-->
ಓ ಮುದ್ದು ಮನಸೇ ...…...! ಸಂಚಿಕೆ -19

ಓ ಮುದ್ದು ಮನಸೇ ...…...! ಸಂಚಿಕೆ -19

ಓ ಮುದ್ದು ಮನಸೇ ...…...! ಸಂಚಿಕೆ -19


           
                ಮಂಜಣ್ಣ ಕಡು-ಬಡವ ಇನ್ನೊಬ್ಬರ ಮನೆಯ ಜೀತದಾಳಾಗಿ ದುಡಿದು ಹೊಟ್ಟೆ ತುಂಬಿಸಿಕೊಳ್ಳುವ ಅನಿವಾರ್ಯದ ಬದುಕು ಅವನದು. ಸಿಗುವ ನಾಲ್ಕು ಕಾಸಿನಲ್ಲೇ ಅಲ್ಪ-ಸ್ವಲ್ಪ ಉಳಿಸಿ ಪುಟ್ಟದೊಂದು ಗುಡಿಸಲು ಕಟ್ಟಿಕೊಂಡಿದ್ದ. ಹಾಗಂತ ಗಂಜಿ ಕುಡಿದರೂ ನೆಮ್ಮದಿಯಿಂದ ಕುಡಿಯುವ ಜಾಯಮಾನ ಅವನದು. ಬದುಕು ನಡೆಸೋದು ಕಷ್ಟ ಅಂತ ಅವನಿಗೆಂದೂ ಅನ್ನಿಸಲೇ ಇಲ್ಲ..! ಇದಕ್ಕೆ ಕಾರಣವೂ ಇದೆ, ಸಾಮಾನ್ಯವಾಗಿ ಬಡವರ ಮನೆಯಲ್ಲಿ ಪ್ರತಿದಿನ ಉದ್ಭವಿಸುವ ಎರಡು ಅತಿದೊಡ್ಡ ಸಮಸ್ಯೆ ಎಂದರೆ ಗಂಡನಿಗೆ "ಇವತ್ತು ಕೆಲಸಕ್ಕೆ ಎಲ್ಲಿ ಹೋಗೋದು" ಹೆಂಡತಿಗೆ "ಸಂಜೆ ಅಡುಗೆಗೆ ಏನು ಮಾಡೋದು" ಇವೆರೆಡನ್ನು ಬಿಟ್ಟು ಬೇರೇನನ್ನು ಅವರು ಸವಾಲಿನಂತೆ ನೋಡುವುದೇ ಇಲ್ಲ. ನಾಳೆಯ ಚಿಂತೆಯಿಲ್ಲ, ಬದುಕನ್ನು ಇತಿಮಿತಿಯಲ್ಲಿ ಅನುಭವಿಸುವ ಅವರು ಅದರಾಚೆಗಿನ ಪ್ರಪಂಚಕ್ಕೆಂದು ತೆರೆದುಕೊಳ್ಳುವುದೇ ಇಲ್ಲ.
       ಮಂಜಣ್ಣನ ಗುಡಿಸಿಲಿನ ಹಿಂಭಾಗ ಅವನ ಅದೃಷ್ಟದ ಬಾಗಿಲನ್ನು ತೆರೆಯುವ ಗಿಡವೊಂದು ಅದಾಗಲೇ ಚಿಗುರೊಡೆದಿತ್ತು. ಅದೇನೋ ಗೊತ್ತಿಲ್ಲ ಹಿತ್ತಲನ್ನೆಲ್ಲಾ ಆಗಾಗ ಸವರಿ ಸೊಪ್ಪಿನ ಮೂಟೆಯನ್ನು ಮುಂಜಾನೆ ಕೆಲಸಕ್ಕೆ ಹೋಗೋವಾಗ ದಣಿಗಳ ಮನೆಯ ಕೊಟ್ಟಿಗೆಗೆ ಹೊತ್ತೊಯ್ಯುವುದು ಅವನ ಕೆಲಸವಾಗಿದ್ದರೂ ಸೊಪ್ಪು ಕಡಿಯುವಾಗ ಕಣ್ಣಿಗೆ ಬಿದ್ದಿದ್ದ ಅದೊಂದು ಪುಟ್ಟ ಗಿಡವನ್ನು ಕತ್ತರಿಸಲು ಅವನ ಮನಸ್ಸು ಒಪ್ಪಿರಲಿಲ್ಲ. ಒಂದೆರಡು ವರ್ಷಗಳ ನಂತರ ಸಮೃದ್ಧವಾಗಿ ಬೆಳೆದಿದ್ದ ಆ ಗಿಡ ಹೂಬಿಟ್ಟು ಕಂಗೊಳಿಸುತ್ತಿತ್ತು. ಅದೊಂದು ದಿನ ಹಿತ್ತಲಿಗೆ ಹೋಗಿದ್ದ ಮಂಜಣ್ಣನಿಗೆ ಕಂಡದ್ದು ಉದ್ದುದ್ದನೆಯ ಕೆಂಪು ಮಿಶ್ರಿತ ಹಳದಿ ಬಣ್ಣದ ನಾಲ್ಕೈದು ಮಾವಿನ ಹಣ್ಣುಗಳು. ಅರೆ ನೋಡೋಕೆ ಇಷ್ಟೊಂದು ಚೆನ್ನಾಗಿವೆಯೆಂದರೆ ತಿನ್ನಲು ಅದೆಷ್ಟು ರುಚಿಯಿರಬೇಡ. ಮಂಜಣ್ಣನ ಅನಿಸಿಕೆ ಹುಸಿಯಾಗಲಿಲ್ಲ, ಅವನೆಂದೂ ಸವಿದಿರದ ರುಚಿ ತುಂಬಿರುವ ಮಾವಿನ ಹಣ್ಣುಗಳು ಅವನ ಹಿತ್ತಲಲ್ಲಿ ಬೆಳೆದು ನಿಂತಿದ್ದವು. ಹೀಗೆ ಒಂದೆರಡು ವರ್ಷ ಕಳೆದ ನಂತರ ಅವನ ಮನೆಗೆ ಬಂದವರೊಬ್ಬರು ಅಂದರು "ಈ ಹಣ್ಣುಗಳಿಗೆ ಪಟ್ಟಣದಲ್ಲಿ ಹೆಚ್ಚು ಬೇಡಿಕೆಯಿದೆ ಮಾರಿದರೆ ಒಳ್ಳೆ ಹಣ ಸಿಗುತ್ತೆ". ನೋಡೋಣವೆಂದು ಮರದಲ್ಲಿದ್ದ ಹತ್ತಾರು ಹಣ್ಣುಗಳನ್ನು ಪಟ್ಟಣಕ್ಕೆ ಹೊತ್ತೊಯ್ದ ಮಂಜಣ್ಣನಿಗೆ ಅಚ್ಚರಿ ಕಾದಿತ್ತು ವಾರವಿಡೀ ದುಡಿದರೂ ಸಂಪಾದಿಸಲಾಗದಷ್ಟು ಹಣ ಅವನ ಕೈಸೇರಿತು. ಖರೀದಿಸಲು ಬಂದಿದ್ದವರಲ್ಲೊಬ್ಬರು "ಇದು ಒಳ್ಳೆ ಹಣ್ಣು ಬೇರೆಲ್ಲೂ ಸಿಗೋದಿಲ್ಲ ನೀವೇಕೆ ಇನ್ನು ಹೆಚ್ಹು ಹೆಚ್ಚು ಬೇಳಿಬಾರ್ದು? ಇದರ ತೋಟ ಮಾಡಿ ಹೆಚ್ಚು ಲಾಭ ಗಳಿಸಬಹುದು" ಅಂದರು.
