-->
ಜೀವನ ಸಂಭ್ರಮ : ಸಂಚಿಕೆ - 36

ಜೀವನ ಸಂಭ್ರಮ : ಸಂಚಿಕೆ - 36

ಜೀವನ ಸಂಭ್ರಮ : ಸಂಚಿಕೆ - 36


                              ಸಂಪತ್ತು
                     --------------------        
        ಮಕ್ಕಳೇ, ಸಂಪತ್ತು ಎಂದರೇನು...? ಚಿನ್ನ, ಬೆಳ್ಳಿ, ಮುತ್ತು, ರತ್ನ, ಹಣ ಮತ್ತು ಒಡವೆಗಳನ್ನು ಸಂಪತ್ತು ಎನ್ನುತ್ತೇವೆ. ಹಾಗಾದರೆ ಈ ಲೇಖನ ಓದಿದ ನಂತರ ಹೇಳಿ ಯಾವುದು ಸಂಪತ್ತು ಎಂದು. ಇದೊಂದು ಸತ್ಯ ಘಟನೆ.   
        ಒಂದು ನಗರದಲ್ಲಿ ಶ್ರೀಕಂಠಯ್ಯ ಎನ್ನುವ ವ್ಯಕ್ತಿ ವಾಸವಾಗಿದ್ದನು. ಆತ ಕೃಷಿ ಇಲಾಖೆಯಲ್ಲಿ ರಾಜ್ಯಮಟ್ಟದ ಅಧಿಕಾರಿಯಾಗಿ ನಿವೃತ್ತಿಯಾಗಿದ್ದನು. ಅವರಲ್ಲಿ ಹಣ, ಒಡವೆ ಮತ್ತು ದೊಡ್ಡಮನೆ ಎಲ್ಲಾ ಇತ್ತು. ಆತ ವಿವಾಹದ ಸಂದರ್ಭದಲ್ಲಿ ಒತ್ತಾಯಕ್ಕೆ ಮಣಿದು ತನ್ನ ಅಕ್ಕನ ಮಗಳನ್ನು ವಿವಾಹವಾಗಿದ್ದನು. ಆಗಿನ ಕಾಲದಲ್ಲಿ ವಿದೇಶದಲ್ಲಿ ಅಧ್ಯಯನ ಮಾಡಿದ್ದನು. ಆತನ ಮನೆಯಲ್ಲಿ ಪುಸ್ತಕಗಳ ಸಂಗ್ರಹ ಅಗಾಧವಾಗಿತ್ತು. ಸದಾ ಪುಸ್ತಕ ಓದುವುದು ಆತನ ಅಭ್ಯಾಸ. ಆತನಿಗೆ ನಾಲ್ಕು ಜನ ಮಕ್ಕಳು. ಮೂರು ಗಂಡು ಮಕ್ಕಳು, ಒಂದು ಹೆಣ್ಣು ಮಗು ವಿತ್ತು. ಅವರಲ್ಲಿ ಮೊದಲನೆಯ ಮಗ ಹಾಗೂ ಹೆಣ್ಣು ಮಗಳು ಮಾನಸಿಕ ಅಸ್ವಸ್ಥರಾಗಿದ್ದರು. ಎರಡನೇ ಮಗ ದ್ವಿತೀಯ ಪಿಯುಸಿ ಓದಿ ಒಂದು ಸರ್ಕಾರಿ ನೌಕರಿಯಲ್ಲಿದ್ದನು. ಕೊನೆಯ ಮಗ ಓದಿನಲ್ಲಿ ಬುದ್ಧಿವಂತ, ಬಿ. ಇ., ಓದಿದ್ದ, ಕೆಲಸಕ್ಕೆ ಆಯ್ಕೆಯಾಗಿತ್ತು. ಒಂದು ಹುಡುಗಿಯ ವಿಷಯದಲ್ಲಿ ಮನಸ್ತಾಪವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಶ್ರೀಕಂಠಯ್ಯ ಮತ್ತು ಪತ್ನಿಗೆ ವಯಸ್ಸಾಗಿತ್ತು. ವಯೋಸಹಜವಾಗಿ ಮೃತಪಟ್ಟಿದ್ದರು. ಇಡೀ ದೊಡ್ಡಮನೆ, ಪುಸ್ತಕಗಳ ಸಂಗ್ರಹ, ಒಡವೆ, ವಸ್ತ್ರ, ಮಾನಸಿಕ ಅಸ್ವಸ್ಥ ಅಣ್ಣ ಮತ್ತು ತಂಗಿಯನ್ನು ಎರಡನೇ ಮಗನೇ ನೋಡಿಕೊಳ್ಳುತ್ತಿದ್ದಾನೆ.
