-->
ಅಕ್ಕನ ಪತ್ರ - 26ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 26ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 26ಕ್ಕೆ
ಮಕ್ಕಳ ಉತ್ತರ : ಸಂಚಿಕೆ - 1


     ಮಕ್ಕಳ ಜಗಲಿಯಲ್ಲಿ......... ಮಕ್ಕಳಿಗೆ ಬಹಳ ಆಪ್ತವಾದ ತೇಜಸ್ವಿ ಅಂಬೆಕಲ್ಲು ಇವರು ಬರೆಯುತ್ತಿರುವ ಅಕ್ಕನ ಪತ್ರ ವಿದ್ಯಾರ್ಥಿಗಳಲ್ಲಿ ಕಾಳಜಿಯನ್ನು ಮೂಡಿಸುವ ಪ್ರಯತ್ನವಾಗಿದೆ. ಓದುವ ಅಭಿರುಚಿ ಹಾಗೂ ಬರೆಯುವ ಕೌಶಲ್ಯ ಬೆಳೆಸಬೇಕೆನ್ನುವುದು ಮಕ್ಕಳ ಜಗಲಿಯ ಉದ್ದೇಶ...... ಜಗಲಿಯಲ್ಲಿ ಅನೇಕ ಮಕ್ಕಳು ನಿರಂತರವಾಗಿ ಬರೆಯುತ್ತಿದ್ದು ಬರೆಯುವ ಇನ್ನಷ್ಟು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ. ವಿದ್ಯಾರ್ಥಿಗಳ ಸ್ವ- ಅನಿಸಿಕೆಯನ್ನು ಭಾವನಾತ್ಮಕವಾಗಿ ಬರೆದು ಕಳುಹಿಸಿದ ಪತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ.......         ನಮಸ್ತೆ ಅಕ್ಕ. ನಾನು ಶ್ರಾವ್ಯ.... ಸದಾ ಕಾತುರದಿಂದ ನಿಮ್ಮ ಪತ್ರಕ್ಕೆ ಕಾಯುವ ನಮಗೆ - ಈ ಬಾರಿಯ ಪತ್ರ ತುಂಬಾ ಖುಷಿ ನೀಡಿದೆ. ಟೋಪಿ ಮಾರುವವ ಮತ್ತು ಕೋತಿಗಳ ಕತೆ ಈ ಮೊದಲು ಕೇಳಿದ್ದೇವೆಯಾದರೂ , ಅವನ ಮೊಮ್ಮಗನ ಕತೆ ತಾತನಿಗಿಂತ ಭಿನ್ನ. ತಾತ ಉಪಾಯದಿಂದ ಟೋಪಿಗಳನ್ನು ಹಿಂದಕ್ಕೆ ಪಡೆದುಕೊಂಡ ಆದರೆ ಮೊಮ್ಮಗ ಕೋತಿಗಳ ನಡುವೆ ಸಿಲುಕಿದ್ದಾನೆ. ತಾತ ಮಾಡಿದಂತೆ ಮಾಡಿದಾಗ, ಕೋತಿಗಳು ಸಹ ತಮ್ಮ ತಾತನಿಂದ ವಿಚಾರ ತಿಳಿದುಕೊಂಡು ಅವುಗಳು ಟೋಪಿ ಕೆಳಕ್ಕೆಸೆಯಲಿಲ್ಲ. ಇದರಿಂದ ಸ್ಪಷ್ಟವಾಯಿತು ಕೋತಿಗಳು ತಮ್ಮ ಕೈಯಾರೆ ಟೋಪಿ ಕೆಳಕ್ಕೆಸೆಯಲಾರವು ಎಂದು, ಹೇಗಾದರೂ ಟೋಪಿಗಳನ್ನು ಹಿಂದಕ್ಕೆ ಪಡೆದುಕೊಳ್ಳಬೇಕೆಂದು ಯೋಚಿಸ ತೊಡಗಿದ....