      ತಡಮಾಡದ ಮಂಜಣ್ಣ ಮನೆಗೆ ಬಂದವನೇ ಮನೆಯ ಸುತ್ತಲು ಸಮೃದ್ಧವಾಗಿ ಬೆಳೆದು ನಿಂತಿದ್ದ ತೇಗ, ಸಾಗವಾನಿ, ಹಲಸು, ತೆಂಗು, ಗಂಧ, ಚೆಂದನದಂತಹ ಮರಗಳನ್ನು ಕಡಿದು...! ಒಂದು ದೊಡ್ಡ ಬಯಲನ್ನು ನಿರ್ಮಿಸಿದ ಮತ್ತು ಹಿತ್ತಲಿನ ಮಾವಿನ ಮರದ ಬೀಜಗಳನ್ನು ಸಂಗ್ರಹಿಸಿ ಅಲ್ಲಿ ನೆಟ್ಟ. ಒಂದಿಷ್ಟು ವರ್ಷಗಳವರೆಗೆ ತನ್ನ ದುಡಿಮೆಯ ಬಹುಪಾಲು ಹಣವನ್ನು ಅವುಗಳ ಬೆಳವಣಿಗೆಗೆ ವಿನಿಯೋಗಿಸಿದ ಈಗ ಎಲ್ಲಾ ಮರಗಳು ಫಸಲನ್ನು ಕೊಡಲು ಆರಂಭಿಸಿವೆ ಮಂಜಣ್ಣನ ಸಂಪಾದನೆ ಹಿಂದೆಂದಿಗಿಂತಲೂ ಹೆಚ್ಚಿದೆ. ಹಣ್ಣುಗಳನ್ನು ಸಾಗಿಸೋದಕ್ಕೆ ಸ್ವಂತ ಗಾಡಿ ಖರೀದಿಸಿದ. ಹೊಸ ಮನೆ ಕಟ್ಟಿ ಓಡಾಟಕ್ಕಾಗಿ ಕಾರೊಂದನ್ನು ತಂದ. ತಾನು ವ್ಯವಹಾರಕ್ಕೆ ಹೋಗುತ್ತಿದ್ದ ಬ್ಯಾಂಕ್ ನಲ್ಲಿದ್ದ ಒಂದು ಹೆಂಗಸಿನೊಟ್ಟಿಗೆ ಬಹಳ ಸಲುಗೆಯಿಂದಿದ್ದ ಮಂಜಣ್ಣ ಕದ್ದು ಮುಚ್ಚಿ ಅವಳೊಟ್ಟಿಗೆ ಸಂಸಾರ ನಡೆಸಲು ಶುರುಮಾಡಿದ. ತಾನು ಸಂಪಾದಿಸುತ್ತಿದ್ದ ಬಹುಪಾಲು ಹಣವನ್ನು ಸರಕಾರದ ಕಣ್ಣು ತಪ್ಪಿಸಿ ಅವಳ ಹೆಸರಿನಲ್ಲಿದ್ದ ಇನ್ನೊಂದು ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದ್ದ ಮಂಜಣ್ಣ ಈ ವಿಷಯವನ್ನು ಯಾರಿಗೂ ತಿಳಿಯದಂತೆ ಗುಟ್ಟಾಗಿಟ್ಟ. ಮಾವಿನ ಹಣ್ಣಿನಿಂದ ಜ್ಯೂಸ್ ತಯಾರಿಸುವ ಕಂಪನಿಯ ಅಧಿಕಾರಿಯೊಬ್ಬರು ಮಂಜಣ್ಣನನ್ನು ಭೇಟಿಯಾಗಿ ತಮ್ಮ ಕಂಪನಿಗೆ ಹಣ್ಣುಗಳನ್ನು ಒದಗಿಸುವಂತೆ ಉತ್ತಮ ಮೊತ್ತದ ಒಪ್ಪಂದಕ್ಕೆ ಸಹಿಹಾಕಿಸಿಕೊಂಡರು. ಹೆಚ್ಚು ಹೆಚ್ಚು ಫಸಲು ತೆಗೆಯೋದಕ್ಕೆ ಒಂದಿಷ್ಟು ಆಧುನಿಕ ಕೃಷಿ ಪದ್ಧತಿಯ ಬಗ್ಗೆ ಮಾಹಿತಿ ನೀಡಿದರು. ಅದರಂತೆ ತೋಟದಲ್ಲಿದ್ದ ಗಿಡಗಳಿಂದ ರೆಂಬೆಗಳನ್ನು ಕತ್ತರಿಸಿ ನಾಟಿಗಿಡಗಳ ರೆಂಬೆಗೆ ಜೋಡಿಸಿ ಕಸಿ ಮಾಡೋದು, ಮಾವಿನ ಗಿಡಗಳ ಸುತ್ತ ಕಂಪನಿ ಒದಗಿಸುತ್ತಿದ್ದ ಹೊಸರೂಪದ ಗೊಬ್ಬರ ಹಾಕೋದು ಹೀಗೆ ಮಂಜಣ್ಣನ ಸಂಪಾದನೆ ಕೋಟಿ ದಾಟಿತು. ಒಮ್ಮೆ ಕಂಪನಿಯ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದ ಮಂಜಣ್ಣನಿಗೆ ಪರಿಚಯವಾದ ಕಂಪನಿಯ ಓನರ್ ಅವರ ಆಪ್ತ ಸಹಾಯಕಿಯೊಬ್ಬರು "ಇಷ್ಟೊಂದು ಸಂಪಾದಿಸುವ ನೀವು ಇನ್ನೊಬ್ಬರ ಅಡಿಯಾಳಾಗಿ ಯಾಕಿರುತ್ತೀರ? ನೀವೇ ಒಂದು ಕಂಪನಿ ಆರಂಭಿಸಬಾರದೇಕೆ?" ಅಂದರು. ಅವರಿಬ್ಬರೂ ಗುಟ್ಟಾಗಿ ಕಂಪನಿ ಆರಂಭಿಸುವ ಕೆಲಸ ಶುರುವಿಟ್ಟುಕೊಂಡರು. ಮಂಜಣ್ಣ ಸಾಕಷ್ಟು ಹಣ ವಿನಿಯೋಗಿಸಿ ಕಂಪನಿಯ ಬಾಸ್ ಆಗುವ ತವಕದಲ್ಲಿ ತೇಲಾಡಿದ. ಕಂಪನಿ ಆರಂಭಿಸಲು ಬೇಕಾಗಿದ್ದ ಜಾಗಕ್ಕಾಗಿ ತನ್ನ ತೋಟವನ್ನು ವಿಸ್ತರಿಸುತ್ತಿರುವಾಗ ಪಕ್ಕದ ತೋಟದ ಮಾಲೀಕ ಜಗಳ ತೆಗೆದು ಕೋರ್ಟ್ ನಲ್ಲಿ ಮಂಜಣ್ಣನ ವಿರುದ್ದ ದಾವೆ ಹೂಡಿದ. ತನ್ನದಲ್ಲದ ಜಾಗಕ್ಕೆ ಆಸೆಪಟ್ಟು ಮಂಜಣ್ಣ ಪೇಚಿಗೆ ಸಿಲುಕಿದ. ಹಾಗಂತ ಬಿಟ್ಟು ಕೊಟ್ಟರೆ ಮಂಜಣ್ಣನ ಗೌರವಕ್ಕೆ ಹಾನಿ, ಇಬ್ಬರ ನಡುವೆ ಜಟಾಪಟಿಯಾಯಿತು ದೊಣ್ಣೆ, ಕಬ್ಬಿಣದ ರಾಡ್ ಗಳು ಕೈಗೆ ಬಂದವು..! ಮಂಜಣ್ಣನ ಮೇಲೇ ಕೇಸ್ ರಿಜಿಸ್ಟರ್ ಆಯಿತು. ಒಂದುಕಡೆ ಕಂಪನಿಯ ಕೆಲಸಗಳು ನಡೆಯುತ್ತಿವೆ ಈ ವರ್ಷ ಹಿಂದೆಂದಿಗಿಂತ ಫಸಲು ಹೆಚ್ಚಾಗಿ ಬಂದಿದೆ ಎಲ್ಲವೂ ಸುಸೂತ್ರವಾಗಿ ನಡೆದರೆ ಮಂಜಣ್ಣ ಒಬ್ಬ ಶ್ರೀಮಂತನಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಒಮ್ಮೆ ಹೆಂಡತಿಯಂದಳು "ಗಂಜಿ ಕುಡಿದ್ರೂ ಇಬ್ರೂ ಒಟ್ಟಿಗೇ ಕೂತು ಕುಡೀತಾ ಇದ್ವಿ, ಇತ್ತೀಚೆಗೆ ನೀವು ಮನೆಗೇ ಬರ್ತಾ ಇಲ್ಲ, ಹೊಡೆದಾಟ, ದುಡ್ಡು ಇವನ್ನೆಲ್ಲಾ ನೋಡಿದ್ರೆ ನಂಗ್ಯಾಕೋ ಸರಿ ಅನ್ನಿಸ್ತಿಲ್ಲ" ಕುಡಿದ ಮತ್ತಿನಲ್ಲಿದ್ದ ಮಂಜಣ್ಣನಿಗೆ ಸಿಟ್ಟು ನೆತ್ತಿಗೇರಿತು, "ನೀನೇನು ನಂಗೆ ಬುದ್ದಿ ಹೇಳೋದು, ಹಾಕಿದ್ದು ತಿಂದು ಮನೇಲಿ ಬಿದ್ದಿರ್ಬೇಕು" ಅಂದ. "ಬೈದೆ ಇನ್ನೇನ್ ಮಾಡ್ತೀರಾ? ಆ ಬ್ಯಾಂಕಿನವಳೊಟ್ಟಿಗಿನ ನಿಮ್ಮ ಗುಟ್ಟಾದ ಸಂಸಾರ ನಂಗೆ ಗೊತ್ತಿಲ್ಲ ಅನ್ಕೊಂಡ್ರಾ? ಅಂದಳು ಹೆಂಡತಿ. ಜಗಳ ಮಹಾ ಯುದ್ದವಾಯಿತು ಕೈಯ್ಯಲ್ಲಿದ್ದ ಕೊಡೆಯನ್ನು ತಿರುಗಿಸಿ ಹೆಂಡತಿಯ ತಲೆಗೆ ರಪ್ ಎಂದು ಬಡಿದ, ರಕ್ತ ಸೋರಿತು. ಮಕ್ಕಳನ್ನು ಕರೆದುಕೊಂಡು ಹೆಂಡತಿ ತನ್ನ ತಾಯಿಯ ಮನೆಗೆ ಹೊರಟು ಹೋದಳು.
