ಪ್ರೀತಿಯ ಪುಸ್ತಕ : ಸಂಚಿಕೆ - 7
Friday, May 20, 2022
Edit
ಪ್ರೀತಿಯ ಪುಸ್ತಕ
ಸಂಚಿಕೆ - 7
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ.
ಪ್ರೀತಿಯ ಮಕ್ಕಳೇ, ಬೀಜಿ ಒಂದು ಬೀಜ.. ಸಾಹಸ ಮಾಡುವುದು ಇಷ್ಟ ಅವಳಿಗೆ. ನೆಲದ ಬೇರೆ ಬೇರೆ ರೂಪಗಳನ್ನು ನೋಡುತ್ತಾ ಸಾಗುತ್ತಾಳೆ.... ಹಿಮ ಪ್ರದೇಶ, ಬಿಸಿಯಾದ ಮರುಭೂಮಿ, ಸರಸರ ಹರಿಯುವ ನದಿ ಮೇಲೆ ಜಿಗಿಯುತ್ತಾ, ಹಾರುತ್ತಾಳೆ. ಹಾಗೆ ಹಾರುತ್ತಾ ಹಾರುತ್ತಾ ಎಲ್ಲಿ ಬಂದು ಸೇರುತ್ತಾಳೆ, ಆಮೇಲೆ ಏನಾಗುತ್ತಾಳೆ.. ನೀವೇ ಓದಿ ನೋಡಿ. ಚಿಕ್ಕ ಮಕ್ಕಳಿಗೆ ಭೂಮಿ ಬಗ್ಗೆ ವೈಜ್ಞಾನಿಕ ಮಾಹಿತಿಯನ್ನು ಸರಳವಾಗಿ ಮತ್ತು ಸುಂದರವಾಗಿ ಈ ಪುಸ್ತಕ ನೀಡುತ್ತದೆ. ಪ್ರತಿ ಪುಟದಲ್ಲಿ ಸ್ವಲ್ಪ ಬರಹ ಇದೆ, ಪುಟ ತುಂಬಾ ಚಿತ್ರ ಇದೆ. ಚಿತ್ರಗಳನ್ನು ನೋಡಿಕೊಂಡೇ ಆನಂದಿಸಬಹುದು, ಮತ್ತು ಕಥೆ ಕಟ್ಟಬಹುದು. ಬೆಂಗಳೂರಿನಲ್ಲಿ ‘ಸೃಷ್ಟಿ ಅಂತ ದೊಡ್ಡ ಮಕ್ಕಳ ಶಾಲೆ ಇದೆ, ಅಲ್ಲಿಯ ಒಂದು ತರಗತಿಯ ಮಕ್ಕಳು ಸೇರಿ ಚಿಕ್ಕ ಮಕ್ಕಳಿಗೆ ವಿಜ್ಞಾನ ವಿಷಯಗಳನ್ನು ತಿಳಿಸಲು ಈ ರೀತಿ ಪುಸ್ತಕ ಒಂದು ಪ್ರಾಜೆಕ್ಟ್ ತರಹ ಮಾಡಿದ್ದಾರೆ.
ನನ್ನ ಜೊತೆ ನನ್ನ ಪುಟ್ಟ ಗೆಳತಿ ಜಾಜಿ ಇದ್ದಾಳಲ್ಲಾ ಅವಳಿಗಿನ್ನೂ ಓದಲು ಬರುವುದಿಲ್ಲ, ಅವಳು ಈ ಪುಸ್ತಕದ ಚಿತ್ರಗಳನ್ನು ನೋಡಿಕೊಂಡು ತಾನೇ ಕಥೆ ಹೇಳುತ್ತಾಳೆ. ಅವಳಿಗೆ ಇದು ಬಹಳ ಪ್ರೀತಿಯ ಪುಸ್ತಕ.. ಓದಿ ನೋಡಿದರೆ ನಿಮಗೂ ಪ್ರೀತಿ ಆಗಬಹುದು.
ಲೇಖಕರು: ಅನುಷ್ಕಾ ಕಾಲ್ರೋ, ರಾಜಸೀ ರಾಯ್, ಶಂಖಾಲಿನಾ ನಾಥ್, ಶುಭಾಂಗಿ ಗೋಯಲ್
ಅನುವಾದ: ಶಾಲಿನಿ ಜೈಕುಮಾರ್
ಪ್ರಕಾಶಕರು: ತುಲಿಕಾ
ಬೆಲೆ: ರೂ.120/-
ಆರನೇ ವಯಸ್ಸಿನ ಮಕ್ಕಳಿಗಾಗಿ ದೊಡ್ಡವರು ಚಿತ್ರ ತೋರಿಸುತ್ತಾ ಚಿಕ್ಕ ಮಕ್ಕಳಿಗೂ ಓದಿ ಇದನ್ನು ಹೇಳಬಹುದಾದ ಪುಸ್ತಕವಿದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************