       ತಾನು ಮಾರುವ ಟೋಪಿ ಮನುಷ್ಯ ದದ್ದಾದರಿಂದ, ಅದು ಕೋತಿಗಳ ತಲೆಗೆ ಸರಿಹೊಂದುವುದಿಲ್ಲ 'ಇದಂತು ಖಂಡಿತ ಎಂದು ಭಾವಿಸಿ ಒಂದು ಉಪಾಯ ಹೂಡಿದ. ಕೋತಿಗಳು ತಾನು ಮಾಡಿದಂತೆಯೇ ಮಾಡುತ್ತದೆ ಎನ್ನುವುದನ್ನು ಮೊದಲು ಖಚಿತಪಡಿಸಿಕೊಂಡ.
 ತನ್ನ ಕೈ ಮೇಲೆ ಎತ್ತಿದ ಅವುಗಳು ಹಾಗೇ ಮಾಡಿದವು ಹಾಗೆ ಮಾಡುತ್ತಾ ಮಾಡುತ್ತಾ ತಲೆ ಕೆಳಗೆ ಕಾಲು ಮೇಲಾಗಿಸಿ ನಿಂತ. ಕೋತಿಗಳು ಹಾಗೇ ಮಾಡಿದರಿಂದ ತಲೆಯ ಮೇಲಿದ್ದ ಟೋಪಿಗಳೆಲ್ಲ ಕೆಳಕ್ಕೆ ಉದುರಿತು. ರಪರಪನೆ ಟೋಪಿ ಆರಿಸಿಕೊಂಡು ಮನೆಗೆ ತೆರಳಿದ. ಈ ರೀತಿ ಉಪಾಯದಿಂದ ಕೋತಿಗಳನ್ನೇ ಮಂಗ ಮಾಡಿ ಟೋಪಿ ಆರಿಸಿದ ಎನ್ನುವುದು ನನ್ನದೊಂದು ಯೋಚನೆ....
   ಸಂದರ್ಭ, ಸನ್ನಿವೇಶ ಒಂದೆಯಾದರೂ ಸಮಯ ಒಂದೇ ರೀತಿ ಇರುವುದಿಲ್ಲ. ಹಿಂದಿನ ಪರಿಹಾರವೇ ಇಂದೂ ಪರಿಹಾರ ಎಂದುಕೊಳ್ಳುವ ಬದಲು ನಾವೇ ಹೊಸ ಪರಿಹಾರ ಕಂಡುಕೊಳ್ಳುವುದರ ಅನಿವಾರ್ಯ ಮತ್ತು ಒಳಿತು. ಹಿಂದಿನ ವಿಚಾರಕ್ಕೆ ಅವಲಂಬಿತರಾಗುವುದಕ್ಕಿಂತ ಹೊಸದನ್ನು ಹುಟ್ಟು ಹಾಕುವ ಹೊಸ ಆಲೋಚನೆಗೆ ತೆರೆದುಕೊಳ್ಳುವ ಎನ್ನುವ ಉತ್ತಮ ಸಂದೇಶ ನಿಮ್ಮ ಪುಟ್ಟ ಕತೆಯ ಮೂಲಕ ನಮ್ಮನ್ನು ತಲುಪಿದೆ. ಧನ್ಯವಾದ ಅಕ್ಕ.
.................................................... ಶ್ರಾವ್ಯ
ದ್ವಿತೀಯ ಪಿಯುಸಿ
ಶ್ರೀರಾಮ ವಿದ್ಯಾ ಕೇಂದ್ರ , ಕಲ್ಲಡ್ಕ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************          ನಮಸ್ಕಾರ ಅಕ್ಕ...... ನಾನು ನಿಮ್ಮ ಪ್ರೀತಿಯ ತಮ್ಮ ಭವಿತ್ ಕುಲಾಲ್ ಮಾಡುವ ವಂದನೆಗಳು. ಅಕ್ಕ ಪತ್ರ ಓದಿ ತುಂಬಾ ಖುಷಿಯಾಯಿತು. ಟೋಪಿ ಮಾರುವವನ ಕಥೆ ತುಂಬಾ ಚೆನ್ನಾಗಿತ್ತು. ನನಗೆ ಕಥೆ ತುಂಬಾ ಇಷ್ಟ ಅಕ್ಕ. ಟೋಪಿ ಮತ್ತು ಕೋತಿಯ ಕಥೆ ಅಮ್ಮ ನನಗೆ ಹೇಳಿದ್ದರು. ಒಂದು ಕಥೆ ಪುಸ್ತಕದಲ್ಲಿ ಓದಿದ ನೆನಪು ಅಕ್ಕ. ಕಥೆ ಓದಿ ನಾನಂತೂ ತುಂಬಾ ಖುಷಿ ಪಟ್ಟೆ. ಮಂಗಗಳ ಕಸರತ್ತು ನೋಡಿ ನನಗೆ ನಗು ಬಂತು. ಮಂಗಗಳು ಬಹಳ ಜಾಣ, ಈ ಕಥೆಯಲ್ಲಿ ಮಂಗಗಳ ಬುಧ್ಧಿವಂತಿಕೆಯನ್ನು ನೋಡಿ ನನಗೆ ಆಶ್ಚರ್ಯವಾಯಿತು. ಏನೆಂದರೆ ಮನುಷ್ಯರಿಗಿಂತ ಪ್ರಾಣಿಗಳು ಬಹಳ ಚುರುಕು ಆಗಿರುತ್ತದೆ. ಕೆಲವೊಂದು ವಿಷಯಗಳು ನಾವು ಪ್ರಾಣಿಗಳಿಂದ ಕಲಿಯಬೇಕು ಅನಿಸುತ್ತದೆ. ಈ ಕಥೆಯಲ್ಲಿ ಒಂದು ಕೋತಿಯ ಬುಧ್ಧಿಯನ್ನು ಮೆಚ್ಚಲೇಬೇಕು. ಮುಂದಿನ ಪತ್ರಕ್ಕಾಗಿ ಕಾಯುತಿರುತ್ತೇನೆ. ಧನ್ಯವಾದಗಳು ಅಕ್ಕ.......
.............................................. ಭವಿತ್ ಕುಲಾಲ್ 
7ನೇ ತರಗತಿ 
ದ. ಕ. ಜಿ. ಪಂ ಹಿರಿಯ ಪ್ರಾಥಮಿಕ ಶಾಲೆ , ಕಲ್ಲಡ್ಕ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
********************************************


ಅಕ್ಕನ ಪತ್ರ ‌ ಸಂಚಿಕೆ 26ಕ್ಕೆ ಶಿಶಿರನ ಉತ್ತರ
         ಪ್ರೀತಿಯ ಅಕ್ಕನಿಗೆ ಶಿಶಿರ್ ಮಾಡುವ ನಮಸ್ಕಾರಗಳು. ನಿಮ್ಮ ಪತ್ರವನ್ನು ಓದಿ ಸಂತೋಷವಾಯಿತು. ನೀವು ನಮ್ಮ ಬಾಲ್ಯದ ಇಷ್ಟದ ಕತೆಯನ್ನು ಬರೆದಿದ್ದೀರಿ. ಕತೆಯಲ್ಲಿ ಹುಡುಗನಿಗೆ ಒದಗಿದ ಸಂದರ್ಭ ನನಗೆ ಬರುತ್ತಿದ್ದರೆ ನಾನು ಬಹಳ ಎಚ್ಚರಿಕೆಯಿಂದ ಯೋಚಿಸಿ ಸನ್ನಿವೇಶವನ್ನು ಎದುರಿಸುತ್ತಿದ್ದೆ. ನಾವು ಸಮಯಕ್ಕೆ ತಕ್ಕಂತೆ, ವ್ಯವಸ್ಥೆಗೆ ತಕ್ಕಂತೆ ಬದಲಾವಣೆ ಮಾಡಿಕೊಂಡು ಬದುಕಲು ಕಲಿಯಬೇಕು. ತಮಾಷೆ ಏನಂದ್ರೆ ಅಕ್ಕ ಅಜ್ಜನ ಕಾಲದ ಮರ ಮೊಮ್ಮಗನ ಕಾಲದಲ್ಲೂ ಇದೆಯಲ್ಲಾ ಅದೇ ಸಂತೋಷ. ನಿಮ್ಮ ಮುಂದಿನ ಪತ್ರವನ್ನು ಎದುರು ನೋಡುತ್ತಾ ನನ್ನ ಪತ್ರವನ್ನು ಕೊನೆಗೊಳಿಸುತ್ತೇನೆ.
