ಪ್ರೀತಿಯ ಪುಸ್ತಕ : ಸಂಚಿಕೆ - 8
Friday, May 27, 2022
Edit
ಪ್ರೀತಿಯ ಪುಸ್ತಕ
ಸಂಚಿಕೆ - 8
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ.
ಪ್ರೀತಿಯ ಮಕ್ಕಳೇ, ಈ ಪುಸ್ತಕದ ಹಾಡೂ ಚಂದ.. ಚಿತ್ರಗಳೂ ಚಂದ.. ”ಬರಲಿದೆ! ಅಹಹಾ! ದೂರದಿ ಬರಲಿದೆ..-“ ಅಂತ ಗೀತೆ ಶುರುವಾಗುತ್ತದೆ.. ಏನು ಬರಲಿದೆ, ಮುಖಪುಟ ನೋಡಿದರೇ ಗೊತ್ತಾಗುತ್ತದೆ, ಬರಲಿರುವುದು ಗಾಳಿ ಎಂಬುದು. ಪಂಜೆ ಮಂಗೇಶರಾಯರು ತೆಂಕಣ ಗಾಳಿ ಬೀಸಿ ಬರುವ ಸೊಬಗನ್ನು ಪದಗಳಲ್ಲಿ ವಿವರಿಸಿದ ರೀತಿ ನೋಡಿ. ಅದಕ್ಕೆ ಸರಿಯಾಗಿ ಗುಜ್ಜಾರಪ್ಪನವರು ಬೀಸುವ ಗಾಳಿಯ ಸೊಬಗನ್ನು ಚಿತ್ರಗಳಲ್ಲಿ ಹಿಡಿದಿಟ್ಟಿದ್ದಾರೆ.
“ಬರಬರ ಭರದಲಿ ಬರುವುದು-
ಬೊಬ್ಬೆಯ ಹಬ್ಬಿಸಿ, ಒಂದೇ ಬಾರಿಗೆ,
ಉಬ್ಬರ ಎಬ್ಬಿಸಿ ಕಡಲಿನ ನೀರಿಗೆ,
ಬೊಬ್ಬುಳಿ ತೆರೆಯನು ದಡಕ್ಕೆ ಹೊಮ್ಮಿಸಿ, ಅಬ್ಬರದಲಿ ಭೋರ್ ಭೋರನೆ ಗುಮ್ಮಿಸಿ…” ಭಾಷೆಯ ಚಂದ ನೋಡಬೇಕು ಮಕ್ಕಳೇ ನೀವು ಗಮನವಿಟ್ಟು ಪದಪದಗಳನ್ನು ಅನುಭವಿಸಿ ಓದಿದರೆ, ಕಣ್ಣಿಗೆ ಕಟ್ಟುತ್ತದೆ ನೋಡಿ ಇದರ ಚಿತ್ರ..
ಅಂತೆಯೇ ಇದರ ಚಿತ್ರಗಳನ್ನು ನೋಡುತ್ತಾ ಹೋದರೆ, ಚಿತ್ರಗಳು ಪದ ಹಾಡುವ ಹಾಗೆ ಕಾಣುತ್ತದೆ. ಮುಖ ಪುಟ ನೋಡಿದರೆ ಗಾಳಿಯ ರಭಸ ಮಕ್ಕಳ ಮೇಲೆ ಹೇಗೆ ಬಿದ್ದಿದೆ ಎಂಬುದನ್ನು ಕಾಣುತ್ತೀರಿ.
ಇಡೀ ಪುಸ್ತಕದಲ್ಲಿ ಇರುವುದು ಒಂದೇ ಒಂದು ಗೀತೆ. ಈ ಒಂದೇ ಗೀತೆ ಮತ್ತು ಅದರ ಚಿತ್ರಗಳು ಕಣ್ಣು ಮನ ತುಂಬಿಸಿ ಬಿಡುತ್ತದೆ. ಇಂತಹ ಪುಸ್ತಕಗಳು ಸಿಕ್ಕರೆ ಪ್ರೀತಿಸದೇ ಇರುವುದು ಹೇಗೆ ಸಾಧ್ಯ?
ಲೇಖಕರು: ಪಂಜೆ ಮಂಗೇಶರಾಯರು
ಚಿತ್ರಗಳು: ಬಿ.ಜಿ.ಗುಜ್ಜಾರಪ್ಪ
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.50/-
ಐದನೇ ಆರನೇ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರು ಚಿಕ್ಕ ಮಕ್ಕಳಿಗೆ ಚಿತ್ರ ತೋರಿಸಿ ವಿವರಿಸಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************