-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 49

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 49

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
    
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 49
      
           
       ಬದುಕೆಂಬ ಪಯಣದಲ್ಲಿ ಕಲಿಯಬೇಕಾದ ಹಲವಾರು ಪಾಠಗಳಿವೆ. ಪ್ರತಿ ತಿರುವುಗಳಿಗೂ ಅರ್ಥವಿದೆ. ಬದುಕಿನ ಪಯಣದಲ್ಲಿ ಕೆಲವರು ಪ್ರೀತಿಸುತ್ತಾರೆ ಇನ್ನು ಕೆಲವರು ಪೀಡಿಸುತ್ತಾರೆ. ಕೆಲವರು ಪ್ರೋತ್ಸಾಹಿಸುತ್ತಾರೆ ಇನ್ನು ಕೆಲವರು ಪರೀಕ್ಷಿಸುತ್ತಾರೆ. ಕೆಲವರು ಆಶೀರ್ವದಿಸುತ್ತಾರೆ ಇನ್ನು ಕೆಲವರು ದ್ವೇಷಿಸುತ್ತಾರೆ. ಕೆಲವರು ಬೆಂಬಲಿಸುತ್ತಾರೆ ಇನ್ನು ಕೆಲವರು ಬೆನ್ನಿಗೆ ಚೂರಿ ಹಾಕುತ್ತಾರೆ. ಕೆಲವರು ಪರಿಚಿತರಾಗಿದ್ದರೂ ಅಪರಿಚಿತರಾಗುತ್ತಾರೆ ಇನ್ನು ಕೆಲವರು ಅಪರಿಚಿತರಾಗಿದ್ದರೂ ಪರಿಚಿತರಾಗುತ್ತಾರೆ. ಕೆಲವರು ಕಾರಣವಿಲ್ಲದೆ ಜತೆಯಾಗುತ್ತಾರೆ ಇನ್ನು ಕೆಲವರು ಕಾರಣವಿಲ್ಲದೆ ಬಿಟ್ಟು ಹೋಗುತ್ತಾರೆ. ಏಕೆಂದರೆ ಕಾರಣವಿಲ್ಲದೆ ಯಾವ ಪ್ರಯಾಣವು (ಕಾರ್ಯವೂ ) ಸಾಗದು. ಹಾಗಾಗಿ ತಾಳ್ಮೆಯುತ ಬದುಕಿನ ಪಯಣ ನಮ್ಮದಾಗಲಿ. ಬದುಕಿನ ಪಯಣದಲ್ಲಿ ನಮ್ಮೊಳಗೆ ನಾವು ಇಳಿಯುವುದೇ ಧ್ಯಾನ. ನಮ್ಮನ್ನು ನಾವು ತಿಳಿಯುವುದೇ ಜ್ಞಾನ. ನಮ್ಮತನವನ್ನು ನಾವು ಉಳಿಸುವುದೇ ಮೌನ. ಈ ಮೌನದ ಒಗಟನ್ನು ಬಿಡಿಸಿದರೆ ಬದುಕು ಬಂಗಾರ.
        ಈ ಬದುಕು ಎಂಬುದು ಒಂಥರಾ ಬಸ್ ಕಂಡಕ್ಟರ್ ಇದ್ದಂತೆ. ಮಾಲೀಕನಿಂದ (ದೇವರಿಂದ ) ಟಿಕೆಟ್ ಪುಸ್ತಕ (ಜನ್ಮ ರಶೀದಿ) ಸ್ವೀಕರಿಸಿ ಬಸ್ ಹತ್ತಿದ ನಂತರ ನಿಗದಿತ ಕಾಲದವರೆಗೆ (ಆಯುಷ್ಯದವರೆಗೆ) ಬಸ್ಸಿನೊಳಗೆ (ಬದುಕಿನೊಳಗೆ ) ವ್ಯವಹರಿಸಿ ಕೊನೆಗೆ ಸಂಚಾರದ ಅಂತ್ಯದಲ್ಲಿ ಟೆಕೆಟ್ ಲೆಕ್ಕ ಚುಕ್ತಾ ಮಾಡಿ ಮಾಲೀಕನಿಗೆ ಲೆಕ್ಕ ಒಪ್ಪಿಸಿ ಬರಿಗೈಯಲ್ಲಿ ಸ್ವಸ್ಥಾನಕ್ಕೆ ತೆರಳಬೇಕಾಗುತ್ತದೆ. ಇದೇ ಬದುಕಿನ ಸರಳ ಲೆಕ್ಕ.
