-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 51

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 51

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
    
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 51     
           
             ಸಣ್ಣವರಿದ್ದಾಗ ಯಾವುದೇ ಆಚರಣೆ ಆಚರಿಸುವುನ್ನು ಅರ್ಥಪೂರ್ಣವಾಗಿ ಕಲಿಸಿದರೆ ದೊಡ್ಡವರಾದಾಗ ಅರ್ಥಪೂರ್ಣ ಬದುಕನ್ನು ಕಟ್ಟಿಕೊಳ್ಳುತ್ತಾರೆ ಎಂಬ ಹಿರಿಯರ ಮಾತು ನಿಜಕ್ಕೂ ಸತ್ಯ. ಇತ್ತೀಚೆಗಿನ ಹುಟ್ಟುಹಬ್ಬದ ಆಚರಣೆಗಳನ್ನು ಕಂಡಾಗ ಅಂದು ಅರ್ಥವಾಗದ ವಿಚಾರ ಈಗ ಅರ್ಥವಾಗುತ್ತಿದೆ. ಇದಕ್ಕೆ ಪೂರಕವಾಗಿ ನಾನು ನೋಡಿದ 2 ಹುಟ್ಟು ಹಬ್ಬಗಳ ಆಚರಣೆಯನ್ನು ನಿಮ್ಮೆದುರು ವಿವರಿಸುತ್ತಿದ್ದೇನೆ.
        ರಮೇಶನದ್ದು ಆರ್ಥಿಕವಾಗಿ ಅಷ್ಟೊಂದು ಸ್ಥಿತಿವಂತರಲ್ಲದ ಸಾಮಾನ್ಯ ಕುಟುಂಬ. ತನ್ನ ಪರಿಚಯಸ್ಥ ಮನೆಯವರು ಮನರಂಜನೆಗಾಗಿ ಮತ್ತು ಸ್ಟೇಟಸ್ ಗಾಗಿ ಅರ್ಥವಿಲ್ಲದೆ ಆಚರಿಸುತ್ತಿದ್ದ ಹುಟ್ಟುಹಬ್ಬವನ್ನು ನೋಡಿ ತಾನೂ ಕೂಡಾ ತನ್ನ ಮಗನ ಹುಟ್ಟಿದ ಹಬ್ಬವನ್ನು ಆಚರಿಸಲು ನಿರ್ಧರಿಸುತ್ತಾನೆ. ಅದೇ ಲೈಟಿಂಗ್ಸ್ , ಕ್ಯಾಟರಿಂಗ್‌ನವರ ಭೋಜನ ವ್ಯವಸ್ಥೆ, ಶಾಮಿಯಾನ - ಅಲಂಕಾರ, ಡಿ. ಜೆ ಗುದ್ದಾಟ, ಕೇಕ್ , ಗಿಫ್ಟ್ ಗಳು... ಹೀಗೆ ಹಲವಾರು ಸಿದ್ಧತೆಗಳ ನಡುವೆ 20,000 ರೂಪಾಯಿಗಳ ಬಜೆಟ್ ನಲ್ಲಿ ಹುಟ್ಟುಹಬ್ಬ ಆಚರಿಸುವ ಯೋಜನೆ ಸಿದ್ಧವಾಯಿತು. ಇಷ್ಟೆಲ್ಲ ವ್ಯವಸ್ಥೆಯಿದ್ದರೂ ಮಧ್ಯಾಹ್ನ ಹನ್ನೆರಡು ಗಂಟೆಯಿಂದ ಎರಡು ಗಂಟೆಯೊಳಗೆ ಸೇರಿದ ನೆಂಟರು ಬಂದಷ್ಟೇ ವೇಗದಲ್ಲಿ ಮಾಯವಾದರು. ಕೊನೆಗುಳಿದದ್ದು