-->
ಇರುವುದೆಲ್ಲವ ಬಿಟ್ಟು......

ಇರುವುದೆಲ್ಲವ ಬಿಟ್ಟು......

 ಗೀತಾ ಶ್ಯಾನ್ ಭಾಗ್
ಸರಕಾರಿ ಅಭ್ಯಾಸಿ ಪ್ರೌಢಶಾಲೆ. 
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ.

                ಪ್ರಿಯ ಮಕ್ಕಳೆ....... ನಾವೆಲ್ಲರೂ ಹೆಚ್ಚಿನವರು ಹಾಗೆಯೆ. ಇರುವುದನೆಲ್ಲ ಬಿಟ್ಟು ಇಲ್ಲದುದರೆಡೆಗೆ ಹಪಹಪಿಸುವ, ಕನಸು ಕಾಣುವ ಪ್ರವೃತ್ತಿಯವರು. ಅಪ್ಪ ಅಮ್ಮನಿಗೆ ಬೇರೆಯವರ ಮಕ್ಕಳ ಸಾಧನೆ ಬೆರಗು ಹುಟ್ಟಿಸುತ್ತದೆ. ಮಕ್ಕಳಿಗೆ ಬೇರೆ ಅಪ್ಪ-ಅಮ್ಮಂದಿರು ತಮ್ಮ ಮಕ್ಕಳಿಗಾಗಿ ಮಾಡಿದ ಖರ್ಚು ತ್ಯಾಗಗಳು ದೊಡ್ಡದೆನಿಸುತ್ತವೆ. ಇಲ್ಲಿ ನಾವು ಮರೆತೇ ಬಿಡುವ ಒಂದು ಸಾಮಾನ್ಯ ಸಂಗತಿ ಏನೆಂದರೆ ಪ್ರತಿಯೊಬ್ಬರಿಗೂ ಅವರವರದೇ ಆದ ವ್ಯಕ್ತಿತ್ವಗಳಿರುತ್ತವೆ. ಯಾರನ್ನು ಯಾರೊಂದಿಗೂ ಒಟ್ಟಾರೆಯಾಗಿ ಹೋಲಿಸಲಾಗದು. ಅವರವರ ಬಾಲ್ಯ ಮತ್ತು ಬದುಕಿನ ಬೆಳವಣಿಗೆಯ ವಿವಿಧ ಹಂತಗಳ ಅನುಭವಗಳು ಅವರವರ ವ್ಯಕ್ತಿತ್ವವನ್ನು ರೂಪಿಸಿರುತ್ತವೆ.
       ಬೆಸ್ತನೊಬ್ಬನ ಜೀವನಾನುಭವಗಳು ಕಮ್ಮಾರನ ಅನುಭವಗಳಿಗಿಂತ ಬೇರೆಯಾಗಿರಬಹುದು. ಹಾಗೆಯೇ ಶಿಕ್ಷಕನ ಅನುಭವಗಳು ಒಬ್ಬ ವ್ಯಾಪಾರಿಯ ಅನುಭವಗಳಿಗಿಂತ ಭಿನ್ನವಾಗಿರುತ್ತವೆ. ಹಾಗಾಗಿಯೇ ಭಿನ್ನ ಕೌಟುಂಬಿಕ, ಆರ್ಥಿಕ ಹಾಗೂ ಸಾಂಸ್ಕೃತಿಕತೆಯಿಂದ ಬೆಳೆದು ಬಂದ ಎಲ್ಲರೂ ವೈವಿಧ್ಯಮಯವಾದ ಜೀವನವನ್ನು ನಡೆಸುವುದು ಸಹಜವೇ ಆಗಿದೆ. ನಾವು ನಮ್ಮ ಪಾಲಕರ ಅಂದ ಚಂದಗಳನ್ನೇ ಹೋಲುತ್ತೇವೆ. ನಾವು ಪಡೆದ 
ಕಪ್ಪು- ಬಿಳುಪು ಮೈಬಣ್ಣ, ಉದ್ದ - ಕುಳ್ಳ ಶರೀರದ ಎತ್ತರ, ನೀಳ - ಮೊಂಡು ಮೂಗಿನ ರಚನೆ..., ಹೀಗೆ ಹಲವು ಹೊರನೋಟದ ಸಂಗತಿಗಳನ್ನು ನಾವು ನಮ್ಮ ಹಿರಿಯ ತಲೆಮಾರುಗಳಿಂದ ಪಡೆದಿರುತ್ತೇವೆ. ಶಾರೀರಿಕವಾಗಿ ನಾವು ಹೇಗಿದ್ದೇವೆ ಎನ್ನುವುದಕ್ಕಿಂತಲೂ ನಾವು ಅದನ್ನು ಹೇಗೆ ಸ್ವಚ್ಛವಾಗಿ ಅಂದವಾಗಿ ನಿರ್ವಹಿಸಲು ಶಕ್ಯರಾಗಿದ್ದೇವೆಂಬುದು ಅತಿ ಮುಖ್ಯ.
