-->
ಓ ಮುದ್ದು ಮನಸೇ ...…...! ಸಂಚಿಕೆ - 20

ಓ ಮುದ್ದು ಮನಸೇ ...…...! ಸಂಚಿಕೆ - 20

ಡಾ. ಗುರುರಾಜ್ ಇಟಗಿ
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು, 
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
mob : +91 94837 16589


ಓ ಮುದ್ದು ಮನಸೇ ...…...! ಸಂಚಿಕೆ - 20

           
      ನಾನು ಬಾಲ್ಯದಿಂದಲೂ ಅತ್ಯಂತ ಕ್ರಿಯಾಶೀಲನಾಗಿ ಶಿಕ್ಷಕರಿಂದ ಬೆನ್ನುತಟ್ಟಿಸಿಕೊಳ್ಳುತ್ತಿದ್ದ ಹುಡುಗ. ಪಠ್ಯಕ್ಕಿಂತ ಪಠ್ಯೇತರ ಚಟುವಟಿಕೆಗಳಲ್ಲಿ ಅತ್ಯಂತ ಆಸಕ್ತಿ ಹೊಂದಿದ್ದ ನಾನು ಅದು ಕ್ರೀಡೆಯಿರಲಿ ಅಥವಾ ಇನ್ಯಾವುದೇ ಸಾಂಸ್ಕೃತಿಕ ಚಟುವಟಿಕೆಯಿರಲಿ ಎಲ್ಲರನ್ನೂ ಹಿಂದಿಕ್ಕಿ ಭಯ ಹಿಂಜರಿಕೆಯಿಲ್ಲದೆ ಭಾಗವಹಿಸುತ್ತಿದ್ದೆ. ಶಾಲೆಯ ಹಿತ್ತಲಿನ ತೆಂಗಿನ ಮರಗಳಿಗೆ ಮಣ್ಣಿನ ಕಟ್ಟೆ ಕಟ್ಟೋದರಿಂದ ಹಿಡಿದು ವರ್ಷಕ್ಕೊಮ್ಮೆ ಬರುವ ಪ್ರತಿಭಾ ಕಾರಂಜಿಯ ವೇದಿಕೆಯಲ್ಲಿ ಬಣ್ಣ ಹಚ್ಚಿ ನಾಟಕ ಮಾಡೋದರ ವರೆಗೆ ನನ್ನದೇ ಮುಂದಾಳತ್ವ. ಇಂತಹದ್ದೊಂದು ಕ್ರೀಯಾಶೀಲತೆ ಮತ್ತು ಆಸಕ್ತಿ ನನ್ನಲ್ಲಿ ಹುಟ್ಟಿಕೊಂಡದ್ದರ ಹಿಂದೆ ನನ್ನೂರಿನ ಯುವಕರ ಮತ್ತು ಹಬ್ಬ ಹರಿದಿನಗಳ ಕೊಡುಗೆ ಬಹಳಷ್ಟಿದೆ. ಮೊಬೈಲ್ ಮತ್ತು ಟೀವಿ ಇಲ್ಲದ ಕಾಲವದು, ಹೊರಾಂಗಣ ಚಟುವಟಿಕೆಗಳೇ ಅವತ್ತಿನ ಬಹುದೊಡ್ಡ ಮನೊರಂಜನಾ ಮೂಲಗಳು. ಪ್ರತಿದಿನ ಸಂಜೆ ಊರಿನ ಹಕ್ಕಲಿನಲ್ಲಿ (ಊರ ಮಧ್ಯದ ಬಯಲು) ಸೇರುತ್ತಿದ್ದ ಹಿರಿಯರು, ಯುವಕರು ಮತ್ತು ಮಕ್ಕಳು ಕಬ್ಬಡ್ಡಿ, ಚಿನ್ನಿ-ದಾಂಡು, ಗೋಲಿ, ಲಗೋರಿ ಮುಂತಾದ ಆಟಗಳಲ್ಲಿ ಆಸಕ್ತಿಯಿಂದ ಪಾಲ್ಗೊಂಡು ಖುಷಿಪಡುತ್ತಿದ್ದ ಕಾಲವದು. ಇವರೊಟ್ಟಿಗೆ ಬೆರೆಯುತ್ತಿದ್ದ ನಾನು ಮನೆಯಿಂದ ಹೊರಬಂದು ನಾಲ್ಕು ಜನರೊಟ್ಟಿಗೆ ಬೆರೆತು ಬದುಕುವ ಧೈರ್ಯ ತಂದುಕೊಂಡದ್ದು ಆಗಲೇ. ಇಂತಹ ಚಟುವಟಿಕೆಗಳು ಕ್ರೀಡೆಯ ಕಡೆಗೆ ನನ್ನನ್ನು ಆಕರ್ಷಿಸುವುದರ ಜೊತೆ ಜೊತೆಗೆ ಮಾತುಗಾರಿಕೆ, ಇನ್ನೊಬ್ಬರನ್ನು ಸಂಬಾಳಿಸುವ ಬಗೆ, ಹಿಂಜರಿಕೆಯಿಂದ ಹೊರಬಂದು ಮುಂದೆ ನಿಲ್ಲುವ ಧೈರ್ಯ ಮತ್ತು ಸಮಾಜದೊಟ್ಟಿಗೆ ಬೆರೆತು ಬದುಕುವ ಅನಿವಾರ್ಯತೆಯನ್ನು ಅರಿಯಲು ವೇದಿಕೆಯಾದವು. ಇನ್ನು ಹಬ್ಬ ಹರಿದಿನಗಳಲ್ಲಿ, ಮದುವೆ ಮುಂಜಿಗಳಲ್ಲಿ ಹಸೆಗೋಡೆ ಬಿಡಿಸೋದು (ಮದುವೆಮನೆಯಲ್ಲಿ ಗೋಡೆಯ ಮೇಲೆ ಬಿಡಿಸುವ ಚಿತ್ರ) ಬಾಗಿಲಿನ ಸುತ್ತ ಹೂ ಬಳ್ಳಿ ಚಿತ್ರಿಸೋದು, ಬಣ್ಣದ ಪೇಪರ್ ಬಳಸಿ ಮನೆಯನ್ನು ಅಲಂಕರಿಸೋದು, ಚೌತಿ ಹಬ್ಬದಲ್ಲಿ ಬಾಳೆ ದಿಂಡು ಬಳಸಿ, ರಾಗಿ ಬೆಳೆಸಿ ಮಂಟಪ ಮಾಡಿದರೆ, ದೀಪಾವಳಿಯಲ್ಲಿ ಬಣ್ಣದ ಕಾಗದದ ಗೂಡು ದೀಪ ತಯಾರಿಸುವುದು ಹೀಗೆ ಹತ್ತು ಹಲವಾರು ಚಟುವಟಿಕೆಗಳಿಗೆ ನಾನು ತೆರೆದುಕೊಂಡದ್ದರ ಫಲವೇ ನಾನೊಬ್ಬ ಕ್ರೀಯಾಶೀಲನಾಗಿದ್ದರ ಹಿಂದಿನ ಗುಟ್ಟು. 