        ಸಂಚಾರದ ಮಧ್ಯೆ ಕಂಡಕ್ಟರ್ ಕೈಯಲ್ಲಿ ಸಾವಿರಾರು ರೂಪಾಯಿ ದುಡ್ಡುಗಳಿದ್ದರೂ ಅದ್ಯಾವುದೂ ಆತನ ಸ್ವಂತದ್ದಲ್ಲ. ಎಲ್ಲವೂ ತಾತ್ಕಾಲಿಕ ಆಸ್ತಿ. ಸಂಚಾರದ ಮಧ್ಯೆ ಅಲ್ಲಲ್ಲಿ ನೋವು - ನಲಿವುಗಳ ಘಟನೆಗಳು ನಡೆದರೂ ಅದು ಕೂಡಾ ಶಾಶ್ವತವಲ್ಲ. ಅಲ್ಲಲ್ಲಿ ಹೆದರಿಕೆ - ಬೆದರಿಕೆ - ಭಯಾನಕ ದೃಶ್ಯಗಳು ಕಂಡು ಬಂದರೂ ಎಲ್ಲವೂ ತಾತ್ಕಾಲಿಕ. ಜ್ಞಾನಿಗಳು , ಸರಳ ಸಜ್ಜನರೂ , ಶ್ರಮಿಕರೂ , ಬಡವರು , ಶ್ರೀಮಂತರು , ಕೊಲೆಗಡುಕರು , ದುಷ್ಕರ್ಮಿಗಳು , ಕುಡುಕರು , ಮೃದು ಭಾಷಿಗಳು, ಒರಟರು.... ಹೀಗೆ ನೂರಾರು ಜನರ ಸಂಪರ್ಕದಿಂದ ನೂರಾರು ಪಾಠ ಕಲಿಯಬೇಕಾದ ಅನಿವಾರ್ಯತೆ. ಟಿಕೆಟ್ ಮಾಡಿದರೂ ಬೈಯುವವರಿದ್ದಾರೆ. ಟಿಕೆಟ್ ಮಾಡದಿದ್ದರೂ ಬೈಯುವವರಿದ್ದಾರೆ. ಚಿಲ್ಲರೆ ಕೇಳಿದರೂ ದುರುಗುಟ್ಟುವವರಿದ್ದಾರೆ. ಚಿಲ್ಲರೆ ಕೊಡದಿದ್ದರೂ ದುರುಗುಟ್ಟುವವರಿದ್ದಾರೆ. ದಿನವಿಡೀ ಬಸ್ಸಿನಲ್ಲಿ ಸಂಚರಿಸಿದರೂ ಬಸ್ಸು ಯಾವತ್ತೂ ಕಂಡಕ್ಟರ್ ನ ಸ್ವಂತ ಸೊತ್ತಲ್ಲ. ಪಯಣದ ಮಧ್ಯೆ ಯಾರು - ಯಾರನ್ನು ಎಲ್ಲೆಲ್ಲಿ ಇಳಿಸಬೇಕೋ ಅಥವಾ ಹತ್ತಿಸಬೇಕೋ ಎಂಬುದನ್ನು ಸರಿಯಾಗಿ ನೆನಪಿನಲ್ಲಿಡಬೇಕು. ಇಲ್ಲದಿದ್ದರೆ ತೊಂದರೆ ಖಂಡಿತ. ಕಂಡಕ್ಟರ್ ಆಗಿ ಬಸ್ ಪಯಣದಲ್ಲಿ ಜತೆಗಿದ್ದ ಎಲ್ಲರನ್ನು ಖುಷಿಗೊಳಿಸುವುದು ಕಷ್ಟದ ಕೆಲಸ ಆದರೆ ಎಲ್ಲರೊಂದಿಗೆ ಖುಷಿಯಾಗಿರುವುದು ತುಂಬಾ ಸುಲಭದ ಕೆಲಸ. ಏನಾಯ್ತು ? ಏಕಾಯ್ತು ? ಹೇಗಾಯ್ತು ? ಅನ್ನೋದು ಜೀವನವಲ್ಲ. ಏನೇ ಆಗಲಿ , ಏಕೆಯೇ ಆಗಲಿ, ಹೇಗೆಯೇ ಆಗಲಿ ಗಟ್ಟಿ ಮನಸ್ಸಿನೊಂದಿಗೆ ಮುಂದೇ ಸಾಗುವುದೇ ಜೀವನ. ಟೇಕ್ ಈಟ್ ಈಸಿ ಅನ್ನುವುದಕ್ಕಿಂತ ಮೇಕ್ ಇಟ್ ಈಸಿ ನಿಯಮ ಅನುಸರಿಸಿದರೆ ಬದುಕು ಸದಾ ಸಂತಸದಾಯಕವಾಗಿರುತ್ತದೆ..... ಹೀಗೆ ಹಲವಾರು ಅಂಶಗಳನ್ನು ಕಂಡಕ್ಟರ್ ರೂಪದಲ್ಲಿ ಗಮನಿಸಬಹುದು. ಬನ್ನಿ ...ಬದುಕಿನ ಪಯಣದ ಕಂಡಕ್ಟರ್ ಪಾತ್ರದಲ್ಲಿ ಧನಾತ್ಮಕವಾಗಿ ಬದುಕಲು ಬೇಕಾದ ಬದಲಾವಣೆಗೆ ಮನಸ್ಸನ್ನು ತೆರೆದಿಡೋಣ. ಈ ಧನಾತ್ಮಕ ಕಲಿಕೆಯ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************

Ads on article

Advertise in articles 1

advertising articles 2

Advertise under the article