............................................. ಶಿಶಿರ್ ಎಸ್
10ನೇ ತರಗತಿ 
ಎಸ್.ಎಲ್. ಎನ್. ಪಿ. ವಿದ್ಯಾಲಯ 
ಪಾಣೆಮಂಗಳೂರು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************ಮಕ್ಕಳ ಜಗಲಿ.... ಅಕ್ಕನ ಪತ್ರ-26
     ಪ್ರೀತಿಯ ಅಕ್ಕನಿಗೆ ಲಹರಿ ಮಾಡುವ ನಮಸ್ಕಾರಗಳು.... ಸೊಗಸಾದ ಕಥೆಯೊಂದಿಗೆ ಇರುವ ನಿಮ್ಮ ಪತ್ರ ಓದಲು ನನಗೆ ತುಂಬಾ ಸಂತೋಷವಾಯಿತು.... ಕಥೆ ಓದಿ ನಗು ಬಂತು..... ಮತ್ತು ಯೋಚಿಸುವಂತಾಯಿತು.... ಹೌದಲ್ವಾ ಅಂತಹ ಪರಿಸ್ಥಿತಿ ಬಂದರೆ ನಾವು ಯಾವ ರೀತಿ ತಯಾರಾಗಿರಬೇಕು ಎನ್ನುವ ಯೋಚನೆ ಕೂಡ ಬಂತು.... ನಾನು ಆ ಸ್ಥಳದಲ್ಲಿ ಇದ್ದಿದ್ದರೆ ಟೋಪಿಯನ್ನು ಮೂರನೇ ಸಲ ಮಂಗಗಳ ಕೈಗೆ ಕೊಡುತ್ತಿದ್ದೆ , ಆಗ ಮಂಗಗಳು ಟೋಪಿಗಳನ್ನು ನನಗೆ ಕೊಡುತ್ತಿದ್ದವು ಅಂತ ಅನಿಸಿತು.... ಇಂತಹ ಸೊಗಸಾದ ಕತೆಗಳನ್ನು ನಮಗೆ ಹೇಳುತ್ತಿರಿ ಅಕ್ಕ... ನಿಮಗೆ ಅನಂತಾನಂತ ಧನ್ಯವಾದಗಳು... ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುವೆನು.... ಇಂತಿ ನಿಮ್ಮ ಪ್ರೀತಿಯ ಲಹರಿ.
........................................ ಲಹರಿ ಜಿ.ಕೆ.
೭ನೇ ತರಗತಿ
ತುಂಬೆ ಸೆಂಟ್ರಲ್ ಸ್ಕೂಲ್ , ತುಂಬೆ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
********************************************
       ನಮಸ್ತೆ ಅಕ್ಕಾ ನಾನು ಧೀರಜ್...... ಕಥೆ ತುಂಬಾ ಚೆನ್ನಾಗಿತ್ತು. ಮಂಗನಿಂದ ಮಾನವ ಅನ್ನೋ ಮಾತು ಸತ್ಯವಾದುದು. ಮಾನವನಷ್ಟೇ ಕೋತಿಗಳಿಗೂ ವಿವೇಕ ಬುದ್ದಿ ಇದೆ. ಹೌದು ಸಮಯ ಸಂದರ್ಭಗಳಿಗೆ ಅನುಗುಣವಾಗಿ ಕೆಲವೊಮ್ಮೆ ನಮ್ಮ ಆಲೋಚನೆಯನ್ನು ಬದಲಾಯಿಕೊಳ್ಳುವ ಅನಿವಾರ್ಯತೆ ಸಹ ಬರುತ್ತದೆ. ಹೀಗೆ ಒಳ್ಳೊಳ್ಳೆ ಕಥೆ ಹೇಳಿ ಅಕ್ಕಾ ಧನ್ಯವಾದಗಳು..... ಅಕ್ಕನ ಮುಂದಿನ ಪತ್ರಕ್ಕೆ ಕಾಯುತ್ತಿರುತೇನೆ....