        ವರ್ಷಕ್ಕೊಮ್ಮೆ ನಮ್ಮೂರಿನಲ್ಲಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿಯಿಡೀ ಊರಿನ ಯುವಕ ಮಂಡಳಿಯಿಂದ ನಾಟಕವಿರುತ್ತಿತ್ತು. ತಿಂಗಳುಗಟ್ಟಲೇ ಶಾಲೆಯಲ್ಲಿ ನಾಟಕದ ತಯಾರಿ ನಡೆಯುತ್ತಿತ್ತು, ಅಪ್ಪನನ್ನು ದುಂಬಾಲು ಬಿದ್ದು ನನ್ನನ್ನು ಅಲ್ಲಿಗೆ ಕರೆದೊಯ್ಯುವಂತೆ ಮಾಡುತ್ತಿದ್ದೆ. ಖಳನಾಯಕನ ಏರು ಧ್ವನಿ ನನ್ನನ್ನು ಭಯ ಬೀಳಿಸುತ್ತಿದ್ದರೆ ಹಾಸ್ಯಗಾರನ ಚತುರ ಮಾತುಗಳು ನಗುತರಿಸುತ್ತಿದ್ದವು. ನಾನು ಪದವಿಯ ವಿದ್ಯಾರ್ಥಿಯಾದಾಗಿಂದ ಹತ್ತಾರು ಬಾರಿ ನಾಟಕಗಳಲ್ಲಿ ವಿವಿಧ ಪ್ರಮುಖ ಪಾತ್ರಗಳನ್ನು ಅಭಿನಯಿಸಿದ್ದೇನೆ, ಒಮ್ಮೆ ಎಲೆಕ್ಷನ್ ಕಮಿಷನ್ ಆಯೋಜಿಸಿದ್ದ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ನಾನು ರಚಿಸಿ, ನಿರ್ದೇಶಿಸಿ ಅಭಿನಯಿಸಿದ್ದ ನಾಟಕ ಎಲ್ಲಾ ವಿಭಾಗಗಳಲ್ಲೂ ಪ್ರತಮ ಬಹುಮಾನ ಗಿಟ್ಟಿಸಿಕೊಂಡಿತ್ತು. ಧಾರಾವಾಹಿಗಳಲ್ಲಿ ನಟಿಸಿದೆ, ಕಿರುಚಿತ್ರ ತಯಾರಿಸಿದೆ ಇವೆಲ್ಲದರ ಆರಂಭ ನನ್ನ ಬಾಲ್ಯದಲ್ಲೇ ಆಗಿತ್ತು......
       ಮಳೆ, ಚಳಿ, ಭಿಸಿಲ ಧಗೆಯನ್ನೂ ಲೆಕ್ಕಿಸದೆ, ಕಲ್ಲು ಪರಚಿ ಮೊಣಕಾಲಿನಿಂದ ರಕ್ತ ಸೋರುತ್ತಿದ್ದರೂ ಕಬ್ಬಡ್ಡಿ ಆಡುವ ಹುರುಪು, ಆಟ ಗೆಲ್ಲುವ ಛಲ ಬತ್ತುತ್ತಿರಲಿಲ್ಲ. ಅದೆಷ್ಟೋ ಬಾರಿ ಮನೆಗೆ ಬಂದು ಸ್ನಾನ ಮಾಡುವಾಗಲೇ ಗಾಯದ ನೆನಪು ಬರುತ್ತಿತ್ತು. ಇಂತಹ ಅವಕಾಶಗಳು ನನ್ನನ್ನು ಇನ್ನಷ್ಟು ಗಟ್ಟಿಗೊಳಿಸಿದವು. ಮಾನಸಿಕವಾಗಿ ಮತ್ತು ದೈಹಿಕವಾಗಿ ನಾನು ಹದವಾಗಿದ್ದೆ ಅಲ್ಲಿ. 
        ಬೆಂಗಳೂರಿಗೆ ಬಂದೆ ಕಂಪನಿಯ ಕೆಲಸಕ್ಕೆ ಸೇರಿದೆ. ಮನೆಯಲಿದ್ದಾಗ ಮುಂಜಾನೆ ಏಳುವ ಸಮಯ ಐದು ಮೂವತ್ತು. ಎದ್ದು ದನದ ಕೊಟ್ಟಿಗೆಗೆ ಒಂದಿಷ್ಟು ಎಲೆದರಕು ತರೋದು ಅಥವಾ ತೋಟದಲ್ಲಿ ಅಡಿಕೆ ಆರಿಸೋದು ನನ್ನ ದಿನನಿತ್ಯದ ಕಾಯಕ. ಬೆಂಗಳೂರಿನಲ್ಲಿದ್ದಾಗ ಐದು ಮೂವತ್ತಕ್ಕೇ ಎಚ್ಚರಗೊಳ್ಳುತ್ತಿದ್ದೆ ಎದ್ದವನೇ ಹತ್ತಿರದ ಕ್ರೀಡಾಂಗಣಕ್ಕೆ ಹೊರಟು ಹೋಗುತ್ತಿದ್ದೆ. ಏನಾದರೂ ಕಲಿಯಬೇಕು, ಬೆಳೆಯಬೇಕೆಂಬ ಹಂಬಲ ನನ್ನನ್ನು ಆತ್ಮರಕ್ಷಣಾ ಕಲೆಯತ್ತ ಸೆಳೆಯಿತು. ಕಲಿತೆ, ಏಟುತಿಂದೆ, ಪ್ರತಿದಿನ ನೋವು ಕಟ್ಟಿಟ್ಟ ಬುತ್ತಿ, ಸಹಿಸಿಕೊಂಡೆ, ಸಾಧಿಸಿದೆ. ಮೊಟ್ಟ ಮೊದಲನೇ ಬಾರಿ ವಿಮಾನ ಹತ್ತಿ ಚೀನಾಗೆ ಹಾರಿದ್ದು, ಬರುವಾಗ ಚಿನ್ನ ಹೊತ್ತು ತಂದಿದ್ದು ಕೇವಲ ಸಾಧನೆಯಾಗಲಿಲ್ಲ ಅದೆಷ್ಟೋ ಮಕ್ಕಳಿಗೆ ಯುವಕ-ಯುವತಿಯರಿಗೆ ಪ್ರೋತ್ಸಾಹವಾಯಿತು.
