-->
ಸ್ಪೂರ್ತಿಯ ಮಾತುಗಳು : ರಮೇಶ ಎಂ. ಬಾಯಾರು

ಸ್ಪೂರ್ತಿಯ ಮಾತುಗಳು : ರಮೇಶ ಎಂ. ಬಾಯಾರು

ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093

                     
           “ನನಗೆ ಯಾರ ಸಹಾಯವೂ ಬೇಡ, ಯಾರ ನೆರವೂ ಇಲ್ಲದೇ ನಾನು ಚೆನ್ನಾಗಿ ಬಾಳಬಲ್ಲೆ” ಎಂಬ ಹಮ್ಮು ಅಥವಾ ಅಹಂ ಯಾರಿಗಾದರೂ ಇದ್ದರೆ ಅವರನ್ನು ಮೂಢರ ಪ್ರಥಮ ಪಟ್ಟಿಗೆ ಸೇರಿಸಿ ಬಿಡಬಹುದು ಎನ್ನುವುದು ಹಿರಿಯರನೇಕರ ಅನುಭವದ ಮಾತು. ಅನ್ಯರ ಮತ್ತು ಅನ್ಯ ವಸ್ತುಗಳ ಸಹಾಯವಿರದ ಬದುಕು ಅಸಹನೀಯ ಮತ್ತು ಅಸಾಧ್ಯದ ಅನಿಸಿಕೆ. ನಮ್ಮ ಬದುಕು ಬೆಳಗಲು ನಮಗೆ ಇತರರ ಸಹಾಯ ಬೇಕಾಗಿರುವಂತೆಯೇ ಇತರರಿಗೆ ನಮ್ಮ ಸಹಾಯವೂ ಬೇಕೇ ಬೇಕು.
ಕಾಲವಕ್ಷಯದೀಪವದರ ಪಾತ್ರೆಯಪಾರ|
ಬಾಳ್ ಅದರಿನಾದೊಂದು ಕಿರುಹಣತೆ ಮಿಣುಕು|
ಗಾಳಿಯಾರಿಪುದೊಂದನಿನ್ನೊಂದ ಹೊತ್ತಿಪುದು|
ತೈಲಧಾರೆಯಖಂಡ –ಮಂಕುತಿಮ್ಮ||
         ಕಾಲವು ಅಕ್ಷಯವಾದ ದೀಪ. ಅದಕ್ಕೆ ನಾಶವಿಲ್ಲ. ಬದುಕಿನಲ್ಲಿ ಕಾಲದ ಪಾತ್ರವು ಅಪಾರ ಮತ್ತು ಅವರ್ಣನೀಯ. ನಮ್ಮ ಬಾಳುವೆಯು ಕಾಲದ ಅತ್ಯಂತ ಚಿಕ್ಕದಾದ ಹಣತೆಯ ಮಿಣುಕು. ಗಾಳಿಯು ಒಂದು ದೀಪವನ್ನು ನಂದಿಸಿದಾಗ ಇನ್ನೊಂದು ದೀಪದ ನೆರವಿನಿಂದ ಮತ್ತೆ ಬೆಳಗುತ್ತದೆ. ಆದರೆ ದೀಪದಲ್ಲಿರುವ ತೈಲ ಅಖಂಡವಾದುದು. ಇದು ಡಿವಿಜಿಯ ಈ ಕಗ್ಗದ ಒಳ ನೋಟ. ಅಕ್ಷಯವಾದ ಕಾಲದೊಳಗಿನ ದೀಪದಿಂದಾದ ಮಿಣುಕು ಬೆಳಕು ನಾವು. ಈ ಮಿಣುಕು ಬಲಿತು ದೀರ್ಘಕಾಲ ಬೆಳಗಬೇಕಾದರೆ ಕುಟುಂಬ, ಸಮಾಜ, ದೇಶ ಮತ್ತು ವಿಶ್ವದಂತಹ ಪಾತ್ರೆಯ ಸಹಾಯ ಬೇಕೇ ಬೇಕು. ಮಿಣುಕಿಗೆ ಸಮಸ್ಯೆಯಾದಾಗ ಅದನ್ನು ಆದರಿಸಲು ಅಥವಾ ಆಧರಿಸಲು ಇನ್ನೊಂದು ದೀಪವೂ ಬೇಕು. ದೀಪದ ಬೆಳಗುವಿಕೆಗೆ ಸಹಾಯಯಕವಾಗಿ ಅಖಂಡವಾದ ತೈಲವಿರಲೇಬೇಕು. ವಿಶ್ವದೊಳಗೆ ನಮ್ಮ ಬಾಳಿಗೆ ಪೂರಕವಾಗಿರುವ ತೈಲದೋಪಾದಿಯ ಅಸಂಖ್ಯ ವಿಷಯಗಳಿವೆ.
