-->
ಸ್ಫೂರ್ತಿಯ ಮಾತುಗಳು - ಲೇಖಕಿ : ಹರಿಣಾಕ್ಷಿ ಕಕ್ಯಪದವು

ಸ್ಫೂರ್ತಿಯ ಮಾತುಗಳು - ಲೇಖಕಿ : ಹರಿಣಾಕ್ಷಿ ಕಕ್ಯಪದವು

ಸ್ಫೂರ್ತಿಯ ಮಾತುಗಳು - ಲೇಖಕಿ : ಹರಿಣಾಕ್ಷಿ ಕಕ್ಯಪದವು


 
ವಿನಯಂತು ಸುತಾನ್ ಸಂತಃ ಸ್ವಸಂಪಾದ್ಯಾಃ ಪುನರ್ಗುಣಾಃ
ಸರ್ವಂ ಕೃಷಾಣಾಃ ಕುರ್ವಂತು ಬೀಜಂ ಸೂತೇಂಕುರಂ ಸ್ವತಃ॥
         ಭಾವಾರ್ಥ: ಸಜ್ಜನರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದು ಕರ್ತವ್ಯ. ಸದ್ಗುಣಗಳು ಮಾತ್ರ ಸಂಪಾದಿಸಿಕೊಳ್ಳತಕ್ಕವು. ರೈತರು ಉಳಿದೆಲ್ಲ ಕೆಲಸವನ್ನು ಮಾಡುತ್ತಾರೆ. ಆದರೆ ಮೊಳೆಯುವುದು ಬೀಜಕ್ಕೆ ಸೇರಿದ್ದು.
       ಮೇಲಿನ ಸಂಸ್ಕೃತ ಶ್ಲೋಕದಂತೆ ಪ್ರತಿಯೊಬ್ಬ ತಂದೆ ತಾಯಿ ಕೂಡ ತನ್ನ ಮಡಿಲು ಸೇರಿದಂತಹ ಹಸುಗೂಸಿನ ಬಗ್ಗೆ ಕನಸು ಕಾಣ್ತಾರೆ. ಈತ ಭವಿಷ್ಯದಲ್ಲಿ ಹಾಗಾಗಬೇಕು... ಹೀಗಾಗಬೇಕು... ಎನ್ನುವಂಥ ಯೋಚನೆಯಲ್ಲೇ ಸಂಭ್ರಮ ಪಡುತ್ತಾರೆ, ಸಂತೋಷಿಸುತ್ತಾರೆ. ಅಂದಿನಿಂದಲೇ ಜವಾಬ್ದಾರಿಯುತ ತಂದೆ ತಾಯಿಯಾಗಿ ಮಗುವಿನ ಊಟ , ಉಪಚಾರ, ಆರೈಕೆ , ಶಿಕ್ಷಣದ ಬಗ್ಗೆ ಅತೀವ ಕಾಳಜಿ ವಹಿಸಿ ಮುನ್ನಡೆಯುತ್ತಾರೆ. ಹಗಲಿರುಳು ತನ್ನ ಮಗುವಿನ ಭವಿಷ್ಯದ ಬಗ್ಗೆ ಯೋಚಿಸಿ ಚಿಂತಿತರಾಗುತ್ತಾರೆ. ಆದರೂ ಸಮಾಜದಲ್ಲಿ ನಾವು ಕ್ರೌರ್ಯದ ಮುಖವಾಡವನ್ನೂ ಕಾಣುತ್ತಿದ್ದೇವೆ. ಜೊತೆಜೊತೆಯಲ್ಲಿ ಇದಕ್ಕೆ ಹೊರತಾದ ಸಮಾಜಮುಖಿ ಚಿಂತಕರು , ಸಮಾಜ ಸೇವಕ ವ್ಯಕ್ತಿಗಳನ್ನೂ ಕಾಣುತ್ತಿದ್ದೇವೆ. ತನ್ನ ಮಕ್ಕಳಿಗೆ ಕೆಡುಕಾಗಬೇಕೆಂದು ಬಯಸುವ ತಂದೆ ತಾಯಿಗಳು ವಿರಳವಾಗಿರುವ ಸಮಾಜದಲ್ಲಿ ಇಂಥ ವಿಭಿನ್ನತೆ ಹೇಗೆ ಮೂಡುತ್ತದೆ ಎಂಬುದೇ ಪ್ರಶ್ನೆಯಾಗಿ ಕಾಡಲಾರಂಭಿಸುತ್ತದೆ ...!? 
