
ಹಕ್ಕಿ ಕಥೆ : ಸಂಚಿಕೆ - 49
Tuesday, May 31, 2022
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ.... ನಾನೊಮ್ಮೆ ನಮ್ಮ ಸಂಬಂಧಿಯೊಬ್ಬರ ಮನೆಗೆ ಹೋಗಿದ್ದೆ. ಮಲೆನಾಡಿನ ಮಡಿಲಿನಲ್ಲಿರುವ ಅವರ ಮನೆಗೆ ಹೋದರೆ ಅವರ ತೋಟವನ್ನೆಲ್ಲ ಸುತ್ತುವುದು ನನಗೆ ಬಹಳ ಖುಷಿ ಕೊಡುವ ವಿಷಯ. ಸಮಯ ಸಿಕ್ಕಾಗಲೆಲ್ಲ ಅವರ ತೋಟದಲ್ಲಿ ಓಡಾಡುತ್ತಿದ್ದೆ. ಅವರಿಗೂ ನನ್ನ ಹಕ್ಕಿಗಳ ಬಗೆಗಿನ ಆಸಕ್ತಿಯ ಬಗ್ಗೆ ಕುತೂಹಲ ಇತ್ತು. ನಾನೊಂದು ಬಾರಿ ಕ್ಯಾಮರಾ ಹಿಡಿದುಕೊಂಡು ತೋಟ ಸುತ್ತಿ ಬಂದರೆ ಸಾಕು ಯಾವ ಹಕ್ಕಿ ಸಿಕ್ಕಿತು ನೋಡೋಣ ಎಂದು ಆಸಕ್ತಿಯಿಂದ ಕೇಳಿ ತಿಳಿದುಕೊಳ್ಳುತ್ತಿದ್ದರು. ಸಸ್ಯಗಳ ಬಗ್ಗೆ ಆಸಕ್ತಿ ಇದ್ದ ಅವರು ಹಲವಾರು ಬಗೆಯ ಹೂವಿನ ಸಸಿಗಳನ್ನು ತಮ್ಮ ತೋಟದಲ್ಲಿ ಬೆಳೆಸಿದ್ದರು. ಅವರ ಮನೆಯ ಅಂಗಳದ ಹೂತೋಟ ನೋಡುವಂತಿತ್ತು.
ಒಂದು ದಿನ ಬೆಳಗ್ಗಿನ ತೋಟ ಸುತ್ತಾಟ ಮುಗಿಸಿ ಬಂದ ನಾನು ಆ ಮನೆಯ ಅಜ್ಜಿ ಮಾಡಿಕೊಟ್ಟ ರುಚಿಯಾದ ತಿಂಡಿಯನ್ನು ತಿಂದು ಮನೆಯ ಜಗಲಿಯಲ್ಲಿ ಚಹಾ ಹೀರುತ್ತಾ ಕುಳಿತಿದ್ದೆ. ಹಾಗೆ ಕುಳಿತಿದ್ದವನಿಗೆ ಪಿಕಳಾರ ಹಕ್ಕಿ ಕೂಗಿದ ಶಬ್ದ ಕೇಳಿಸಿತು. ಪಿಕಳಾರ ಹಕ್ಕಿ ಅದೇನು ಕ್ವಾಟಲೆ ಎಬ್ಬಿಸಿದೆ ನೋಡೋಣ ಎಂದು ಆ ಕಡೆ ತಿರುಗಿದೆ. ಆದರೆ ಅಲ್ಲಿ ಪಿಕಳಾರ ಹಕ್ಕಿ ಕಾಣಿಸಲೇ ಇಲ್ಲ. ಹಸಿರು ಬಣ್ಣದ ಎಲೆಗಳ ನಡುವಿನಿಂದ ಮತ್ತೆ ಕೂಗು ಕೇಳಿಸಿತು. ಎಷ್ಟು ಸೂಕ್ಷ್ಮವಾಗಿ ನೋಡಿದರೂ ಪಿಕಳಾರ ಹಕ್ಕಿ ಕಾಣಿಸಲಿಲ್ಲ. ಹಚ್ಚ ಹಸುರಾದ ಹೂವಿನ ಗಿಡದಲ್ಲಿ ಕೆಂಪು ಬಣ್ಣದ ಹೂಗಳು ಅರಳಿದ್ದವು. ಆ ಹೂವುಗಳ ಸಿಹಿಯನ್ನು ಹೀರುತ್ತಾ ಅದೇ ಹಚ್ಚಹಸಿರು ಬಣ್ಣದ ಹಕ್ಕಿಯೊಂದು ಕಾಣಿಸಿತು. ಅರೆ ಸೂಕ್ಷ್ಮವಾಗಿ ನೋಡದೇ ಇದ್ದರೆ ಈ ಹಕ್ಕಿ ಅಲ್ಲಿ ಇರುವುದು ತಕ್ಷಣಕ್ಕೆ ತಿಳಿಯುವುದಿಲ್ಲ. ಎಲೆಯ ಬಣ್ಣವನ್ನೇ ಯಥಾವತ್ತಾಗಿ ಹೋಲುವ ಈ ಹಕ್ಕಿಯನ್ನು ಕನ್ನಡದಲ್ಲಿ ಎಲೆ ಹಕ್ಕಿ ಎಂದೇ ಕರೆಯುತ್ತಾರೆ.
ಹೂತೋಟಗಳು ಮತ್ತು ಕಾಡಿನಲ್ಲಿ ಹೆಚ್ಚಾಗಿ ಕಾಣಸಿಗುವ ಈ ಹಕ್ಕಿಯ ಮುಖ್ಯ ಆಹಾರ ಹೂವಿನ ಮಕರಂದ. ಅದರ ಜೊತೆ ಜೊತೆಗೆ ಕೀಟಗಳು, ಜೇಡಗಳು ಮತ್ತು ಹಣ್ಣುಗಳನ್ನೂ ತಿನ್ನುತ್ತದೆ. ಸುಮಾರು ಎಪ್ರಿಲ್ ತಿಂಗಳಿನಿಂದ ಆಗಸ್ಟ್ ತಿಂಗಳಿನ ನಡುವೆ ಎತ್ತರದ ಮರಗಳ ಕೊಂಬೆಯ ತುದಿಯಲ್ಲಿ ಬಟ್ಟಲಿನ ಆಕಾರದ ಗೂಡು ಮಾಡಿ ಸಂತಾನಾಭಿವೃದ್ಧಿ ಮಾಡುತ್ತದೆ. ಈ ಹಕ್ಕಿ ಹಲವು ಹಕ್ಕಿಗಳ ಕೂಗನ್ನು ಅನುಕರಿಸುತ್ತದೆ ಎಂದು ಸಲೀಂ ಅಲಿ ತಮ್ಮ ಪುಸ್ತಕದಲ್ಲಿ ದಾಖಲಿಸುತ್ತಾರೆ. ಇದರಲ್ಲಿ ಎರಡು ಬಗೆಯ ಪ್ರಬೇಧಗಳು ನಮ್ಮ ದೇಶದಲ್ಲಿ ಕಾಣಲು ಸಿಗುತ್ತವೆ. ನಿಮ್ಮ ಮನೆಯ ಆಸುಪಾಸಿನಲ್ಲೂ ಪುಟ್ಟ ಕಾಡು ಅಥವಾ ಹೂವಿನ ತೋಟ ಇದ್ದರೆ ಈ ಹಕ್ಕಿ ಅಲ್ಲಿ ಕಾಣಲು ಸಿಗಬಹುದು.
ಕನ್ನಡ ಹೆಸರು: ಎಲೆಹಕ್ಕಿ
ಇಂಗ್ಲೀಷ್ ಹೆಸರು: CHLOROPSIS
ವೈಜ್ಞಾನಿಕ ಹೆಸರು: Chloropsis cochinchinensis
ಮುಂದಿನವಾರ ಇನ್ನೊಂದು ಹೊಸ ಹಕ್ಕಿ ಕಥೆಯೊಂದಿಗೆ ಸಿಗೋಣ.. ಬಾಯ್..
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************