ಹಕ್ಕಿ ಕಥೆ : ಸಂಚಿಕೆ - 53
Tuesday, June 28, 2022
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ನಮಸ್ತೇ..... ಈ ವಾರದ ಹಕ್ಕಿ ಕಥೆಗೆ ಸ್ವಾಗತ.. ಈ ಹಕ್ಕಿ ನೀರನ್ನು ಆಶ್ರಯಿಸಿ ಬದುಕುತ್ತದೆ. ನೀರಿನಲ್ಲಿ ಬದುಕುವ ಮೀನುಗಳೇ ಇದರ ಮುಖ್ಯ ಆಹಾರ. ನೀರಿರುವ ದೊಡ್ಡ ಕೆರೆಗಳಲ್ಲಿ, ಸರೋವರಗಳಲ್ಲಿ, ನದಿಗಳಲ್ಲಿ ಈ ಹಕ್ಕಿಯನ್ನು ನೋಡಬಹುದು. ದೂರದಿಂದ ನೋಡಿದರೆ ಬಾತುಕೋಳಿಗಳಂತೆ ನೀರಿನಲ್ಲಿ ತೇಲುತ್ತಾ ಆ ಕಡೆ ಈ ಕಡೆ ಓಡಾಡುತ್ತಿರುತ್ತವೆ. ಆದರೆ ಇದು ಬಾತುಕೋಳಿ ಅಲ್ಲ. ಗಾತ್ರದಲ್ಲಿ ಬಾತುಕೋಳಿಗಿಂತಲೂ ಹಲವು ಪಟ್ಟು ದೊಡ್ಡ ಹಕ್ಕಿ. ದೊಡ್ಡ ಹದ್ದಿನ ಗಾತ್ರದ ಈ ಹಕ್ಕಿಗೆ ಬಾತುಕೋಳಿಯಂತೆ ಜಾಲಪಾದಗಳು ಇರುತ್ತವೆ. ಇದರಿಂದಾಗಿ ನೀರಿನಲ್ಲಿ ಸುಲಭವಾಗಿ ಈಜಬಲ್ಲವು. ಕೊಕ್ಕರೆಯಂತಹ ಉದ್ದನೆಯ ಕೊಕ್ಕು. ಕೆಳಗಿನ ಕೊಕ್ಕಿನ ಅಡಿಭಾಗದಲ್ಲಿ ದೊಡ್ಡದೊಂದು ಚೀಲ. ಈ ರಬ್ಬರ್ ನಂತಹ ಚೀಲವನ್ನೇ ಬಲೆಯಂತೆ ಬಳಸಿ ಮೀನನ್ನು ಹಿಡಿಯುತ್ತದೆ. ಗುಂಪಾಗಿ ಮೀನು ಹಿಡಿಯುವ ಈ ಹಕ್ಕಿಗಳಲ್ಲಿ ಒಂದು ಹಕ್ಕಿ ತನ್ನ ದೊಡ್ಡ ರೆಕ್ಕೆಗಳಿಂದ ನೀರಿಗೆ ಬಡಿದು ಮೀನನ್ನು ಬೆದರಿಸಿದರೆ, ಮೀನುಗಳು ಓಡುವ ದಾರಿಯಲ್ಲೇ ಕಾದುಕುಳಿತು ಇನ್ನೊಂದು ಹಕ್ಕಿ ತನ್ನ ಕೊಕ್ಕಿನ ಚೀಲದಲ್ಲಿ ಮೀನನ್ನು ಹಿಡಿಯುತ್ತದೆ. ಸುಮಾರು ದೊಡ್ಡ ಹದ್ದಿನ ಗಾತ್ರದ ಈ ಹಕ್ಕಿ ನೀರಿನಲ್ಲೇ ತೇಲಿದರೂ ಅದರ ಗರಿಗಳಿಗೆ ಅಷ್ಟಾಗಿ ನೀರು ಅಂಟಿಕೊಳ್ಳುವುದಿಲ್ಲ. ಹಾಗಾಗಿ ನೇರವಾಗಿ ನೀರಿನಲ್ಲಿ ಲ್ಯಾಂಡ್ ಮಾಡುವುದು ಮತ್ತು ನೀರಿನಿಂದಲೇ ನೇರವಾಗಿ ರೆಕ್ಕೆ ಬಡಿದು ಹಾರಿ ಹೋಗುವುದು