-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 45

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 45

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
    
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 45

             
         ನಾನೊಂದು ಬಡ ಜನರೇಟರ್. ಕಾರ್ಯಕ್ರಮ ಚಿಕ್ಕದೇ ಇರಲಿ, ದೊಡ್ಡದೇ ಇರಲಿ, ಹೇಗೆಯೇ ಇರಲಿ ನಾನಂತೂ ಬೇಕೇ ಬೇಕು. ದೊಡ್ಡ ಕಾರ್ಯಕ್ರಮ ಗಳಿಗಂತೂ ನಾನೇ ಆಧಾರ. ಇಡೀ ಕಾರ್ಯಕ್ರಮದ ಅಂದ ಚಂದಕ್ಕೆ ಮೂಲ ಕಾರಣ ನಾನೇ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ..... ನಾನೊಂದು ಕ್ಷಣ ಸ್ಥಂಭವಾದರೆ , ವಿದ್ಯುತ್ ಇಲ್ಲದೆ ಎಲ್ಲವೂ ನೀರ ಮೇಲಿಟ್ಟ ಹೋಮದಂತೆ ನಿಸ್ಸಾರ ಹಾಗೂ ವ್ಯರ್ಥ. ಕಳೆ ಏರಿಸುವ ಬೆಳಕಿನ ದೀಪಾಲಂಕಾರಕ್ಕೂ ನಾನೇ ಶಕ್ತಿ. ವಿಧವಿಧದ ಸುಮಧುರ ಭಕ್ಷ್ಯ ತಯಾರಿಯ ಅಡುಗೆ ಮನೆಯ ಯಂತ್ರೋಪಕರಣಗಳಿಗೂ ನಾನೇ ಉಸಿರು. ವೇದಿಕೆಯಲ್ಲಿನ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಧ್ವನಿಗೂ ನಾನೇ ಸ್ಪೂರ್ತಿ. ನನ್ನಿಂದಲೇ ಸಂಭ್ರಮ..... ನನ್ನಿಂದಲೇ ಸಂಗೀತ ನಿನಾದದ ಆಲಾಪ.. , ನನ್ನಿಂದಲೇ ಸುಂದರ ಬೆಳಕಿನಾಕರ್ಷಕ ಚಿತ್ತಾರ... ನನ್ನಿಂದಲೇ ಕಾರ್ಯಕ್ರಮದ ಸೋಲು- ಗೆಲುವು... ಹೀಗೆ ಎಲ್ಲದಕ್ಕೂ ಮೂಲ ಕಾರಣ ನಾನು. ಆದರೆ ಇದ್ಯಾವುದೇ ಗಮನಿಸದೇ ನನ್ನನ್ನು ಶಬ್ದ ಮಾಡುವ ಕಿರಿಕಿರಿ ಎಂದು ಮೂಲೆಯಲ್ಲಿ ಇಡುತ್ತಾರೆ. ನನ್ನನ್ನು ಜನ ಬಾರದ ಮೂಲೆಯಲ್ಲಿ ಅಪರಿಚಿತನಂತೆ ಇಟ್ಟಿದ್ದಾರೆ. ನನ್ನ ನಿರಂತರ ಚಲನೆಯಿಂದಾಗಿ ಇಡೀ ಪರಿಸರಕ್ಕೆ ವಿದ್ಯುತ್ ಶಕ್ತಿ ಪೂರೈಕೆ ಎಂಬುದು ಗೊತ್ತಿದ್ದರೂ ಅದನ್ನು ಮರೆತು ನನ್ನ ಕಡೆಗೆ ಗಮನ ಕೊಡದೆ ಎಲ್ಲರೂ ಮೈ ಮರೆತಿದ್ದಾರೆ. ಎಲ್ಲರೂ ಅವರವರ ಗೆಳೆಯರು, ಬಂಧುಗಳೊಂದಿಗೆ ಸಂಭ್ರಮಿಸುತ್ತಿದ್ದಾರೆ. ಆದರೆ ಅವರ ಎಲ್ಲಾ ಸಂಭ್ರಮದ ಕಳೆಗೂ ನಾನೇ ಕಾರಣ ಎಂಬುದು ಮರೆತಿದ್ದಾರೆ. ಎಲ್ಲೋ ದೂರದಲ್ಲಿ ನಿಲ್ಲಿಸಲ್ಪಟ್ಟ ನನಗೆ ಸಂಭ್ರಮ ನೋಡಲು ಅವಕಾಶವಿಲ್ಲ. ಒಂದು ಕ್ಷಣ ನಾನು ನನ್ನ ಕೆಲಸವನ್ನು ನಿಲ್ಲಿಸಿದರೆ ಎಲ್ಲರೂ ಬಂದು ನನ್ನನ್ನು ಬೈಯುತ್ತಾರೆ, ಅಪಶಕುನ ಎನ್ನುತ್ತಾರೆ. ಆದರೆ ನಿರಂತರವಾಗಿ ಕಾರ್ಯಕ್ರಮದ ಯಶಸ್ವಿಗೆ ಕೆಲಸ ಮಾಡಿದ ನನ್ನ ಉಪಕಾರವನ್ನು ಯಾರೂ ಸ್ಮರಿಸುವುದಿಲ್ಲ. ಆದರೂ ನಾನೆಂದೂ ನನಗಾಗಿ ದುಡಿದಿಲ್ಲ. ದಯವಿಟ್ಟು ನಿಮ್ಮ ಸಂಭ್ರಮದ ಮಧ್ಯೆ ನನ್ನನ್ನು ಆಗಾಗ ವಿಚಾರಿಸುತ್ತಾ ಇರಿ. ನನ್ನ ಇಂಧನ (ಡೀಸೆಲ್) ಖಾಲಿಯಾಗದಂತೆ ನೋಡುತ್ತೀರಿ. ಆಗ ನಾನು ನನ್ನ ಶಕ್ತಿ ಮೀರಿ ಕಾರ್ಯಕ್ರಮದ ಯಶಸ್ವಿಗೆ ದುಡಿಯುತ್ತೇನೆ. ಇದು ವೃದ್ಧಾಶ್ರಮದ ಬಳಿಯ ಜನರೇಟರ್ ನೋಡುತ್ತಾ ವೃದ್ಧ ತಾಯಿಯೋರ್ವಳು ಹೇಳಿದ ಸ್ವಗತ ಮಾತು.     
        ತನ್ನನ್ನು ತಾನು ಜನರೇಟರ್ ಗೆ ಹೋಲಿಸುತ್ತಾ ಆಕೆ ಹೇಳಿದ ಪ್ರತಿ ಮಾತು ತಾಯಂದಿರ ದಿನದ ಆಚರಣೆಯ ನಿಜವಾದ ಸತ್ಯದ ಅನಾವರಣಗೊಳಿಸುತ್ತದೆ. ನಾನೊಂದು ಜನರೇಟರ್.... ನಾನೊಂದು ಮೂಲೆಗುಂಪಾಗಿರುವ, ಮಕ್ಕಳಿಂದ ನಿರುಪಯುಕ್ತ ಗುಜುರಿ ಎಂದು ಬಿಸಾಕಲ್ಪಟ್ಟ ವೃದ್ಧ ಜೀವ.... ನನ್ನಿಂದ ಏನೂ ಪ್ರಯೋಜನವಿಲ್ಲ ಎಂದು ಭಾವಿಸಿದ್ದಾರೆ. ಇದ್ದ ಎಲ್ಲಾ ಬಂಗಾರ , ಆಸ್ತಿ ಎಲ್ಲಾ ಕಬಳಿಸಿದ್ದಾರೆ. ಈಗ ನನ್ನನ್ನು ಕೇಳುವವರಿಲ್ಲ. ನನ್ನ ಸಂಪೂರ್ಣ ಕುಟುಂಬದ ಸಂಭ್ರಮದ ಹಿಂದೆ ನಾನು ಪಟ್ಟ ಹತ್ತಾರು ವರುಷಗಳ ನೋವು ಪರಿಶ್ರಮ ತ್ಯಾಗ ಎಲ್ಲವೂ ಮರೆತಿದ್ದಾರೆ. ಏನ್ ಮಾಡಲಿ ನನ್ನ ಹಣೆಬರಹ..... ಇದು ವಿಶ್ವ ತಾಯಂದಿರ ದಿನ. ಈ ದಿನ ಎಲ್ಲರೂ ಬಂದು Mothers day ಎಂದು ಸೆಲ್ಪಿ ಪೋಟೋ ತೆಗೆದು ಒಂದು ದಿನದ ಮಟ್ಟಿಗೆ ನಮ್ಮ ಜತೆಯಲ್ಲಿದ್ದು Happy mothers day ಎಂದು ಹೇಳಿ ಪುಕ್ಕಟ್ಟೆ ಪ್ರಚಾರ ಪಡೆಯುತ್ತಿದ್ದಾರೆ. ಆದರೆ ಮರುದಿನವೇ mothers days ಯಲ್ಲಿನ M ಅಕ್ಷರ ಹೋಗಿ ಕೇವಲ others day ಆಗಿದೆ. ಮತ್ತೆ ಅದೇ ಮಾಮೂಲು ಏಕಾಂಗಿ ಜೀವನ ... ಮತ್ತದೇ ಸಂತಾಪ.... ಮತ್ತದೇ ನಿರ್ವಾತ. ಮುಂದಿನ ವರ್ಷ ಮತ್ತೆ ಮೇ ತಿಂಗಳ ಎಂಟನೇ ತಾರೀಕಿಗೆ ಕಾಯುವಂತಾಗಿದೆ. ಇದು ವೃದ್ಧಾಶ್ರಮದಲ್ಲಿ ಸಿಕ್ಕ ತಾಯಿಯೊಬ್ಬರ ಮಾತು.