       ಈ ವರ್ಷ , ವರ್ಷದ ಆರಂಭದಿಂದಲೇ ಮಳೆ ಶುರುವಾಗಿದೆ. ಬಿಟ್ಟೂ ಬಿಡದೆ ಸುರಿಯುತ್ತಿರುವ ಈ ಅಕಾಲಿಕ ಮಳೆಗೆ ಕೆಮಿಕಲ್ ಗೊಬ್ಬರದ ರುಚಿ ಉಂಡು ಜಬರ್ಧಸ್ತ್ ಆಗಿ ಬೆಳೆದಿದ್ದ ಮಂಜಣ್ಣನ ತೋಟದ ಮಾವಿನ ಕಾಯಿಗಳು ಕಟಾವಿಗೆ ಬರುವ ಮುನ್ನವೇ ಕೊಳೆತು ಉದುರುತ್ತಿವೆ, ಮಂಜಣ್ಣನಿಗೆ ಗಾಬರಿಯಾಯಿತು. ಅಗ್ರಿಮೆಂಟ್ ಪ್ರಕಾರ ಕಂಪನಿಗೆ ಸಪ್ಲೈ ಮಾಡಲು ಹಣ್ಣುಗಳ ಕೊರತೆಯಾಯಿತು, ಸಿಟ್ಟಾದ ಕಂಪನಿ ಮಂಜಣ್ಣನನ್ನು ಕರೆದು "ನಮ್ಮಿಂದ ಕೋಟಿಗಟ್ಟಲೆ ಹಣವನ್ನು ಮುಂಗಡ ಪಡೆದು ಗುಟ್ಟಾಗಿ ಕಂಪನಿ ಆರಂಭಿಸ್ತಿರೋದು ನಮ್ಗೆ ಗೊತ್ತಿಲ್ಲಾ ಅಂದ್ಕೊಂಡ್ರಾ? ಅಗ್ರಿಮೆಂಟ್ ಪ್ರಕಾರ ಹಣ್ಣು ಸಪ್ಲೈ ಮಾಡಿ ಇಲ್ಲಾಂದ್ರೆ ಕೊಟ್ಟಿರೊ ಹಣ ವಾಪಾಸ್ ಮಾಡಿ..! ಮಂಜಣ್ಣ ತನ್ನ ಕಂಪನಿಯ ನಿರ್ಮಾಣಕ್ಕೆ ಸಹಕರಿಸುತ್ತಿದ್ದ ಹುಡುಗಿಗೆ ಕರೆ ಮಾಡಿದ, ಬೇರೊಂದು ಕಂಪನಿಯ ಜೊತೆ ಕೈ ಮಿಲಾಯಿಸಿದ್ದ ಆ ಹುಡುಗಿ ಮೋಸ ಮಾಡಿರೋದನ್ನು ಕೇಳಿ ಬೆಚ್ಚಿಬಿದ್ದ ಮಂಜಣ್ಣ. ತಡಮಾಡದೆ ತನ್ನ ಬ್ಯಾಂಕಿನ ಗೆಳತಿಯನ್ನು ಮೀಟ್ ಮಾಡಲು ಅವಳನ್ನು ಇರಿಸಿದ್ದ ಬಾಡಿಗೆ ಮನೆಯಬಳಿ ಬಂದ ಮನೆಗೆ ಬೀಗ ಹಾಕಿತ್ತು ಪಕ್ಕದ ಮನೆಯವರನ್ನು ವಿಚಾರಿಸಲು "ಎರಡು ದಿನಗಳ ಹಿಂದೆ ಮನೆಯನ್ನು ಖಾಲಿಮಾಡ್ಕೊಂಡು ಹೊರಟು ಹೋದ್ರು ಎಲ್ಲಿಗೆ ಅಂತ ಹೇಳಿಲ್ಲಾ" ಅಂದರು, ಮಂಜಣ್ಣ ಜರ್ಜರಿತನಾದ...!
      ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳು ಮಾನವನ ಮನಸ್ಸಿನ ಆರು ವೈರಿಗಳಾಗಿವೆ. ಇವು ಮನುಷ್ಯನನ್ನು ಲೌಕಿಕ ಜಂಜಡದಲ್ಲಿ ಸಿಲುಕಿಸಿ ನೆಮ್ಮದಿಯ ಬದುಕನ್ನು ಸಾಗಿಸಲು ಬಿಡದ ಬಹುದೊಡ್ದ ಸವಾಲುಗಳಾಗಿವೆ. "ಇಂದ್ರಿಯ ಸುಖದ" ಬಯಕೆಯ ಹಿಂದೆ ಬಿದ್ದ ಮಂಜಣ್ಣ ಅನೈತಿಕ ಸಂಪರ್ಕ ಮಾಡಿ ಮೋಸಹೋದ, "ಸಿಟ್ಟಿಗೆ" ಲಗಾಮು ಹಾಕದೆ ಪ್ರೀತಿಸುವ ಹೆಂಡತಿಯನ್ನು ಕಳೆದುಕೊಂಡ, ಹೆಚ್ಚು ಪಸಲು ಪಡೆಯುವ "ದುರಾಸೆಗೆ" ಒಳಗಾಗಿ ನೈಸರ್ಗಿಕವಾಗಿ ಬೆಳೆಯುತ್ತಿದ್ದ ಮಾವಿನ ಮರಕ್ಕೆ ಕೆಮಿಕಲ್ ಗೊಬ್ಬರ ಹಾಕಿ ಬೆಳೆಹಾಳು ಮಾಡಿಕೊಂಡ, "ಅಹಂಕಾರದಿಂದ" ಇನ್ನೊಬ್ಬರ ಜಾಗ ಕಬಳಿಸಿ ಪೆಟ್ಟು ತಿಂದ, ಅಧಿಕಾರದ "ವ್ಯಾಮೋಹಕ್ಕೆ" ಬಿದ್ದು ಕಂಪನಿ ಆರಂಭಿಸಲು ಹೋಗಿ ಸಾಲಗಾರನಾದ ಮತ್ತು "ಜಿಪುಣತನದಿಂದ" ಸಂಪಾದಿಸಿದ್ದನ್ನೆಲ್ಲಾ ಇನ್ನೊಂದು ಹೆಣ್ಣಿನ ಹೆಸರಿನಲ್ಲಿ ಕೂಡಿಟ್ಟು ಕೈಸುಟ್ಟುಕೊಂಡ. ಯಾವ ವ್ಯಕ್ತಿಯು ಈ ಅರಿಷಡ್ವರ್ಗಗಳನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳುವುದಿಲ್ಲವೋ ಆತ ಎಂದಿಗೂ ಜೀವನದಲ್ಲಿ ನೆಮ್ಮದಿ ಹೊಂದಲಾರ. ಚಿಕ್ಕಂದಿನಿಂದಲೇ ನಮ್ಮ ಮನಸ್ಸಿನ ಈ ವೈರಿಗಳನ್ನು ನಿಗ್ರಹಿಸುವ ಪ್ರಯತ್ನ ಮಾಡಿದ್ದೇ ಆದರೆ ಮುಂದೊಂದು ದಿನ ನೆಮ್ಮದಿಯ ಬದುಕು ನಮ್ಮದಾಗುವುದರಲ್ಲಿ ಸಂಶಯವಿಲ್ಲ.  
...............................ಡಾ. ಗುರುರಾಜ್ ಇಟಗಿ
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು, 
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
mob : +91 94837 16589
********************************************

Ads on article

Advertise in articles 1

advertising articles 2

Advertise under the article