-->
ಹಕ್ಕಿ ಕಥೆ : ಸಂಚಿಕೆ - 50

ಹಕ್ಕಿ ಕಥೆ : ಸಂಚಿಕೆ - 50

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ

               
         ಮಕ್ಕಳೇ ನಮಸ್ತೇ... ಹಕ್ಕಿ ಕಥೆಯ 50 ನೆಯ ಸಂಚಿಕೆಗೆ ಸ್ವಾಗತ..... ಭಾರತದ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಹೆಚ್ಚಾಗಿ ನೋಡಲು ಸಿಗುವ, ಅಪರೂಪದ, ಅಷ್ಟೇ ವರ್ಣಮಯವಾದ ಹಕ್ಕಿಯೊಂದನ್ನು ನಿಮಗೆ ಪರಿಚಯ ಮಾಡಬೇಕು ಎಂದುಕೊಂಡಿದ್ದೇನೆ. ಹಕ್ಕಿಗಳ ಬಗ್ಗೆ ಅಧ್ಯಯನ ಮಾಡಲು ಪ್ರಾರಂಭಿಸಿದ ಹೊಸತರಲ್ಲಿ ಪಕ್ಷಿವೀಕ್ಷಕರ ಗುಂಪೊಂದು ಫೇಸ್ ಬುಕ್ ನಲ್ಲಿ ಪರಿಚಯವಾಯಿತು. Costal Karnataka Bird Watchers Network ಎಂಬ ಹೆಸರಿನ ಈ ಗುಂಪು ಪಕ್ಷಿಗಳ ಬಗ್ಗೆ ಹಲವಾರು ಸಂಗತಿಗಳನ್ನು ನನಗೆ ಪರಿಚಯಿಸಿದೆ. ನನ್ನ ಹಾಗೆ ಪಕ್ಷಿಗಳಲ್ಲಿ ಆಸಕ್ತರಾದ ಹೊಸ ಹೊಸ ಮಿತ್ರರು ಅಲ್ಲಿ ಸೇರಿಕೊಂಡು ಈಗಲೂ ಕಲಿಯುತ್ತಿದ್ದೇವೆ. ಪೇಸ್ಬುಕ್ ನಲ್ಲಿ ಮಾತ್ರ ಸಿಗುವ ಸ್ನೇಹಿತರು ವರ್ಷಕ್ಕೆ ಒಂದು ಬಾರಿ ಒಂದು ಕಡೆ ಸೇರಿ ಜೊತೆಯಾಗಿ ಪಕ್ಷಿ ವೀಕ್ಷಣೆ ಮಾಡಿ ನಂತರ ಯಾರಾದರೂ ವಿಜ್ಞಾನಿಗಳಿಂದ ಮಾಹಿತಿ ಪಡೆದುಕೊಂಡು ನಮ್ಮ ಜ್ಞಾನವನ್ನು ಹೆಚ್ಚಿಸಿಹೊಳ್ಳುತ್ತಿದ್ದೆವು. ಬೆಂಗಳೂರಿನಂತಹ ಹೊರ ಊರಿನ ಕೆಲವರೂ ನಮ್ಮ ಜೊತೆ ಸೇರಿಕೊಳ್ಳುತ್ತಿದ್ದರು. ಪ್ರತಿ ವರ್ಷ ನಾವು ಸೇರುತ್ತಿದ್ದುದು ಕಾರ್ಕಳ ಎಂಬ ಮಲೆನಾಡಿನ ಮಡಿಲಿನ ಸುಂದರ ಊರಿನಲ್ಲಿ. ಕಾರ್ಕಳ ಪೇಟೆಯ ಹತ್ತಿರದಲ್ಲೇ ದುರ್ಗಾ ಎಂದು ಕರೆಯಲ್ಪಡುವ ಪುಟ್ಟ ಹಳ್ಳಿ ಇದೆ. ಅಲ್ಲಿ ಮನೆಗಳಿಗಿಂತ ಕಾಡೇ ಹೆಚ್ಚು. ಅಲ್ಲಲ್ಲಿ ಹರಿಯುವ ಸಣ್ಣಪುಟ್ಟ ತೊರೆಗಳು, ಎತ್ತರಕ್ಕೆ ಬೆಳೆದ ದಟ್ಟವಾದ ಮರಗಳು, ಅಲ್ಲಲ್ಲಿ ಕಾಣುವ ಬಿದಿರಿನ ಹಿಂಡು, ಹೀಗೆ ಬಹಳ ಚಂದದ ಜಾಗ. ಅಲ್ಲೇ ಈ ಸುಂದರವಾದ ಹಕ್ಕಿಯನ್ನು ನಾನು ಮೊದಲ ಬಾರಿಗೆ ನೋಡಿದ್ದು. ತಲೆ, ಎದೆ ಮತ್ತು ಹೊಟ್ಟೆಯ ಭಾಗದಲ್ಲಿ ಕಪ್ಪು ಬಣ್ಣ, ಹೊಟ್ಟೆಯ ಭಾಗದಲ್ಲಿ ಕೆಂಪು ಬಣ್ಣ, ಎದೆ ಮತ್ತು ಹೊಟ್ಟೆಯ ನಡುವೆ ಬಿಳೀ ಬಣ್ಣದ ನೆಕ್ಲೇಸ್, ಕಣ್ಣಿನ ಸುತ್ತಲೂ ಕಡುನೀಲಿ ಬಣ್ಣದ ಐಲೈನರ್, ಕೊಕ್ಕಿಗೂ ಅದೇ ನೀಲಿ ಬಣ್ಣದ ಲಿಪ್ ಸ್ಟಿಕ್, ರೆಕ್ಕೆ ಮತ್ತು ಬಾಲದಲ್ಲಿ ಬಿಳಿ ಮತ್ತು ಕಪ್ಪು ಬಣ್ಣದ ಪಟ್ಟಿಗಳು. ಪಾರಿವಾಳದ ಗಾತ್ರದ ಈ ಹಕ್ಕಿಯನ್ನು ನಿಜವಾಗಿ ಕಣ್ಣಿಂದ ನೋಡಿದಾಗ ಅದರ ಅಂದಕ್ಕೆ ಮರುಳಾಗದಿರಲು ಸಾಧ್ಯವೇ ಇಲ್ಲ. ಕಾರ್ಕಳದ ಪಕ್ಷಿವೀಕ್ಷಕ ಮಿತ್ರರಾದ ಶಿವಶಂಕರ್, ರಾಜ್ ಮೋಹನ್ ಮತ್ತು ಕಾರ್ತಿಕ್ ಇದರ ಚಿತ್ರವನ್ನು ಆಗಾಗ ಗುಂಪಿನಲ್ಲಿ ಹಾಕುತ್ತಿದ್ದುದು ಯಾಕೆ ಎಂದು ಈಗ ನಮಗೂ ಅರ್ಥವಾಗಿತ್ತು.
       ಗಂಡು ಹಕ್ಕಿಯಷ್ಟು ವರ್ಣಮಯ ಅಲ್ಲದಿದ್ದರೂ ಹೆಣ್ಣು ಹಕ್ಕಿ ನೋಡಲಿಕ್ಕೇನೂ ಕಡಿಮೆ ಇರಲಿಲ್ಲ. ಒಂಟಿಯಾಗಿ ಇಲ್ಲವೇ ಜೋಡಿಯಾಗಿ ಮಾತ್ರ ಕಾಣಸಿಗುವ ಈ ಹಕ್ಕಿಗಳು ಪಶ್ಚಿಮ ಘಟ್ಟದ ದಟ್ಟ ಕಾಡುಗಳ ಮೂಲನಿವಾಸಿ. ಕರ್ನಾಟಕ , ಕೇರಳ ಮತ್ತು ಮಹಾರಾಷ್ಟ್ರದ ಹಲವಾರು ಕಡೆ ಪಕ್ಷಿವೀಕ್ಷಕರು ಇದನ್ನು ಗಮನಿಸಿ ದಾಖಲಿಸಿದ್ದಾರೆ. ನೀವೇನಾದರೂ ಪಕ್ಷಿವೀಕ್ಷಣೆಯನ್ನು ಹವ್ಯಾಸವಾಗಿ ಬೆಳೆಸಿಕೊಳ್ಳುವ ಯೋಚನೆ ಇದ್ದರೆ, ನೀವು ನೋಡಲೇಬೇಕಾದ ಹಕ್ಕಿಗಳ ಪಟ್ಟಿಯಲ್ಲಿ ಇದರ ಹೆಸರನ್ನು ಖಂಡಿತಾ ಸೇರಿಸಿಕೊಳ್ಳಿ. 
ಕನ್ನಡದ ಹೆಸರು: ಕಾಕರಣೆ
ಇಂಗ್ಲೀಷ್ ಹೆಸರು: Malabar Trogon
ವೈಜ್ಷಾನಿಕ ಹೆಸರು: Harpactes fasciatus
ಛಾಯಾಚಿತ್ರ : ಅರವಿಂದ ಕುಡ್ಲ
ಮುಂದಿನವಾರ ಇನ್ನೊಂದು ಹೊಸ ಹಕ್ಕಿ ಕಥೆಯೊಂದಿಗೆ ಸಿಗೋಣ.. ಬಾಯ್..
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************

Ads on article

Advertise in articles 1

advertising articles 2

Advertise under the article