-->
ಕಲಿಕಾ ಚೇತರಿಕೆ - ಒಂದೊಳ್ಳೆಯ ಪ್ರಯತ್ನ

ಕಲಿಕಾ ಚೇತರಿಕೆ - ಒಂದೊಳ್ಳೆಯ ಪ್ರಯತ್ನ

ಡಾ. ಗುರುರಾಜ್ ಇಟಗಿ
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು, 
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
mob : +91 94837 16589


                 ಭಾರತೀಯ ಶಿಕ್ಷಣ ಪದ್ಧತಿಗೆ ಅದರದೇ ಆದ ಮಜಲುಗಳಿವೆ. ಗುರುಕುಲ ಶಿಕ್ಷಣದಿಂದ ಹಿಡಿದು ಇವತ್ತಿನ ಹೈಬ್ರೀಡ್ ಎಜುಕೇಶನ್ ಸಿಸ್ಟಮ್ ನ ವರೆಗೆ ಕಾಲಕ್ಕೆ ತಕ್ಕಂತೆ ಬದಲಾದ ಗುರು ಶಿಷ್ಯರ ನಡುವಿನ ಕೊಡು-ಕೊಳ್ಳುವ ವಿಧಾನ, ತರಗತಿಗಳ ರಚನೆ, ಬೋಧನಾ ವಿಷಯಗಳ ಆಯ್ಕೆ ಹೀಗೆ ಹತ್ತು ಹಲವಾರು ವಿಚಾರಗಳು ಜ್ಞಾನದ ಬೀಜ ಬಿತ್ತಿ ಬದಲಾವಣೆಯ ಫಸಲು ತೆಗೆಯುವಲ್ಲಿ ಮಹತ್ತರ ಪಾತ್ರ ವಹಿಸಿವೆ. ಹೀಗಿದ್ದರೂ ಕೂಡಾ ಇವತ್ತಿನ ಯುವಜನತೆಯು ಒಂದೊಳ್ಳೆಯ ಬದುಕನ್ನು ಕಟ್ಟಿಕೊಳ್ಳುವಲ್ಲಿ ಎಡವುತ್ತಿರುವುದು ಆಘಾತಕಾರಿ ಬೆಳವಣಿಗೆ. ವಿದ್ಯಾರ್ಥಿಗಳಲ್ಲಿ ವೃತ್ತಿಪರತೆಯನ್ನು ಬೆಳೆಸುವ ಧಾವಂತದಲ್ಲಿ ಅವರನ್ನು ಅಪ್ಪ ಅಮ್ಮಂದಿರಿಗೆ ಉತ್ತಮ ಮಕ್ಕಳನ್ನಾಗಿ, ಶಿಕ್ಷಕರಿಗೆ ವಿದ್ಯಾರ್ಥಿಗಳನ್ನಾಗಿ, ಸಮಾಜ ಮತ್ತು ದೇಶಕ್ಕೆ ಕೊಡುಗೆಗಳನ್ನಾಗಿ ರೂಪಿಸಲು ಬೇಕಾದ ಮೌಲ್ಯಯುತ ಶಿಕ್ಷಣವನ್ನು ಕೊಡುವಲ್ಲಿ ನಾವು ಸೋತಿದ್ದೇವೆಂದು ನನಗನ್ನಿಸುತ್ತಿದೆ. ಇವೆಲ್ಲದರ ನಡುವೆ ಕೋವಿಡ್ ಮಹಾಮಾರಿಯ ಕಾಲ್ತುಳಿತಕ್ಕೆ ನಲುಗಿದ ಶಿಕ್ಷಣ ವ್ಯವಸ್ಥೆ ಮತ್ತದರ ಪ್ರಭಾವದ ನೇರ ಪಾಲುದಾರರಾದ ವಿದ್ಯಾರ್ಥಿ ಸಮೂಹ ಇವತ್ತೂ ಚೇತರಿಸಿಕೊಳ್ಳಲು ಎಲ್ಲಿಲ್ಲದ ಪ್ರಯತ್ನದಲ್ಲಿದೆ. ಅಂತಹ ಪ್ರಯತ್ನಗಳ ಭಾಗವಾಗಿ "ಕಲಿಕಾ ಚೇತರಿಕೆ" ಎನ್ನುವ ಒಂದೊಳ್ಳೆಯ ಕಾರ್ಯಕ್ರಮವನ್ನು ಶ್ರಮವಹಿಸಿ ಅಚ್ಚುಕಟ್ಟಾಗಿ ರೂಪಿಸಿ ಕಾರ್ಯಗತಗೊಳಿಸಲು ಪ್ರಯತ್ನಿಸುತ್ತಿರುವ ನಮ್ಮ ಶಿಕ್ಷಣ ಇಲಾಖೆಯ ಪ್ರಯತ್ನ ನಿಜಕ್ಕೂ ಶ್ಲಾಘನೀಯ..!