ಅದೇ ಮನೆಯ ಏಳೆಂಟು ಸದಸ್ಯರು. ಬಜೆಟ್ ಮೀರಿದ ಖರ್ಚಿನ ನಡುವೆ ಮರುದಿನ ಬಿಲ್ ಪಾವತಿಗಾಗಿ ಕ್ಯಾಟರಿಂಗ್ , ಶಾಮಿಯಾನ , ಅಲಂಕಾರದವರು... ಹೀಗೆ ಎಲ್ಲರೂ ಸಾಲಾಗಿ ಬಂದಾಗ ಹಣ ಕೊಡಲಾಗದೆ ಸಾಲ ಮಾಡಿ ತಲೆಯ ಮೇಲೆ ಕೈ ಹೊತ್ತು ನಿಲ್ಲುವ ಪರಿಸ್ಥಿತಿ ರಮೇಶನದ್ದು. ಈ ಎಲ್ಲದರ ನಡುವೆ ಬರ್ತ್ ಡೇ ಬಾಯ್ (ಹುಟ್ಟುಹಬ್ಬದ ಹುಡುಗ) ಗೆ ಸಿಕ್ಕಿದ ಕೊಡುಗೆ ಏನು.....? ಆತನಿಗೆ ಸಿಕ್ಕಿದ ಮೌಲ್ಯವೇನು.....? ಆತನು ಕಲಿತ ಪಾಠ ಏನು.....? ಆತನು ಪಟ್ಟ ಸಂತೋಷವೇನು.....? ಹುಟ್ಟುಹಬ್ಬದ ಮರುದಿನದ ನಂತರ ಪಾಲಕರ ಸಾಲಕ್ಕೆ ಪರಿಹಾರವೇನು.....? ಹೀಗೆ ಯೋಚಿಸಿದರೆ ಉತ್ತರವಿಲ್ಲ.
       ಮಹೇಶನದ್ದು ಕೂಡಾ ಸಾಮಾನ್ಯ ಕುಟುಂಬ. ಮಗನ ಆಸೆಯಂತೆ ಹುಟ್ಟುಹಬ್ಬದ ಆಚರಣೆ ಮಾಡಿದ. ಆದರೆ ರಮೇಶನಂತೆ ದುಂದುವೆಚ್ಚ ಮಾಡದೆ ಸರಳವಾಗಿ ಅರ್ಥ ಪೂರ್ಣವಾಗಿ ಆಚರಿಸಿದ. ಸರಳ ಊಟ , ಸರಳ ಕಾರ್ಯಕ್ರಮದೊಂದಿಗೆ ಸೀಮಿತ ಸಂಖ್ಯೆಯಲ್ಲಿ ಆಚರಣೆ ಸಂಪನ್ನ. ಯಾವುದೇ ಸಾಲ ಮಾಡಲಿಲ್ಲ. ದುಂದುವೆಚ್ಚವಾಗುವ ಹಣದಲ್ಲಿ ತನ್ನ ಮಗನ ಕಲಿಕಾ ಪರಿಸರ ನಿರ್ಮಾಣಕ್ಕೆ ಬೇಕಾದ ಒಳ್ಳೆಯ ಡೆಸ್ಕ್ ಬೆಂಚು, ವಿರಾಮಕಾಲದ ಬಳಕೆಗೆ ಚಿತ್ರಕಲೆ ಪುಸ್ತಕ ಹಾಗೂ ಸ್ಕೆಚ್ - ಬಣ್ಣ - ಬ್ರಶ್ ಗಳು, ಮೌಲ್ಯಯುತ ಕಥೆ ಪುಸ್ತಕ , ಆಟದ ಸಾಮಾಗ್ರಿಗಳು , ಚಿಂತನೆ ಬೆಳೆಸುವ ಫಜಲ್ಸ್ ... ಇತ್ಯಾದಿ ತಂದುಕೊಟ್ಟು ಮಗನ ಜತೆ ಸಂಭ್ರಮದಲ್ಲಿ ಭಾಗಿಯಾದರು. ಮಗ ಇದನ್ನೆಲ್ಲ ನಿರಂತರವಾಗಿ ಬಳಸಿ ದಿನಾಲೂ ಸಂಭ್ರಮಿಸುತ್ತಿದ್ದ...... 
