-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 52

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 52

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
          
        
       ಕೌಟುಂಬಿಕ ಜೀವನಕ್ಕೆ ಅದ್ಭುತ ಪಾಠ ಕಲಿಸುವ ಜೀವಂತ ಪಾಠಪುಸ್ತಕ ಎಂದರೆ ಅದು ಜೇನುಗೂಡು. ಜೇನುನೊಣವು ಪ್ರಕೃತಿಯಂತೆ ಬದುಕಿ ಶ್ರೇಷ್ಠತೆ ಸಂಪಾದಿಸುವ ಮಾರ್ಗವನ್ನು ತೋರಿಸುವ ಪ್ರಖರ ಜೀವಿ. ಅದರ ಜೀವನ ಕ್ರಮ ಅನುಕರಣೀಯ. ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿಷ್ಠೆಯಿಂದ ನಿರ್ವಹಿಸುವ ಅವುಗಳ ಬದುಕಿನ ರೀತಿ ಅನುಕರಣೀಯ. ಅದರಲ್ಲಿನ ಜೇನುತುಪ್ಪ ತುಂಬಾ ಶ್ರೇಷ್ಠ. ಅದು ಎಲ್ಲರೂ ಬಯಸುವಂತಹ ಮೌಲ್ಯಯುತ ವಸ್ತು. ಅದರ ಔಷಧೀಯ ಗುಣ ಅಪಾರ. ಆದರೆ ಜೇನುತುಪ್ಪ ಅದು ತಾನಾಗಿ ಸೃಜಿಸಲ್ಪಡುವುದಿಲ್ಲ. ಜೇನು ನೊಣಗಳು ಪ್ರತಿ ಹೂವುಗಳನ್ನು ಗುರುತಿಸಿ ಪ್ರೀತಿಸಿ ಅದರಲ್ಲಿನ ಮಕರಂದವನ್ನು ಹೀರಿ ಸಂಗ್ರಹಿಸಿದಾಗ ಮಾತ್ರ ಉತ್ಪತಿಯಾಗುತ್ತದೆ. ಅದೆಂದೂ ಪ್ರಕೃತಿಗೆ ವಿರುದ್ಧವಾಗಿ ಬದುಕದೆ ಪ್ರಕೃತಿಗೆ ಪೂರಕವಾಗಿ ಬದುಕಿದ ಕಾರಣ ಯಾವಾಗಲೂ ಶ್ರೇಷ್ಠತೆಯನ್ನು ಕಂಡಿದೆ. ಹೀಗೆ ಬೇರೆ ಬೇರೆ ಧನಾತ್ಮಕ ದೃಷ್ಟಿಕೋನದಿಂದ ನೋಡಿದಾಗ ಅದರಿಂದ ಕಲಿಯುವ ಅಂಶಗಳು ಅಪಾರ. ನಮ್ಮ ಬದುಕು ಕೂಡಾ ಜೇನುತುಪ್ಪದಂತೆ ಶ್ರೇಷ್ಠವಾಗಬೇಕಾದರೆ ನಾವು ಕೂಡಾ ಪ್ರತಿ ವ್ಯಕ್ತಿಗಳನ್ನು ಪ್ರೀತಿಸಿ ಅವರಲ್ಲಿನ ಉತ್ತಮ ಧನಾತ್ಮಕ ಅಂಶಗಳನ್ನು ಮಾತ್ರ ಸ್ವೀಕರಿಸಿ ಅಳವಡಿಸಬೇಕಾಗುತ್ತದೆ.
ಕೇವಲ ಜೇನುತುಪ್ಪವನ್ನು ಮಾತ್ರ ಇಷ್ಟಪಡುವ ನಾವು ಹೂವಿನಿಂದ ಮಕರಂದ ಸ್ವೀಕರಿಸುವ ಕಲೆ ಕಲಿಯುವುದಿಲ್ಲ. ಹಾಗಾಗಿ ಜೇನುತುಪ್ಪವನ್ನು ಸೃಜಿಸಬೇಕಾದರೆ ಮಕರಂದ ಹೀರುವ ಕಲೆಯನ್ನು ಕಲಿಯಬೇಕಾಗಿದೆ. ಕೇವಲ ಕೀರ್ತಿ, ಸಂಪತ್ತು , ಆಸ್ತಿಯ ಬೆನ್ನುಬಿದ್ದಿರುವ ನಾವು ಅದನ್ನು ಪ್ರೀತಿಯಿಂದ ಸಂಪಾದಿಸದೆ ಬಲತ್ಕಾರವಾಗಿ ಅಥವಾ ಪ್ರಕೃತಿಗೆ ವಿರುದ್ಧವಾಗಿ ಸಂಪಾದಿಸುವ ಆತುರತೆಯಲ್ಲಿ ಸಾಗುತಿದ್ದೇವೆ. ಇದರಿಂದ ಇದ್ದ ನೆಮ್ಮದಿಯನ್ನು ಕ್ಷಣ ಕ್ಷಣಕ್ಕೂ ಕಳೆದುಕೊಳ್ಳುತ್ತಿದ್ದೇವೆ. ಹಾಗಾಗಿ ಬದುಕಿಗೆ ಶ್ರೇಷ್ಠತೆ ದೊರೆಯುತ್ತಿಲ್ಲ. ನೆಮ್ಮದಿ ನೆಲೆಯಾಗುತ್ತಿಲ್ಲ.
       ಹನಿಗೂಡಿ ಹಳ್ಳ - ತೆನೆಗೂಡಿ ಬಳ್ಳ ಎಂಬಂತೆ ಪ್ರತಿಯೊಬ್ಬರಲ್ಲೂ ಇರುವ ಒಂದಲ್ಲ ಒಂದು ಧನಾತ್ಮಕ ಭಾವಗಳನ್ನು ಬಿಡಿಬಿಡಿಯಾಗಿ ಅಳವಡಿಸಿದಾಗ ಬದುಕು ಬಂಗಾರದ ಕಣಜ ವಾಗುತ್ತದೆ. ಆದುದರಿಂದ ಧನಾತ್ಮಕ ಅಂಶಗಳನ್ನು ಗುರುತಿಸುವ ಕೌಶಲ ಜತೆಗೆ ಸ್ವೀಕರಿಸುವ ಗುಣ ನಮ್ಮಲ್ಲಿರಬೇಕಾಗುತ್ತದೆ. ಎಷ್ಟು ಆಕರ್ಷಣೀಯ ಗುಲಾಬಿ ಹೂವಾದರೂ ಅದರಲ್ಲಿನ ಮುಳ್ಳಿನೆಡೆಗೆ ಗಮನವಹಿಸಿದರೆ ಹೂವಿನ ಸೌಂದರ್ಯ ಕಣ್ಣಿಗೆ ಕಾಣಿಸದೆ ಮುಳ್ಳೇ ಕಾಣಿಸುತ್ತದೆ. ಹೂವಿನ ಸೌಂದರ್ಯದ ಕಡೆಗೆ ಗಮನವಹಿಸಿದರೆ ರಸಾನುಭವ ಉಂಟಾಗಿ ಮುಳ್ಳಿನ ನೇತಾತ್ಮಕತೆ ಕಾಣುವುದಿಲ್ಲ. 
       ಅದರಂತೆ ಬದುಕಿನಲ್ಲಿ ನಕರಾತ್ಮಕತೆ ಅಥವಾ ಕೊರತೆಗಳೆಡೆಗೆ ನಮ್ಮ ಗಮನವಿದ್ದರೆ ನಮ್ಮ ಬದುಕೇ ಕೊರತೆಗಳ ಗೂಡಾಗಬಹುದು. ಸಕಾರಾತ್ಮಕತೆ ಅಥವಾ ಉತ್ತಮಾಂಶಗಳೆಡೆಗೆ ಗಮನವಿದ್ದರೆ ನಮ್ಮ ಬದುಕೇ ನಮ್ಮೆದಿಯ ತಾಣವಾಗಬಹುದು. ಹಾಗಾಗಿ ಬದುಕಿನ ನೆಮ್ಮದಿ ನಮ್ಮ ದೃಷ್ಟಿಕೋನದಲ್ಲಿದೆಯೆ ಹೊರತು ಸೌಲಭ್ಯಗಳಿಂದ ಇಲ್ಲ. ಬೆಟ್ಟದ ತುದಿಯಲ್ಲೂ ಕಲ್ಲುಬಂಡೆಗಳ ನಡುವೆಯೂ ನೀರ ಕೊರತೆಗಳ ನಡುವೆಯೂ ಗಿಡಮರಗಳು ಬೆಳೆಯುವುದನ್ನ ನೋಡಬಹುದು. ಹಾಗಾಗಿ ಕೊರತೆಗಳನ್ನು ಗುರುತಿಸಿ ನಿರುತ್ಸಾಹಗೊಳ್ಳದೆ ಅದರ ನಿವಾರಣೆಗೆ ಕ್ರಮ ಕೈಗೊಂಡಾಗ ನೆಮ್ಮದಿ ನೆಲೆಯಾಗುತ್ತದೆ. ಕೊರತೆಗಳ ನಡುವೆ ಬದುಕುವ ಕಲೆಯನ್ನು ಕಲಿಯೋಣ. ಈ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************

Ads on article

Advertise in articles 1

advertising articles 2

Advertise under the article