         ಬೆಳೆದು ದೊಡ್ಡವನಾದ ಮೇಲೆ ನನ್ನೂರಿನ ಯುವಕರ ಗುಂಪುಕಟ್ಟಿ ಯುವಕ ಸಂಘ ಒಂದನ್ನು ಸ್ಥಾಪಿಸಿದೆ. ಗಾಂಧಿ ಜಯಂತಿಯಲ್ಲಿ ಹಾಳುಬಿದ್ದ ಬಸ್ಟಾಂಡ್ ಗಳಿಗೆ ಬಣ್ಣ ಬಳಿಯೋದು, ಊರಲ್ಲಿ ಸ್ವಚ್ಛತಾ ಕಾರ್ಯ ಹೀಗೆ ಹಲವಾರು ಸಮಾಜ ಸೇವಾ ಚಟುವಟಿಕೆಗಳು ನಿರಂತರವಾಗಿ ನಡೆದವು. ಸಾರಾಯಿ ವಿರುದ್ಧದ ಹೋರಾಟ ನನ್ನನ್ನು ಮತ್ತಷ್ಟು ಸಾಮಾಜಿಕ ಸಮಸ್ಯೆಗಳತ್ತ ಮುಖಮಾಡುವಂತೆ ಮಾಡಿತು. ಇಂತಹ ಸವಾಲುಗಳಿಗೆ ಶಿಕ್ಷಣದಿಂದ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದೆ. ಕಲಿತೆ, ಪದವಿ ಪಡೆದೆ, ಸಮಾಜ ಸೇವಾ ಕಾರ್ಯದಲ್ಲೇ ಉನ್ನತ ಶಿಕ್ಷಣ ಪೂರೈಸಿದೆ. ಶಿಕ್ಷಣದ ಮೂಲಕ ಸಮಾಜದ ಮನಸ್ಥಿತಿ ಬದಲಿಸಬೇಕಾಗಿರುವುದರ ಮಹತ್ವ ಅರಿತೆ. ಮನಶಾಸ್ತ್ರದಲ್ಲಿ ಸಂಶೋಧನೆ ಕೈಗೊಂಡೆ. ಬದಲಾವಣೆಯ ಬೀಜ ಬಿತ್ತಲು ಬಾಲ್ಯ ಅತ್ಯುತ್ತಮ ವೇದಿಕೆಯೆನಿಸಿತು. ಶಿಕ್ಷಣ ಕ್ಷೇತ್ರದ ಮೂಲಕ ವಿಧ್ಯಾರ್ಥಿಗಳನ್ನು ಜಾಗೃತಿಗೊಳಿಸುವ ಕೆಲಸಕ್ಕೆ ಕೈಹಾಕಿದೆ, ಶಿಕ್ಷಕರನ್ನು ಅದರೊಟ್ಟಿಗೆ ಬೆರೆಸಿದೆ, ಪಾಲಕರನ್ನೂ ಜೊತೆಯಾಗಿಸಿಕೊಂಡೆ.
