-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 47

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 47

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
    
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 47
    
                   ಅಂದು ಪರೀಕ್ಷೆಯ ದಿನ. ಪರೀಕ್ಷೆ ಬರೆಯಲು ಪರೀಕ್ಷಾ ಕೊಠಡಿಯೊಳಗೆ ನೂರಾರು ವಿದ್ಯಾರ್ಥಿಗಳು ತಮ್ಮದೇ ರೀತಿಯಲ್ಲಿ ಸಿದ್ಧರಾಗಿ ಕೂತಿದ್ದಾರೆ. ಅವರಲ್ಲಿ ನಾನೂ ಕೂಡಾ ಒಬ್ಬನಾಗಿದ್ದೆ. ಈ ವರ್ಷದಲ್ಲಿ ಕಲಿತ ಎಲ್ಲಾ ಪಾಠಗಳನ್ನು ಮನನ ಮಾಡಿಕೊಂಡು ಸರ್ವಸಿದ್ದನಾಗಿ ಕೂತೆ. ಪರೀಕ್ಷಾ ಗಂಟೆ ಬಾರಿಸಿದ ಕೂಡಲೆ ಕೊಠಡಿಗೆ ಪರೀಕ್ಷಾ ಮೇಲ್ವಿಚಾರಕರಾಗಿ ಬಂದವರನ್ನು ನೋಡಿದೆ. ಅರೆ.... ಅದು ಬೇರೆ ಯಾರಲ್ಲ.. ನನ್ನ ಶಾಲಾ ಶಿಕ್ಷಕರು. ಆ ದಿನ ಅವರ ಪಾಠದ ಪರೀಕ್ಷೆಯೇ ಇದ್ದ ಕಾರಣ ತುಂಬಾ ಖುಷಿ ಪಟ್ಟೆ. ಪರೀಕ್ಷೆ ಬರೆಯಲು ಪ್ರಾರಂಭಿಸಿದ ನಾನು ಕೆಲವು ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸಿದೆ ಆದರೆ ಕೆಲವು ಪ್ರಶೆಗಳಿಗೆ ಉತ್ತರ ತೋಚದೆ ಗಲಿಬಿಲಿಗೊಂಡೆ. ನನ್ನೆದುರು ನನಗೆ ಕಲಿಸಿದ ಶಿಕ್ಷಕರಿದ್ದರೂ ಅವರು ಉತ್ತರ ಹೇಳದೆ ಮೌನವಾಗಿದ್ದರು. ಅಕ್ಕಪಕ್ಕದಲ್ಲಿ ಗೆಳೆಯರಿದ್ದರೂ ಅಸಹಾಯಕರಾಗಿದ್ದರು. ಉತ್ತರಕ್ಕಾಗಿ ಚಡಪಡಿಸುತ್ತಿದ್ದ ನನಗೆ ನಿಗದಿತ ಸಮಯ ಮುಗಿದದ್ದೇ ಗೊತ್ತಾಗಲಿಲ್ಲ. ಪರೀಕ್ಷಾ ಮುಕ್ತಾಯದ ಗಂಟೆ ಬಾರಿಸಿತು. ಉತ್ತರ ಸಿಗದೆ ಉತ್ತರ ಪತ್ರಿಕೆ ಕೊಟ್ಟು ಪರೀಕ್ಷಾ ಕೊಠಡಿಯಿಂದ ಹೊರಗೆ ಬಂದೆ. ಪರೀಕ್ಷಾ ಕೊಠಡಿಯಿಂದ ಹೊರಗೆ ಬಂದ ತಕ್ಷಣ ಉತ್ತರ ತೋಚಿದರೂ ಉತ್ತರ ಪತ್ರಿಕೆ ನನ್ನ ಕೈಯಲ್ಲಿರಲಿಲ್ಲ. ಅದು ಕಛೇರಿಯಲ್ಲಿ ಭದ್ರವಾಗಿತ್ತು......ಅಂತೂ ಪರೀಕ್ಷೆ ಮುಗಿದಿತ್ತು.
