-->
ಜೀವನ ಸಂಭ್ರಮ : ಸಂಚಿಕೆ - 38

ಜೀವನ ಸಂಭ್ರಮ : ಸಂಚಿಕೆ - 38

ಜೀವನ ಸಂಭ್ರಮ : ಸಂಚಿಕೆ - 38
                       
                                ಸಂಸ್ಕೃತಿ
     ಮಕ್ಕಳೇ..... ನಾವು ಕಳೆದ ಲೇಖನದಲ್ಲಿ ಮೌಲ್ಯದ ಬಗ್ಗೆ ತಿಳಿದುಕೊಂಡಿದ್ದೇವೆ‌. ಈ ದಿನ ಸಂಸ್ಕೃತಿ ಎಂದರೇನು ನೋಡೋಣ. ಸಂಸ್ಕೃತಿಯ ಬಗ್ಗೆ ಡಾಕ್ಟರ್ ಗುರುರಾಜ ಕರ್ಜಗಿ ಅವರು ಬಹಳ ಮನೋಹರವಾಗಿ ಉಪನ್ಯಾಸದಲ್ಲಿ ಹೇಳಿದ್ದು ಹೀಗಿದೆ...... ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮೂರು ಪದಗಳು ಬಳಕೆಯಲ್ಲಿವೆ. ಅವು ಪ್ರಕೃತಿ , ಸಂಸ್ಕೃತಿ ಮತ್ತು ವಿಕೃತಿ. ಪ್ರಕೃತಿ ಎಂದರೆ ನೈಸರ್ಗಿಕವಾಗಿ ಇರುವಂತಹದ್ದು. ಕಲ್ಲು , ಮಣ್ಣು ಮತ್ತು ಗಿಡ ಹೀಗೆ. ಒಬ್ಬ ಶಿಲ್ಪಿಗಾರ ಬರುತ್ತಾನೆ , ಆತನಿಗೆ ಶಿಲ್ಪದ ಬಗ್ಗೆ ಜ್ಞಾನವಿದೆ ಪರಿಶ್ರಮ ಮಾಡುವ ಮನಸ್ಸಿದೆ. ಆ ಪ್ರಕೃತಿದತ್ತವಾದ ಕಲ್ಲನ್ನು ನೋಡಿ ತಮ್ಮ ಜ್ಞಾನ ಮತ್ತು ಪರಿಶ್ರಮದಿಂದ ಅದ್ಭುತ ಕೆತ್ತನೆ ಮಾಡಿ ಸುಂದರವಾದ ಮೂರ್ತಿ ಮಾಡುತ್ತಾನೆ. ಪ್ರಕೃತಿದತ್ತವಾದ ಕಲ್ಲು ಸುಂದರವಾದ ಮೂರ್ತಿ ಆಗುತ್ತದೆ. ಆ ಮೂರ್ತಿಯೇ ಸಂಸ್ಕೃತಿ. ಪ್ರಕೃತಿದತ್ತವಾದ ಕಲ್ಲನ್ನು ಮೂರ್ತಿ ಮಾಡುವ ಪ್ರಕ್ರಿಯೆ ಶಿಕ್ಷಣ ಎನ್ನುತ್ತೇವೆ. ಕಲ್ಲಿನಲ್ಲಿ ಕೆತ್ತನೆ ಮಾಡುವಾಗ ಎಲ್ಲಿ ಹದವಾದ, ಮೆದುವಾದ ಪೆಟ್ಟು ನೀಡಬೇಕು, ಎಲ್ಲಿ ಮೆದು ಪೆಟ್ಟು ನೀಡಿ, ಎಲ್ಲಿ ಜೋರಾದ ಪೆಟ್ಟು ನೀಡಬೇಕು , ಅಲ್ಲಿ ಜೋರು ಪೆಟ್ಟು ನೀಡಿ ಸುಂದರವಾದ ಮೂರ್ತಿ ಕೆತ್ತ ಬೇಕಾಗುತ್ತದೆ. ನಿಜವಾಗಿ ಪೆಟ್ಟು ನೀಡುವ ಜಾಗದಲ್ಲಿ ಜೋರಾಗಿ , ಜೋರಾಗಿ ಪೆಟ್ಟು ನೀಡುವ ಜಾಗದಲ್ಲಿ ಮೆದು ಪೆಟ್ಟು ನೀಡಿದರೆ ವಿಗ್ರಹದ ಬದಲು ವಿರೂಪಗೊಂಡ ಕಲ್ಲಾಗುತ್ತದೆ. ಪ್ರಕೃತಿದತ್ತವಾದ ಕಲ್ಲು ಸಂಸ್ಕೃತಿ, ಆಗಬೇಕಾದದ್ದು ವಿಕೃತಿಯಾಗುತ್ತದೆ.....