        ಮಾನವನ ಬದುಕಿಗೆ ಪ್ರಕೃತಿಯ ಸಹಾಯ ಅನಂತವಾದುದು. ಗಾಳಿ, ನೀರು, ಹಣ್ಣು, ಗೆಡ್ಡೆಗಳು, ಧಾನ್ಯಗಳು, ಕಾಳುಗಳು, ಮಾಂಸ, ಹೈನು, ಔಷಧ, ನೆರಳು, ಆಸರೆ ಎಲ್ಲವೂ ಪ್ರಕೃತಿಯ ಹೊರತಾಗಿ ನಮಗೆ ದೊರಕದು. ನಮ್ಮ ದೇಹವೊಂದನ್ನೇ ಗಮನಿಸೋಣ. ಕಣ್ಣಿನ ನೆರವಿರದೇ ದೇಹದ ಬಹುತೇಕ ಕೆಲಸಗಳಾಗಲು ಸಾಧ್ಯವೇ? ಕೈಕಾಲಿರದೇ ಹೋದರೆ ಕಣ್ಣುಗಳಿದ್ದರೂ ಏನನ್ನು ಸಾಧಿಸಬಹುದು? ಬಾಯಿಯೊಳಗೆ ಹಲ್ಲು ನಾಲಿಗೆ ಗಂಟಲು ಇರದೇ ಹೋದರೆ ಏನಾಗಬಹುದು ಯೋಚಿಸಿದಿರಾ? ಕಿವಿಯಿರದ ನಮ್ಮನ್ನೊಮ್ಮೆ ಊಹಿಸೋಣ. ಎಷ್ಟು ಕಷ್ಟಕರವಾಗ ಬಹುದಲ್ಲವೇ?
ನಮ್ಮ ಜನುಮ, ಬೆಳವಣಿಗೆ, ಶಿಕ್ಷಣ, ಉದ್ಯೋಗ, ಆಹಾರ, ಉಡುಪು, ಆರೋಗ್ಯ ಮೊದಲಾದುವನ್ನು ಇತರರ ಸಹಾಯವಿಲ್ಲದೇ ಗಳಿಸಲು ಸಾಧ್ಯವೇ....? ವೈದ್ಯರಿಗೆ ಇನ್ನೊಬ್ಬ ವೈದ್ಯ ಬೇಕು, ಗುರುವಿಗೂ ಒಬ್ಬ ಗುರು ಇದ್ದೇ ಇರುತ್ತಾನೆ. ಬೇಸಾಯ ಒಬ್ಬನಿಂದಲೇ ಆಗದು, ಅವನೊಂದಿಗೆ ಇತರ ಅನೇಕ ಸಹಾಯಕರು ಬೇಕು. ಬೇಸಾಯಕ್ಕೆ ಗೊಬ್ಬರ ಗಂಜಳ ಪೂರೈಸಲು ಹಸುಗಳು ಬೇಕು. ಹೊಲ ಉಳುಮೆಗೆ, ಗಾಡಿಯೆಳೆಯಲು ಎತ್ತುಗಳು ಬೇಕು. ನೊಗ ನೇಗಿಲು ಮಾಡಲು ಕಮ್ಮಾರರು ಮತ್ತು ಬಡಗಿಗಳು ಬೇಕು. ನೀರು ಹಾಯಿಸಲು ಯಂತ್ರೋಪಕರಣ ಬೇಕು. ಈ ಯಂತ್ರೋಪಕರಣ ತಯಾರಿಗೆ ಕಾರ್ಖಾನೆಗಳು, ಕಾರ್ಮಿಕರು ಬೇಕು. ಬೆಳೆದ ಬೆಳೆ ಮಾರಲು ಮಾರುಕಟ್ಟೆ, ಮಾರುಕಟ್ಟೆಗೆ ಸಾಗಿಸಲು ವಾಹನಗಳು, ಚಾಲಕರು, ರಸ್ತೆ ಬೇಡವೇ......? ಹೀಗೆ ಪ್ರತಿಯೊಂದು ಕೆಲಸದಲ್ಲಿ ಬೇಕಾಗುವ ವಿವಿಧ ಸಹಾಯಗಳನ್ನು ಪಟ್ಟಿ ಮಾಡಲು ಹೊರಟರೆ ದಿನಗಳು ಸಾಲವು.
