ಪ್ರೀತಿಯ ಪುಸ್ತಕ : ಸಂಚಿಕೆ - 9
Friday, June 3, 2022
Edit
ಪ್ರೀತಿಯ ಪುಸ್ತಕ
ಸಂಚಿಕೆ - 9
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ.
ಪ್ರೀತಿಯ ಮಕ್ಕಳೇ......, ನಿಮ್ಮ ಮನೆ ಎಲ್ಲಿ ಅಂತ ಕೇಳಿದರೆ, ಯಾವುದಾದರೂ ಒಂದು ಊರಿನ ಹೆಸರು ಹೇಳುತ್ತೀರಿ. ಅದೇ ನಮ್ಮೆಲ್ಲರ, ಸಕಲ ಜೀವ ರಾಶಿಗಳ ಮನೆ ಎಲ್ಲಿ ಅಂತ ಕೇಳಿದರೆ “ಭೂಮಿ ನಮ್ಮ ಮನೆ” ಅಂತ ಹೇಳಲೇ ಬೇಕಾಗುತ್ತದೆ ಅಲ್ಲವೇ.. ಈ ಭೂಮಿಯಲ್ಲಿ ನಾವು ಮನುಷ್ಯರು ಬದುಕುವ ರೀತಿಯಿಂದಾಗಿ, ನಮ್ಮ ಜೊತೆಗೆ ಬದುಕುತ್ತಿರುವ ಇತರ ಜೀವಿಗಳ ಪಾಡು ಏನಾಗುತ್ತಿದೆ ಎಂಬುದನ್ನು ಈ ಪುಸ್ತಕ ಮನಸ್ಸಿಗೆ ತಟ್ಟುವ ರೀತಿಯಲ್ಲಿ ವಿವರಿಸುತ್ತದೆ. ಚಿತ್ರಗಳೂ ಗಮನ ಸೆಳೆಯುತ್ತವೆ.
“ಉಸಿರುಗಟ್ಟಿಸುವ ಇಂಗಾಲದ ಮಧ್ಯೆ,
ಉಸಿರಿಗಾಗಿ ಹುಡುಕಾಟ,
ಈ ಹಸಿರ ಉಳಿಸಲು ಬೇಕಾಗಿದೆ ಹೋರಾಟ,
ನಾನು ಭೂಮಿ, ನಿಮ್ಮ ಮನೆ
ಅಚ್ಚರಿ ಪ್ರೀತಿಗಳ ಅರಮನೆ “ ಅಂತ ಭೂಮಿ ಹೇಳುತ್ತದೆ, ಅಂತೆಯೇ ಈ ಪುಸ್ತಕದಲ್ಲಿ ಒರಾಂಗುಟಾನ್, ಹಸ್ ದೇವ್ ಅರಣ್ಯ, ಗಂಗಾ ನದಿಯ ಡಾಲ್ಫಿನ್ ಮತ್ತು ಪಾಂಡಿಚೇರಿಯ ಶಾರ್ಕ್ ಮೀನು ಕವಿತೆಗಳ ರೂಪದಲ್ಲಿ ನಮಗೆ ಅವರ ಕತೆ ಹೇಳುತ್ತವೆ. ನಮ್ಮ ಮನೆ ಇದು; ನಮ್ಮೆಲ್ಲರ ಮನೆ, ನಮ್ಮೆಲ್ಲರ ಮನೆಯನ್ನು ನಮ್ಮೆಲ್ಲರಿಗಾಗಿ ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ನಾವು ಯೋಚಿಸಲೇ ಬೇಕಲ್ಲವೇ.. ನಮ್ಮ ಕಣ್ಣು ತೆರೆಸುವ ಪುಸ್ತಕ ಇದು.
ಲೇಖಕರು: ಕಾರ್ತಿಕಾ ನಾಯರ್, ಸಲೀಲ್ ಚತುರ್ವೇದಿ, ಅನುಷ್ಕಾ ರವಿಶಂಕರ್ ಮತ್ತು ಸಂಪೂರ್ಣ ಚಟರ್ಜಿ
ಚಿತ್ರಗಳು: ಐಂದ್ರಿ ಸಿ
ಅನುವಾದ: ಭೂಮಿ ಬಿಳಿಗೆರೆ, ಶಶಿಕಿರಣ್ ಬೆಸುಗೆ
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.50/-
ಆರನೇ/ ಏಳನೆ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರು ಚಿತ್ರ ತೋರಿಸುತ್ತಾ ಚಿಕ್ಕ ಮಕ್ಕಳಿಗೂ ಓದಿ ಇದನ್ನು ಹೇಳಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************