        ನನಗಿನ್ನೂ ನೆನಪಿದೆ, ನಾನಾಗ ಒಂಬತ್ತನೇ ತರಗತಿಯ ವಿದ್ಯಾರ್ಥಿ. ನಾಟಕವೋ, ನೃತ್ಯವೋ ಅಥವಾ ಚಿತ್ರ ಬಿಡಿಸೋದು, ಏಕ ಪಾತ್ರಾಭಿನಯ ಇನ್ಯಾವುದೇ ಚಟುವಟಿಕೆಯಾಗಿದ್ದರೂ ಅದರಲ್ಲಿ ನನ್ನದೊಂದು ಗುರುತು. ನಾನು ಮಣ್ಣಿನಿಂದ ಮೂರ್ತಿ ತಯಾರಿಸೋದರಲ್ಲಿ ಎತ್ತಿದ ಕೈ. ಆ ವರ್ಷದ ಪ್ರತಿಭಾ ಕಾರಂಜಿಗೆ ಹೊಸದೊಂದು ರೂಲ್ಸ್ ಬಂತು ಮೂರ್ತಿ ತಯಾರಿಸಲು ಮಣ್ಣಿನ ಬದಲು "ಪ್ಲಾಸ್ಟರ್ ಆಫ್ ಪ್ಯಾರೀಸ್" ಸಿಮೆಂಟ್ ಅನ್ನೇ ಬಳಸಬೇಕಿತ್ತು. ನನ್ನಲ್ಲಿ ಕಲೆಯಿತ್ತು, ಆಸಕ್ತಿಯಿತ್ತು ಆದರೆ ದುಡ್ಡಿರಲಿಲ್ಲ..! ನನ್ನ ಶಿಕ್ಷಕರೊಬ್ಬರು ಬಳಿಬಂದರು "ನಿನಗೆ ಸಿಮೆಂಟ್ ತಂದುಕೊಡೋದು ನನ್ನ ಕೆಲಸ ಆದರೆ ನೀನು ಈ ಸ್ಪರ್ಧೆಯಲ್ಲಿ ವಿನ್ ಆಗ್ಬೇಕು, ಇಲ್ಲಾ ಅಂದ್ರೆ ನಾನು ಸಿಮೆಂಟಿಗೆ ಕೊಟ್ಟ ಹಣ ನಂಗೆ ವಾಪಾಸ್ ಕೊಡ್ಬೇಕು" ಅಂದರು. ಅನಿವಾರ್ಯತೆ, ಜಯಿಸದೇ ಬೇರೆ ದಾರಿಯಿಲ್ಲ, ಒಪ್ಪಿಕೊಂಡೆ, ಗೆದ್ದೆ. ನನಗಿನ್ನೂ ನೆನಪಿದೆ, ಅವರಿಗೆ ಬೇಕಾದದ್ದು ನನ್ನ ಹಣವಲ್ಲ ಬದಲಾಗಿ ನನ್ನ ಜಯ..! ಅಂತಹ ಶಿಕ್ಷಕರನ್ನು ಪಡೆದ ನಾನೇ ಧನ್ಯ, ಅವರನ್ನೆಂದೂ ಮರೆಯಲಾರೆ.
        ನಾವು ನೋಡುವ ದೃಷ್ಟಿಕೋನ ನಮ್ಮನ್ನು ಬದಲಾಯಿಸುತ್ತದೆ, ನಾವು ಆಯ್ಕೆ ಮಾಡಿಕೊಳ್ಳುವ ದಾರಿ ನಮ್ಮನ್ನು ಉತ್ತೇಜಿಸುತ್ತದೆ ಮತ್ತು ನಮ್ಮ ಮೇಲೇ ನಾವಿಡುವ ನಂಬಿಕೆ ನಮಗೆ ಯಶಸ್ಸು ತಂದು ಕೊಡುತ್ತದೆ. ಬಾಲ್ಯ ಕೇವಲ ಜೀವನದ ಒಂದು ಹಂತವಲ್ಲ ಅದೊಂದು ಸುಂದರ ಅವಕಾಶ ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡದ್ದೇ ಆದರೆ ಅದೇ ನಮ್ಮ ನಾಳೆಯ ಬದುಕಿನ ಸಾರ್ಥಕತೆ.
...............................ಡಾ. ಗುರುರಾಜ್ ಇಟಗಿ
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು, 
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
mob : +91 94837 16589
********************************************

Ads on article

Advertise in articles 1

advertising articles 2

Advertise under the article