      ನಿಜ , ಎಳೆಯ ಮಕ್ಕಳಿಗೆ ಅಪ್ಪ ಅಮ್ಮನೇ ಆಧಾರವಾಗಿರುತ್ತಾರೆ. ಆಸರೆಯಾಗಿರುತ್ತಾರೆ. ಅವರ ಮಾತೇ ವೇದ್ಯವಾಗಿರುತ್ತದೆ. ಆರಂಭದ ದಿನಗಳಲ್ಲಿ ಮನೆಯ ಮೂಲಕ ದೊರೆತ ಶಿಕ್ಷಣ, ನಂತರದಲ್ಲಿ ಶಾಲೆಗಳಲ್ಲಿ ಗಳಿಸಿದಂತಹ ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಗಳ ಮೂಲಕ ಪ್ರಾಪ್ತವಾದ ಕಲಿಕೆ ಮಗುವಿನೊಳಗೆ ಚಿಂತನೆಯನ್ನು ಅರಳಿಸುತ್ತದೆ. ಮಗು ಕೇವಲ ಆಲಿಸುವಿಕೆಯಿಂದ ಹಾಗೂ ಅನುಕರಣೆಯಿಂದ ಮಾತ್ರ ಕಲಿಯದೆ ವೀಕ್ಷಣೆಯಿಂದಲೂ ಕಲಿತು ತನ್ನ ವ್ಯಕ್ತಿತ್ವದಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡಿಕೊಳ್ಳುತ್ತಾನೆ. ಈ ಎಲ್ಲಾ ಸಂದರ್ಭಗಳಲ್ಲಿ ಮಗುವಿನ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಪೋಷಕರು, ಶಿಕ್ಷಕರು ಹಾಗೂ ಸಮಾಜ ಎನ್ನುವುದು ಕೇವಲ ಅನುಕೂಲಿಸುವವರಾಗಿರುತ್ತಾರೆ. ಮಗು ತನ್ನ ವ್ಯಕ್ತಿತ್ವದ ನಿರ್ಮಾತೃ ತಾನೇ ಆಗಿರುತ್ತಾನೆ. ಆದ್ದರಿಂದಲೇ ಅಸಹಜ ವರ್ತನೆಯ ಕುಟುಂಬದಿಂದ ಬಂದಿರುವ ಮಕ್ಕಳು ಸಜ್ಜನರಾಗಿ ಬದುಕನ್ನು ನಡೆಸಿದಂತಹ ನಿದರ್ಶನಗಳು ಕಾಣಸಿಗುತ್ತವೆ. ಹಾಗೆಯೇ ಸಜ್ಜನ , ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದಂತಹ ಮಗು ದುಶ್ಚಟಗಳಿಗೆ ಬಲಿಯಾಗಿ , ಸಮಾಜ ಘಾತುಕ ವ್ಯಕ್ತಿ ಆಗಿರುವುದನ್ನು ಕೂಡ ನಾವು ಕಾಣಬಹುದು.
      ಪ್ರೀತಿಯ ಮಕ್ಕಳೇ, ನಮ್ಮ ನಡೆ ನುಡಿಗೆ ನಾವೇ ಬಾದ್ಯರು. ಪ್ರತಿಯೊಬ್ಬ ವ್ಯಕ್ತಿ ಕೂಡ ತನ್ನ ವ್ಯಕ್ತಿತ್ವ ರೂಪಿಸಿಕೊಳ್ಳುವಲ್ಲಿ ತಾನೇ ಹೊಣೆಗಾರನಾಗಿರುತ್ತಾನೆ. ಒಬ್ಬ ವ್ಯಕ್ತಿಯ ಬೆಳವಣಿಗೆಯಲ್ಲಿ ಆತನ ಪೋಷಕರ , ಗುರುಗಳ ಪಾತ್ರ ಕೇವಲ ಬೆಂಬಲದ್ದಾಗಿರುತ್ತದೆ , ಪ್ರೋತ್ಸಾಹದ್ದಾಗಿರುತ್ತದೆ. ಆತನ ಪರಿಶ್ರಮ , ಶ್ರದ್ಧೆ , ತಾಳ್ಮೆಯೇ ಆತನನ್ನು ಸಾಧಕನ ಸ್ಥಾನದಲ್ಲಿ ನಿಲ್ಲಿಸಿರುತ್ತದೆ.