      ಅದೇ ರೀತಿ ಶಿಕ್ಷಣ ಕೂಡ. ಮಗು ಜನಿಸಿದಾಗ ಪ್ರಕೃತಿದತ್ತವಾಗಿ ಇರುತ್ತದೆ. ನಂತರ ಶಾಲೆಗೆ ಸೇರುತ್ತದೆ. ಜ್ಞಾನವಿರುವ ಶಿಕ್ಷಕ ಪ್ರಕೃತಿದತ್ತವಾದ ಮಗುವನ್ನು ತಿದ್ದಿ ತೀಡಿ ಸುಸಂಸ್ಕೃತ ನಾಗರಿಕರನ್ನಾಗಿ ರೂಪಿಸುತ್ತಾನೆ. ಪ್ರಕೃತಿದತ್ತವಾದ ಮಗು ಸುಸಂಸ್ಕೃತ ನಾಗುವ ಪ್ರಕ್ರಿಯೆ ಶಿಕ್ಷಣ. ಸರಿಯಾದ ಶಿಕ್ಷಕ ದೊರಕದಿದ್ದರೆ ಸರಿಯಾಗಿ ತಿದ್ದಿ-ತೀಡದಿದ್ದರೆ ಪ್ರಕೃತಿದತ್ತವಾದ ಮಗು ಸುಸಂಸ್ಕೃತ ನಾಗರಿಕ ನಾಗುವ ಬದಲು ವಿಕೃತ ಮನುಷ್ಯನಾಗುತ್ತಾನೆ. ಇಂತಹ ವಿಕೃತ ಮನುಷ್ಯನಿಂದ ಸಮಾಜ ಮತ್ತು ನಿಸರ್ಗ ಹಾನಿಗೊಳಗಾಗುತ್ತದೆ. ಹೀಗೆ ಸಾಕಷ್ಟು ಉದಾಹರಣೆ ನೀಡಬಹುದು. ಕೆಲವು ಉದಾಹರಣೆಗಳನ್ನು ನೋಡೋಣ.
1. ಗಿಡಗಳು ಸಹಜವಾಗಿ ಪ್ರಕೃತಿದತ್ತವಾಗಿ ಬೆಳೆಯುತ್ತದೆ. ಇದನ್ನು ಸುಂದರ ತೋಟವನ್ನಾಗಿ ಮಾಡುವುದು ಸಂಸ್ಕೃತಿ.
2. ಅಕ್ಕಿ ಪ್ರಕೃತಿ. ಇದನ್ನು ಅನ್ನ ಮಾಡುವುದು ಸಂಸ್ಕೃತಿ.
3. ಹತ್ತಿ ಪ್ರಕೃತಿ. ಇದನ್ನು ಸುಂದರ ಬಟ್ಟೆ ತಯಾರು ಮಾಡುವುದು ಸಂಸ್ಕೃತಿ.
4 ಗಂಟಲು ಪ್ರಕೃತಿ. ಗಂಟಲಿನಿಂದ ಬರುವ ರಾಗ ಧ್ವನಿ ಸಂಸ್ಕೃತಿ.
5 ಕಾಲು ಪ್ರಕೃತಿ. ನೃತ್ಯ ಸಂಸ್ಕೃತಿ.
ಹೀಗೆ ಸಂಸ್ಕೃತಿಗಳನ್ನು ಪಟ್ಟಿ ಮಾಡುತ್ತಾ ಹೋಗಬಹುದು. ಭಾರತೀಯ ಸಾಹಿತ್ಯ ಎಷ್ಟು ಸುಂದರವಾಗಿದೆ.... ಆದರೆ ಇಂದು ಸಂಸ್ಕೃತಿಯ ಬಗ್ಗೆ ಸಾಮಾಜಿಕ ಜಾಲತಾಣ ದೃಶ್ಯಮಾಧ್ಯಮಗಳಲ್ಲಿ ಬರುತ್ತಿರುವುದನ್ನು ನೋಡಿದರೆ ಆಘಾತ ವಾಗುತ್ತದೆ. ಇದು ನಮ್ಮ ಸಂಸ್ಕೃತಿ. ಅದು ನಿಮ್ಮ ಸಂಸ್ಕೃತಿಯೆಂದು ಪ್ರತ್ಯೇಕಿಸಲ್ಪಟ್ಟಾಗ ಅರ್ಥಹೀನವಾಗುತ್ತದೆ. ಸಂಸ್ಕೃತಿ ಎಂದರೆ ಭಾವನೆಗಳಿಗೆ ಹಿತವಾಗಬೇಕು. ಅದನ್ನು ಸರಿಯಾಗಿ ಅರ್ಥೈಸಿಕೊಂಡರೆ ಜೀವನ ಮಧುರ ಸುಂದರ. ಪ್ರತಿಯೊಂದು ಧರ್ಮ, ಜನಾಂಗಗಳಲ್ಲಿ, ಆಚಾರ-ವಿಚಾರಗಳಲ್ಲಿ ವೈವಿಧ್ಯತೆ ಕಾಣಬಹುದು. ಅದು ಕೂಡ ಪ್ರಕೃತಿದತ್ತವಾದುದು. ಸುಂದರ ರೂಪಕ್ಕೆ ತರುವುದು ಎಂದೇ ಭಾವಿಸಬೇಕು. ಅಲ್ಲವೇ ಮಕ್ಕಳೇ......
.........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article