........................................ ಧೀರಜ್. ಕೆ ಆರ್ 10ನೇ ತರಗತಿ  
ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ 
ಪ್ರೌಢ ಶಾಲೆ ರಾಮಕುಂಜ. 
ಕಡಬ ತಾಲ್ಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************     ನಮಸ್ತೆ ಅಕ್ಕಾ...... ನಾನು ನಿಮ್ಮ ಪ್ರೀತಿಯ ಧನ್ವಿ ರೈ ಪಾಣಾಜೆ. ನಿಮ್ಮ ಪತ್ರವನ್ನು ಓದಿದೆವು ಒಳ್ಳೆ ಸುಂದರವಾಗಿ ಒಂದು ಕಥೆಯನ್ನು ನಮಗೆ ತಿಳಿಸಿದ್ದೀರಿ. ಆ ಕತೆಯನ್ನು ಎಲ್ಲೋ ಕೇಳಿದ ನೆನಪು. ಆದರೆ ಮುಂದುವರಿದ ಕಥೆಯಿಂದ ನಮಗೆ ಬಹಳ ಆಲೋಚಿಸುವಂತೆ ಮಾಡಿದೆ ಕಥೆ. ಒಂದೇ ರೀತಿ ಬಂದರೂ ಕಾಲ ಬದಲಾದಂತೆ ಬದಲಾಗುವ ರೀತಿಯು ನಮ್ಮ ವರ್ತಮಾನಕ್ಕೆ ಬಹಳ ಹೇಳಿದಂತಿದೆ. ಕಥೆಯಲ್ಲಿ ಇದ್ದ ಆ ಹುಡುಗನ ಪರಿಸ್ಥಿತಿ ನಮಗೆ ಒದಗಿದರೆ ಬಹಳ ಆಲೋಚಿಸಬೇಕಾದ ವಿಷಯ, ತನ್ನ ಪರಿಸ್ಥಿತಿ , ಜಾಣ್ಮೆ ಮತ್ತು ಬುದ್ಧಿವಂತಿಕೆಯಿಂದ ಇಂತಹ ಪರಿಸ್ಥಿತಿಯನ್ನು ಎದುರಿಸಬೇಕು. ಕಾಲಬದಲಾದಂತೆ ಜನರ ಬುದ್ಧಿವಂತಿಕೆಯು ಬದಲಾಗಬೇಕು ಎಂಬ ಸಾರಾಂಶವನ್ನು ಈ ಕಥೆಯು ಹೊಂದಿದೆ ಅಲ್ವಾ.....? ಇದೊಂದು ಬಹಳ ಅರ್ಥಗರ್ಭಿತ ನಿಮ್ಮ ಈ ಪತ್ರಕ್ಕೆ ಧನ್ಯವಾದಗಳು ಅಕ್ಕಾ.... ಮುಂದಿನ ವಾರದ ನಿಮ್ಮ ಪತ್ರಕ್ಕೆ ಕಾಯುತ್ತಿರುವೆ , ವಂದನೆಗಳು. 