        ಒಬ್ಬ ಕ್ಷೌರಿಕನಿಗೆ ಸಹಾಯಕವಾಗುವ ವಸ್ತುಗಳನ್ನು ಪಟ್ಟಿ ಮಾಡೋಣ. ಅವುಗಳ ತಯಾರಕರನ್ನು ಗುರುತಿಸೊಣ, ದೊಡ್ಡದಾದ ಸಂಖ್ಯೆಯಲ್ಲಿ ನೆರವೀಯುವವರನ್ನು ಕಾಣುತ್ತೇವೆ. ಹಣಕಾಸಿನ ಪೂರೈಕೆಯಲ್ಲಿ ಬ್ಯಾಂಕುಗಳು ಅಥವಾ ಸಹಕಾರಿ ಸಂಘಗಳೂ ಈ ಕ್ಷೌರಿಕನಿಗೆ ಸಹಾಯಕವಾಗಿರುತ್ತವೆ. ಆಶ್ಚರ್ಯವಾಗುತ್ತದೆ ಅಲ್ಲವೇ....? ನಮ್ಮೊಬ್ಬರ ಕೂದಲು ಕತ್ತರಿಸುವ ಕ್ಷೌರಿಕನ ಕೆಲಸದ ಹಿಂದೆ ಸಹಾಯ ಮಾಡುವ ಬೃಹತ್ತಾದ ಜಾಲವೇ ಇದೆಯಲ್ಲವೇ?
ಆದುದರಿಂದ ಇತರರ ಸಹಾಯ ಪಡೆಯದೇ ಜೀವಿಸಲು ನಮಗೆ ಕಷ್ಟ. ಹಾಗೆಯೇ ಇತರರು ಬದುಕಲು ನಾವು ಸಹಾಯ ಮಾಡದೇ ಇರಲೂ ಅಸಾಧ್ಯ. “ನೀ ನನಗಿದ್ದರೆ ನಾ ನಿನಗೆ” ಎಂದಲ್ಲವೇ ಮಾತು. ನಾವು ಇತರರಿಂದ ನೆರವು ಪಡೆಯುವಾಗ ಇತತರಿಗೂ ಸಹಾಯ ಮಾಡಬೇಕಾದುದು ನಮ್ಮ ಕರ್ತವ್ಯವಲ್ಲವೇ....? ನಾವು ಎಲ್ಲರಿಗೂ ಸಹಾಯ ಮಾಡೋಣ ಮಕ್ಕಳೇ.... ಆದರೆ ಪರಿಕ್ಷೆಯ ಹಾಲ್ ಒಳಗೆ ಎಷ್ಟೇ ಮಿತ್ರರಾಗಿದ್ದರೂ ಸಹಾಯ ಮಾಡಲೇ ಬಾರದು. ಸಹಾಯ ಮಾಡಿದರೆ ಆ ಮಿತ್ರನ ಬದುಕಿಗೆ ಕಲ್ಲು ಹಾಕಿದಂತೆಯೇ ಸರಿ. ಪರೀಕ್ಷೆಗೆ ಮೊದಲೇ ಸಾಧ್ಯವಿರುವ ಎಲ್ಲಾ ಸಹಾಯಗಳನ್ನೂ ಮಾಡೋಣ. ಇತರರಿಗೆ ನಾವು ಮಾಡುವ ಸಹಾಯವು ನಮ್ಮ ಉದಾರತೆಯಲ್ಲ. ಅದು ನಮ್ಮ ಕರ್ತವ್ಯ. ಜೀವಿತ ಕಾಲ ಎಂಬುದು ಹುಟ್ಟು ಚಟ್ಟಗಳ ನಡುವಿನ ಪುಟ್ಟ ಅವಧಿ. ಈ ತೃಣ ಅವಧಿಯ ಜೀವಿತಕ್ಕೆ ಮೆರುಗು ನೀಡುವುದೇ ನಮ್ಮ ಕರ್ತವ್ಯದ ಪಾಲನೆ. ಸಹಾಯ ಮಾಡಲೇ ಬೇಕಾದ ನಮ್ಮ ಕರ್ತವ್ಯದಿಂದ ಜಾರದಿರೋಣ. ಸಹಾಯಿಗಳೂ ಸಹಾಯಾಪೇಕ್ಷಿಗಳೂ ಆಗುವುದರಲ್ಲಿ ಖುಷಿ ಕಾಣೋಣ.
.............................ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
********************************************Ads on article

Advertise in articles 1

advertising articles 2

Advertise under the article