-->
ಹಕ್ಕಿ ಕಥೆ : ಸಂಚಿಕೆ - 48

ಹಕ್ಕಿ ಕಥೆ : ಸಂಚಿಕೆ - 48

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
               
          
       ಮಕ್ಕಳೇ ನಮಸ್ತೇ.. ಈ ವಾರ ಹೊಸತೊಂದು ಹಕ್ಕಿಯ ಪರಿಚಯಕ್ಕೆ ಸ್ವಾಗತ.. ಈ ಬಾರಿ ಬೇಸಗೆ ರಜೆಯಲ್ಲಿ ಸ್ನೇಹಿತರೊಬ್ಬರ ಮನೆಗೆ ಹೋಗಿದ್ದೆ. ಅವರ ಮಗಳು ಈ ಬಾರಿ ಹತ್ತನೆಯ ತರಗತಿ. ಅವಳಿಗೂ ಫೋಟೋಗ್ರಫಿ ಎಂದರೆ ಆಸಕ್ತಿ. ಪರೀಕ್ಷೆಗಳು ಮುಗಿದಿದ್ದವು. ತಂದೆ ಕೊಡಿಸಿದ ಕ್ಯಾಮರಾದಲ್ಲಿ ತನಗೆ ಇಷ್ಟವಾದ ಹೂವು, ಗಿಡ, ಚಿಟ್ಟೆ, ಪಕ್ಷಿ ಹೀಗೆ ಹಲವಾರು ವಿಷಯಗಳ ಫೋಟೋ ತೆಗೆದದ್ದನ್ನು ನನಗೆ ತೋರಿಸುತ್ತಿದ್ದಳು. ಅವಳು ತೋರಿಸುತ್ತಿದ್ದ ಫೋಟೋಗಳ ನಡುವೆ ಒಂದು ಸುಂದರವಾದ ಹಕ್ಕಿಯ ಫೋಟೋ ಕಾಣಿಸಿತು. ಅರೆ ಇದೆಲ್ಲಿ ಸಿಕ್ಕಿತು ಎಂದು ಕುತೂಹಲದಿಂದ ಕೇಳಿದೆ. ಮೊನ್ನೆ ಕ್ಯಾಮರಾ ಹಿಡಿದುಕೊಂಡು ಬೆಳಗ್ಗೆ ಅರಳಿದ್ದ ಹೂವುಗಳ ಚಿತ್ರ ತೆಗೆಯುತ್ತಾ ಇದ್ದೆ. ಆಗ ಅಚಾನಕ್ಕಾಗಿ ಮನೆಯ ಹತ್ತಿರದ ಅಂಜೂರದ ಮರದ ಮೇಲೆ ಹಕ್ಕಿಯೊಂದು ಹಾರಿ ಬಂದು ಕುಳಿತದ್ದು ಕಾಣಿಸಿತು. ಕಪ್ಪು ಬಣ್ಣದ ದೇಹ, ಕೆಂಪು ಬಣ್ಣದ ಕಣ್ಣು, ತಲೆ, ಹೆಗಲು, ಬಾಲದ ಬುಡದಲ್ಲಿ ಬಣ್ಣವನ್ನು ಯಾರೋ ಚೆಲ್ಲಿದ್ದಾರೋ ಎನ್ನುವಂತೆ ಕಾಣುವ ಸುಂದರ ನೀಲಿ ಬಣ್ಣ. ಮೈನಾ ಹಕ್ಕಿಗಿಂತ ಸ್ವಲ್ಪದೊಡ್ಡ ಗಾತ್ರ. ಎರಡೂ ಕಾಲಿಗೆ ಗೆಜ್ಜೆ ಹಾಕಿದ ಹುಡುಗಿಯೊಬ್ಬಳು ಎರಡೆರಡೇ ಹೆಜ್ಜೆ ಓಡಿ ಮತ್ತೆ ಸ್ವಲ್ಪ ಹೊತ್ತು ನಿಂತಂತೆ ಕೇಳುವ ಕೂಗು. ಅದರ ಬಣ್ಣ ಮತ್ತು ಶಬ್ದ ಎರಡೂ ಬಹಳ ಚೆನ್ನಾಗಿದ್ದವು. ಇಷ್ಟೊಳ್ಳೆ ಅವಕಾಶ ಸಿಕ್ಕಿದ್ದು ಬಿಡ್ತೇನಾ ಫೋಟೋ ತೆಗೆದೇ ಬಿಟ್ಟೆ ಎಂದು ತಾನು ಹಕ್ಕಿಯನ್ನು ನೋಡಿದ ಕಥೆ ಹೇಳಿದಳು.
