-->
ಓ ಮುದ್ದು ಮನಸೇ ...…...! ಸಂಚಿಕೆ - 21

ಓ ಮುದ್ದು ಮನಸೇ ...…...! ಸಂಚಿಕೆ - 21

ಡಾ. ಗುರುರಾಜ್ ಇಟಗಿ
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು, ಮಂಗಳೂರು , 
ದಕ್ಷಿಣ ಕನ್ನಡ ಜಿಲ್ಲೆ
mob : +91 94837 16589

               ಓ ಮುದ್ದು ಮನಸೇ ...…...! ಸಂಚಿಕೆ - 21     
       ನಿಮಗೊಬ್ಬ ಬೇಟೆಗಾರನ ಬಗ್ಗೆ ಹೇಳುತ್ತೇನೆ ಕೇಳಿ. ಅವನು ಅಂತಿಂತ ಬೇಟೆಗಾರನಲ್ಲ ಮಳೆಗಾಲವಿರಲಿ, ಮೈಕೊರೆವ ಚಳಿಯಿರಲಿ ಸೊಂಟಕ್ಕೆ ಕತ್ತಿ, ಮುಂದಲೆಗೊಂದು ಬ್ಯಾಟರಿ, ಹೆಗಲ ಮೇಲೆ ಬಂದೂಕು ಇವಿಷ್ಟಿದ್ದರೆ ಸಾಕು ಅದೆಂತಹ ಕಗ್ಗತ್ತಲ ಕಾಡಾದರೂ ಸರಿ ಒಂಟಿಯಾಗಿ ನುಗ್ಗಿ ಬೇಟೆ ಮಾಡಬೇಕೆಂಬ ಹುಚ್ಚು ಧೈರ್ಯ ಅವನದ್ದು. ಹಾಗಂತ ಅವನೇನು ನಲವತ್ತೈದರ ಗಂಡಸಲ್ಲ ಇನ್ನೂ ಮಿಸೆ ಚಿಗುರಿರದ ಎಳಸು ಹುಡುಗ..! ಬಹುಶಃ ಅವನು ಹುಟ್ಟಿ ಬೆಳೆದ ವಾತಾವರಣದ ಪ್ರಭಾವವೇ ಇರಬೇಕು ಚಿಕ್ಕಂದಿನಿಂದಲೂ ಕಾಡು, ಗುಡ್ಡ-ಬೆಟ್ಟ ಸುತ್ತಿ ಗಿಡ-ಮರ, ಪ್ರಾಣಿ-ಪಕ್ಷಿಗಳೆಲ್ಲವನ್ನೂ ಅಳೆದು ತೂಗಿದವ. ಬೇಟೆ ಆಡುವುದೆಂದರೆ ಅದೆಲ್ಲಿಲ್ಲದ ಉತ್ಸಾಹ ಅವನಿಗೆ, ಅದರಲ್ಲಿ ಸಿಗುವ ಮಜವೇ ಬೇರೆ. ಹಳ್ಳಿ ಎಂದರೇ ಹಾಗೆ, ಬೆಳೆದ ಭತ್ತವನ್ನು ಕಾಡು ಹಂದಿಗಳ ಹಾವಳಿಯಿಂದ ರಕ್ಷಣೆ ಮಾಡಲು ರಾತ್ರಿ ಇಡೀ ಗದ್ದೆಗಳಲ್ಲೇ ಉಳಿದುಕೊಳ್ಳುವ ಅನಿವಾರ್ಯತೆ. ಇವನಾಗ ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಹುಡುಗ. ಬಂದೂಕು ಹಿಡಿದು ಮೈಕೊರೆವ ಚಳಿಯಲ್ಲಿ ಗದ್ದೆಯಲ್ಲಿ ನಿರ್ಮಿಸಿರುವ ಮಾಳಕ್ಕೆ (ಗದ್ದೆಗಳಲ್ಲಿ ನೆಲದಿಂದ ಎತ್ತರಕ್ಕೆ ನಿರ್ಮಿಸಿರುವ ಚಪ್ಪರ) ಹೋಗಿ ಮಲಗೋದು ಎಂದರೆ ಇವನಿಗೆ ಅತೀವ ಆಸಕ್ತಿ. ಅದೇನೇ ಇದ್ದರೂ ಅವನೆಂದಿಗೂ ಬಂದೂಕಿನಿಂದ ಒಂದೇ ಒಂದು ಗುಂಡು ಹಾರಿಸಿಲ್ಲ...! ಅವನಪ್ಪನ ಹೇಸರಿನಲ್ಲಿ ಲೈಸನ್ಸ್ ಹೊಂದಿರುವ ಬಂದೂಕು ಅದು. ಬೇರೆಯವರಿಗೆ ಬಳಸೋದಕ್ಕೆ ಅನುಮತಿಯಿಲ್ಲ. ಬೇಟೆಗೆ ಹೋದಾಗ ಬಂದೂಕು ಹೊರೋದು, ಅವನಪ್ಪ ಬೇಟೆ ಆಡಿ ಕೊಂದ ಪ್ರಾಣಿ ಪಕ್ಷಿಗಳನ್ನು ಚೀಲದಲ್ಲಿ ತುಂಬಿ ಮನೆಗೆ ತರೋದು ಇವನ ಕೆಲಸ. ಅದೆಷ್ಟೋ ಪ್ರಾಣಿಗಳ ಸಾವಿನ ನೋವನ್ನು ನೋಡಿ ಪುಳಕಿತನಾಗುತ್ತಿದ್ದ ಇವನು ಒಂದಲ್ಲ ಒಂದು ದಿನ ನಾನೂ ಬೇಟೆಯಾಡಿ ಪ್ರಾಣಿಗಳನ್ನು ಕೊಲ್ಲಬೇಕೆನ್ನುವ ಮಹದಾಸೆ ಹೊಂದಿದ್ದ. ಅವನ ಮನಸ್ಸು ಸಾವು, ರಕ್ತ, ಮಾಂಸದ ಮಡುವಿನಲ್ಲಿ ಒದ್ದೆಯಾಗಿತ್ತು...!
        ತನ್ನ ಮನೆಯಲ್ಲಿ ಒಂದಿಷ್ಟು ಕೋಳಿಗಳನ್ನೂ ಸಾಕಿದ್ದ ಹುಡುಗ ಬೆಳೆದ ಕೋಳಿಗಳನ್ನು ಇನ್ನೂರು, ಮುನ್ನೂರು ರುಪಾಯಿಗಳಿಗೆ ಮಾರಿದ್ದೂ ಇದೆ. ಹಾಗಂತ ಈ ಕೋಳಿಗಳ ಗುಂಪಿನಲ್ಲಿ ಕಡುಗೆಂಫು ಪುಕ್ಕಗಳನ್ನು ಚಿನ್ನದ ನೀರಿನಿಂದ ಸವರಿದಂತೆ ಸುಂದರವಾಗಿದ್ದ ಕೋಳಿಯನ್ನು ಮಾತ್ರ ಅದ್ಯಾರು ಎಷ್ಟೇ ರುಪಾಯಿಗೆ ಕೇಳಿದರೂ ಮಾರುತ್ತಿರಲಿಲ್ಲ. ಅದರ ಹೆಸರು "ಚಿನ್ನಾರಿ" ಇವನ ಪ್ರೀತಿಯ ಕೋಳಿ. ಇವರಿಬ್ಬರ ನಡುವೆ ಅದೇನೋ ಬಾಂಧವ್ಯ. ಇನ್ಯಾರ ಹತ್ತಿರವೂ ಸುಳಿಯದ ಕೋಳಿ ಈ ಹುಡುಗನ ಧ್ವನಿ ಕೇಳಿದರೂ ಸಾಕು ಅವನಲ್ಲಿಗೆ ಓಡೋಡಿ ಬರುತ್ತಿತ್ತು. ಪ್ರತಿದಿನ ಅವನು ಶಾಲೆಗೆ ಹೋಗುವ ಮುನ್ನ ಆ ಕೋಳಿಗೆ ತಿನ್ನಲು ಕಾಳು, ಕುಡಿಯಲು ನೀರು ಕೊಡುತ್ತಿದ್ದಾಗಂತೂ ಅವರಿಬ್ಬರ ತುಂಟಾಟ ನೋಡಬೇಕು. ಕೆಲವು ಪ್ರಾಣಿ ಪಕ್ಷಿಗಳೇ ಹಾಗೆ ಮನುಷ್ಯನನ್ನು ನಂಬಿದರೆ ಅವುಗಳು ಕೊಡುವ ಪ್ರೀತಿ, ತೋರಿಸುವ ನಿಯತ್ತು ಮನುಷ್ಯರಾದ ನಮಗೂ ಹೊಂದಲು ಸಾಧ್ಯವಿಲ್ಲ.