ಈ ಹಕ್ಕಿಗೆ ಸಾಧ್ಯ. ನವೆಂಬರ್ ನಿಂದ ಎಪ್ರಿಲ್ ತಿಂಗಳ ನಡುವೆ ದೊಡ್ಡ ಮರಗಳ ಮೇಲೆ ಕಟ್ಟಿಗೆ, ಕಡ್ಡಿಗಳನ್ನು ಜೋಡಿಸಿ ಅಟ್ಟಳಿಗೆಯಂತಹ ಗೂಡು ಮಾಡಿ ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಒಂದೇ ಮರದಲ್ಲಿ ಹಲವಾರು ಗೂಡುಗಳು ಇರುತ್ತವೆ. ಇದರಿಂದ ಹೌಸಿಂಗ್ ಕಾಲನಿ ತರಹ ಅವುಗಳಿಗೂ ಭದ್ರತೆ ಸಿಗುತ್ತದೆ. ನೀರನ್ನು ಆಶ್ರಯಿಸಿ ಬದುಕುವ ಕೊಕ್ಕರೆ, ಬೆಳ್ಳಕ್ಕಿ, ನೀರಕಾಗೆ ಮೊದಲಾದ ಹಕ್ಕಿಗಳೂ ಇದೇ ರೀತಿ ಒಟ್ಟಾಗಿ ಗೂಡು ಕಟ್ಟುತ್ತವೆ.
ನಾನು ಈ ಹಕ್ಕಿಯನ್ನು ಮೊದಲನೆ ಬಾರಿಗೆ ನೋಡಿದ್ದು ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ. ರಂಗನತಿಟ್ಟು, ಕೊಕ್ಕರೆ ಬೆಳ್ಳೂರು, ಅಂಕಸಮುದ್ರ ಮೊದಲಾದ ಕಡೆ ಇವುಗಳನ್ನು ನಾನು ನೋಡಿದ್ದೇನೆ. ಆ ರೀತಿಯ ಸಿಹಿನೀರಿನ ದೊಡ್ಡ ಕೆರೆಗಳು ಇರುವಲ್ಲಿ ಈ ಹಕ್ಕಿ ಕಾಣಸಿಗುತ್ತದೆ ಎಂದು ತಿಳಿದವರು ಹೇಳುತ್ತಾರೆ. ಸಮುದ್ರದ ಉಪ್ಪುನೀರಿಗೆ ಈ ಹಕ್ಕಿ ಯಾವತ್ತೂ ಬರುವುದಿಲ್ಲ. ಹಾಗಾಗಿ ಕರಾವಳಿ ಭಾಗದ ಜನರಿಗೆ ಈ ಹಕ್ಕಿಯ ದರ್ಶನ ಅಪರೂಪವೇ ಸರಿ. ಇದರ ಇನ್ನೆರಡು ಪ್ರಬೇಧಗಳು ಉತ್ತರ ಭಾರತಕ್ಕೆ ಚಳಿಗಾಲದಲ್ಲಿ ವಲಸೆ ಬರುತ್ತವೆ ಎಂದು ಹೇಳುತ್ತಾರೆ
ಕನ್ನಡ ಹೆಸರು: ಹೆಜ್ಜಾರ್ಲೆ
ಇಂಗ್ಲೀಷ್ ಹೆಸರು: Spot-Billed Pelican
ವೈಜ್ಞಾನಿಕ ಹೆಸರು: Pelecanus philippensis
ಛಾಯಾಚಿತ್ರ : ಅರವಿಂದ ಕುಡ್ಲ
ಮುಂದಿನವಾರ ಇನ್ನೊಂದು ಹೊಸ ಹಕ್ಕಿ ಕಥೆಯೊಂದಿಗೆ ಸಿಗೋಣ.. ಬಾಯ್..
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************