      ಯಾರಲ್ಲಿ ದುರ್ಗುಣಗಳನ್ನು ಕಾಣುತ್ತೇವೆಯೋ ಅದಕ್ಕೆ ಆ ದುರ್ಗುಣಗಳನ್ನು ಹೊಂದಿದ ವ್ಯಕ್ತಿಯ ಪೋಷಕರಾಗಲಿ ಸಮಾಜವಾಗಲಿ ಅಥವಾ ಗುರುಗಳಾಗಲಿ ಕಾರಣರಾಗಿರುವುದಿಲ್ಲ. ಬದಲಾಗಿ ಆತನೇ ನೇರವಾದ ಹೊಣೆಗಾರನಾಗಿರುತ್ತಾನೆ. ಏಕೆಂದರೆ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಚಿಂತನಾ ಸಾಮರ್ಥ್ಯ ಹಾಗೂ ವಿಮರ್ಶಾತ್ಮಕ ಗುಣಗಳನ್ನು ಬೆಳೆಸಿಕೊಂಡಿರುತ್ತಾನೆ. ಅದನ್ನು ಬಳಸಿಕೊಳ್ಳುವ ಕಲೆಯನ್ನು ಅರಗಿಸಿಕೊಂಡಾಗ ಆತನ ವ್ಯಕ್ತಿತ್ವವು ರೂಪುಗೊಳ್ಳುತ್ತದೆ .
      ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಜ್ಞಾನ ಎನ್ನುವಂಥದ್ದು ಅಂಗೈಯಲ್ಲಿ ಪ್ರಾಪ್ತವಾಗುತ್ತದೆ. ಹಲವಾರು ಮೂಲಗಳಿಂದ ನಾವು ಜ್ಞಾನವನ್ನು ಪಡೆಯಬಹುದು. ಜ್ಞಾನವನ್ನು ಪಡೆಯಲು ಹಲವಾರು ಮೂಲಗಳ ಲಭ್ಯತೆಯಿದೆ. ಹಲವಾರು ಅವಕಾಶಗಳು ನಮ್ಮನ್ನು ಕೈಬೀಸಿ ಕರೆಯುತ್ತಿದೆ. ಇಂತಹ ಸಂದರ್ಭದಲ್ಲಿ ಪಡೆದುಕೊಂಡಂತಹ ಜ್ಞಾನವನ್ನು ಅನುಭವಗಳೊಂದಿಗೆ ಮಿಳಿತಗೊಳಿಸಿದಾಗ ವ್ಯಕ್ತಿಯ ಚಿಂತನಾ ಸಾಮರ್ಥ್ಯ ಪ್ರಬಲವಾಗುತ್ತಾ ಸಾಗುತ್ತದೆ. ಆತನೇ ಯಾವುದು ಒಳ್ಳೆಯದು , ಯಾವುದು ಕೆಟ್ಟದ್ದು ಎನ್ನುವ ನಿರ್ಧಾರವನ್ನು ಕೈಗೊಳ್ಳುವ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತಾನೆ. ತಾನು ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಲು ಬೇಕಾದಂಥ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಹಾಗೂ ಅದರಿಂದ ದೊರೆಯುವ ಪ್ರತಿಫಲದ ಅರಿವು ಉಳ್ಳವನಾಗಿರುತ್ತಾನೆ. ತಿಳಿದುಕೊಂಡಂತಹ ವಿಚಾರಗಳಲ್ಲಿ ಕೆಲವರು ಉತ್ತಮವಾದುದಕ್ಕೆ ತಮ್ಮನ್ನು ಅರ್ಪಿಸಿಕೊಳ್ಳುತ್ತಾರೆ. ಇನ್ನೂ ಕೆಲವರು ದುರಾಚಾರದೆಡೆಗೆ, ದುರಭ್ಯಾಸದೆಡೆಗೆ ತಮ್ಮನ್ನು ಕೊಂಡೊಯ್ಯುತ್ತಾರೆ.
