
ಜೀವನವೂ ಒಂದು ಕರ್ತವ್ಯವೆ?
Thursday, June 23, 2022
Edit
ಗೀತಾ ಶ್ಯಾನ್ ಭಾಗ್
ಸರಕಾರಿ ಅಭ್ಯಾಸಿ ಪ್ರೌಢಶಾಲೆ.
ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ.
ಪ್ರಿಯ ಮಕ್ಕಳೆ, "ಓದು, ಓದು,ಓದು,.... ಪರೀಕ್ಷೆ ಚೆನ್ನಾಗಿ ಬರೆ. ನಿನ್ನ ಕರ್ತವ್ಯ ನೀನು ಮಾಡು. ಫಲ ಏನು ಸಿಗುತ್ತೆ ಅಂತಾ ನೋಡೋಣ"..... ಇಂತಹ ಮಾತುಗಳನ್ನು ನೀವು ಈಗಾಗಲೇ ಹಲವರಿಂದ ಕೇಳಿರುತ್ತೀರಿ ಅಲ್ಲವೆ.....? ಹಾಗಾದರೆ ಕರ್ತವ್ಯ ಎಂದರೇನು...?
ಸೂಕ್ತ ವಯಸ್ಸಿನ ಮಕ್ಕಳು ಶಾಲೆಗೆ ಹೋಗಲೇಬೇಕು. ಶಾಲೆಗೆ ಹೋದ ನಂತರ ಅಲ್ಲಿ ಯಾವುದನ್ನು ಕಲಿಯಬೇಕೋ ಅದನ್ನು ಕಲಿಯಲೇಬೇಕು. ಅದುವೇ ಆ ಹಂತದ ಜೀವನವಾದ್ದರಿಂದ ಕಲಿಕೆಯುವುದೇ ಅಥವಾ ಕಲಿಕಾ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದೇ ಸಹಜ ಬೆಳವಣಿಗೆ ಆಗಿರುತ್ತದೆ. ಆದರೂ ಶಾಲೆಗೆ ಹೋಗುವುದು ಕಲಿಯುವುದು ಪರೀಕ್ಷೆ ಬರೆದು ಉತ್ತಮ ಅಂಕ ಸಂಪಾದಿಸುವುದು.... ಮುಂತಾದವನ್ನು ಕರ್ತವ್ಯವೆಂದು ಹೇಳುತ್ತಾ , ಏನೋ ಮಹಾನ್ ಸಾಧನೆ ಮಾಡಿದವರಂತೆ ಬೀಗುತ್ತೇವಲ್ಲವೇ ನಾವು...? ಹಾಗಾದರೆ ಜೀವನವೆಂದರೇನು....?
ಯಾವುದನ್ನು ನಾವು ಕರ್ತವ್ಯವೆಂದು ತಪ್ಪಾಗಿ ಭಾವಿಸಿ ಬೀಗುತ್ತೇವೆಯೋ ಅದು ಕೇವಲ ಕರ್ತವ್ಯವಲ್ಲ , ಬದಲಾಗಿ ಅದು ಸಹಜ ಜೀವನವೇ ಆಗಿರುತ್ತದೆ. ನಮ್ಮಲ್ಲಿ ಹಿರಿಯರು ತಮ್ಮ ತಂದೆ ತಾಯಂದಿರನ್ನು ಅವರ ವೃದ್ಧಾಪ್ಯದಲ್ಲಿ ಸಾಕುವುದನ್ನು ಪ್ರೀತಿಯಿಂದ ನೋಡಿಕೊಳ್ಳುವುದನ್ನು ಕರ್ತವ್ಯವೆಂದು ತಪ್ಪಾಗಿ ತಿಳಿದು ಅದೇ ಭಾವನೆಯಲ್ಲಿ ತಮ್ಮ ಆಪ್ತರಲ್ಲಿ "ಅಪ್ಪ ಅಮ್ಮನ ಇಳಿವಯಸ್ಸಿನಲ್ಲಿ ಅವರ ಆರೈಕೆ ನಮ್ಮ ಕರ್ತವ್ಯವಲ್ಲವೆ.....?" ಎಂದು ಏನೋ ಮಹಾನ್ ಕಾರ್ಯ ಮಾಡುತ್ತಿದ್ದೇವೆಂದು ಹೇಳಿಕೊಳ್ಳುವುದನ್ನು ನೀವೂ ಕೇಳಿದ್ದಿರಬಹುದು. ವಾಸ್ತವದಲ್ಲಿ ಹೆತ್ತವರು ಮತ್ತು ಅವರ ಮಕ್ಕಳು ಜೊತೆಗಿದ್ದು ಬದುಕುವುದು ಜೀನವದ ಒಂದು ಸುಂದರವಾದ ಭಾವ ಮತ್ತು ಪ್ರಕ್ರಿಯೆ.
ನಾನು ಮತ್ತು ನನ್ನ ಕುಟುಂಬದ ಜೊತೆಗಿನ ಸಖ್ಯ ಸಂಬಂಧಗಳು ದೇಹಕ್ಕೂ ಮತ್ತು ಆ ದೇಹದ ಉಸಿರಿಗೂ ಇರುವ ಸಖ್ಯದಂತೆ ಅವಿನಾಭಾವಿಯಾಗಿದೆ. ಉಸಿರಿಲ್ಲದೇ ಹೇಗೆ ದೇಹವು ಜೀವಕ್ರಿಯೆಗಳನ್ನು ನಡೆಸಲಾರದೋ ಹಾಗೆಯೇ ಬೆಳವಣಿಗೆಯ ಪ್ರತಿಹಂತದ ಚಟುವಟಿಕೆಗಳು, ಕೆಲಸಕಾರ್ಯಗಳು ನಮ್ಮ ಜೀವನನದ ಪ್ರಮುಖ ಭಾಗವೇ ಆಗುತ್ತಾ ಹೋಗಿ ಅದುವೇ ಜೀವನ ಅನಿಸಿಕೊಂಡು ಬಿಡುತ್ತದೆ. ಆಯಾ ಹಂತದ ಬೆಳವಣಿಗೆಗೆ ಅಗತ್ಯವಾದದ್ದು ಯಾವುದೂ ಕೇವಲ ಕರ್ತವ್ಯವಾಗಿರಲಾರದು. ಮತ್ತು ಪ್ರತಿಹಂತದ ಜವಾಬ್ದಾರಿಗಳನ್ನು ನಾವು ಸಮರ್ಥವಾಗಿ ನಿರ್ವಹಿಸಬಲ್ಲೆವಾದರೆ ಮಾತ್ರ ನಾವು ಸರಿಯಾಗಿ ಉಸಿರಾಡುತ್ತಿದ್ದೇವೆ ಎಂದರ್ಥ.
ಮುದ್ದು ಮಕ್ಕಳೆ , ನೀವು ಶಾಲೆಗೆ ಹೋಗುವುದು, ಆಟ ಆಡುವುದು, ಓದುವುದು ,ಬರೆಯುವುದು, ಮನೆಗೆಲಸ ಮಾಡುವುದು, ಪರೀಕ್ಷೆ ಬರೆಯುವುದು ,ಚಿತ್ರ ಬಿಡಿಸುವುದು, ಒಗಟಿಗೆ ಉತ್ತರಿಸುವುದು, ಹಾಡುವುದು, ನರ್ತಿಸುವುದು, ಆಲಿಸುವುದು , ಸಣ್ಣಕೀಟಲೆಮಾಡಿ ನಕ್ಕುಬಿಡುವುದು, ಸಮ-ವಯಸ್ಕರ ಜೊತೆ ಸುತ್ತಾಡುವುದು, ಪ್ರಕೃತಿಯ ಗಮ್ಯತೆಯನ್ನು ರಮ್ಯತೆಯನ್ನು ಬೆಕ್ಕಸಬೆರಗಾಗುವಂತೆ ಕಂಡು ಆನಂದಿಸುವುದು...... ಮುಂತಾದುವೆಲ್ಲವೂ ನಿಮ್ಮ ಜೀವನದ ಒಂದು ಭಾಗವೇ ಆಗಿದೆ... ಅಥವಾ ಜೀವನವೇ ಆಗಿದೆ.
ಹಾಗಾಗಿ "ಜೀವನ"ವೇ ಆಗಿರುವ ಪ್ರಕ್ರಿಯೆಗಳಿಗೆ "ಕರ್ತವ್ಯ" ಎಂಬ ಚಿಕ್ಕ ಶೀರ್ಷಿಕೆ ಕೊಡದೇ.. ಶಾಲೆ , ಓದು , ಪರೀಕ್ಷೆ... ಗಳನ್ನು ಆನಂದಿಸಿ. ಜೀವನ ಒಂದು ಸುಂದರ ಅನುಭವ. ಅದನ್ನು ಸಂಭ್ರಮಿಸಿ.. ಶುಭವಾಗಲಿ.
ಸರಕಾರಿ ಅಭ್ಯಾಸಿ ಪ್ರೌಢಶಾಲೆ.
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ.
*******************************************