        ಕಳೆದೆರೆಡು ವರ್ಷ ಇಲಾಖೆಯ, ಶಿಕ್ಷಣ ಸಂಸ್ಥೆಗಳ, ಶಿಕ್ಷಕರ ಸತತ ಪ್ರಯತ್ನಗಳ ಫಲವಾಗಿ ಶಾಲೆಯಿಂದ ದೂರವಾಗಿದ್ದ ಮಕ್ಕಳನ್ನು ಡಿಜಿಟಲ್ ವಾಹಿನಿಗಳ ಹಾಗೂ ವಿದ್ಯಾಗಮದ ಮೂಲಕ ತಲುಪಿದ್ದರೂ ಕೂಡ ಪೂರ್ಣ ಪ್ರಮಾಣದ ಸಫಲತೆಯೊಂದಿಗೆ ಉತ್ತಮ ಶಿಕ್ಷಣವನ್ನು ನೀಡುವಲ್ಲಿ ಸಾಧ್ಯವಾಗಿರಲಿಲ್ಲ. ಇನ್ನು ಹೆಚ್ಚಿನ ಮಕ್ಕಳು ಕಲಿಕೆ ಬಿಟ್ಟು ಅಪ್ಪ ಅಮ್ಮಂದಿರೊಟ್ಟಿಗೆ ಕೆಲಸಕ್ಕೆ ಕೈಜೋಡಿಸಿದ್ದು ಒಂದು ಕಡೆಯಾದರೆ ಮೊಬೈಲ್ ಫೋನಿನ ದಾಸರಾಗಿ ಕಲಿಕೆಯನ್ನು ನಿರ್ಲಕ್ಷಿಸಿದವರ ಸಂಖ್ಯೆಯೇ ಜಾಸ್ತಿಯಿತ್ತು. ಹೀಗೆ ಸಾಗಿಬಂದ ವಿದ್ಯಾರ್ಥಿ ಸಮೂಹ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಮುಂಚೆ ಹೊಂದಬೇಕಾಗಿದ್ದ ಕಲಿಕಾ ಸಾಮರ್ಥ್ಯವನ್ನು ಪಡೆಯುವಲ್ಲಿ ವಿಫಲವಾಗಿದ್ದು ಶೋಚನೀಯ. ಇಂತಹ ವಿಫಲತೆಯನ್ನು ಪ್ರಸಕ್ತ ಶೈಕ್ಷಣಿಕ ವರ್ಷ ಅರಂಭಗೊಳ್ಳುವ ಮುಂಚೆ ಸರಿದೂಗಿಸಿ ಮುಂದಿನ ಹಂತದ ಕಲಿಕೆಗೆ ಮಕ್ಕಳನ್ನು ಸಿದ್ಧಗೊಳಿಸುವ ಪ್ರಯತ್ನದ ಭಾಗವೇ "ಕಲಿಕಾ ಚೇತರಿಕೆ.
       ಹಲವಾರು ತಜ್ಞರ ಪ್ರಯತ್ನದ ಫಲವಾಗಿ ತರಗತಿ ಒಂದರಿಂದ ಒಂಬತ್ತರವರೆಗೆ ಅಗತ್ಯವಿರುವ ಪ್ರಮುಖ ವಿಷಯಗಳ ಭೋದನೆ ಮತ್ತು ಮಾಡಬೇಕಾದ ಚಟುವಟಿಕೆಗಳ ಸಂಪೂರ್ಣ ಮಾಹಿತಿಯುಳ್ಳ ಶಿಕ್ಷಕರ ಕೈಪಿಡಿ ಸಿದ್ಧಗೊಂಡಿದೆ (https://kspstadk.com/pdf-materials/ ) ವಿವಿಧ ಜಾಲತಾಣಗಳಲ್ಲಿ ಲಭ್ಯವಿರುವ ಈ ಕೈಪಿಡಿಗಳನ್ನು ಯಾರು ಬೇಕಾದರೂ ಯಾವಾಗ ಬೇಕಾದರೂ ಪಡೆದುಕೊಳ್ಳಬಹುದಾಗಿದ್ದು ಆ ಮೂಲಕ ಶಿಕ್ಷಕರು ತಮ್ಮ ತಮ್ಮ ವಿಷಯಕ್ಕನುಗುಣವಾಗಿ ಕೈಪಿಡಿಯನ್ನು ಬಳಸಿಕೊಂಡು ವಿಧ್ಯಾರ್ಥಿಗಳನ್ನು ಈ ಚಟುವಟಿಕೆಗಳಲ್ಲಿ ತೊಡಗಿಸಬಹುದಾಗಿದೆ. ಶಿಕ್ಷಕರಿಗಷ್ಟೇ ಅಲ್ಲದೇ ವಿಧ್ಯಾರ್ಥಿಗಳಿಗಾಗಿ ಕಲಿಕಾ ಹಾಳೆಗಳು [(https://dsert.kar.nic.in/kasp/kalikachetarike.asp (https://eduhub.englishhub.co.in/2022/04/kalika-chetarike-class-1-9-handbooks-worksheets-pdf.html)] ರೂಪುಗೊಂಡಿದ್ದು ಅವುಗಳಲ್ಲಿ ಮಕ್ಕಳು ಮಾಡಬೇಕಾಗಿರುವ ಚಟುವಟಿಕೆಗಳನ್ನು ನೀಡಲಾಗಿದೆ. ಶಿಕ್ಷಕರು ತಮ್ಮ ತರಗತಿ ಮತ್ತು ಭೋದನಾ ವಿಷಯಕ್ಕೆ ಸಂಬಂಧಿಸಿದ ಕೈಪಿಡಿ ಮತ್ತು ಕಲಿಕಾ ಹಾಳೆಯನ್ನು ಪಡೆದುಕೊಂಡು ಅಧ್ಯಯನ ಮಾಡಿದಾಗ ಈ ಕಾರ್ಯಕ್ರಮದ ಸಂಪೂರ್ಣ ಅರಿವು ಮೂಡಲಿದೆ. ತರಗತಿಗಳಲ್ಲಿ ಮಾಡಬೇಕಾಗಿರುವ ಚಟುವಟಿಕೆಗಳ ಕುರಿತು ಅತ್ಯಂತ ಸ್ಪಷ್ಟವಾಗಿ ಮತ್ತು ಸರಳವಾಗಿ ಶಿಕ್ಷಕರ ಕೈಪಿಡಿಯಲ್ಲಿ ವಿವರಿಸಿರುವುದರಿಂದ ಗೊಂದಲವಿಲ್ಲದೆ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಬಹುದಾಗಿದೆ. ಅವಶ್ಯಕತೆ ಇದ್ದಲ್ಲಿ ಸಂಸ್ಥೆಯ ಮುಖ್ಯಸ್ಥರ ಅಥವಾ ತರಬೇತಿ ಪಡೆದ ಶಿಕ್ಷಕರ ಮಾರ್ಗದರ್ಶನ ಪಡೆದುಕೊಳ್ಳುವುದು ಉತ್ತಮ. ಇನ್ನು ಈ ಕಾರ್ಯಕ್ರಮಕ್ಕೆ ಸಂಭಂದ ಪಟ್ಟ ಹಲವಾರು ವೀಡಿಯೋ ಗಳು ಯೂ ಟ್ಯೂಬ್ (https://www.youtube.com/watch?v=Z-y6qHZaeuw) ನಂತಹ ಜಾಲತಾಣಗಳಲ್ಲಿ ಲಭ್ಯವಿದ್ದು ಅವುಗಳನ್ನೂ ಬಳಸಿಕೊಳ್ಳುವಲ್ಲಿ ಅಡ್ಡಿಯಿಲ್ಲ. ಇಂತಹದ್ದೊಂದು ಉತ್ತಮ ಪ್ರಯತ್ನದಲ್ಲಿ ಶಿಕ್ಷಕರೆಲ್ಲರೂ ಕೈಜೋಡಿಸಿದ್ದೇ ಆದರೆ ಕೋವಿಡ್ ನ ಕಾಲ್ತುಳಿತಕ್ಕೆ ನಲುಗಿರುವ ವಿದ್ಯಾರ್ಥಿಗಳ ಭವಿಷ್ಯತ್ತನ್ನು ರೂಪಿಸಲು ಇದೊಂದು ಉತ್ತಮ ವೇದಿಕೆಯಾಗುವುದರಲ್ಲಿ ಸಂದೇಹವಿಲ್ಲ.....
...............................ಡಾ. ಗುರುರಾಜ್ ಇಟಗಿ
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು, ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
mob : +91 94837 16589
********************************************

Ads on article

Advertise in articles 1

advertising articles 2

Advertise under the article