       ಹೌದಲ್ಲವೇ.... ನಮ್ಮ ಬದುಕಿನ ಸಂಭ್ರಮದಲ್ಲಿ ನಮಗಾಗಿ ತನ್ನ ಸೌಂದರ್ಯ , ತನ್ನ ಸುಖ , ತನ್ನೆಲ್ಲ ಸರ್ವಸ್ವವನ್ನು ಕಳೆದುಕೊಂಡಿರುವ ವೃದ್ಧ ಜೀವಗಳು ಅನಾಥವಾಗಿ ಕಂಬನಿಗೈಯುತ್ತಿದೆ. ಅದು ಅಜ್ಜ- ಅಜ್ಜಿ, ತಾಯಿ -ತಂದೆ , ಗೆಳೆಯ - ಗೆಳತಿ ಹೀಗೆ ನಾನಾ ರೂಪದಲ್ಲಿ ಇರಬಹುದು. ನಾವಿಲ್ಲಿ ಸ್ಟೇಟಸ್ ನಲ್ಲಿ ಎಲ್ಲರೂ ನೋಡಲಿ ಎಂಬ ಭಾವದಿಂದ ತಾಯಿಯ ಚಿತ್ರ ಹಾಕಿ ನಕಲಿ ಮಾತೃ ಪ್ರೇಮ ಪ್ರಚಾರ ಮಾಡುತ್ತಿದ್ದೇವೆ. ಆದರೆ ಅವರಿಗೆ ಅಗತ್ಯವಾದ ನಿಜವಾದ ಪ್ರೇಮ ನೀಡುತ್ತಿಲ್ಲ.
       ಓ ನನ್ನ ಪುಟಾಣಿ ಮಕ್ಕಳೇ , ನಿಮ್ಮ ಮಾತೃ ಪ್ರೇಮ ಎಂಬುದು ಒಂದು ದಿನದ ಸ್ಟೇಟಸ್ ಗೆ ಮೀಸಲಾಗದೆ ಪ್ರತಿ ದಿನಕ್ಕೆ ಮುಡುಪಾಗಲಿ. ನಿಜವಾದ ಪ್ರೀತಿಯನ್ನು ನಿಮ್ಮ ಮನೆಯ ಹಾಗೂ ಪರಿಚಯದ ಹಿರಿಯ ಜೀವಗಳಿಗೆ ನೀಡಿ. ಜನರೇಟರ್ ಗೆ ಡೀಸೆಲ್ ಹಾಕುವಂತೆ ನೀವು ಕೂಡಾ ಅವರೊಂದಿಗೆ ಆಗಾಗ ಸ್ಪೂರ್ತಿ ಎಂಬ ಡೀಸೆಲ್ ಹಾಕಿ ಅವರನ್ನು ನಿರಂತರವಾಗಿ ಖುಷಿಯಿಂದ ಇರುವಂತೆ ಮಾಡಿ. ಅವರು ಮಾಡಿದ ತ್ಯಾಗಕ್ಕೆ ಕಿಂಚಿತ್ತಾದರೂ ನ್ಯಾಯ ಸಲ್ಲಿಸಿರಿ. ಮನೆಯಲ್ಲಿನ ಹಿರಿಯರು ಶಾಪವಲ್ಲ... ಅವರೊಂದು ವರ. ಅವರು ಅನುಭವದ ಕಣಜ. ಅವರನ್ನು ನೋಡುವ ದೃಷ್ಟಿ ಬದಲಾದರೆ ದೃಶ್ಯವೂ ಬದಲಾಗುತ್ತದೆ. ವಿಶ್ವ ತಾಯಂದಿರ ದಿನಾಚರಣೆಯ ಸಂದರ್ಭದಲ್ಲಿ ಅವರನ್ನು ನೋಡುವ ದೃಷ್ಟಿಕೋನ ಬದಲಾಗಲಿ. ಅವರೊಂದಿಗೆ ಧನಾತ್ಮಕವಾಗಿರೋಣ. ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************

Ads on article

Advertise in articles 1

advertising articles 2

Advertise under the article