           ನಾನೂ ನನ್ನ ಶಾಲೆಯ ಆಸುಪಾಸಿನಲ್ಲಿ ಈ ಹಕ್ಕಿಯನ್ನು ಹಲವಾರು ಬಾರಿ ನೋಡಿದ್ದೇನೆ. ಇದರ ಆಕರ್ಷಕ ಕೂಗಿನಿಂದಲೇ ಇದನ್ನು ಬಹಳ ಸುಲಭವಾಗಿ ಗುರುತಿಸಬಹುದು. ಶಾಲೆಯ ಹಿಂದಿನ ಕಾಡಿನಲ್ಲಿರುವ ದೊಡ್ಡ ಆಲದ ಮರದಲ್ಲಿ, ಉಪ್ಪಳಿಗೆ ಮರದಲ್ಲಿ ಹಣ್ಣು ಬಿಡುವ ಕಾಲಕ್ಕೆ ಈ ಹಕ್ಕಿ ಅಲ್ಲಿ ಕಾಣಸಿಗುತ್ತದೆ. ಎತ್ತರವಾದ ಮರಗಳಲ್ಲೇ ವಾಸಿಸುವ ಈ ಹಕ್ಕಿ ನೆಲಕ್ಕೆ ಬರುವುದು ತೀರಾ ಅಪರೂಪ. ಫೆಬ್ರವರಿ ಯಿಂದ ಎಪ್ರಿಲ್ ತಿಂಗಳ ನಡುವೆ ಎತ್ತರದ ಮರಗಳಲ್ಲಿ ಕಡ್ಡಿ, ನಾರು, ಬೇರು, ಎಲೆ, ಪಾಚಿ, ಜೇಡನ ಬಲೆ ಮೊದಲಾದ ವಸ್ತುಗಳನ್ನು ಬಳಸಿ ಬಟ್ಟಲಿನಾಕಾರದ ಗೂಡು ಮಾಡಿ ಮೊಟ್ಟೆ ಇಟ್ಟು ಮರಿಮಾಡುತ್ತದೆ. ಕಾಡು ಹಣ್ಣುಗಳೇ ಈ ಹಕ್ಕಿಯ ಮುಖ್ಯ ಆಹಾರ. ಹಣ್ಣಿನ ಮರಗಳಲ್ಲಿ ಗೆಜ್ಜೆ ಶಬ್ದದಂತಹ ಕೂಗು ಕೇಳಿಸಿದರೆ ನೀವು ಈ ಹಕ್ಕಿಯೇ ಇರಬಹುದು ಎಂದು ಊಹಿಸಬಹುದು.
         ಗಂಡು ಹಕ್ಕಿಯ ಬಣ್ಣ ಆಕರ್ಷಕ ಗಾಢ ನೀಲಿ ಬಣ್ಣವಾದರೆ, ಹೆಣ್ಣು ಹಕ್ಕಿ ಸ್ವಲ್ಪ ಮಾಸಲು ನೀಲಿ ಬಣ್ಣದ್ದು. ಭಾರತದ ಪಶ್ಚಿಮ ಘಟ್ಟಗಳು, ಹಿಮಾಲಯದ ತಪ್ಪಲು ಮತ್ತು ಪೂರ್ವ ಭಾರತದ ಘಟ್ಟ ಪ್ರದೇಶಗಳಲ್ಲಿ ಮಾತ್ರ ಕಾಣಸಿಗುವ ಹಕ್ಕಿ ಇದು. ನೀವೂ ಪಶ್ಚಿಮ ಘಟ್ಟದ ಆಸುಪಾಸಿನಲ್ಲಿ ವಾಸಿಸುತ್ತೀರಿ ಎಂದಾದರೆ ಈ ಹಕ್ಕಿ ನಿಮ್ಮಲ್ಲೂ ಇರಬಹುದು
ಕನ್ನಡ ಹೆಸರು: ನೀಲಿ ಸಿಳ್ಳಾರ
ಇಂಗ್ಲೀಷ್ ಹೆಸರು: Asian Fairy Bluebird
ವೈಜ್ಞಾನಿಕ ಹೆಸರು: Irena puella
ಚಿತ್ರ ಕೃಪೆ: ಅಂತರ್ಜಾಲ
ಮುಂದಿನವಾರ ಇನ್ನೊಂದು ಹೊಸ ಹಕ್ಕಿ ಕಥೆಯೊಂದಿಗೆ ಸಿಗೋಣ.. ಬಾಯ್..
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************


Ads on article

Advertise in articles 1

advertising articles 2

Advertise under the article