         ಗದ್ದೆ ಕೊಯ್ಲು ಮುಗಿದಿದೆ, ಬೆಳೆಯನ್ನು ಕಾಪಾಡುವ ಬೆಟ್ಟದ ಚೌಡಮ್ಮನಿಗೆ ಹಣ್ಣುಗೊನೆ (ಬಾಳೇಹಣ್ಣಿನ ಗೊನೆ) ಪೂಜೆ ಮತ್ತು ಹುಲಿದೇವರಿಗೆ ಕೋಳಿ ಬಲಿ...! ಇಷ್ಟನ್ನು ನಿಭಾಯಿಸಿದರೆ ಈ ವರ್ಷದ ದೊಡ್ಡ ಕೆಲಸ ಮುಗಿದಂತೆ. ಕೋಳಿ ದೊಡ್ಡಿಗೆ (ಕೋಳಿಗಳಿಗೆ ನಿರ್ಮಿಸಿರುವ ಗೂಡು) ಬಂದ ಹುಡುಗನ ಅಪ್ಪ ಎಲ್ಲಾ ಕೋಳಿಗಳ ಮೇಲೆ ಕಣ್ಣು ಹಾಯಿಸಿದ. ಎಲ್ಲವೂ ಎಳಸು, ಸರಿಯಾಗಿ ಬೆಳೆಯೋದಕ್ಕೆ ಇನ್ನೊಂದಿಷ್ಟು ತಿಂಗಳಾದರೂ ಬೇಕು. ಹುಡುಗನ ಕಾಳಜಿಗೆ ದಷ್ಟ-ಪುಷ್ಟವಾಗಿ ಬೆಳೆದಿದ್ದ ಚಿನ್ನಾರಿಗೆ ಮುಹೂರ್ಥ ಫಿಕ್ಸ್ ಆಯಿತು..! ಶಾಲೆಯಿಂದ ಮರಳಿದ ಹುಡುಗ ಅಂಗಳಕ್ಕೆ ಬಂದವನೇ ಚಿನ್ನಾರಿಯನ್ನು ಕರೆಯ ತೊಡಗಿದ. ಮನೆಯೊಳಗಿಂದ ಅಮ್ಮ ಕೂಗಿದರು "ಗದ್ದೆಗೆ ಬರೋದಕ್ಕೆ ಹೇಳಿದ್ದಾರೆ ನಿನ್ನಪ್ಪ, ಬೇಗ ಹೋಗು" ಹೆಗಲ ಮೇಲಿದ್ದ ಬ್ಯಾಗನ್ನು ಮಂಚದ ಮೇಲೆ ಎಸೆದು ಗದ್ದೆಯ ಕಡೆಗೆ ಓಡಿದ. ಗದ್ದೆಯ ಬದುವಿನ ಕೊನೆಯಲ್ಲಿ ಕೇದಿಗೆ ಹಿಂಡುಗಳ ನಡುವೆ ಹುಲಿದೇವರಿಗೆ ಹೂ ಮುಡಿಸಿ, ದೀಪ ಬೆಳಗಿ, ತೆಂಗಿನ ಕಾಯಿ ಒಡೆಯುತ್ತಿದ್ದ ಅಪ್ಪ ಮಗ ಬಂದದ್ದನ್ನು ಅರಿತು "ಚೀಲದಲ್ಲಿ ಕೋಳಿಯಿದೆ ತಗೊಂಡ್ ಬಾ" ಅಂದ. ಹುಡುಗ ಚೀಲದ ಬಳಿ ನಡೆದ, ಕಟ್ಟಿದ್ದ ಹಗ್ಗ ಬಿಚ್ಚಿ ಒಳಗಿದ್ದ ಕೋಳಿಯನ್ನು ಮೇಲೆತ್ತಿದ. ಅರೆ...! ಇದು ನನ್ನ ಚಿನ್ನಾರಿ, ಹುಡುಗನಿಗೆ ಗಾಬರಿಯಾಯಿತು "ಇದನ್ನು ಕೊಯ್ಯೋದಕ್ಕೆ ಪ್ಲಾನ್ ಮಾಡಿದ್ದೀರಾ ನೀವು?" ಅಪ್ಪ ಹರಿತವಾದ ಕತ್ತಿ ಹಿಡಿದು ಮುಂದೆ ಬಂದರು. ಹುಡುಗನಿಗೆ ದು:ಖ ಉಮ್ಮಳಿಸಿತು, ಹೆಜ್ಜೆ ಹಿಂದಿಟ್ಟ. ಅಪ್ಪ "ತಾ ಇಲ್ಲಿ, ನಿಂಗೆ ಬೇರೆ ಕೋಳಿ ಕೊಡ್ತೀನಿ" ಅಂದರು. ಸಾವಿನ ಅರಿವಿಲ್ಲದ ಮುಗ್ಧ ಕೋಳಿ ತನ್ನ ಕೊಕ್ಕಿನಿಂದ ಹುಡುಗನ ಕೈ ಕುಕ್ಕುತ್ತಿತ್ತು. ಹುಡುಗ ತನ್ನ ಪ್ರೀತಿಯ ಚಿನ್ನಾರಿಯೊಂದಿಗೆ ಅಲ್ಲಿಂದ ಕಾಲ್ಕಿತ್ತ.
       ಒಂದು ಮನಸ್ಸು ಎರಡು ವಿಭಿನ್ನ ದೃಷ್ಟಿಕೋನ, ಒಂದು ಕ್ರೌರ್ಯ ಮತ್ತೊಂದು ಪ್ರೀತಿ. ಬೇಟೆಯಾಡಿ ಪ್ರಾಣಿ ಪಕ್ಷಿಗಳನ್ನು ಕೊಲ್ಲಲು ಹಂಬಲಿಸುತ್ತಿದ್ದ ಆ ಹುಡುಗನ ಮನಸ್ಸು ಮುದ್ದು ಕೋಳಿಯ ಪ್ರೀತಿಯ ಬಲೆಯಲ್ಲಿ ಬಂಧಿಯಾಗಿದೆ, ಆಯ್ಕೆ ಸುಲಭವಲ್ಲ. ತನ್ನ ತಂದೆಯ ಬಂದೂಕಿನ ಗುಂಡಿಗೆ ರಕ್ತ ಚೆಲ್ಲುತ್ತಿದ್ದ ಪ್ರಾಣಿಗಳನ್ನು ಚೀಲ ತುಂಬುವುದರಲ್ಲೇ ಮಜ ಅನುಭವಿಸುತ್ತಿದ್ದ ಹುಡುಗ ಆ ಪ್ರಾಣಿಗಳನ್ನೆಂದೂ ಭಾವನೆಗಳ ನೆಲೆಗಟ್ಟಿನಲ್ಲಿ ನೋಡಿದ್ದಿಲ್ಲ. ಕೆಲವೊಂದು ವಾತಾವರಣವೇ ಹಾಗೆ, ಬೆಳೆಯುವ ಮನಸ್ಸುಗಳಿಗೆ ಆಯ್ಕೆಗಳ ಸ್ವಾತಂತ್ರ್ಯವನ್ನು ನೀಡುವುದೇ ಇಲ್ಲ. ಪ್ರೀತಿಯ ಕೋಳಿ ಅವನ ಕಣ್ತೆರೆಸಿದೆ. ಒಂದು ಮೂಖ ಜೀವಿಯ ಭಾವನೆಗಳ ಆಳವನ್ನು ಅರಿಯುವಷ್ಟು ಅದರೊಟ್ಟಿಗೆ ಬೆಸೆದುಕೊಂಡಿದ್ದಾನೆ ಹುಡುಗ. ಹೀಗೆ ಪ್ರತಿಯೊಬ್ಬರ ಬಾಲ್ಯದ ಅದೆಷ್ಟೋ ಘಟನೆಗಳು ಸರಿತಪ್ಪುಗಳ ತುಲನೆಗೆ ನಾಂದಿಯಾಗಿಬಿಡುತ್ತವೆ. ಪ್ರತಿಯೊಂದೂ ಜೀವಿಯ ಜೀವದ ಮೌಲ್ಯವನ್ನು ಇದೊಂದು ಘಟನೆ ಕಟ್ಟಿಕೊಟ್ಟಿದೆ. ತನ್ನ ಪುಟ್ಟ ಮರಿಗಳಿಗೆ ಆಹಾರ ಹುಡುಕಿ ಬರುವ ಪ್ರಾಣಿಗಳನ್ನು ನಿರ್ದಯವಾಗಿ ಕೊಂದು ತಿನ್ನುವ ನಾವು ಅದೆಷ್ಟು ಕ್ರೂರಿಗಳು.....? ಅವಕ್ಕೂ ಈ ಭೂಮಿಯ ಮೇಲೆ ಬದುಕುವ ಹಕ್ಕಿಲ್ಲವೇ....? ಬುದ್ದಿವಂತರೆಂದಾಕ್ಷಣ ಇನ್ನೊಂದು ಜೀವಿಯ ಬದುಕನ್ನು ಕಸಿಯುವ ಅಧಿಕಾರವಿದೆಯೆಂದರ್ಥವೇ....? ಇದು ಅಮಾನವೀಯ.....! ಕಾಡುಪ್ರಾಣಿಗಳ ರಕ್ಷಣೆಯ ಕುರಿತು, ಕಥೆ-ಕವನ ಬರೆಯೋದು, ಪುಸ್ತಕ ಓದಿ ತಿಳಿದುಕೊಳ್ಳೋದು, ಅವಕಾಶ ಸಿಕ್ಕಾಗ ಕಾಡಿಗೆ ಹೋಗಿ ಗಿಡ ನೆಡೋದು, ಗೆಳೆಯರ ಗುಂಪು ಕಟ್ಟಿಕೊಂಡು ಮನೆ ಮನೆಗೆ ಹೋಗಿ ಕಾಡು ಪ್ರಾಣಿಗಳ ಬಗ್ಗೆ ಜಾಗೃತಿ ಮೂಡಿಸೋದನ್ನು ಶುರುವಿಟ್ಟು ಕೊಂಡ ಹುಡುಗ. ಬೆಳೆದು ದೊಡ್ದವನಾದ ಮೇಲೆ ಕಾಡು ಪ್ರಾಣಿ ರಕ್ಷಣಾ ಸಂಘವನ್ನು ಸ್ಥಾಪಿಸಿ ಆ ನಿಟ್ಟಿನಲ್ಲಿ ಕೆಲಸಮಾಡುವ ನಿರ್ಧಾರ ಮಾಡಿದ.
...............................ಡಾ. ಗುರುರಾಜ್ ಇಟಗಿ
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು, ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
mob : +91 94837 16589
********************************************





Ads on article

Advertise in articles 1

advertising articles 2

Advertise under the article