-->
ಜೀವನ ಸಂಭ್ರಮ : ಸಂಚಿಕೆ - 41

ಜೀವನ ಸಂಭ್ರಮ : ಸಂಚಿಕೆ - 41

ಜೀವನ ಸಂಭ್ರಮ : ಸಂಚಿಕೆ - 41
                       
             ನದಿಯಿಂದ ಕಲಿಯಬಹುದಾದ ಪಾಠ
      ಮಕ್ಕಳೇ........ ನಿಸರ್ಗ ನಮಗೆ ಕಲಿಯಲು ಅನೇಕ ಅವಕಾಶ ನೀಡಿದೆ. ಅದರಲ್ಲಿ ಇಂದು ನಾವು ನದಿಯಿಂದ ಕಲಿಯಬಹುದಾದ ಪಾಠದ ಬಗ್ಗೆ ತಿಳಿದುಕೊಳ್ಳೋಣ..... ನಮ್ಮಲ್ಲಿ ಅನೇಕ ನದಿಗಳು ಹರಿಯುತ್ತವೆ. ಕೃಷ್ಣ , ಕಾವೇರಿ , ತುಂಗಾ , ಭದ್ರಾ , ನೇತ್ರಾವತಿ , ಕುಮಾರಧಾರ , ಶರಾವತಿ ಮತ್ತು ಕಾಳಿ ನದಿ ಹೀಗೆ ಹಲವಾರು ನದಿಗಳು ಕರ್ನಾಟಕದಲ್ಲಿ ಹರಿಯುತ್ತವೆ. ಯಾವುದೇ ನದಿಯಾದರೂ ಗಿರಿ , ಶಿಖರ , ಘಟ್ಟ ಮತ್ತು ಪರ್ವತಗಳಲ್ಲಿ ಹುಟ್ಟುತ್ತವೆ. ಹುಟ್ಟುವ ಸ್ಥಳ ನೋಡಿದರೆ ಬೊಗಸೆಯಿಂದ ಕುಡಿದು ಬಿಡಬಹುದು ಅಷ್ಟು ಚಿಕ್ಕದಾಗಿರುತ್ತದೆ. ಅಷ್ಟೇ ಅಲ್ಲ ಸಣ್ಣದಾಗಿ ಹರಿಯುತ್ತಾ ಅದರ ಜೊತೆಗೆ ಹಳ್ಳ , ಕೊಳ್ಳ , ತೋಡು ಮತ್ತು ತೊರೆಯು ಹರಿಯುವ ನದಿಯ ಜೊತೆ ಮಧ್ಯಮಧ್ಯ ಸೇರಿ ನದಿ ದೊಡ್ಡದಾಗುತ್ತದೆ. ಯಾವುದೇ ನದಿ ಎಲ್ಲಿ ಹುಟ್ಟಿದರೂ ಹರಿಯುವುದು ಮಾತ್ರ ಸಮುದ್ರ ಅಥವಾ ಸಾಗರದ ಕಡೆಗೆ. ಸಮುದ್ರದವರೆಗೆ ಹರಿದು ಸಮುದ್ರದಲ್ಲಿ ಲೀನವಾಗುತ್ತಾ ಹರಿಯುವಿಕೆ ನಿಂತುಹೋಗುತ್ತದೆ. ಇದೇ ಸಮುದ್ರದ ನೀರು ಆವಿಯಾಗಿ , ಮೇಲೇರಿ , ಶಾಖ ಕಳೆದುಕೊಂಡು ಘನೀಕರಿಸಿ ಮೋಡವಾಗಿ ಪುನಃ ಎಲ್ಲಾ ಕಡೆ ಮಳೆ ರೂಪದಲ್ಲಿ ಬೀಳುತ್ತದೆ. ಕೆರೆ, ತೋಡು , ತೊರೆ ಮತ್ತು ಹಳ್ಳ-ಕೊಳ್ಳಗಳಲ್ಲಿ ಹರಿದು ಪುನಃ ನದಿ ಸೇರಿ ಕೊನೆಗೆ ಸಮುದ್ರ ಸೇರುತ್ತದೆ‌ ನಾವು ಇದನ್ನು ನೀರಿನ ಚಕ್ರ ಎನ್ನುತ್ತೇವೆ.
           ಇದುವರೆಗೂ ಓದಿದ್ದು ಮುಖ್ಯವಲ್ಲ, ಈಗ ಹೇಳುವುದು ಮುಖ್ಯ. ಹಳ್ಳ, ಕೊಳ್ಳ , ನದಿ ಯಾವುದೇ ಆಗಿರಲಿ ಅದು ಹರಿಯುವ ಎರಡು ಬದಿಯಲ್ಲಿ ಬಗೆ-ಬಗೆಯ ಹಣ್ಣು ನೀಡುವ ಗಿಡ ಮರ , ವಿವಿಧ ಬಣ್ಣಗಳ ಸುವಾಸನೆ ಬೀರುವ ಹೂಗಳ ಗಿಡಗಳನ್ನು ಬೆಳೆಸಿ, ನಿಸರ್ಗವನ್ನು ಸುಂದರ ಮಾಡುತ್ತದೆ. ಗಿಡ , ಮರ ಮತ್ತು ಹೂಗಳು ಮನುಷ್ಯನೂ ಸೇರಿದಂತೆ ಅನೇಕ ಪ್ರಾಣಿ-ಪಕ್ಷಿಗಳಿಗೆ ಆಸರೆ ನೀಡಿ ಪೋಷಣೆ ಮಾಡುತ್ತದೆ. ಮನುಷ್ಯ ಅದೇ ನೀರಿನಿಂದ ಕೃಷಿ , ಕೈಗಾರಿಕೆ ಮತ್ತು ವಿದ್ಯುತ್ ಉತ್ಪಾದನೆಗಾಗಿ ಬಳಸುತ್ತಾನೆ. ನೀರು ಹುಟ್ಟಿದ ಸ್ಥಳದಿಂದ ಸಮುದ್ರ ಸೇರುವವರೆಗೆ ನಿಸರ್ಗವನ್ನು ಸುಂದರ ಮಾಡಿ ಹರಿಯುತ್ತದೆ. ಹರಿಯುವ ನೀರು ಯಾವಾಗಲೂ ಸ್ವಚ್ಛವಾಗಿ ಇರುತ್ತದೆ. ಈಗ ಮನುಷ್ಯನ ವಿಷಯಕ್ಕೆ ಬರೋಣ. ಮಗು ಹುಟ್ಟಿದಾಗ ಸಣ್ಣದಾಗಿರುತ್ತದೆ. ಅನಂತರ ಪೋಷಕರ ಆರೈಕೆ ಮತ್ತು ಪ್ರೀತಿಯಿಂದ ಬೆಳೆಯುತ್ತದೆ. ಹೀಗೆ ಮಗು ಬೆಳೆಯುವಾಗ ಹಳ್ಳ-ಕೊಳ್ಳ, ತೊರೆ ಮತ್ತು ಉಪನದಿಗಳು ನದಿ ಯನ್ನು ಸೇರುವಂತೆ , ಪೋಷಕರು , ಶಿಕ್ಷಕರು , ಸಮಾಜ ಮತ್ತು ಸಮೂಹ ಮಾಧ್ಯಮಗಳಿಂದ ಸಾಕಷ್ಟು ಕಲಿಯುತ್ತದೆ. ನಿಸರ್ಗ ಪ್ರತಿ ಮಗುವಿನಲ್ಲೂ ಯಾವುದೋ ಒಂದು ಸಾಮರ್ಥ್ಯ ತುಂಬುತ್ತದೆ. ಆ ಸಾಮರ್ಥ್ಯವನ್ನು ಪೋಷಕರಿಂದ, ಶಾಲೆಗಳಲ್ಲಿ ಶಿಕ್ಷಕರಿಂದ , ಸಮಾಜದಿಂದ , ಗೆಳೆಯರಿಂದ ಮತ್ತು ಸಮೂಹ ಮಾಧ್ಯಮಗಳಿಂದ ವಿಸ್ತಾರಗೊಳ್ಳುತ್ತದೆ. ಇದರಿಂದ ಮಗು ಸಮಾಜದಲ್ಲಿ ಗೌರವಕ್ಕೆ ಪಾತ್ರವಾಗುತ್ತದೆ. ನದಿ ತಾನು ಹರಿಯುವ ಸುತ್ತಮುತ್ತಲಿನ ಪ್ರದೇಶವನ್ನು ಗಿಡಮರಗಳಿಂದ ಸಿಂಗರಿಸಿ , ಸೌಂದರ್ಯದಿಂದ ಕಂಗೊಳಿಸಲು , ಮನುಷ್ಯ , ಪಶುಪಕ್ಷಿಗಳಿಗೆ ಪೋಷಣೆ ಮಾಡುವಂತೆ , ಮನುಷ್ಯ ತಾನಿರುವ ಸ್ಥಳವನ್ನು ತನ್ನ ಸುತ್ತಮುತ್ತಲಿನ ಪ್ರದೇಶವನ್ನು ತನ್ನ ಸಾಮರ್ಥ್ಯದಿಂದ ಸಂತೋಷವಾಗಿರುವಂತೆ ಪ್ರದೇಶವನ್ನು ಸುಂದರ ತಾಣವನ್ನಾಗಿ ಮಾಡಿದರೆ ಸಾರ್ಥಕವಾಗುತ್ತದೆ. ನಿಸರ್ಗ ನೀಡಿರುವ ಸಾಮರ್ಥ್ಯ ಎಂದರೆ ಕೆಲವರಿಗೆ ದೈಹಿಕ ಶಕ್ತಿ, ಕೆಲವರಿಗೆ ಬುದ್ಧಿಶಕ್ತಿ , ಕೆಲವರಿಗೆ ವಾಕ್ಚಾತುರ್ಯ, ಕೆಲವರಿಗೆ ನೃತ್ಯ, ಕೆಲವರಿಗೆ ಸಂಗೀತ ಮತ್ತೆ ಕೆಲವರಿಗೆ ಚಿತ್ರಕಲೆ , ಶಿಲ್ಪಕಲೆ ಮತ್ತು ನಾಟಕ ಅಭಿನಯ ಹೀಗೆ ಹೇಳುತ್ತಾ ಹೋದರೆ ಮುಗಿಯುವುದಿಲ್ಲ. ಹೀಗೆ ನಿಸರ್ಗ ನೀಡಿರುವ ಸಾಮರ್ಥ್ಯ ಬಳಸಿ ನಾವಿರುವ ಸ್ಥಳ ತನ್ನ ಸುತ್ತಮುತ್ತಲಿನ ಪರಿಸರವನ್ನು ಸುಂದರಗೊಳಿಸಿ , ನದಿಯಂತೆ ನಮ್ಮ ಜೀವನ ಸಾರ್ಥಕಗೊಳಿಸಬೇಕು. ಇದೇ ಅಲ್ಲವೇ ನದಿಯಿಂದ ಕಲಿಯಬೇಕಾದ ಪಾಠ.
.........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************

Ads on article

Advertise in articles 1

advertising articles 2

Advertise under the article