........................................ ಧನ್ವಿ ರೈ ಕೋಟೆ 
7ನೇ ತರಗತಿ 
ವಿವೇಕ ಹಿರಿಯ ಪ್ರಾಥಮಿಕ ಶಾಲೆ 
ಪಾಣಾಜೆ , ಪುತ್ತೂರು 
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************
        ನಮಸ್ತೆ ಅಕ್ಕ...... ನಾನು ಶ್ರೇಯ. ನಾನು ಕ್ಷೇಮವಾಗಿದ್ದೇನೆ. ನೀವು ಕೂಡ ಕ್ಷೇಮವಾಗಿದ್ದೀರಿ ಎಂದು ಭಾವಿಸಿದ್ದೇನೆ. ಒಂದು ವೇಳೆ ನಾನು ಆ ಹುಡುಗನಿಗೆ ಒದಗಿದ ಸಂದರ್ಭ ನನಗೆ ಒದಗಿದರೆ ಆ ಕೋತಿಗಳ ಕೈಯಲ್ಲಿ ಟೋಪಿಯನ್ನು ನೋಡಿ ನಾನು ನನ್ನ ಕೈಯಲ್ಲಿ ಒಂದು ಟೋಪಿಯನ್ನು ಹಿಡಿದುಕೊಂಡು ಅದನ್ನು ನನ್ನ ಕೈಯಿಂದ ಕೆಳಗೆ ಎಸೆಯುತ್ತಿದ್ದೆ. ಆಗ ಆ ಕೋತಿಗಳು ಹಾಗೇ ಮಾಡುತ್ತಿದ್ದವು. ಅನಂತರ ನಾನು ಅದನ್ನು ತೆಗೆದುಕೊಂಡು ಮನೆಗೆ ತೆರಳುತ್ತಿದ್ದೆ. ಹೀಗೆ ನನಗೆ ಎದುರಾದ ಸಮಸ್ಯೆಗಳನ್ನು ಪರಿಹರಿಸುತ್ತಿದ್ದೆ. 
............................................... ಶ್ರೇಯ 
೧೦ನೇ ತರಗತಿ
ಸರಕಾರಿ ಪ್ರೌಢ ಶಾಲೆ , ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
********************************************        ಪ್ರೀತಿಯ ಅಕ್ಕನಿಗೆ ಸಾನ್ವಿ ಮಾಡುವ ವಂದನೆಗಳು. ನಾನು ಕ್ಷೇಮ. ಈ ಪತ್ರವು ತುಂಬಾ ಕುತೂಹಲಕಾರಿಯಾಗಿದೆ. ಆ ಸಂದರ್ಭ ನನಗೆ ಎದುರಾಗಿದ್ದರೆ ನಾನು ನನ್ನ ತಲೆಯಲ್ಲಿದ್ದ ಟೋಪಿಯನ್ನು ಮರದ ಹಿಂದೆ ಅಡಗಿಸಿಡುತ್ತಿದ್ದೆ. ಆಗ ಅವುಗಳೂ ಹಾಗೆಯೇ ಅನುಕರಣೆ ಮಾಡುತ್ತಿದ್ದವು. ನಂತರ ನಾನು ತಿರುಗಿ ಹೋಗಿ ಅದನ್ನು ತೆಗೆದುಕೊಳ್ಳುತ್ತಿದ್ದೆ. ಈ ಮೂಲಕ ನಾನು ಈ ಸಂದರ್ಭವನ್ನು ಎದುರಿಸುತ್ತಿದ್ದೆ. ಹೀಗೆ ಬರುವ ಸಂದರ್ಭವನ್ನು ನಾವೆಲ್ಲರೂ ಎದುರಿಸೋಣ. ಈ ಪತ್ರ ಓದಿ ನನಗೆ ತುಂಬಾ ಆನಂದವಾಯಿತು. ಧನ್ಯವಾದಗಳು.