        ಈ ಮೇಲಿನ ಘಟನೆಯನ್ನು ಓದಿದ ನಂತರ, ನನ್ನ ಅಭಿಪ್ರಾಯದಲ್ಲಿ ಸಂಪತ್ತು ಅಂದರೆ ನಮ್ಮ ದೇಹ. ನಮ್ಮ ದೇಹವೇ ಮೊದಲನೇ ಸಂಪತ್ತು. ಸುಂದರ ಮನಸ್ಸುಳ್ಳ ನಮ್ಮ ದೇಹವೇ ಸಂಪತ್ತು. ದೈಹಿಕವಾಗಿ ಮತ್ತು ಮಾನಸಿಕವಾಗಿ ದೇಹ ಸರಿಯಿಲ್ಲದಿದ್ದರೆ, ಏನಿದ್ದರೆ ಏನು ಪ್ರಯೋಜನ...? ಏನನ್ನೂ ಅನುಭವಿಸಲು ಸಾಧ್ಯವಿಲ್ಲ. ಆದುದರಿಂದ ನಮ್ಮ ದೇಹವನ್ನು ಕಡೆಗಣಿಸಬಾರದು. ದೇಹ ಸರಿಯಿಲ್ಲದಿದ್ದರೆ ವೈದ್ಯ ಅಥವಾ ವಕೀಲ ಅಥವಾ ಶಿಕ್ಷಕ ಅಥವಾ ಯಾವುದೇ ವೃತ್ತಿಯಲ್ಲಿದ್ದು ಏನು ಪ್ರಯೋಜನ....? ಸುಂದರ ಜೀವನ ಸಾಗಿಸಲು ದೇಹವೇ ಸಂಪತ್ತು ಎನ್ನುವುದನ್ನು ಮರೆಯಬಾರದು. 
         ದೇಹವನ್ನು ರಕ್ಷಣೆ ಮತ್ತು ಪೋಷಣೆ ಮಾಡುವ ಆಹಾರ, ಗಾಳಿ , ನೀರು ಮತ್ತು ಬೆಳಕು ಎರಡನೇ ಸಂಪತ್ತು. ಇವುಗಳು ಇಲ್ಲದೆ ಬದುಕಿರಲು ಸಾಧ್ಯವಿಲ್ಲ. ಆದರೆ ಕೆಲವರ ಆಲೋಚನೆ ಹೇಗಿದೆ ಎಂದರೆ, ಇವುಗಳಿಗೆ ಬೆಲೆ ಕೊಡದೆ ವಸ್ತುಗಳನ್ನು ಖರೀದಿಸುತ್ತಾರೆ. ಗಂಜಿ ಕುಡಿದರೂ ಪರವಾಗಿಲ್ಲ ನಮಗೆ ಚಿನ್ನ-ಬೆಳ್ಳಿ, ವಾಹನ , ಬೃಹತ್ ಮನೆ ಬೇಕೆಂದು ಬಯಸುತ್ತಾರೆ. ಇದು ಸುಂದರ ಬದುಕಿಗೆ ಮಾಡುವ ಅವಮಾನ.
          ಮೂರನೇ ಸಂಪತ್ತು ನಮ್ಮ ನಿಸರ್ಗ. ನಮ್ಮನ್ನು ಪೋಷಣೆ ಮಾಡಲು ಬೇಕಾದ ಆಹಾರ, ಗಾಳಿ ,ನೀರು ಮತ್ತು ಬೆಳಕನ್ನು ನಿಡುವುದೇ ನಿಸರ್ಗ. ಇಂತಹ ನಿಸರ್ಗವನ್ನು ಕಾಪಾಡಬೇಕು. ನಮ್ಮ ದುರಾಸೆಗಾಗಿ ನಿಸರ್ಗ ಹಾಳು ಮಾಡಬಾರದು. ಕೃಷಿ ,ಕೈಗಾರಿಕೆ, ರಸ್ತೆ ಮತ್ತು ಗಣಿಯೆಂದು ನಿಸರ್ಗ ಹಾಳು ಮಾಡಬಾರದು. ಉಪಕರಣಗಳಿಗಾಗಿ ಮರ ಕಡಿಯಬಾರದು. ನಿಸರ್ಗ ಮುನಿಸಿಕೊಂಡರೆ ನಮ್ಮಲ್ಲಿ ಎಷ್ಟು ಹಣವಿದ್ದರೇನು ಪ್ರಯೋಜನ. ಜೀವನವೇ ಇರುವುದಿಲ್ಲ.  
     ಇನ್ನು ನಮ್ಮ ಜ್ಞಾನೆಂದ್ರಿಯಗಳು ಸಂಪತ್ತು. ನಾವು ಆನಂದ ಪಡಲು ಇವುಗಳನ್ನು ಚೆನ್ನಾಗಿ ಬಳಸಬೇಕು. ಜಗತ್ತನ್ನು, ಜಗತ್ತಿನ ಸೌಂದರ್ಯವನ್ನು, ನೋಡಲು ಕಣ್ಣು ಬೇಕು. ಇದನ್ನು ನೋಡಿ ಆನಂದಿಸಬೇಕು. ಜಗತ್ತಿನ ಮಧುರ  ಧ್ವನಿಯನ್ನು ಕಿವಿ ಕೇಳಿ ಆನಂದಿಸಬೇಕು. ಸುಂದರ  ಮಾತುಗಳನ್ನಾಡಿ ನಾವಿರುವ ಸ್ಥಳವನ್ನು ಸ್ವರ್ಗ ಮಾಡಲು ನಾಲಿಗೆ ಬಳಸಬೇಕು. ಹಾಗೆಯೇ ಬಗೆಬಗೆಯ ರಸವನ್ನು ಸವಿಯಲು ನಾಲಿಗೆ ಬೇಕು. ಒಳ್ಳೆಯ ಸುಗಂಧ ಸವಿಯಲು ಮೂಗು ಬೇಕು. ಸ್ಪರ್ಶ ಜ್ಞಾನ ಪಡೆಯಲು ಚರ್ಮ ಬೇಕು. ಇವುಗಳನ್ನು ಚೆನ್ನಾಗಿ ಬಳಸುತ್ತಾ ಜ್ಞಾನ ಪಡೆಯುವುದರೊಂದಿಗೆ ಆನಂದ ಅನುಭವಿಸುತ್ತೇವೆ. ಕೈಗಳಿಂದ ಸುಂದರ ಕೆಲಸಗಳನ್ನು ಮಾಡುತ್ತಾ ಜಗತ್ತನ್ನು ಅಲಂಕರಿಸುತ್ತೇವೆ ಮತ್ತು ಆನಂದಿಸುತ್ತೇವೆ. ಕಾಲುಗಳನ್ನು ಬಳಸಿ ಸುಂದರ ಸ್ಥಳ ನೋಡಬಹುದು ಮತ್ತು ಆನಂದಿಸಬಹುದು. ಆನಂದಿಸಲು ಸುಂದರ ಮನಸ್ಸು ಮತ್ತು ಸದ್ಭಾವ ಇರಬೇಕು. ಹಾಗಾಗಿ ಜ್ಞಾನೇಂದ್ರಿಯಗಳಾದ ಕಣ್ಣು,ಕಿವಿ, ಮೂಗು, ನಾಲಿಗೆ ,ಚರ್ಮ, ಹಾಗೂ ಕೈಕಾಲು, ಮನಸ್ಸು ಮತ್ತು ಸದ್ಭಾವ ಗಳು ಕೂಡ ನಮ್ಮ ಸಂಪತ್ತು.   
       ಜ್ಞಾನ ನಮ್ಮ ಮುಖ್ಯ ಪ್ರಧಾನ ಸಂಪತ್ತು. ಇದನ್ನು ಯಾರೂ ಕದಿಯಲು ಸಾಧ್ಯವಿಲ್ಲ. ನಮ್ಮ ಆನಂದಕ್ಕೆ ಜ್ಞಾನ ಮುಖ್ಯ. ಏನನ್ನ ನೋಡಬೇಕು..? ಎಷ್ಟು ನೋಡಬೇಕು..? ಹೇಗೆ ನೋಡಬೇಕು..? ಏನನ್ನ ಕೇಳಬೇಕು..? ಎಷ್ಟು ಕೇಳಬೇಕು..? ಹೇಗೆ ಕೇಳಬೇಕು..?  ಏನನ್ನು, ಎಷ್ಟು ಪ್ರಮಾಣದಲ್ಲಿ, ಹೇಗೆ ರುಚಿ ನೋಡಬೇಕು..? ಯಾವ ಮಾತುಗಳನ್ನು, ಯಾವ ಪದಗಳನ್ನು, ಯಾವ ಸಂದರ್ಭದಲ್ಲಿ, ಎಷ್ಟು ಮಾತನಾಡಬೇಕು..?  ಯಾವ ಕೆಲಸವನ್ನು, ಹೇಗೆ   ಮಾಡಬೇಕು..?  ಎನ್ನುವುದನ್ನು ಜ್ಞಾನ ತಿಳಿಸುವುದರಿಂದ ಜ್ಞಾನವೇ ಪ್ರಧಾನ.  
      ಇದೆಲ್ಲ ಇರುವ ಜನರು ಬಡವರು ಹೇಗಾಗುತ್ತಾರೆ..? ಆದರೆ ನಾವು ಈ ಸಹಜ ಸಂಪತ್ತನ್ನು ಬಿಟ್ಟು, ಕ್ಷಣಿಕ  ಸಂಪತ್ತಿಗೆ ಮರುಳಾಗಿ, ನಮ್ಮನ್ನು ನಾವು ಕಳೆದುಕೊಳ್ಳುವುದು ತಪ್ಪು. ನಮ್ಮ ದೇಹವನ್ನು ಚೆನ್ನಾಗಿ ನೋಡಿಕೊಂಡರೆ  ಎಲ್ಲವನ್ನೂ ಸಂಪಾದಿಸಬಹುದು.  ಈಗ ಹೇಳಿ ನಮ್ಮ ಮುಖ್ಯ ಸಂಪತ್ತು ಯಾವುದು ಎಂದು.
.........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************

Ads on article

Advertise in articles 1

advertising articles 2

Advertise under the article