 
        ಹೌದು ಕಾಲಕ್ಕನುಗುಣವಾಗಿ ನಾವು ಮಾಡುವ ಕೆಲವು ನಿರ್ಧಾರಗಳು ನಾವು ಹೋದ ಕಡೆಯಲ್ಲೆಲ್ಲ ಸಂತೋಷ ನೀಡುತ್ತದೆ. ಆದರೆ ಕಾಲಕ್ಕೆ ಸರಿಯಾಗಿ ನಿರ್ಧಾರ ತಗೊಳ್ಳದಿದ್ದರೆ ಬದುಕು ಪೂರ್ತಿ ನೋವು ಭರಿತವಾಗಿರುತ್ತದೆ. ಹೊಲವನ್ನು ಕಾಲಕಾಲಕ್ಕೆ ಹೊತ್ತು ಬಿತ್ತರೆ ಮಾತ್ರ ಫಲವತ್ತಾಗಿರುತ್ತದೆ. ಇಲ್ಲದಿದ್ದರೆ ಹುಲ್ಲು ಕಳೆಗಳು ಬೆಳೆದು ನಿರುಪಯುಕ್ತವಾಗುತ್ತದೆ. ಅದೇ ರೀತಿ ಬದುಕಿನಲ್ಲಿ ಧೃಢನಿರ್ಧಾರಗಳನ್ನು ಆಗಾಗ ಕೈಗೊಳ್ಳುತ್ತಿರಬೇಕು. ಇಲ್ಲದಿದ್ದರೆ ಬದುಕಿನಲ್ಲಿ ಕಳೆ ಗಿಡಗಳೇ ತುಂಬಿ ನಿರುಪಯುಕ್ತವಾಗುತ್ತದೆ.
         ನಾವು ಮನದಲ್ಲಿ ಹೇಗೆ ನಿರ್ಧರಿಸುತ್ತೇವೋ ಅದನ್ನೇ ಹಂಚುತ್ತೇವೆ. ಮನದಲ್ಲಿ ಸಂತೋಷವಿದ್ದರೆ ಎಲ್ಲರಿಗೂ ಸಂತೋಷ ಹಂಚುತ್ತೇವೆ. ಮನದಲ್ಲಿ ನಿರಾಶೆಯಿದ್ದರೆ ಎಲ್ಲರಿಗೂ ನಿರಾಶೆಯನ್ನೇ ಹಂಚುತ್ತೇವೆ. ಮನದಲ್ಲಿ ಭಯವಿದ್ದರೆ ಎಲ್ಲರಿಗೂ ಭಯವನ್ನು ಹಂಚುತ್ತೇವೆ. ಮನದಲ್ಲಿ ಭ್ರಮೆ ಹೊಂದಿದ್ದರೆ ಎಲ್ಲರಿಗೂ ಭ್ರಮೆಯನ್ನೇ ಹಂಚುತ್ತೇವೆ. ಮನದಲ್ಲಿ ಧೃಢ ನಿರ್ಧಾರವಿದ್ದರೆ ಎಲ್ಲರಿಗೂ ಧೃಢ ನಿರ್ಧಾರವನ್ನು ಹಂಚುತ್ತೇವೆ. ಹಾಗಾಗಿ ನಾವು ಎಂಥಹ ಕಠಿಣವಾದ ಪರಿಸ್ಥಿತಿಯಲ್ಲೂ ಋಣಾತ್ಮಕ ಪರಿಸರದಲ್ಲೂ ಧೃಡ ನಿರ್ಧಾರಗಳನ್ನೇ ತೆಗೆದುಕೊಳ್ಳೋಣ. ಇದರಿಂದ ಮಾತ್ರ ಯಶಸ್ವಿ ಸಂತಸದಾಯಕ ಜೀವನ ನಡೆಸಬಹುದು. ಋಣಾತ್ಮಕ ಪರಿಸರದಲ್ಲೂ ಧನಾತ್ಮಕತೆಯನ್ನು ಕಾಣುವ ಭಾವಕ್ಕೆ ಬದಲಾಗುವ ಕೌಶಲ ಕಲಿಯೋಣ. ಈ ಧನಾತ್ಮಕ ಕಲಿಕೆಯ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************

Ads on article

Advertise in articles 1

advertising articles 2

Advertise under the article