-->
ಜೀವನ ಸಂಭ್ರಮ : ಸಂಚಿಕೆ - 37

ಜೀವನ ಸಂಭ್ರಮ : ಸಂಚಿಕೆ - 37

ಜೀವನ ಸಂಭ್ರಮ : ಸಂಚಿಕೆ - 37


                        ಮೌಲ್ಯ
                  --------------------        
    ಮಕ್ಕಳೇ, ಇಂದು ದಿನಪತ್ರಿಕೆಗಳು, ಟಿವಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಪದ ಮೌಲ್ಯ ಮತ್ತು ಸಂಸ್ಕೃತಿ. ಡಾಕ್ಟರ್ ಗುರುರಾಜ್ ಕರ್ಜಗಿ ಯವರು ಒಂದು ಉಪನ್ಯಾಸದಲ್ಲಿ ಬಹಳ ಸುಂದರವಾಗಿ ಮನಮುಟ್ಟುವಂತೆ ಮೌಲ್ಯದ ಬಗ್ಗೆ ಹೇಳಿದ್ದು ಹೀಗಿದೆ.......
       ಮೌಲ್ಯ: ಯಾವ ನಮ್ಮ ನಡುವಳಿಕೆ ನಮಗೆ ಮತ್ತು ಸಮಾಜಕ್ಕೆ ಒಳ್ಳೆಯದಾಗುತ್ತೆ ಅದುವೇ ಮೌಲ್ಯ. ಈ ಮೌಲ್ಯಗಳಲ್ಲಿ ಧನಾತ್ಮಕ ಮೌಲ್ಯಗಳು ಮತ್ತು ಋಣಾತ್ಮಕ ಮೌಲ್ಯಗಳು ಎಂಬುದಾಗಿ ಎರಡು ವಿಭಾಗಗಳಿವೆ.....
     ಧನಾತ್ಮಕ ಮೌಲ್ಯಗಳು: ಇದನ್ನು ಅನುಸರಿಸುವ ವ್ಯಕ್ತಿಗೂ ಮತ್ತು ಸಮಾಜಕ್ಕೆ ಒಳ್ಳೆಯದಾಗುತ್ತದೆ. ಉದಾಹರಣೆ ಪ್ರೀತಿ, ಪ್ರೇಮ, ಸಹಕಾರ , ಪರೋಪಕಾರ, ಹಿರಿಯರಿಗೆ ಮತ್ತು ಗುರುಗಳಿಗೆ ಗೌರವ ಹಾಗೂ ತಂದೆತಾಯಿಗಳಿಗೆ ಗೌರವ ನೀಡುವುದು. ಇದು ಭಾರತೀಯ ಸಮಾಜ ಪ್ರಾಚೀನಕಾಲದಿಂದ ಅನುಸರಿಸಿಕೊಂಡು ಬಂದಿರುವ ಸುಂದರ ಧನಾತ್ಮಕ ಮೌಲ್ಯಗಳು. ಇದರಿಂದ ಸಮಾಜದಲ್ಲಿ ಶಾಂತಿ, ಸಮಾಧಾನ ಮತ್ತು ನೆಮ್ಮದಿ ಉಂಟಾಗಿ ಸಮಾಜದ ಪ್ರತಿಯೊಬ್ಬರು ಸುಂದರ ಜೀವನ ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಇದರಿಂದ ಸಮಾಜದಲ್ಲಿ ಕೆಳಮಟ್ಟದ ಜೀವನ ನಡೆಸುವವರನ್ನು ಮೇಲಕ್ಕೆತ್ತಲು ಸಹಕಾರಿಯಾಗಿದೆ.
     ಋಣಾತ್ಮಕ ಮೌಲ್ಯಗಳು: ಈ ಮೌಲ್ಯ ಅನುಸರಿಸುವುದರಿಂದ ಅನುಸರಿಸುವ ವ್ಯಕ್ತಿಗೂ ಕೆಲವೊಮ್ಮೆ ತೊಂದರೆಯಾಗುತ್ತದೆ ಹಾಗೂ ಸಮಾಜಕ್ಕೂ ತೊಂದರೆ ಆಗುತ್ತಿದೆ. ಉದಾಹರಣೆಗೆ ಕಳ್ಳತನ, ಅವಿಧೇಯತೆ, ಕೋಪ ,ದ್ವೇಷ, ಅಸೂಯೆ, ಮತ್ಸರ ,ದುಃಖ ಮತ್ತು ಚಿಂತೆ. ಕಳ್ಳತನದಿಂದ ಕಳ್ಳತನ ಮಾಡಿದವನಿಗೆ ಲಾಭವಾಗಬಹುದು. ವಸ್ತು ಕಳೆದುಕೊಂಡವನಿಗೆ ನಷ್ಟವಾಗುತ್ತದೆ. ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಾಗ ಆತ ಶಿಕ್ಷೆಗೆ ಒಳಗಾಗಿ ಸಮಾಜದ ಅವಹೇಳನಕ್ಕೆ ಒಳಗಾಗುತ್ತಾನೆ. ಅವಿಧೇಯತೆಯಿಂದ ಸಂಬಂಧದಲ್ಲಿ ಬಿರುಕು ಮಾಡಿ ಆನಂದದ ಜೀವನಕ್ಕೆ ಧಕ್ಕೆ ಆಗುತ್ತದೆ. ಕೋಪ, ದ್ವೇಷ, ಅಸೂಯೆ, ಮತ್ಸರ, ದುಃಖ ಮತ್ತು ಚಿಂತೆಯಿಂದ ಸಮಾಜಕ್ಕೆ ತುಂಬಾ ಹಾನಿಯಾಗುತ್ತಿದೆ. ಜೊತೆಗೆ ಅನುಸರಿಸುವ ವ್ಯಕ್ತಿಯ ದೇಹದಲ್ಲಿ ಕೆಲವು ರಾಸಾಯನಿಕ (ಅಡ್ರಿನಲಿನ್ ಹಾರ್ಮೋನ್) ಬಿಡುಗಡೆಯಾಗಿ ಮಧುಮೇಹ ಹಾಗೂ ರಕ್ತದ ಒತ್ತಡ ಮುಂತಾದ ಜೀವನ ಶೈಲಿಯ ರೋಗಗಳು ಬಂದು ತನ್ನ ದೇಹವು ರೋಗಪೀಡಿತವಾಗುತ್ತದೆ. ಸಮಾಜದಲ್ಲಿ ಸಂಬಂಧಗಳು ರೋಗಪೀಡಿತವಾಗುತ್ತದೆ. ಇದಕ್ಕೆ ಕಾರಣ ವ್ಯಕ್ತಿಯು ಅತಿ ಆಸೆ ಹೊಂದಿರುವುದು. ವಸ್ತುಗಳ ಬೆನ್ನು ಹತ್ತಿರುವುದು ಹಾಗೂ ಮನಸ್ಸು ಪರಿಮಿತಿಕ್ಕೊಳಪಟ್ಟಿರುವುದು. ನಾವು ಮನೆಗೆ ಅಥವಾ ಧರ್ಮಕ್ಕೆ ಅಥವಾ ಭಾಷೆಗೆ ಅಥವಾ ಸಂಬಂಧದ ಅಥವಾ ವಸ್ತುವಿನ ಮಿತಿಗೆ ಒಳಪಟ್ಟಾಗ ಅದರ ಜೊತೆ ಮೋಹಕ್ಕೆ ಒಳಪಡುತ್ತೇವೆ ಹಾಗೂ ಬಂಧನಕ್ಕೆ ಒಳಪಡುತ್ತೇವೆ. ಈ ಮೋಹ ಬಂಧನಕ್ಕೆ ಚ್ಯುತಿಯಾದಾಗ ಈ ಋಣಾತ್ಮಕ ಮೌಲ್ಯಗಳು ಚಿಗುರಿ ಸಮಾಜವನ್ನು ಛಿದ್ರಗೊಳಿಸುತ್ತದೆ. ಹಾಗಾಗಿ ಮನಸ್ಸು ಮಿತಿಗೆ ಒಳಪಡುವಂತೆ ಮಾಡುವ ಶಿಕ್ಷಣ ಬೇಕಾಗಿದೆ. ನಾವು ಪಕ್ಷಗಳಿಂದ ಒಳ್ಳೆಯ ಧನಾತ್ಮಕ ಮೌಲ್ಯಗಳನ್ನು ಕಲಿಯಬಹುದು. ಯಾವುದೇ ಪಕ್ಷಿ ಹಸಿವಾದಾಗ ಹಣ್ಣಿನ ಮರದ ಮೇಲೆ ಕುಳಿತು ತನ್ನ ಹಸಿವು ನೀಗುವಷ್ಟು ರಸ ಸವಿದು , ಹಾಡಿ , ಆ ಮರಕ್ಕೆ ಆಶೀರ್ವಾದ ಮಾಡಿ, ಕುಣಿದು, ಕುಪ್ಪಳಿಸಿ ಹಾರಿಹೋಗುತ್ತದೆ. ಅದು ಆ ಮರದ ಹಣ್ಣುಗಳನ್ನು ತನ್ನದಾಗ ಬೇಕೆಂದು ಬಯಸುವುದಿಲ್ಲ. ಮರದ ಮಾಲೀಕನು ಏನಾದರೂ ಇದ್ದು ಆ ಹಕ್ಕಿ ಓಡಿಸಿದರೆ, ಅದು ಬೈಯ್ಯದೆ ಇನ್ನೊಂದು ಮರಕ್ಕೆ ಹಾರಿ ಹೋಗುತ್ತದೆ. ಮನುಷ್ಯನಂತೆ ದ್ವೇಷ, ಅಸೂಯೆ , ಮತ್ಸರ , ಕೋಪ ಮಾಡಿಕೊಳ್ಳುವುದಿಲ್ಲ. ಹಾಗಾಗಿ ಪಕ್ಷಿಗಳು ಸದಾ ಆನಂದದಿಂದ ಹಾರಿಕೊಂಡು ಹಾಡಿಕೊಂಡು ಸಂತೃಪ್ತ ಜೀವನ ನಡೆಸುತ್ತಿವೆ. ಮಕ್ಕಳೇ, ನಾವು ಹಕ್ಕಿಗಳಂತೆ ಸುಂದರ ಜೀವನ ನಡೆಸಿದರೆ ಸುಂದರ ಸಮಾಜಕ್ಕೆ , ನಿಸರ್ಗಕ್ಕೆ ಮಾಡುವ ಬಹುದೊಡ್ಡ ಉಪಕಾರ. ಇಲ್ಲದಿದ್ದರೆ ಸಮಾಜ ಮತ್ತು ನಿಸರ್ಗ ಹಾಳಾಗಿ ಮುಂದೆ ಮಾನವ ಸಂತತಿಗೆ ಸಂಚಕಾರ ಬಂದರೂ ಬರಬಹುದು.
.........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************

Ads on article

Advertise in articles 1

advertising articles 2

Advertise under the article