-->
ರಜೆಯನ್ನು ಶಾಲೆಯಲ್ಲೇ ಮುಂದುವರಿಸೋಣ ಬನ್ನಿ.....

ರಜೆಯನ್ನು ಶಾಲೆಯಲ್ಲೇ ಮುಂದುವರಿಸೋಣ ಬನ್ನಿ.....

ಉದಯ ಗಾಂವಕಾರ 
ವಿಜ್ಞಾನ ಶಿಕ್ಷಕ 
ಸರಕಾರಿ ಪ್ರೌಢಶಾಲೆ, ಸಿದ್ಧಾಪುರ 
ಕುಂದಾಪುರ ತಾಲೂಕು , ಉಡುಪಿ ಜಿಲ್ಲೆ
                     
               ನಮಸ್ತೇ ಮಕ್ಕಳೇ....... ರಜೆ ಕಳೆದು ಶಾಲೆಗೆ ಬರುತ್ತಿರುವ ನಿಮಗೆ ಸ್ವಾಗತ. ಶಾಲೆ ನಿಮ್ಮನ್ನು ತುಂಬಾ ಮಿಸ್ ಮಾಡ್ಕೊಂಡಿದೆ. ನೀವೂ ಶಾಲೆಯನ್ನು ಮಿಸ್ ಮಾಡ್ಕೊಂಡಿದ್ದೀರಾ...? ರಜೆ ಇಷ್ಟವೇ ನಿಮಗೆ ಅಥವಾ ಶಾಲೆ ಇಷ್ಟವೇ ಎಂಬಂತಹ ಪ್ರಶ್ನೆಗಳನ್ನು ಕೇಳಲಾರೆ. ಅಂತಹ ಪ್ರಶ್ನೆಗಳು ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಬಲ್ಲವು. ಆದರೆ, ರಜೆ ಎಂದರೇನು ಎಂಬುದನ್ನು‌ ನಿಮ್ಮಿಂದ ಕೇಳಬಯಸುವೆ......
      ಶಾಲೆ ಇಲ್ಲದಿರುವುದೇ ರಜೆಯೇ....? ಕಲಿಕೆ ಇಲ್ಲದಿರುವುದು ರಜೆಯೇ......? ಅಥವಾ ನಮಗಿಷ್ಟವಾದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ರಜೆಯೇ.....?
ಕಲಿಕೆ ಇಲ್ಲದಿರುವ ಯಾವ ಗಳಿಗೆಯೂ ಇರಲಾರದು. ನಾವು ಕಲಿಯುತ್ತಲೇ ಇರುತ್ತೇವೆ. ಶಾಲೆ ಸೇರದ ಮಗುವೂ ಕಲಿಯುತ್ತದೆ. ಶಾಲೆಗೆ ಬರುವ ಮುಂಚೆಯೇ ನಾವೆಲ್ಲ ಎಷ್ಟೊಂದು‌ ಕಲಿತಿರಲಿಲ್ಲ....?! ನಮ್ಮ ಸಂಬಂಧಿಗಳನ್ನು ಗುರುತಿಸಲು ನಾವು ಕಲಿತಿದ್ದೆವು, ಬಣ್ಣಗಳನ್ನು ಪ್ರತ್ಯೇಕಿಸಬಲ್ಲವಾಗಿದ್ದೆವು, ಎಷ್ಟೋ ಪ್ರಾಣಿಗಳ ಹೆಸರು ನಮಗೆ ಶಾಲೆಗೆ ಬರುವ ಮೊದಲೇ ಗೊತ್ತಿತ್ತು. ನಾವು ಮಾತನಾಡುವುದನ್ನು ಕಲಿತಿದ್ದು ಶಾಲೆಗೆ ಬರುವ ಮುನ್ನವೇ ಅಲ್ಲವೇ.....? ಕೂಡಿಸುವುದು, ಕಳೆಯುವುದು, ಗಾತ್ರ , ಆಕಾರ ಮುಂತಾದ ಗಣಿತ ಪರಿಕಲ್ಪನೆಗಳನ್ನು ನಮಗೆ ಯಾರು ಕಲಿಸಿದರು....?