      ಹೌದಲ್ಲವೇ.... ನಮ್ಮ ಬದುಕೇ ಪಾಠಶಾಲೆ. ಇಲ್ಲಿ ನಡೆಯುವ ಎಲ್ಲಾ ಪರೀಕ್ಷೆಯಲ್ಲೂ ನಮಗೆ ಕಲಿಸಿದ ಗುರುವಿನ ಸ್ಥಾನದವರು, ಪೋಷಕರು, ಬಂಧುಗಳು ಉತ್ತರ ಗೊತ್ತಿದ್ದರೂ ಮೌನವಾಗಿರುತ್ತಾರೆ. ಅದರರ್ಥ ಅವರು ನಮ್ಮ ಕೈಬಿಟ್ಟಿದ್ದಾರೆ ಎಂದಲ್ಲ. ಅವರಿರುವ ಜವಾಬ್ದಾರಿಯುತ ಸ್ಥಾನಮಾನ ಅಥವಾ ಅವರಿರುವ ಪರಿಸ್ಥಿತಿ ಅವರನ್ನು ಮೌನವಾಗಿರಿಸಿದೆ. ಪರೀಕ್ಷೆಗಳಲ್ಲಿ ಸ್ವಂತವಾಗಿ ಪಾಸಾಗಲಿ ಎಂಬ ಭಾವವೂ ಇರಬಹುದು. ಅಥವಾ ಒಂದು ವರ್ಷವಿಡಿ ಕಲಿಸಿದ ಪಾಠದ ಅನ್ವಯತೆ ತಿಳಿಯುವ ಕೌತುಕವೂ ಇದ್ದಿರಬಹುದು. ಹೆಚ್ಚಾಗಿ ಪರೀಕ್ಷೆಗೆ ನಾವು ಹೇಗೆ ಸಿದ್ದರಾಗಿದ್ದೇವೆ ಎಂಬುದರ ಮೇಲೆ ಪರೀಕ್ಷೆಯ ಸುಲಭ - ಕಠಿಣತೆ ನಿಂತಿರುತ್ತದೆ. ಪರೀಕ್ಷೆಗಿಂತ ಮೊದಲು ನಾವು ಕಲಿತ ಪಾಠಗಳು... ಎದುರಿಸಿದ ಪರಿಸ್ಥಿತಿಗಳು... ನಮ್ಮ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ. ಇದು ಬದುಕಿನಲ್ಲಿ ಪಾಸಾಗಲು ಸಾಕಾಗುತ್ತದೆ. ಆದರೆ ಪರೀಕ್ಷೆಯಲ್ಲಿ ಎದುರಿಸುವ ಅನಿರೀಕ್ಷಿತ ಪ್ರಶ್ನೆಗಳಿಗೆ ಬುದ್ಧಿವಂತರಾದವರು ಹೇಗಾದರೂ ಉತ್ತರಿಸುತ್ತಾರೆ, ಆದರೆ ಸಾಮಾನ್ಯರಿಗೆ ಉತ್ತರ ಹೊಳೆಯದು. ಆಗ ಸಹಾಯ ಕೇಳಿದರೂ ಯಾರೊಬ್ಬರು ಸಹಾಯಕ್ಕೆ ಬರುವ ಸಂಭವ ಕಡಿಮೆ. ಆ ಸಂದರ್ಭದಲ್ಲಿ ಕೆಲವೊಮ್ಮೆ ಗಲಿಬಿಲಿಗೊಳ್ಳದೆ ಶಾಂತವಾಗಿ ಆಲೋಚಿಸಿದರೆ ಉತ್ತರ ಹೊಳೆಯಲೂಬಹುದು. 
       ಪರೀಕ್ಷೆ ಮುಗಿದ ನಂತರ ಉತ್ತರ ಸಿಕ್ಕರೂ .... ಬೇರೆಯವರು ಉತ್ತರ ಹೇಳಿದರೂ ವ್ಯರ್ಥ. ಏಕೆಂದರೆ ಅದರಿಂದ ಏನೂ ಪ್ರಯೋಜನವಿಲ್ಲ. ಅದೇ ರೀತಿ ಕೆಲವೊಂದು ಘಟನೆಯ ನಂತರ ಪರಿಹಾರ ಸಿಕ್ಕರೂ ವ್ಯರ್ಥ. ಒಂಥರಾ ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ ವ್ಯರ್ಥ . ಪರೀಕ್ಷೆಯ ಕೊಠಡಿ ಹಾಗೂ ಪರೀಕ್ಷೆಯನ್ನು ಬದುಕಿಗೆ ಹೋಲಿಸಿಕೊಂಡರೆ ಹಲವಾರು ಧನಾತ್ಮಕ ಅಂಶಗಳು ಗೋಚರವಾಗಬಹುದು. ಅಂಥಾ ಗೋಚರ ಅಂಶಗಳನ್ನು ಗುರುತಿಸುತ್ತಾ ಬದಲಾಗೋಣ. ಈ ಧನಾತ್ಮಕ ಕಲಿಕೆಯ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************

Ads on article

Advertise in articles 1

advertising articles 2

Advertise under the article