ಪ್ರೀತಿಯ ಪುಸ್ತಕ : ಸಂಚಿಕೆ - 6
Friday, May 13, 2022
Edit
ಪ್ರೀತಿಯ ಪುಸ್ತಕ
ಸಂಚಿಕೆ - 6
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ.
ಪ್ರೀತಿಯ ಮಕ್ಕಳೇ...... ಕುಂಭಕರ್ಣನ ಕಥೆ ಕೇಳಿದ್ದೀರಾ.... ಅದೇ ಆ ರಾವಣನ ತಮ್ಮ.... ಭರ್ಜರಿ ನಿದ್ದೆ ಮಾಡುತ್ತಾನಲ್ಲಾ ಅವನು.... ಮಕ್ಕಳು ಜಾಸ್ತಿ ನಿದ್ದೆ ಮಾಡಿದಾಗ ದೊಡ್ಡವರು ಹೇಳುತ್ತಾರಲ್ಲಾ, “ಕುಂಭಕರ್ಣನ ಹಾಗೆ ಮಲಗುವುದು ನೋಡಿ” ಅಂತ. ಅವನ ನಿದ್ದೆಯ ಬಗ್ಗೆ ಈ ಪುಸ್ತಕದಲ್ಲಿ ಬಹಳ ಸುಂದರವಾದ ಒಂದು ಚಿತ್ರಣ ಇದೆ. ಅವನದ್ದು ಎಂತಹಾ ನಿದ್ದೆ ನೋಡಿ “ಸೀತಾ ಮಾತೆಯ ರಾವಣ ಕದ್ದು, ಅಶೋಕ ವನದಲಿ ಬಚ್ಚಿಟ್ಟದ್ದು, ಆಂಜನೇಯನು ಸೀತೆಯ ಕಂಡು, ಲಂಕಾನಗರಿಗೆ ಕಿಚ್ಚಿಟ್ಟದ್ದು, ಕುಂಭಕರ್ಣನಿಗೆ ಗೊತ್ತೇ ಇಲ್ಲ.... ಎಂತಹ ನಿದ್ದೆಯೋ ದೇವರೆ ಬಲ್ಲ” – ಹೀಗೇ ವಿವರಣೆ ಸಾಗುತ್ತದೆ. ಇದಕ್ಕೆ ರಾಗ ಹಾಕಿ ಹಾಡಬಹುದು, ಅಭಿನಯ ಮಾಡಬಹುದು. ಬಹಳ ಚೆನ್ನಾಗಿದೆ. ಈ ಹಾಡು ಸೇರಿದಂತೆ ಒಟ್ಟು 15 ಮಕ್ಕಳ ಗೀತೆಗಳು ಈ ಪುಸ್ತಕದಲ್ಲಿ ಇವೆ. ಗೀತೆಗಳಿಗೆ ತಕ್ಕಂತೆ ಚಿತ್ರಗಳೂ ಇವೆ.
“ಅಮ್ಮಾ ಶಾಲೆಗೆ ನಾ ಹೋಗಲ್ಲ” ಅಂತ ಹೇಳುವ ಪುಟ್ಟನ ಗೋಳು ಕೇಳಿಸಿಕೊಂಡರೆ ನಿಮಗೆ ಏನು ಅನ್ನಿಸಬಹುದೊ! ಇದರಲ್ಲಿ ಕಪ್ಪು ಕಾಗೆಯ ಗೀತೆಯೊಂದು ನನಗೆ ಅಷ್ಟೊಂದು ಇಷ್ಟ ಆಗಲಿಲ್ಲ. ನಿಮಗೆ ಹೇಗೆ ಅನಿಸುತ್ತದೋ ಗೊತ್ತಿಲ್ಲ. ಆಟೋ ಮಾಮನಿಗೆ, ನಿಧಾನವಾಗಿ ಓಡಿಸು ಮಾರಾಯಾ ಅಂತ ಕೇಳಿಕೊಳ್ಳುವ ಗೀತೆ ನಾವೇ ಆಟೋದಲ್ಲಿ ಕುಳಿತು ಅದರ ವೇಗಕ್ಕೆ ಆತಂಕ ಪಟ್ಟುಕೊಳ್ಳುವ ಅನುಭವ ಕೊಡುತ್ತದೆ. ಓದಿ ನೋಡಿ..ಪುಟ್ಟ ಪುಸ್ತಕ... ಚಂದದ ಪುಸ್ತಕ.
ಲೇಖಕರು: ಎನ್. ಶ್ರೀನಿವಾಸ ಉಡುಪ
ಚಿತ್ರಗಳು: ರೋಹಿಣಿ
ಪ್ರಕಾಶಕರು: ನವಕರ್ನಾಟಕ ಪ್ರಕಾಶನ
ಬೆಲೆ: ರೂ.30/-
ಐದನೇ ಆರನೇ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರು ಚಿತ್ರ ತೋರಿಸುತ್ತಾ ಚಿಕ್ಕ ಮಕ್ಕಳಿಗೂ ಓದಿ ಇದನ್ನು ಹೇಳಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************