           ಆದ್ದರಿಂದ ಇತರರು ನಮಗಿಂತ ಚೆನ್ನಾಗಿದ್ದಾರೆ ಎಂಬ ಕೊರಗಿಗೆ ಯಾವುದೇ ಅರ್ಥ ಇರದು. ನನ್ನ ಶರೀರ ನನ್ನ ಹೆಮ್ಮೆ. ನನ್ನ ಕುಟುಂಬವೂ ನನ್ನ ಹೆಮ್ಮೆಯೆ..... ಅಲ್ಲವೆ? ಸಿರಿವಂತಿಕೆಯಲ್ಲಿ ನಮಗಿಂತ ಕೆಳಗಿರುವವರನ್ನೂ ಗುಣವಂತಿಕೆಯಲ್ಲಿ ನಮಗಿಂತ ಮೇರು ವ್ಯಕ್ತಿತ್ವ ಹೊಂದಿರುವವರನ್ನು ನೋಡಬೇಕೆಂಬ ಬಲ್ಲವರ ಮಾತಿದೆ. ಆದ್ದರಿಂದ ಚುರುಕಾದ, ಗುಣವಂತಿಕೆಯ ಮೇರು ವ್ಯಕ್ತಿಗಳಾಗಲು ಪುಟ್ಟಪುಟ್ಟ ಹೆಜ್ಜೆಗಳನ್ನು ಇಡಲು ಆರಂಭಿಸೋಣ.
ನಮ್ಮ ತಂದೆ ತಾಯಿಯರನ್ನು ಅವರಿರುವಂತೆ ಒಪ್ಪಿ ಗೌರವಿಸೋಣ.   
       ಸ್ನೇಹಿತರ ಸದ್ಗುಣಗಳ ಕುರಿತು ಮೆಚ್ಚುಗೆಯ ಮಾತುಗಳು ಇರಲಿ. ಯಾವುದು ವ್ಯಕ್ತಿಗೂ ಸಮಾಜಕ್ಕೂ ಹಿತವಲ್ಲವೋ ಅಂತಹ ವಿಷಯಗಳಿಂದ ನಿಧಾನವಾಗಿ ದೂರ ಸರಿಯೋಣ. ಸಿಟ್ಟು, ಅಸೂಯೆ , ದುರಭಿಮಾನಗಳೆಂಬ ವಿಷವನ್ನು ಸದಾ ದೂರ ಇಡೋಣ. ರಾಜ್ಯಕ್ಕೆ ದೊರೆಯೊಬ್ಬ ಹೇಗೆ ಶ್ರೇಷ್ಠನೋ ಅಷ್ಟೇ ಶ್ರೇಷ್ಠ ನಿಷ್ಟಾವಂತ ಸೇವಕನೂ ಕೂಡ. ಆದ್ದರಿಂದ ಆತ್ಮಕ್ಕೊಪ್ಪಿಗೆಯಾದ ನಿಷ್ಟೆಯಿಂದಿದ್ದು ಗುರುಹಿರಿಯರ ಪ್ರೀತಿಗೆ ಪಾತ್ರತ್ವ ಹೊಂದುದ ಭಾಗ್ಯವಂತರಾಗೋಣ.
ನಮ್ಮಲ್ಲಿರುವ ಒಳಿತಿಗೆ ಧನ್ಯತೆಯಿರಲಿ.
ಇಲ್ಲದಿರುವುದರ ಚಿಂತೆ ಏತಕೆ?
........................... ........ಗೀತಾ ಶ್ಯಾನ್ ಭಾಗ್
ಸರಕಾರಿ ಅಭ್ಯಾಸಿ ಪ್ರೌಢಶಾಲೆ. 
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ.
*******************************************



Ads on article

Advertise in articles 1

advertising articles 2

Advertise under the article