       ಈ ಎರಡು ಸಂದರ್ಭದಲ್ಲೂ ಆಚರಣೆಯ ರೀತಿಯನ್ನು ಗಮನಿಸಿದರೆ ರಮೇಶನದ್ದು ಅರ್ಥ ರಹಿತ ಹಾಗೂ ಮುಂದಾಲೋಚನೆ ರಹಿತ ಆಚರಣೆಯಾದರೆ ಮಹೇಶನದ್ದು ಅರ್ಥ ಹಾಗೂ ಮುಂದಾಲೋಚನೆ ಸಹಿತ ಆಚರಣೆಯಾಗಿದೆ. ರಮೇಶನದ್ದು ಒಂದು ದಿನದ ಆಚರಣೆಯಾದರೆ ಮಹೇಶನದ್ದು ನಿರಂತರ ಆಚರಣೆ. ರಮೇಶನದ್ದು ಆಡಂಬರವಾದರೆ ಮಹೇಶನದ್ದು ಸರಳ ಆಚರಣೆ. ರಮೇಶನದ್ದು ಕಲಿಕಾ ರಹಿತ ಪರಿಸರ ನಿರ್ಮಾಣವಾದರೆ ಮಹೇಶನದ್ದು ಕಲಿಕಾ ಪೂರಕ ಪರಿಸರ ನಿರ್ಮಾಣ. ರಮೇಶನದ್ದು ಸಾಲದ ಹೊರೆಯಾದರೆ ಮಹೇಶನದ್ದು ಸಾಲರಹಿತ ಸಂತಸದ ಹೊಳೆ. ಹಾಗಾಗಿ ಯಾವುದೇ ಆಚರಣೆಗೆ ಅರ್ಥ ಬರಬೇಕಾದರೆ ಯಾವುದೇ ಅಂಧಾನುಕರಣೆ ಬೇಡ ಅರ್ಥಾನುಕರಣೆ ಇರಲಿ.
        ಸಣ್ಣವರಿದ್ದಾಗ ಮೋಜು ಮಸ್ತಿ ಕಲಿಸಿದರೆ ದೊಡ್ಡವರಾದಾಗ ನಿಷ್ಪ್ರಯೋಜಕರಾಗುತ್ತಾರೆ. ಸಣ್ಣವರಿದ್ದಾಗ ದುಡ್ಡಿನ ಬೆಲೆ ಕಲಿಸಿದರೆ ದೊಡ್ಡವರಾದಾಗ ದುಡ್ಡಿಗೆ ಬೆಲೆ ಕೊಡುತ್ತಾರೆ. ಸಣ್ಣವರಿದ್ದಾಗ ಸಂಸ್ಕಾರ ಕಲಿಸಿದರೆ ದೊಡ್ಡವರಾದಾಗ ಸಂಸ್ಕೃತಿ ಮೆರೆಸುತ್ತಾರೆ. ಸಣ್ಣವರಿದ್ದಾಗ ಪುಸ್ತಕ ಕೊಟ್ಟರೆ ದೊಡ್ಡವರಾದಾಗ ಮಸ್ತಕ ಬೆಳೆಯುತ್ತದೆ. ಸಣ್ಣವರಿದ್ದಾಗ ಚಿತ್ರ ಕೊಟ್ಟರೆ ದೊಡ್ಡವರದಾಗ ತನ್ನದೇ ಉತ್ತಮ ವ್ಯಕ್ತಿತ್ವದ ಚಿತ್ರ ಬಿಡಿಸುತ್ತಾರೆ. ಸಣ್ಣವರಿದ್ದಾಗ ರಕ್ಷಣೆ ಕೊಟ್ಟರೆ ದೊಡ್ಡವರಾದಾಗ ರಕ್ಷಿಸುತ್ತಾರೆ. ಬನ್ನಿ ನಾವೆಲ್ಲ ಸಣ್ಣವರನ್ನು ದೂರಿ ದೊಡ್ಡ ಜನರಾಗದೆ ದೂರದೆ 'ದೊಡ್ಡ ಜನರಾಗೋಣ. ಮಕ್ಕಳ ಸುಂದರ ಬದುಕಿನ ಆಚರಣೆಗಾಗಿ ಅರ್ಥ ವತ್ತಾಗಿ ಆಚರಣೆಗಳನ್ನು ಆಚರಿಸಲು ನಿರ್ಧರಿಸೋಣ. ಆಚರಣೆಗಳನ್ನು ಧನಾತ್ಮಕವಾಗಿ ಆಚರಿಸಲು ಬದಲಾಗೋಣ. ಈ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************

Ads on article

Advertise in articles 1

advertising articles 2

Advertise under the article