    ನಾವು ದಿನನಿತ್ಯ ಹಲವಾರು ಉದಾಹರಣೆಗಳನ್ನು ನೋಡಬಹುದು. ಜೀವನದಲ್ಲಿ ಸಿಗರೇಟನ್ನೇ ಮುಟ್ಟದೆ ಇದ್ದಂಥಹ ಅಪ್ಪನ ಮಗ ಸಿಗರೇಟಿನ ದಾಸನಾಗಿರಬಹುದು. ಕುಡಿತದ ದುರಾಭ್ಯಾಸದ ಬಗ್ಗೆ ಇತರರಿಗೆ ತಿಳುವಳಿಕೆ ಹೇಳಿ ಅವರಲ್ಲಿ ಪರಿವರ್ತನೆ ತಂದಂತಹ ಅಪ್ಪನ ಮಗ ಕುಡುಕನೇ ಆಗಿರಬಹುದು. ಆದ್ದರಿಂದ ವ್ಯಕ್ತಿಯೊಬ್ಬನಿಗೆ ಸುತ್ತ ಉತ್ತಮ ಪರಿಸರವನ್ನು ಒದಗಿಸಿಕೊಡುವಂತಹ ಕೆಲಸವನ್ನು ಮಾತ್ರವೇ ಪೋಷಕರಿಂದಾಗಲೀ, ಶಿಕ್ಷಕರಿಂದಾಗಲೀ ಮಾಡಲು ಸಾಧ್ಯವಿದೆ. ಆದರೆ ತನ್ನೊಳಗೆ ಉತ್ತಮ ಅಂಶಗಳನ್ನು ಬೆಳೆಸಿಕೊಳ್ಳಬೇಕೆಂದರೆ ಅದನ್ನು ಆ ಮಗುವೇ ಮಾಡಿಕೊಳ್ಳಬೇಕು.
      ಒಂದು ಗಿಡವನ್ನೇ ನೋಡಿ. ರೈತ ಹೊಲದಲ್ಲಿ ಬಹಳ ಕಷ್ಟಪಟ್ಟು ದುಡಿಯುತ್ತಾನೆ. ಬೆವರು ಹರಿಸುತ್ತಾನೆ. ಗಿಡ ಹುಲುಸಾಗಿ ಬೆಳೆಯಲು ಅಗತ್ಯವಾದ ಗೊಬ್ಬರವನ್ನು ಕೂಡ ತಾನೇ ಉಣಬಡಿಸುತ್ತಾನೆ. ಕೊನೆಗೆ ಆತ ಬೀಜ ಬಿತ್ತುತ್ತಾನೆ. ಆದರೂ ಆತ ಬಿತ್ತುವಂತಹ ಎಲ್ಲ ಬೀಜಗಳು ಮೊಳಕೆ ಬರೋದಿಲ್ಲ. ಕೆಲವೇ ಕೆಲವು ಬೀಜಗಳು ಮಾತ್ರ ಮಣ್ಣಿನಲ್ಲಿರುವಂತಹ ಸಾರವನ್ನು ಹೀರಿಕೊಂಡು ಮೊಳಕೆ ಬರುತ್ತದೆ…. ಗಿಡವಾಗುತ್ತದೆ…. ಫಸಲಿನಿಂದ ಬಾಗಿ ತೆನೆ ತೂಗಿ ನಲಿಯುತ್ತದೆ….. ಇನ್ನೂ ಕೆಲವು ಬೀಜಗಳು ಅಲ್ಲೇ ಕಮರಿ ಹೋಗುತ್ತದೆ. ಇದಕ್ಕೆ ರೈತ ಹೊಣೆಗಾರನಾಗಿರುವುದಿಲ್ಲ. ಆತ ತನ್ನೆಲ್ಲ ಕರ್ತವ್ಯವನ್ನು ಮಾಡಿಯೂ ಕೂಡ ಆತನಿಗೆ ನಿಗದಿತವಾದ ಫಲಿತಾಂಶ ಎನ್ನುವಂಥದ್ದು ಬರದೇ ಇರುವುದು ಆತನ ದೌರ್ಭಾಗ್ಯವೆನ್ನ - ಬಹುದೇನೋ..!?
      ಹಾಗೆಯೇ ಮಕ್ಕಳ ಬಗ್ಗೆ ಬಹಳಷ್ಟು ಕನಸುಗಳನ್ನು ಹೊತ್ತಿರುವಂತಹ ಪೋಷಕರು ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ದೊರೆಯಬೇಕು, ಯಾವ ಸೌಲಭ್ಯಗಳಿಂದಲೂ ಅವರು ವಂಚಿತರಾಗಬಾರದು ಎಂಬ ಸದುದ್ದೇಶದೊಂದಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ಶತಾಯಗತಾಯ ಪ್ರಯತ್ನಿಸುತ್ತಾರೆ.
ಶಾರೀರಿಕವಾಗಿ, ಮಾನಸಿಕವಾಗಿ ತಾನು ಕುಗ್ಗಿಹೋದರೂ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಾರೆ. ಅವರ ಸೌಭಾಗ್ಯವೆಂಬಂತೆ ಕೆಲವು ಮಕ್ಕಳು ಆದರ್ಶ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಸದ್ಗುಣಶೀಲರಾಗಿರುತ್ತಾರೆ. ಇನ್ನೂ ಕೆಲವರು ಪೋಷಕರ ಶ್ರಮಕ್ಕೆ ಬೆಲೆ ಕೊಡದೆ, ಅಗೌರವದಿಂದ ವರ್ತಿಸುತ್ತಾ ಆನೆ ಹೋದದ್ದೇ ದಾರಿ ಎಂಬುದಾಗಿ ತಿಳಿದುಕೊಂಡು ದುರ್ಜನರ ಸಹವಾಸ ಮಾಡಿಕೊಂಡು ದುರಾಚಾರಿಗಳಾಗುತ್ತಾರೆ.
      ಆದರೆ ಯಾವಾಗ ವ್ಯಕ್ತಿ ತನ್ನ ತಪ್ಪಿಗೆ ಸಮಾಜದಿಂದ ಶಿಕ್ಷೆಗೆ ಒಳಪಡುವನೋ ಆಗ ಆತ ತನ್ನ ಪೋಷಕರನ್ನು , ಗುರುಗಳನ್ನು , ಬಂಧುಗಳನ್ನು ದೂಷಿಸಲು ಆರಂಭಿಸುತ್ತಾನೆ. ತನಗೆ ಸರಿಯಾದ ಮಾರ್ಗದರ್ಶನ ನೀಡಿಲ್ಲವೆಂದು ಶಪಿಸುತ್ತಾನೆ. ತನ್ನೆಲ್ಲಾ ಕೆಟ್ಟತನಕ್ಕೆ ಇತರರೇ ಕಾರಣವೆಂದು ಪ್ರಲಾಪಿಸಲು ಆರಂಭಿಸುತ್ತಾನೆ. ಒಂದೇ ತಾಯಿಯ ಐವರು ಪುತ್ರರು ಒಂದೇ ವಾತಾವರಣದಲ್ಲಿ ಬೆಳೆದು ಬಂದರೂ ಒಂದೇ ರೀತಿಯ ಗುಣಗಳನ್ನು ಹೊಂದಿರುವುದಿಲ್ಲ ಕಾರಣವಿಷ್ಟೇ... ಅವರವರೇ ರೂಪಿಸಿಕೊಂಡ ವ್ಯಕ್ತಿತ್ವ…!?
        ಓರ್ವ ಸಾಧಕ ವ್ಯಕ್ತಿಗೆ ಆತನ ಪೋಷಕರು, ಗುರುಗಳು , ಮಾರ್ಗದರ್ಶಕರು ಕೇವಲ ಬೆಂಬಲದ ಶ್ರೀರಕ್ಷೆ ಯಾಗಿರುತ್ತಾರೆ ಅಷ್ಟೇ. ಅಚಲ ನಿರ್ಧಾರ, ಸಾಧಿಸಲೇಬೇಕೆಂಬ ಛಲ , ನಿರಂತರ ಅಭ್ಯಾಸ ಇವೆಲ್ಲವೂ ಆತನನ್ನು ಸಾಧಕನನ್ನಾಗಿ ರೂಪಿಸಿರುತ್ತದೆ. ಗುರುಗಳು ವಿನೂತನವಾಗಿ , ವಿಶಿಷ್ಟವಾಗಿ ತರಗತಿಯಲ್ಲಿ ಪಾಠ ಬೋಧನೆಯನ್ನು ಮಾಡಿದರೂ ಕೆಲ ವಿದ್ಯಾರ್ಥಿಗಳು ಕನಿಷ್ಠ ಅಂಕಗಳನ್ನು ಪಡೆಯಲು ಅಸಮರ್ಥರಾಗುತ್ತಾರೆ. ಆತನ ಈ ಅಸಮರ್ಥತೆಗೆ ಮುಖ್ಯಕಾರಣ ಗುರುಗಳಲ್ಲ. ಬದಲಾಗಿ ಆತನಲ್ಲಿ ಇಲ್ಲದ ದೃಢ ವಿಶ್ವಾಸ , ಗುರಿಯಿಲ್ಲದ ನಡೆ.