........................................ ಸಾನ್ವಿ ಸಿ ಎಸ್ 
5ನೇ ತರಗತಿ 
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************      ಹರಿ ಓಂ ನಮಸ್ತೆ ಅಕ್ಕ..... ನಾನು ಸ್ರಾನ್ವಿ ಶೆಟ್ಟಿ ನಾವು ಕ್ಷೇಮ ಅಕ್ಕ.... ನೀವು ಕೂಡ ಕ್ಷೇಮ ಎಂದು ಪತ್ರ ಮುಖೇನ ತಿಳಿಯಿತು. ಅಕ್ಕ ನಿಮ್ಮ ಪತ್ರ ಓದಿದೆವು. ನಿಮ್ಮ ಪತ್ರದಲ್ಲಿದ್ದ ಕತೆ ಓದುವಾಗ ನಮಗೆ ಟೋಪಿ ಮಾರುವವನ ಕತೆ ನೆನಪಿಗೆ ಬಂತು, ನನ್ನ ಪ್ರಕಾರ ಹೇಳುವುದಾದರೆ ಮೊಮ್ಮಗ ಮಂಗಗಳ ಎದುರು ಟೋಪಿಯನ್ನು ಎತ್ತಿ ಬಿಸಾಡುವ ಬದಲು , ತಲೆಯಿಂದ ಟೋಪಿಯನ್ನು ತೆಗೆದು ಟೋಪಿ ಇಡುವ ಚೇಲದಲ್ಲೇ ಇಟ್ಟಿದ್ದರೆ ಮಂಗಗಳು ಹಾಗೇ ಮಾಡುತ್ತಿದ್ದವೇನೊ ಅಲ್ಲವೇ ಅಕ್ಕ. ಜನ ಮನ ಕಾಲ ಬದಲಾವಣೆಯ ಹಾದಿಯಲ್ಲಿರುವಾಗ ನಮ್ಮ ಸಮಸ್ಯೆಗಳಿಗೆ ಪರಿಹಾರಗಳು ಬದಲಾಗುತ್ತಲೇ ಇರಬೇಕಾಗುತ್ತದೆ ಅಲ್ಲವೇ. ಧನ್ಯವಾದಗಳು ಅಕ್ಕ
........................................ ಸ್ರಾನ್ವಿ ಶೆಟ್ಟಿ 
9ನೇ ತರಗತಿ 
ಓಂ ಜನಹಿತಾಯ ಇಂಗ್ಲಿಷ್ ಮೀಡಿಯಂ 
ಸ್ಕೂಲ್ ಗುಡ್ಡೆಯಂಗಡಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************          ನಮಸ್ತೇ..... ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಮಾಡುವ ನಮಸ್ಕಾರಗಳು.... ಈ ಪತ್ರವನ್ನು ಓದಿದೆನು. ಈ ಕತೆಯಿಂದ ನಾವು ತಿಳಿದುಕೊಳ್ಳಬಹುದಾದ ವಿಷಯವೆಂದರೆ, ಒಳ್ಳೆಯ ಮಾತನ್ನು ಯಾರು ಹೇಳಿದರೂ ಅದನ್ನು ಗಮನವಿಟ್ಟು ಕೇಳಬೇಕು. ಒಳ್ಳೆಯ ಮಾತನ್ನು ಅಲ್ಲಿಯೇ ಬಿಡಬಾರದು. ನಾವು ಅದನ್ನು ಯಾವಾಗಲೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನಮ್ಮಲ್ಲಿರುವ ಯಾವುದೇ ವಸ್ತುಗಳೇ ಆಗಲಿ ಅದನ್ನು ಜೋಪಾನವಾಗಿ ಕಾಪಾಡಲು(ನಾವು) ಮಕ್ಕಳು ಕಲಿಯಬೇಕು.
 ೧) "ಉಪಾಯ ಬಲ್ಲವನಿಗೆ ಅಪಾಯವಿಲ್ಲ" ಎಂದು ತಿಳಿದುಕೊಳ್ಳ ಬಹುದು.
 ೨) ಒಮ್ಮೆ ಮಾಡಿದ ತಪ್ಪನ್ನು ಪುನಃ - ಪುನಃ ಮಾಡಬಾರದು.
೩) ಬೇರೊಬ್ಬರು ಮಾಡಿದ ತಪ್ಪಿನಿಂದಲೂ ನಾವು ಎಚ್ಚೆತ್ತುಕೊಳ್ಳಬಹುದು.
೪) ತಾಳ್ಮೆ, ಉಪಾಯ ಮತ್ತು ಬುದ್ಧಿವಂತಿಕೆಯಿಂದ
ನಾವು ಗೆಲ್ಲಬಹುದು. ಧನ್ಯವಾದಗಳು ಅಕ್ಕಾ ,
........................................ ಸಾತ್ವಿಕ್ ಗಣೇಶ್ 
8ನೇ ತರಗತಿ 
ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರು 
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
********************************************

Ads on article

Advertise in articles 1

advertising articles 2

Advertise under the article