        ನಾವು ಕಲಿತೆವು. ನಾವು ಆಡುತ್ತಾ ಕಲಿತೆವು. ಒಡನಾಡುತ್ತಾ ಕಲಿತೆವು. ಒಬ್ಬರಿಗೊಬ್ಬರು ಸಹಾಯವಾಗುತ್ತಾ ಕಲಿತೆವು. ಕಲಿಯುತ್ತಿದ್ದೇವೆಂದು ಅರಿಯದೇ ಕಲಿತೆವು. ಕ್ರಿಕೆಟ್, ಕಬಡ್ಡಿ, ಕಳ್ಳ- ಪೋಲಿಸ್ ಯಾವುದೇ ಆಟವಿರಲಿ, ಅದರಲ್ಲಿ ಎಷ್ಟೊಂದು ನಿಯಮಗಳಿರುತ್ತವೆ. ಆ ಎಲ್ಲ ನಿಯಮಗಳನ್ನು ತರಗತಿ ಪಾಠಗಳಂತೆ ಕಲಿತು, ನಂತರವೇ ಆಡುವುದಾಗಿದ್ದರೆ ನಾವು ಅನೇಕ ಆಟಗಳನ್ನು ಆಡುತ್ತಲೇ ಇರಲಿಲ್ಲ. ಆದರೆ, ಆಟವಾಡುವುದು ಮತ್ತು ಆಟದ ನಿಯಮಗಳನ್ನು ಕಲಿಯುವುದು ನಮಗೆ ಬೇರೆ ಬೇರೆ ಎನಿಸಿರಲಿಲ್ಲ. ನಾವು ಯಾವಾಗ ಆಟದ ನಿಯಮಗಳನ್ನು ಕಲಿತೆವೆಂಬುದು ನಮ್ಮ ಅರಿವಿಗೆ ಬಂದೇ ಇರಲಿಲ್ಲ. ಹೌದು, ಶಾಲೆಯ ಹೊರಗೂ ನಾವು ಕಲಿಯಬಲ್ಲೆವು ಮತ್ತು ಕಲಿಯುವುದು ಖುಷಿಯ ಚಟುವಟಿಕೆಯೂ ಆಗಬಹುದು. ಶಾಲೆಯಲ್ಲೇ ಹೀಗೆ ಕಲಿಯುವುದಾದರೆ ಹೇಗಿರಬಹುದು.....?
         ಈ ಬಾರಿ ಶಾಲೆ ಶುರುವಾಗುವಾಗ ನಿಮಗೊಂದು ಖುಷಿಯ ಸುದ್ದಿ ಕಾದಿದೆ. ಈ ಬಾರಿ ಶಾಲೆ ಆರಂಭವಾಗುವುದೆಂದರೆ, ರಜೆಯ ಮುಂದುವರಿಕೆಯೇ ಆಗಿರುತ್ತದೆ. ರಜೆಯಂತೆ ಶಾಲೆಯಲ್ಲೂ ಖುಷಿಯಾಗಿರಬಹುದು, ನಿಮ್ಮ ಸಹಪಾಠಿಗಳೊಂದಿಗೆ ಒಡನಾಡುತ್ತಾ ಕಲಿಯಬಹುದು. ಕಲಿಯುವುದು ಮತ್ತು ಖುಷಿಯಾಗಿರುವುದು ಬೇರೆ ಬೇರೆ ಆಗದಂತೆ ಶಿಕ್ಷಕರೂ ನಿಮ್ಮೊಡನೆ ಸೇರಿಕೊಳ್ಳುತ್ತಾರೆ. 
ಹೌದು.
       ನೀವೆಣಿಸುವುದು ಸರಿಯಾಗಿದೆ. ಆಗ ಶಾಲೆಯಿದ್ದರೂ ರಜೆಯಂತಾಗಬಹುದು. ಕಲಿಕೆಯು ಆಟದಂತಾಗಬಹುದು.
ಬನ್ನಿ, ಆಟವಾಡೋಣ....!
.................................. ಉದಯ ಗಾಂವಕಾರ 
ವಿಜ್ಞಾನ ಶಿಕ್ಷಕ 
ಸರಕಾರಿ ಪ್ರೌಢಶಾಲೆ, ಸಿದ್ಧಾಪುರ 
ಕುಂದಾಪುರ ತಾಲೂಕು , ಉಡುಪಿ ಜಿಲ್ಲೆ
******************************************


Ads on article

Advertise in articles 1

advertising articles 2

Advertise under the article