       ಆದರೆ ವಿದ್ಯಾರ್ಥಿಯಾದವನು ಕಲಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡು, ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗಬೇಕು ಎನ್ನುವಂತಹ ಕನಸನ್ನು ತನ್ನೊಳಗೆ ಮೂಡಿಸಿಕೊಂಡು, ಆ ಕನಸಿನ ಈಡೇರಿಕೆಗೆ ಹಗಲು ಇರುಳು ಪ್ರಯತ್ನ ಪಟ್ಟರೆ ಮಾತ್ರ ಆತ ಸಾಧಕನೆನೆಸಿಕೊಳ್ಳಬಹುದು. ಸನ್ಮಾನಕ್ಕೆ ಯೋಗ್ಯನೆನಿಸಿಕೊಳ್ಳಬಹುದು.
      ಇನ್ನು ಕ್ರೀಡಾಳುಗಳನ್ನೇ ತೆಗೆದುಕೊಳ್ಳೋಣ. ಅವರು ನಿರಂತರವಾಗಿ ಅಭ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ ಹಾಗೂ ತನ್ನ ಅಭ್ಯಾಸದೆಡೆಗೆ ಏಕಾಗ್ರಚಿತ್ತತೆಯನ್ನು ಹೊಂದಿದಾಗ ಮಾತ್ರ ದಿನೇ ದಿನೇ ತನ್ನ ಸಾಧನೆಯಲ್ಲಿ ಹೆಚ್ಚಳವನ್ನು ಕಂಡುಕೊಳ್ಳಬಹುದು. ಪ್ರಗತಿಯನ್ನು ಸಾಧಿಸಬಹುದು. ಅವರ ಕೋಚ್ ಅವರಿಗೆ ಕೇವಲ ಅನುಕೂಲಿಸುವವನಾಗಿರುತ್ತಾನೆ. ಅವರಿಗೆ ಉತ್ತಮ ಸನ್ನಿವೇಶವನ್ನು ಒದಗಿಸಿಕೊಡುವ , ಮಾರ್ಗದರ್ಶನ ನೀಡುವ ಪ್ರೇರಕ ಶಕ್ತಿಯಾಗಿರುತ್ತಾನಷ್ಟೇ.
       ಸರಳತೆ , ಗುಣ , ನಡತೆ , ನಮ್ಮ ಸನ್ನಿವೇಶಕ್ಕನುಗುಣವಾದ ವರ್ತನೆ ಇವು ಯಾವುವೂ ಇತರರ ಕರ್ಮದ ಫಲಗಳಲ್ಲ. ನಾವೇ ನಮ್ಮೊಳಗೆ ನೆಟ್ಟು,ಪೋಷಿಸಿ, ಬೆಳೆಸಿದ ಸಸಿಗಳು. ಮಕ್ಕಳೇ ನಿಮ್ಮ ನಡೆ ನುಡಿಗೆ ನೀವೇ ವಾರಸುದಾರರು. ನೀವೇ ಜವಾಬ್ದಾರರು. ಈ ಇಳೆಯೊಳಗೆ ಮನುಷ್ಯನಾಗಿ ಬದುಕುವ ಅವಕಾಶವನ್ನು ದೇವರು ಒದಗಿಸಿಕೊಟ್ಟಿದ್ದಾನೆ. ಆ ಅವಕಾಶದಲ್ಲಿ ತನ್ನಿಂದ ಸತ್ಕರ್ಮಗಳು ನಡೆಯಬೇಕು ಎಂಬುದಾಗಿ ದೃಢ ನಿಶ್ಚಯವನ್ನು ಕೈಕೊಂಡು ಮುನ್ನಡೆದಲ್ಲಿ ಪ್ರತಿಯೋರ್ವರೂ ಕೂಡಾ ಉತ್ತಮ ವ್ಯಕ್ತಿಗಳಾಗಿ ಬದುಕಬಹುದು. ಈ ನಿಟ್ಟಿನಲ್ಲಿ ನಮ್ಮ ಹೆಜ್ಜೆ ಇರಲಿ. ಶುಭವಾಗಲಿ.
..............................................ಹರಿಣಾಕ್ಷಿ. ಕೆ
ಸಹಶಿಕ್ಷಕಿ
ಸ.ಮಾ.ಉ.ಹಿ.ಪ್ರಾ.ಶಾಲೆ, ಉಪ್ಪಿನಂಗಡಿ
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
********************************************


Ads on article

Advertise in articles 1

advertising articles 2

Advertise under the article