-->
ಸ್ಪೂರ್ತಿಯ ಮಾತುಗಳು : ರಮೇಶ ಎಂ. ಬಾಯಾರು

ಸ್ಪೂರ್ತಿಯ ಮಾತುಗಳು : ರಮೇಶ ಎಂ. ಬಾಯಾರು

ರಮೇಶ  ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093

                     
            ವ್ಯವಸಾಯ ಜಮೀನಿನ ಸುತ್ತಲೂ ಮುಳ್ಳು ಬಳಸುತ್ತೇವೆ. ಮೃಗಗಳು ಮತ್ತು ಮಾನವನ ದಾಳಿಯಿಂದ ವ್ಯವಸಾಯ ಕೆಲಸಗಳು ಹಾನಿಯಾಗದಿರಲಿ ಎಂಬುದೇ ಮುಳ್ಳು ಅಥವಾ ಮುಳ್ಳು ಹೊಸೆದ ಬೇಲಿಗಳನ್ನು ಬಳಸುವುದರ ಹಿಂದೆ ಇರುವ ಆಶಯ. ವ್ಯವಸಾಯದ ದೃಷ್ಟಿಯಿಂದ ಮುಳ್ಳು ರಕ್ಷಕ ಅನ್ನಿಸಿದರೂ ಮುಳ್ಳು ಅಪಾಯಕಾರಿ ಮತ್ತು ವಿನಾಶಕ ಎಂಬುದನ್ನೂ ನಾವು ಮರೆಯಬಾರದು. ಮುಳ್ಳಿನ ಗಿಡ ಗಂಟಿಗಳು, ಮರಗಳು, ಹಿಂಡಿಲುಗಳು ಪ್ರಕೃತಿಯಲ್ಲಿ ಲಭಿಸುತ್ತವೆ. ಅದೇ ರೀತಿ ಮಾನವನು ಲೋಹಗಳನ್ನು ಬಳಸಿ ಬೇರೆ ಬೇರೆ ಗಾತ್ರ ಮತ್ತು ಆಕಾರಗಳಲ್ಲಿ ಮುಳ್ಳುಗಳನ್ನು ತಯಾರಿಸಿ ತನ್ನ ಕೆಲಸಗಳಲ್ಲಿ ಬಳಸುತ್ತಾನೆ. ವೇದಿಕೆಯಲ್ಲಿ ಅತಿಥಿಗಳನ್ನು ಸ್ವಾಗತಿಸುವ ಸಂದರ್ಭಗಳಲ್ಲಿ ಮುಳ್ಳು ಇರುವ ಗುಲಾಬಿ ಹೂ ನೀಡುವ ಸಂಪ್ರದಾಯ ಬಹುತೇಕ ಕಡೆಯಿದೆ. ಗುಲಾಬಿಯ ಬಣ್ಣ, ಪರಿಮಳ ಮತ್ತು ಅಂದ ಚೆಂದಗಳು ಆಕರ್ಷಕ, ಆದರೆ ಗುಲಾಬಿಯನ್ನು ಹಿಡಿಯುವ ಭರದಲ್ಲಿ ಅದರೊಂದಿಗಿರುವ ಮುಳ್ಳು ಚುಚ್ಚಿದರೆ ಮನಸ್ಸು ವಿಕರ್ಷಣೆಗೊಳಗಾಗುತ್ತದೆ. ಆಕರ್ಷಣೆ ಮತ್ತು ವಿಕರ್ಷಣೆಗಳು ಜಗದ ನಿಯಮವೂ ಹೌದು. ಹಿತವಾದರೆ ಆಕರ್ಷಣೆ, ಅಹಿತವಾದರೆ ವಿಕರ್ಷಣೆ. ಚುಚ್ಚುವ ಮುಳ್ಳನ್ನು ಬಯಸುವವರು ವಿರಳಾತಿವಿರಳ.
ಮಾನವ ಮುಳ್ಳನ್ನು ಬಯಸದೇ ಇದ್ದರೂ ತನ್ನೊಳಗೆ ಹಲವು ರೀತಿಯ ಮುಳ್ಳನ್ನು ಇರಿಸಿಕೊಳ್ಳುತ್ತಾನೆ. ಆ ಮುಳ್ಳು ಬಾಹ್ಯ ಜಗತ್ತಿಗೆ ಕಾಣದು; ಆದರೆ ಮುಳ್ಳಿನ ಇರುವಿಕೆಯು ಆತನ ಮತ್ತು ನೋಡುಗನ ಅಂತಃಚಕ್ಷುವಿಗೆ ಗೋಚರಿಸದಿರುವುದಿಲ್ಲ. ನಡೆ ಮತ್ತು ನುಡಿಗಳಲ್ಲಿ ಮುಳ್ಳಿನ ವಾಸನೆಯನ್ನು ಕಿಂಚಿತ್ತಾದರೂ ಹೊರದಬ್ಬದಿರುವವರು ಬಹಳ ಕಡಿಮೆ. ಮನುಷ್ಯನು ತನ್ನೊಳಗೆ ಹುದುಗಿಸಿಕೊಂಡಿರುವ ಮುಳ್ಳು ಮಹಾ ವಿಷಕಾರಿ, ಮನದೊಳಗಿನ ಮುಳ್ಳುಗಳು ವಿಷದ ಹಾವಿನ ಬಾಯಿಯೊಳಗಿನ ಹಲ್ಲುಗಳಿಗಿಂತಲೂ ಹೆಚ್ಚು ಮಾರಣಾಂತಿಕವಾಗಿರುತ್ತದೆ. ನಮ್ಮ ಮನದೊಳಗಿನ ಮುಳ್ಳು ನಮ್ಮಲ್ಲಿರ ಬೇಕಾದ ಮನುಷ್ಯತ್ವವನ್ನು ಕೊಲ್ಲುತ್ತದೆ, ದಾನವತ್ವವನ್ನು ಪೋಷಿಸುತ್ತದೆ ಎಂಬುದೇ ದುರಂತ. ನಮ್ಮ ಮನದೊಳಗೆ ಮುಳ್ಳುಗಳಿದ್ದರೆ ಬೇರೆಯವರನ್ನು ಚುಚ್ಚುತ್ತಿರುವಂತೆಯೇ ತನ್ನನ್ನೂ ಚುಚ್ಚುತಿರುತ್ತದೆಂಬ ಸತ್ಯವನ್ನು ಮನಗಾಣಬೇಕು. ಮುಳ್ಳುಗಳಿದ್ದರೂ ಗುಲಾಬಿಯು ಜನಪ್ರಿಯ. ನಗುಮೊಗದಿಂದ ಗುಲಾಬಿಯನ್ನು ಕೊಡುವ ಸ್ವೀಕರಿಸುವ ಕೆಲಸಗಳಾಗುತ್ತವೆ. ಆದರೆ ಮುಳ್ಳಿರುವ ಹೃದಯಗಳು ಯಾರಿಗೂ ಬೇಡ. ಸೂಜಿ ಮೊನೆಯ ಮನಸ್ಸು ಯಾರಿಗೂ ಬೇಡ, ಅಂತಹ ಮನಸ್ಸುಗಳಿಗೆ ಪುರಸ್ಕಾರವಿರದು, ತಿರಸ್ಕಕಾರವೇ ಸರ್ವತ್ರ. ವಿಶಾಲವಾದ ಮನಸ್ಸು ಎಲ್ಲರಿಗೂ ಬೇಕು; ವಿಶಾಲ ಮನಸ್ಸುಗಳನ್ನು ಎಲ್ಲರೂ ನೆಚ್ಚುತ್ತಾರೆ, ಮೆಚ್ಚುತ್ತಾರೆ ಮತ್ತು ಅಪೇಕ್ಷಿಸುತ್ತಾರೆ.
           ಮನದೊಳಗೆ ಮುಳ್ಳಿನ ಕಂತೆ ಬೆಳೆಯಲು ಪ್ರಮುಖವಾದ ಕಾರಣ ದುರಾಸೆ ಮತ್ತು ಸ್ವಾರ್ಥ. ತನ್ನಲ್ಲಿರದೇ ಇರುವುದನ್ನು ಇತರರಲ್ಲಿ ಕಾಣಿಸಿಕೊಂಡಾಗ ಮಾನವ ಸಹಜವಾದ ಮತ್ಸರ ಮನದೊಳಗೆ ಹುಟ್ಟುತ್ತದೆ. ಆ ಮತ್ಸರ ಬಲಿಯುತ್ತಲೇ ಸಾಗುತ್ತದೆ. ಅದರ ಪರಿಣಾಮವಾಗಿ  , ಅಡ್ಡಗಾಲಿಡುವ, ಕಾಲೆಳೆಯುವ, ಚಾಡಿ ಹೇಳುವ, ಮೋಸಗೊಳಿಸುವ, ಸಂಚು ಮಾಡುವ, ಸಮಸ್ಯೆಗಳನ್ನು ಹುಟ್ಟು ಹಾಕುವ ಹೀಗೆ ನಾನಾ ರೀತಿಯಲ್ಲಿ ಕಿರಿಕಿರಿ ಉಂಟು ಮಾಡುವ ಕೆಲಸಗಳನ್ನು ಮಾಡುತ್ತಾರೆ. ಮತ್ಸರವೆಂಬ ಒಂದು ಮುಳ್ಳು ಒಬ್ಬ ವ್ಯಕ್ತಿಯನ್ನು ಎಷ್ಟೊಂದು ನೀಚ ಪ್ರವೃತ್ತಿಗೆ ತಳ್ಳುತ್ತದೆಯಲ್ಲವೇ?. ಹಾಗಾದರೆ ಕಾಮ, ಕ್ರೋಧ, ಲೋಭ, ಮೋಹ, ಮತ್ತು ಮದವೂ ಮತ್ಸರದೊಂದಿಗೆ ಸೇರಿದರೆ ವ್ಯಕ್ತಿಯು ಕಡು ನೀಚನಾಗುವುದರಲ್ಲಿ ಸಂದೇಹವಿಲ್ಲ. ನೀಚನಾದವನು ಎಂದೂ ಸಮಾಜದ ಕಣ್ಮಣಿಯಾಗಲಾರನು. ಜನರ ಆದರಗಳಿಗೊಳಗಾಗದೆ ಅವಗಣನೆಗೆ ಒಳಗಾಗುತ್ತಾನೆ. ಅವನಿಗೆ ನೆರವಾಗಲು ಯಾರೂ ಮುಂದೆ ಬರುವುದಿಲ್ಲ. ಸಮಾಜದಲ್ಲಿ ಏಕಾಂಗಿಯಾಗಿ ಬದುಕಬೇಕಾಗುತ್ತದೆ. ಇದರಿಂದ ತ ದುಃಖಿತನಾಗಿ ನಾನಾ ದುರ್ವ್ಯಸನಗಳಿಗೆ, ಮಾನಸಿಕ ಮತ್ತು ದೈಹಿಕ ಕಾಯಿಲೆಗಳಿಗೊಳಗಾಗುತ್ತಾನೆ. ಮನದೊಗಿನ ಮುಳ್ಳು ವ್ಯಕ್ತಿಯನ್ನು ಸರ್ವನಾಶಗೊಳಿಸುವುದಲ್ಲವೇ? 
.............................ರಮೇಶ  ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
********************************************

Ads on article

Advertise in articles 1

advertising articles 2

Advertise under the article